ಮಂಗಳವಾರ, ನವೆಂಬರ್ 19, 2019
29 °C

ಕಟ್ಟಡ ದುರಂತ : 29 ಗಂಟೆಗಳ ನಂತರ ಮಗುವೊಂದರ ರಕ್ಷಣೆ

Published:
Updated:
ಕಟ್ಟಡ ದುರಂತ : 29 ಗಂಟೆಗಳ ನಂತರ ಮಗುವೊಂದರ ರಕ್ಷಣೆ

ಠಾಣೆ (ಪಿಟಿಐ): ಕುಸಿದು ಬಿದ್ದ 7 ಅಂತಸ್ತಿನ ಕಟ್ಟಡಗಳ ಅವಶೇಷದ ರಾಶಿಯಡಿಯಲ್ಲಿ ಸತತ 29 ಗಂಟೆಗಳ ಕಾಲ ಬದುಕಿಗಾಗಿ ಸೆಣಸಿದ 10 ತಿಂಗಳ ಮಗುವೊಂದನ್ನು ರಕ್ಷಣಾ ಕಾರ್ಯಕರ್ತರು ಶನಿವಾರ ರಕ್ಷಿಸಿ ಹೊರತರುವಲ್ಲಿ ಯಶಸ್ವಿಯಾದರು. ಆದರೆ ಈ ಪವಾಡವನ್ನು ನೋಡಲು ಆ ಮಗುವಿನ ಕುಟುಂಬ ಯಾವೊಬ್ಬ ಸದಸ್ಯರೂ ಬದುಕಿರಲಿಲ್ಲ...ಇಂತಹ ಹೃದಯ ವಿದ್ರಾವಕ ಸನ್ನಿವೇಶಕ್ಕೆ ಶನಿವಾರ ಇಲ್ಲಿನ ಶಿಲ್‌ಫಟಾ ನಲ್ಲಿ ಗುರುವಾರವೇ ಕುಸಿದುಬಿದ್ದಿದ್ದ 7 ಅಂತಸ್ತಿನ ಕಟ್ಟಡದ ಅವಶೇಷಗಳು ಸಾಕ್ಷಿಯಾದವು.ಮಗುವನ್ನು ರಕ್ಷಿಸಿ ಹೊರತರುತ್ತಿದ್ದಂತೆ ರಕ್ಷಣಾ ಕಾರ್ಯಕರ್ತರು ಹಾಗೂ ನೆರೆದಿದ್ದವರ ಉದ್ಘಾರಕ್ಕೆ ಎಣೆಯೇ ಇರಲಿಲ್ಲ. ಎಲ್ಲರೂ ಹಸನ್ಮುಖಿಗಳಾಗಿ ಮಗುವನ್ನು ಆರೈಕೆ ಮಾಡಿ ಅದರ ಕುಟುಂಬ ಸದಸ್ಯರನ್ನು ಹುಡುಕಿದಾಗ ಮತ್ತೆ ರಕ್ಷಣಾ ತಂಡದ ಮುಖ ಬಾಡಿ ಹೋಯಿತು. ಏಕೆಂದರೆ ಮಗು ಬದುಕುಳಿದ ಸಂತಸವನ್ನು ಹಂಚಿಕೊಳ್ಳಲು ಕುಟುಂಬದ ಯಾವೊಬ್ಬ ಸದಸ್ಯರೂ ಬದುಕಿರಲಿಲ್ಲ.ಕಡೆಗೆ ಮಗುವಿನ ಹೆಸರೂ ಕೂಡ ರಕ್ಷಣಾ ತಂಡಕ್ಕೆ ಗೊತ್ತಾಗಲಿಲ್ಲ. ಮಗುವಿಗೆ ಚಿಕಿತ್ಸೆ ನೀಡುತ್ತಿದ್ದ ಛತ್ರಪತಿ ಶಿವಾಜಿ ಸ್ಮಾರಕ ಆಸ್ಪತ್ರೆಯ ವೈದ್ಯರು ಹಾಗೂ ದಾದಿಯರು ಮಗುವಿಗೆ `ಗುಡಿಯಾ' ಎಂದು ಹೆಸರಿಟ್ಟಿದ್ದಾರೆ. ಮಗುವಿಗೆ ಕುಡಿಯಲಿ ಹಾಲನ್ನು ಕೊಟ್ಟಿದ್ದು ಗುಡಿಯಾ ಚೇತರಿಸಿಕೊಳ್ಳುತ್ತಿದ್ದಾಳೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.ಸದ್ಯ ಶನಿವಾರ ಮಧ್ಯಾಹ್ನದ ಹೊತ್ತಿಗೆ ರಕ್ಷಣಾ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ. ಈವರೆಗೆ 72 ಮಂದಿ ಸಾವನ್ನಪ್ಪಿದ್ದಾರೆ. ಇವರಲ್ಲಿ 22 ಮಂದಿ ಮಹಿಳೆಯರು ಹಾಗೂ 17 ಮಂದಿ ಮಕ್ಕಳೂ ಸೇರಿದ್ದಾರೆ. ಒಟ್ಟಾರೆ 60 ಮಂದಿ ಗಾಯಗೊಂಡಿದ್ದರೆ, 62 ಮಂದಿ ಅವಶೇಷಗಳಡಿಯಿಂದ ರಕ್ಷಿಸಲಾಗಿದೆ.

ಪ್ರತಿಕ್ರಿಯಿಸಿ (+)