ಕಟ್ಟಾ ಜಗದೀಶ ಪ್ರಕರಣ: ವಕೀಲ ಆಚಾರ್ಯ ನೇಮಕ ಅನೂರ್ಜಿತ

7

ಕಟ್ಟಾ ಜಗದೀಶ ಪ್ರಕರಣ: ವಕೀಲ ಆಚಾರ್ಯ ನೇಮಕ ಅನೂರ್ಜಿತ

Published:
Updated:

ಬೆಂಗಳೂರು: ಭೂವಿವಾದಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಸದಸ್ಯ ಕಟ್ಟಾ ಜಗದೀಶ್ ಅವರ ಕುರಿತಾಗಿ ಹೈಕೋರ್ಟ್‌ನಲ್ಲಿ ಇತ್ಯರ್ಥಕ್ಕೆ ಇರುವ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರ ಪರವಾಗಿ ಹಿರಿಯ ವಕೀಲ ಬಿ.ವಿ.ಆಚಾರ್ಯ ವಾದ ಮಂಡಿಸುವಂತಿಲ್ಲ ಎಂದು ಹೈಕೋರ್ಟ್ ಮಂಗಳವಾರ ಆದೇಶಿಸಿದೆ.ಈ ಪ್ರಕರಣದಲ್ಲಿ, ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ (ಎಸ್‌ಪಿಪಿ) ಆಗಿ ಆಚಾರ್ಯ ಅವರನ್ನು ನೇಮಕ ಮಾಡಿರುವುದನ್ನು ಕಟ್ಟಾ ಜಗದೀಶ್ ಪರ ವಕೀಲ ಸಿ.ವಿ.ನಾಗೇಶ್ ಅವರು ಆಕ್ಷೇಪಿಸಿದ್ದರು. ಇದರ ವಾದ, ಪ್ರತಿವಾದ ಆಲಿಸಿದ ನಂತರ ನ್ಯಾಯಮೂರ್ತಿ ವಿ.ಜಗನ್ನಾಥನ್ ಈ ಆದೇಶ ಹೊರಡಿಸಿದ್ದಾರೆ.ಆಚಾರ್ಯ ಅವರನ್ನೇ ತಮ್ಮ ಪರ ವಕೀಲರನ್ನಾಗಿಸುವಂತೆ ಕೋರಿ ಲೋಕಾಯುಕ್ತದಿಂದ ಸಲ್ಲಿಸಲಾದ ಮನವಿಯನ್ನು ನ್ಯಾಯಮೂರ್ತಿಗಳು ತಿರಸ್ಕರಿಸಿದ್ದಾರೆ.

ಅಪರಾಧ ದಂಡ ಪ್ರಕ್ರಿಯಾ ಸಂಹಿತೆಯ 24ನೇ ಕಲಮಿನ ಅನ್ವಯ ಎಸ್‌ಪಿಪಿಯಾಗಿ ನೇಮಕ ಮಾಡುವ ಪೂರ್ವದಲ್ಲಿ ಸರ್ಕಾರ ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ಇದಕ್ಕೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸಬೇಕು. ಆದರೆ ಈ ಪ್ರಕರಣದಲ್ಲಿ ಆ ರೀತಿ ಮಾಡಿಲ್ಲ ಎನ್ನುವುದು ಪ್ರಮುಖ ದೂರು. ಅಷ್ಟೇ ಅಲ್ಲದೇ ಲೋಕಾಯುಕ್ತರ ಪರವಾಗಿ ಅಧಿಕೃತವಾಗಿ ವಾದ ಮಂಡಿಸಲು ವಕೀಲ ರಾಜೇಂದ್ರ ರೆಡ್ಡಿ ಅವರನ್ನು ಎಸ್‌ಪಿಪಿಯನ್ನಾಗಿ ಸರ್ಕಾರ ನೇಮಿಸಿದೆ. ಹಾಗಿದ್ದ ಮೇಲೆ ಈ ಅಧಿಕಾರವನ್ನು ಇನ್ನೊಬ್ಬ ವಕೀಲರಿಗೆ ನೀಡಿರುವುದು ನಿಯಮ ಬಾಹಿರ ಎಂದಿದ್ದ ನಾಗೇಶ್ ಅವರು ಇದಕ್ಕೆ ಸಂಬಂಧಿಸಿದ ಕೆಲವೊಂದು ದಾಖಲೆಗಳನ್ನು ನೀಡಿದ್ದರು. ಇದನ್ನು ಕೋರ್ಟ್ ಮಾನ್ಯ ಮಾಡಿದೆ.ನಿವೇಶನ ಫಲಾನುಭವಿಗಳ ಮಾಹಿತಿ ನೀಡಿ


ವಿವಿಧ ಯೋಜನೆಗಳಡಿ ಸ್ವಾಧೀನ ಪಡಿಸಿಕೊಳ್ಳಲಾದ ಜಮೀನುಗಳ ಪೈಕಿ ನಿವೇಶನ ಪಡೆದುಕೊಂಡಿರುವ ಫಲಾನುಭವಿಗಳ ಬಗ್ಗೆ ಮಾಹಿತಿ ನೀಡುವಂತೆ ಹೈಕೋರ್ಟ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಮಂಗಳವಾರ ನಿರ್ದೇಶಿಸಿದೆ.ಇದರ ಜೊತೆಗೆ ಇಲ್ಲಿಯವರೆಗೆ ಎಷ್ಟು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ, ಎಷ್ಟು ಪೂರ್ಣಗೊಂಡಿದೆ, ಪೂರ್ಣಗೊಳ್ಳದ ಯೋಜನೆಗಳಿಗೆ ಕಾರಣವೇನು, ಯಾವುದಾದರೂ ಯೋಜನೆಯ ಜಾರಿ ಅರ್ಧಕ್ಕೆ ನಿಂತಿದ್ದರೆ, ಅದಕ್ಕೆ ಉಂಟಾದ ಆರ್ಥಿಕ ತೊಡಕುಗಳ ವಿವರಣೆ ನೀಡುವಂತೆಯೂ ನ್ಯಾಯಮೂರ್ತಿ ಡಿ.ವಿ.ಶೈಲೇಂದ್ರಕುಮಾರ್ ಆದೇಶಿಸಿದ್ದಾರೆ.ನಾಡಪ್ರಭು ಕೆಂಪೇಗೌಡ ಬಡಾವಣೆ ನಿರ್ಮಾಣಕ್ಕೆ ಕೆಂಗೇರಿ ಹಾಗೂ ಯಶವಂತಪುರ ಹೋಬಳಿಯ ನೂರಾರು ಎಕರೆ ಜಮೀನನ್ನು ಸ್ವಾಧೀನ ಪಡಿಸಿಕೊಂಡು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹೊರಡಿಸಿದ್ದ ಅಧಿಸೂಚನೆಗೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ವಿವಿಧ ಅರ್ಜಿಗಳ ವಿಚಾರಣೆ ವೇಳೆ ಈ ಮಾಹಿತಿಯನ್ನು ನ್ಯಾಯಮೂರ್ತಿಗಳು ಬಯಸಿದ್ದಾರೆ. ವಿಚಾರಣೆಯನ್ನು ಇದೇ 15ಕ್ಕೆ ಮುಂದೂಡಿರುವ ನ್ಯಾಯಮೂರ್ತಿಗಳು ಅಂದು ಸಂಪೂರ್ಣ ಮಾಹಿತಿ ಬಯಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry