ಕಟ್ಟಿಮನಿ ಸಾಹಿತ್ಯಕ್ಕೆ ಸಿಗದ ಮನ್ನಣೆ

7

ಕಟ್ಟಿಮನಿ ಸಾಹಿತ್ಯಕ್ಕೆ ಸಿಗದ ಮನ್ನಣೆ

Published:
Updated:

ಬೀದರ್: ಬರಹಗಾರ ಬಸವರಾಜ ಕಟ್ಟಿಮನಿ ಅವರ ಸಾಹಿತ್ಯಕ್ಕೆ ದೊರೆಯಬೇಕಾದ ಮನ್ನಣೆ ಸಿಕ್ಕಿಲ್ಲ ಎಂದು ಸಾಹಿತಿ ಶಶಿಕಲಾ ವಸ್ತ್ರದ್ ವಿಷಾದ ವ್ಯಕ್ತಪಡಿಸಿದರು.ಬಸವರಾಜ ಕಟ್ಟಿಮನಿ ಅವರ ಜೀವನ ಮತ್ತು ಸಾಹಿತ್ಯ ಸಾಧನೆ ಕುರಿತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಬಸವರಾಜ ಕಟ್ಟಿಮನಿ ಟ್ರಸ್ಟ್ ನಗರದ ಕೃಷ್ಣ ರಿಜೆನ್ಸಿಯಲ್ಲಿ ಭಾನುವಾರ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.ಕನ್ನಡ ಸಾಹಿತ್ಯ ಲೋಕಕ್ಕೆ ಕಟ್ಟಿಮನಿ ಕೊಡುಗೆ ಅಪಾರ. ಸಾಹಿತ್ಯದ ಮೂಲಕವೇ ಕನ್ನಡಿಗರು ಏಕೀಕರಣ ಚಳುವಳಿಯಲ್ಲಿ ಭಾಗವಹಿಸುವಂತೆ ಪ್ರೇರೆಪಿಸಿದ್ದರು. ಸಾಮಾಜಿಕ ಅಸಮಾನತೆಯನ್ನು ತೊಡೆದು ಹಾಕಲು ಶ್ರಮಿಸಿದ್ದರು. ಅವರ ಕಾದಂಬರಿಗಳು ಹೋರಾಟದ ಕೆಚ್ಚು ಬೆಳೆಸುವಂಥವು. ಅದಾಗಿಯೂ ಅವರ ಸಾಹಿತ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ಸಿಗದಿರುವುದು ಬೇಸರದ ಸಂಗತಿ ಎಂದರು.9ನೇ ತರಗತಿವರೆಗೆ ಮಾತ್ರ ಓದಿದ್ದರೂ ಕಟ್ಟಿಮನಿ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಮೂಲ್ಯ ಎನಿಸುವಂಥ ಕೃತಿ- ಕಾದಂಬರಿಗಳನ್ನು ಅರ್ಪಿಸಿದ್ದಾರೆ ಎಂದು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಉಪನ್ಯಾಸಕ ಶಿವಕುಮಾರ್ ಕಟ್ಟೆ ನುಡಿದರು.ತಮ್ಮ ಜೀವನದ ಉದ್ದಕ್ಕೂ ಅನುಭವಿಸಿದ ಕಷ್ಟ, ನುಂಗಿಕೊಂಡ ನೋವನ್ನು ಕೃತಿಗಳಲ್ಲಿ ತೆರೆದಿಟ್ಟಿದ್ದಾರೆ. ಕ್ರಾಂತಿಕಾರಿ ಮನೋಭಾವನೆ ಹೊಂದಿದ್ದ ಅವರು ಬರವಣಿಗೆ ಮೂಲಕವೇ ಸಾಮಾಜಿಕ ಧೋರಣೆಯನ್ನು ಖಂಡಿಸುವ ಕಾರ್ಯ ಮಾಡುತ್ತಿದ್ದರು ಎಂದರು.ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಲು ಪ್ರಸ್ತುತ ಹಲವು ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗುತ್ತಿದೆ. ಆದರೂ, ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಬಳಕೆ ಪರಿಣಾಮಕಾರಿಯಾಗಿ ಜಾರಿಗೊಳ್ಳದಿರುವುದು ನೋವಿನ ವಿಚಾರ ಎಂದು ಹಿರಿಯ ಪತ್ರಕರ್ತ ಹಣಮಂತಪ್ಪ ಪಾಟೀಲ್ ನುಡಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ ಅಧ್ಯಕ್ಷತೆ ವಹಿಸಿದ್ದರು. ಪರಿಷತ್ ತಾಲ್ಲೂಕು ಅಧ್ಯಕ್ಷ ಉಮಾಕಾಂತ್ ಮೀಸೆ ಉಪಸ್ಥಿತರಿದ್ದರು. ಗೌರವ ಕಾರ್ಯದರ್ಶಿ ಸಂಜೀವ ಕುಮಾರ್ ಅತಿವಾಳೆ ನಿರೂಪಿಸಿದರು. ಮುಖ್ಯಗುರು ಪ್ರತಿಭಾ ಚಾಮಾ ವಂದಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry