ಕಟ್ಟಡ ನಿರ್ಮಿಸಿ ಹೊಸ ಶಾಲೆ ಆರಂಭ

7
ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಹೇಳಿಕೆ

ಕಟ್ಟಡ ನಿರ್ಮಿಸಿ ಹೊಸ ಶಾಲೆ ಆರಂಭ

Published:
Updated:

ಹೊಳಲ್ಕೆರೆ: ರಾಜ್ಯದಲ್ಲಿ ಪ್ರಸಕ್ತ ವರ್ಷ ಹೋಬಳಿಗೊಂದರಂತೆ ೧೦೦ ವಸತಿ ಶಾಲೆಗಳನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದ್ದು, ಹೊಸ ಕಟ್ಟಡಗಳ ನಿರ್ಮಾಣದ ನಂತರವೇ ಈ ಶಾಲೆಗಳನ್ನು ಪ್ರಾರಂಭಿಸಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್. ಆಂಜನೇಯ ತಿಳಿಸಿದರು.ಹೊಳಲ್ಕೆರೆ ತಾಲ್ಲೂಕಿನ ಹನುಂತದೇವರ ಕಣಿವೆ ಹತ್ತಿರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನಿರ್ಮಾಣ ಮಾಡಿರುವ ಅಲೆಮಾರಿ ಸಮುದಾಯದ ಮೊರಾರ್ಜಿ ದೇಸಾಯಿ ವಸತಿ ಶಾಲೆ ನೂತನ ಕಟ್ಟಡ ಉದ್ಘಾಟಿಸಿ ಮಂಗಳವಾರ ಅವರು ಮಾತನಾಡಿದರು.ಕಟ್ಟಡವಿಲ್ಲದೆ ವಸತಿ ಶಾಲೆಗಳನ್ನು ಪ್ರಾರಂಭಿಸುವುದರಿಂದ ಸುಮಾರು ೨೫೦ರಷ್ಟು ಸಂಖ್ಯೆಯ ಮಕ್ಕಳಿಗೆ ಬಾಡಿಗೆ ಕಟ್ಟಡ ಸಿಗುವುದಿಲ್ಲ. ಜತೆಗೆ ಮೂಲ ಸೌಕರ್ಯಗಳ ಕೊರತೆ ಉಂಟಾಗಿ ದಿನನಿತ್ಯ ಸಮಸ್ಯೆ ಎದುರಾಗಲಿದೆ. ಈ ಹಿನ್ನೆಲೆಯಲ್ಲಿ ಎಲ್ಲಿ ವಸತಿ ಶಾಲೆಗಳನ್ನು ಪ್ರಾರಂಭಿಸಲು ಉದ್ದೇಶಿಸ ಲಾಗುವುದೋ ಅಂತಹ ಕಡೆ ಸ್ಥಳೀಯ ಶಾಸಕರು ಮತ್ತು ಜಿಲ್ಲಾಧಿಕಾರಿ ಅವರೊಂದಿಗೆ ಸಮಾಲೋಚನೆ ನಡೆಸಿ ನಿವೇಶನ ಪಡೆದ ನಂತರವೇ ಶಾಲೆಗಳನ್ನು ಪ್ರಾರಂಭಿಸಲಾಗುತ್ತದೆ ಎಂದರು.ನಗರ ಹಾಗೂ ಪಟ್ಟಣ ಪ್ರದೇಶದ ಮಕ್ಕಳೊಂದಿಗೆ ಗ್ರಾಮೀಣ ಪ್ರದೇಶದ ಬಡ ಮಕ್ಕಳು ಸಹ ಸ್ಪರ್ಧೆ ನೀಡಲಿ ಎನ್ನುವ ಕಾರಣಕ್ಕೆ ವಸತಿ ಶಾಲೆಗಳಲ್ಲಿಯೂ ೬ರಿಂದ ೧೦ನೇ ತರಗತಿವರೆಗೆ ಆಂಗ್ಲ ಮಾಧ್ಯಮ ಪ್ರಾರಂಭಿಸಲಾಗಿದೆ. ಈಗಿನ ದಿನಮಾನಗಳಲ್ಲಿ ಪಟ್ಟಣದವರೊಂದಿಗೆ ಬಡ ಮಕ್ಕಳು ಸ್ಪರ್ಧಿಸಲು ಆಂಗ್ಲ ಮಾಧ್ಯಮ ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ವಸತಿ ಶಾಲೆಗಳಲ್ಲಿ ಪೂರ್ಣ ಪ್ರಮಾಣದ ಕಾಯಂ ಶಿಕ್ಷಕರ ನೇಮಕವಾಗದಿದ್ದರೂ ವಸತಿ ಶಾಲೆಗಳ ಶಿಕ್ಷಣ ಸಂಸ್ಥೆಯು ಇದನ್ನು ಸವಾಲಾಗಿ ಸ್ವೀಕರಿಸಿದೆ. ಹಲವಾರು ಕೊರತೆಗಳ ಮಧ್ಯೆಯು ವಸತಿ ಶಾಲೆಗಳಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಫಲಿತಾಂಶ ಉತ್ತಮವಾಗಿದೆ. ಹಲವು ಶಾಲೆಗಳು ಶೇ. ೧೦೦ರಷ್ಟು ಮತ್ತು ಶೇ. ೯೦ಕ್ಕಿಂತಲೂ ಹೆಚ್ಚಿನ ಫಲಿತಾಂಶ ಪಡೆದುಕೊಡಿದೆ ಎಂದರು.ವಸತಿ ಶಾಲೆಯಲ್ಲಿ ಮಕ್ಕಳಿಗೆ ಬಟ್ಟೆ, ಪುಸ್ತಕ, ಹೊದಿಕೆ, ಊಟ, ವಸತಿ ಸೇರಿದಂತೆ ಎಲ್ಲ ಸೌಲಭ್ಯಗಳು ಇರುತ್ತವೆ. ಇದಕ್ಕಾಗಿ ಪ್ರತಿ ವಿದ್ಯಾರ್ಥಿಗೆ ಊಟಕ್ಕೆ ತಿಂಗಳಿಗೆ ₨ 1 ಸಾವಿರ, ಇತರೆ ವೆಚ್ಚ ರೂ. ೧೦೦ ಮತ್ತು ವರ್ಷದಲ್ಲಿ ಎರಡು ಜೊತೆ ಸಮವಸ್ತ್ರ, ಸ್ಟೇಷನರಿಗಾಗಿ ₨ ೪೦೦ ನೀಡಲಾಗುತ್ತಿದೆ. ಅಲ್ಲದೆ ಹಾಸ್ಟೆಲ್ ಇಲ್ಲದ ಇತರೆ ಹಿಂದುಳಿದ ವರ್ಗಗಳ ಕಾಲೇಜು ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಯೋಜನೆಯಡಿ ಪ್ರತಿ ತಿಂಗಳು ರೂ. ೧೫೦೦ ಹೆಚ್ಚುವರಿ ಭೋಜನ ವೆಚ್ಚ ನೀಡಲಾಗುತ್ತಿದೆ ಎಂದು ಹೇಳಿದರು.ಹೊಳಲ್ಕೆರೆ ತಾಲ್ಲೂಕಿನಲ್ಲಿ ಈಗಾಗಲೇ ೪ ವಸತಿ ಶಾಲೆಗಳಿದ್ದು, ಇನ್ನೊಂದು ವಸತಿ ಶಾಲೆ ಮಂಜೂರು ಮಾಡಲಾಗುವುದು. ಕಣಿವೆಯಲ್ಲಿ ಮೂರು ವಸತಿ ಶಾಲೆಗಳ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ. ಇಲ್ಲಿ ವಿದ್ಯುತ್ ಸಮಸ್ಯೆ, ಕುಡಿಯುವ ನೀರು, ರಸ್ತೆ ಹಾಗೂ ತಡೆಗೋಡೆಯ ಕೊರತೆ ಇದೆ. ನಗರಕ್ಕೆ ಪೂರೈಕೆಯಾಗುವ ೨೪ ಗಂಟೆ ವಿದ್ಯುತ್ ಸಂಪರ್ಕವನ್ನು ಒದಗಿಸಲಾಗುತ್ತಿದ್ದು, ಅದಕ್ಕಾಗಿ ₨ ೨೦ಲಕ್ಷ ವೆಚ್ಚ ಮಾಡಲಾಗುತ್ತಿದೆ ಎಂದು ತಿಳಿಸಿದರು.ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಇಂದಿರಾ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ರಂಗಸ್ವಾಮಿ, ಪಾರ್ವತಮ್ಮ, ಭಾರತಿ, ಶಿವಕುಮಾರ್, ತಾ.ಪಂ. ಸದಸ್ಯ ತಿಮ್ಮೇಶ್, ಮದ್ದೇರು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ರಂಗೀಬಾಯಿ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ತಿಮ್ಮಣ್ಣ, ಬಿಸಿಎಂ ಜಿಲ್ಲಾ ಅಧಿಕಾರಿ ಮಹೇಶ್ ಹಾಜರಿದ್ದರು. ವಸತಿ ಶಾಲೆ ಪ್ರಾಂಶುಪಾಲ ಎನ್. ತಿಪ್ಪೇಸ್ವಾಮಿ ಸ್ವಾಗತಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry