ಮಂಗಳವಾರ, ಆಗಸ್ಟ್ 20, 2019
27 °C

ಕಟ್ಟಡ ನೆಲಸಮ ಪ್ರಕರಣ: ಮತ್ತೊಬ್ಬನ ವಿಚಾರಣೆ

Published:
Updated:

ಬೆಂಗಳೂರು: ದೇವರಜೀವನಹಳ್ಳಿಯ ಕಾವೇರಿನಗರದಲ್ಲಿ ಕುಮಾರಮಂಗಲಂ ಎಂಬುವರ ಮನೆ ನೆಲಸಮ ಮಾಡಿದ ಪ್ರಕರಣ ಸಂಬಂಧ ಪೊಲೀಸರು ರಾಮಯ್ಯ ಎಂಬುವರನ್ನು ಗುರುವಾರ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.`ನಿವೇಶನ ವಿಚಾರವಾಗಿ ನೆರೆ ಮನೆಯ ರಾಮಯ್ಯ ಅವರು ಆರೋಪಿಗಳಿಗೆ ಸಹಕಾರ ನೀಡಿದ್ದಾರೆ ಎಂದು ಕುಮಾರಮಂಗಲಂ ದೂರಿನಲ್ಲಿ ತಿಳಿಸಿದ್ದರು. ಹೀಗಾಗಿ ರಾಮಯ್ಯ ಅವರ ವಿಚಾರಣೆ ನಡೆಸಿ ಕಳುಹಿಸಲಾಯಿತು. ಪ್ರಕರಣದ ಪ್ರಮುಖ ಆರೋಪಿ ನಟರಾಜನ್ ಪತ್ತೆಗಾಗಿ ಹುಡುಕಾಟ ಮುಂದುವರಿದಿದೆ' ಎಂದು ಪೊಲೀಸರು ತಿಳಿಸಿದ್ದಾರೆ.`ರಾಮಯ್ಯ ಆಗಾಗ ನಮ್ಮ ನಿವೇಶನ ಯಾರ ಹೆಸರಿನಲ್ಲಿದೆ, ಯಾರ ಹೆಸರಿನಿಂದ ಯಾರ ಹೆಸರಿಗೆ ವರ್ಗಾವಣೆಯಾಗಿದೆ ಎಂಬ ಮಾಹಿತಿಗಳನ್ನು ಪಡೆಯುತ್ತಿದ್ದರು. ಆರೋಪಿಗಳಿಗೆ ಅವರೇ ಸಹಕಾರ ನೀಡಿದ್ದಾರೆ ಎಂಬ ಅನುಮಾನವಿತ್ತು. ಹೀಗಾಗಿ ಅವರ ವಿಚಾರಣೆ ನಡೆಸಲು ದೂರಿನಲ್ಲಿ ತಿಳಿಸಿದ್ದೆ' ಎಂದು ಕುಮಾರಮಂಗಲಂ `ಪ್ರಜಾವಾಣಿ'ಗೆ ತಿಳಿಸಿದರು.`ಆಸ್ತಿ ವಿವಾದದ ಬಗ್ಗೆ ಅಗತ್ಯ ಸಹಾಯ ಮಾಡುವುದಾಗಿ ಪುಲಿಕೇಶಿನಗರ ಶಾಸಕ ಅಖಂಡ ಶ್ರೀನಿವಾಸಮೂರ್ತಿ ದೂರವಾಣಿ ಮೂಲಕ ಭರವಸೆ ನೀಡಿದ್ದಾರೆ' ಎಂದು ಅವರು ಹೇಳಿದರು.ಕಾವೇರಿನಗರದಲ್ಲಿರುವ ಕುಮಾರಮಂಗಲಂ ಅವರ ಮನೆಯನ್ನು ಅಕ್ರಮವಾಗಿ ನೆಲಸಮಗೊಳಿಸಿ, ಮನೆಯಲ್ಲಿದ್ದ ಹಣ ಮತ್ತು ಬೆಲೆ ಬಾಳುವ ವಸ್ತುಗಳನ್ನು ದೋಚಿದ್ದ ಆರೋಪದ ಮೇಲೆ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಸಹೋದರ ಮಹೇಶ್‌ಕುಮಾರ್ ಸೇರಿದಂತೆ ಆರು ಮಂದಿಯನ್ನು ದೇವರಜೀವನಹಳ್ಳಿ ಪೊಲೀಸರು ಬಂಧಿಸಿದ್ದರು. ಸದ್ಯ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.

Post Comments (+)