ಕಟ್ಟಡ ನಿರ್ಮಾಣ: ನಿಯಮ ಉಲ್ಲಂಘನೆ ವಿರುದ್ಧ ಕ್ರಮ

ಬುಧವಾರ, ಜೂಲೈ 17, 2019
23 °C

ಕಟ್ಟಡ ನಿರ್ಮಾಣ: ನಿಯಮ ಉಲ್ಲಂಘನೆ ವಿರುದ್ಧ ಕ್ರಮ

Published:
Updated:

ಶಿವಮೊಗ್ಗ: ನಗರದ ಹಲವು ಪ್ರಮುಖ ರಸ್ತೆಗಳಲ್ಲಿ ನಗರಸಭೆಯ ನಿಯಮಗಳನ್ನು ಲೆಕ್ಕಿಸದೆ, ವಾಹನ ಸಂಚಾರ ಹಾಗೂ ನಿಲುಗಡೆಗೆ ಅವಕಾಶವಿಲ್ಲದಂತೆ ಕಟ್ಟಡ ನಿರ್ಮಿಸಿರುವ ಮಾಲಿಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ವಿ. ಪೊನ್ನುರಾಜ್ ಎಚ್ಚರಿಕೆ ನೀಡಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಸಂಜೆ ಏರ್ಪಡಿಸಿದ್ದ ರಸ್ತೆ  ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ನಗರದಲ್ಲಿ ಈಗಾಗಲೇ ಗುರುತಿಸಲಾಗಿರುವ ಪ್ರಮುಖವಾದ 18 ವರ್ತುಲಗಳಲ್ಲಿ  ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ.ವರ್ತುಲಗಳನ್ನು ಅಭಿವೃದ್ಧಿ ಪಡಿಸುವ ಸಂದರ್ಭದಲ್ಲಿ ಕಟ್ಟಡಗಳನ್ನು ತೆರವುಗೊಳಿಸುವ ಅವಶ್ಯಕತೆ ಎದುರಾದಲ್ಲಿ ಕಟ್ಟಡಗಳ ಮಾಲಿಕರ ಮನವೊಲಿಸ ಲಾಗುವುದು. ಈ ಸಂಬಂಧ ಸರ್ವೇ ಕಾರ್ಯ ನಡೆಸಿ, ಕ್ರಿಯಾ ಯೋಜನೆ ತಯಾರಿಸಿ, 15 ದಿನದಲ್ಲಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಎಂದರು.ಅಮೀರ್ ಅಹ್ಮದ್ ವೃತ್ತ ನಗರದ ಅತ್ಯಂತ ಜನನಿಬಿಡ ಹಾಗೂ ಸಂಚಾರದಟ್ಟಣೆಯ ಪ್ರದೇಶವಾಗಿದ್ದು, ಇಲ್ಲಿಗೆ ಬರುವ ವಾಹನಗಳನ್ನು  ನಿಯಂತ್ರಿಸಲು  ಉದ್ದೇಶಿಸಲಾಗಿದೆ. ಪ್ರಸ್ತುತ ಅಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿರುವ ವರ್ತುಲವನ್ನು ತೆರವುಗೊಳಿಸಿ, ನಾಲ್ಕೂ ಕಡೆಗಳಲ್ಲಿ ಸಿಗ್ನಲ್‌ಗಳನ್ನು ಅಳವಡಿಸಲಾಗುವುದು  ಎಂದರು.ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಮತ್ತು ರೋಗಿಗಳ ಹಿತದೃಷ್ಟಿಯಿಂದ ಶಿವಮೊಗ್ಗ ನಗರಕ್ಕೆ ಬೇರೆ-ಬೇರೆ ಭಾಗಗಳಿಂದ ಆಗಮಿಸುವ ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ವಾಹನಗಳು ನಗರದೊಳಗೆ ಪ್ರವೇಶ ಪಡೆದು, ಬಸ್‌ನಿಲ್ದಾಣ ತಲುಪಲು ಅವಕಾಶ ನೀಡಲಾಗಿದೆ. ಈ ವಾಹನಗಳು ನಗರದ ಹೊರವರ್ತುಲ ರಸ್ತೆಯ ಮೂಲಕ ನಿರ್ಗಮಿಸುವಂತೆ ಸೂಚಿಸಲಾಗಿದೆ. ಇದರಿಂದಾಗಿ ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಲಿದೆ ಎಂದರು.ನಗರದ ಪ್ರಮುಖ ರಸ್ತೆಗಳಾದ ಸವಳಂಗ ರಸ್ತೆ, ಜೆಪಿಎನ್ ರಸ್ತೆ, ದುರ್ಗಿಗುಡಿ ಸೇರಿದಂತೆ ಹಲವು ಕಡೆಗಳಲ್ಲಿ ಕನ್ಸರ್‌ವೆನ್ಸಿಗಳನ್ನು ಅಭಿವೃದ್ಧಿಪಡಿಸಿ, ಸುಗಮ ಸಂಚಾರಕ್ಕೆ ಅಡಚಣೆ ಆಗದಂತೆ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗುವುದು ಎಂದರು.ಮಳೆಗಾಲ ಆರಂಭವಾಗಿರುವುದರಿಂದ ಮಳೆ ನೀರು ರಸ್ತೆಯಲ್ಲಿ ನಿಲ್ಲದೆ, ಸುಗಮವಾಗಿ ಹರಿದು ಹೋಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ನಗರದ ಸೌಂದರ‌್ಯೀಕರಣಕ್ಕೆ ಗಮನ ಹರಿಸಲಾಗುವುದು ಎಂದರು.ಇದೇ ಸಂದರ್ಭದಲ್ಲಿ ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮಣ್ ಗುಪ್ತ ಮಾತನಾಡಿ, ನಗರದಲ್ಲಿನ ಹಲವು ಉಪರಸ್ತೆಗಳಿಂದ ಮುಖ್ಯರಸ್ತೆಗೆ ಬಂದು ಸೇರುವ ಸ್ಥಳಗಳಲ್ಲಿ ಸಂಭವಿಸಬಹುದಾದ ಅಪಘಾತಗಳನ್ನು ನಿಯಂತ್ರಿಸಲು, ವೈಜ್ಞಾನಿಕವಾಗಿ ಹಂಪ್ಸ್‌ಗಳನ್ನು ನಿರ್ಮಿಸುವ ಅಗತ್ಯವಿದೆ ಎಂದರು.ಸಭೆಯಲ್ಲಿ ನಗರಸಭಾಧ್ಯಕ್ಷ ಕೆ.ಎಸ್. ಗಂಗಾಧರಪ್ಪ, ಪ್ರಾದೇಶಿಕ ಸಾರಿಗೆ ಅಧಿಕಾರಿ ಸಿ. ಮಲ್ಲಿಕಾರ್ಜುನ, ಎನ್‌ಇಎಸ್ ಕಾರ್ಯದರ್ಶಿ ಎಸ್.ವಿ. ತಿಮ್ಮಯ್ಯ, ಅರಣ್ಯ ಸಂರಕ್ಷಣಾಧಿಕಾರಿ ವೆಂಕಟೇಸನ್ ಸೇರಿದಂತೆ ಬಸ್, ಲಾರಿ ಮತ್ತು ಆಟೋಗಳ ಮಾಲಿಕರು, ಅಧಿಕಾರಿಗಳು ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry