ಶುಕ್ರವಾರ, ನವೆಂಬರ್ 22, 2019
20 °C
ಚುನಾವಣಾ ಆಯೋಗದ ಹದ್ದಿನ ಕಣ್ಣು: ಎಲ್ಲೆಡೆ ತಪಾಸಣೆ

ಕಟ್ಟುನಿಟ್ಟಿನ ನಿಗಾ: ಅಭ್ಯರ್ಥಿಗಳು ಸುಸ್ತು

Published:
Updated:

ಚಿತ್ರದುರ್ಗ: ವಿಧಾನಸಭೆ ಚುನಾವಣೆಯಲ್ಲಿನ ಅಕ್ರಮಗಳಿಗೆ ಕಡಿವಾಣ ಹಾಕಿರುವ ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮಕೈಗೊಂಡಿದೆ. ಎಲ್ಲೆಡೆ ಬಿಗಿ ತಪಾಸಣೆ ಕಾರ್ಯ ಕೈಗೊಂಡಿದೆ.ರಾಷ್ಟ್ರ, ರಾಜ್ಯ ಮತ್ತು ಜಿಲ್ಲಾ ರಸ್ತೆಗಳಲ್ಲಿ ವಾಹನಗಳ ತಪಾಸಣೆ ಕೈಗೊಳ್ಳಲಾಗುತ್ತಿದೆ. ಕೇಂದ್ರೀಯ ಮೀಸಲುಪಡೆ, ಗಡಿ ಭದ್ರತಾಪಡೆ ಹಾಗೂ ಸ್ಥಳೀಯ ಪೊಲೀಸರು ತಪಾಸಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಪ್ರತಿಯೊಂದು ವಾಹನದ ಪರಿಶೀಲನೆ ಕಡ್ಡಾಯವಾಗಿದೆ. ಮುಖ್ಯವಾಗಿ ಆಂಧ್ರಪ್ರದೇಶದ ಗಡಿಯಲ್ಲಿ ಹೆಚ್ಚಿನ ಬಿಗಿ ತಪಾಸಣೆ ಕೈಗೊಳ್ಳಲಾಗುತ್ತಿದೆ. ಚಳ್ಳಕೆರೆ, ಹಿರಿಯೂರು ತಾಲ್ಲೂಕುಗಳಲ್ಲಿ ಅತಿ ಹೆಚ್ಚಿನ ತಪಾಸಣೆ ಕೈಗೊಳ್ಳಲಾಗಿದೆ. ತಪಾಸಣಾ ಕಾರ್ಯದ ದೃಶ್ಯವನ್ನು ಕ್ಯಾಮೆರಾದಲ್ಲಿಯೂ ಸೆರೆಹಿಡಿಯಲಾಗುತ್ತಿದೆ.ಅನುಮಾನ ಬಂದ ಎಲ್ಲ ವಾಹನಗಳ ತಪಾಸಣೆ ಕಾರ್ಯ ನಡೆಯುತ್ತಿದೆ. ಲಾರಿ ಮತ್ತು ಬಸ್‌ಗಳಿಗೆ ಅಲ್ಪಮಟ್ಟಿನ ವಿನಾಯಿತಿ ನೀಡಲಾಗುತ್ತಿದೆ.

ಜಿಲ್ಲೆಯ ಪ್ರಮುಖ ಸ್ಥಳಗಳಲ್ಲಿ ತಪಾಸಣೆ ಠಾಣೆಗಳನ್ನು ಸ್ಥಾಪಿಸಿರುವುದರಿಂದ ವಾಹನಗಳಲ್ಲಿ ಹಣ, ಮದ್ಯ ಸಾಗಿಸುವುದು ಕಷ್ಟಸಾಧ್ಯವಾಗಿದೆ.

ಈ ಬಿಗಿ ತಪಾಸಣೆ ನಡುವೆಯೂ ಅಭ್ಯರ್ಥಿಗಳು ಒಳಸುಳಿಗಳ ದಾರಿಯನ್ನು ಕಂಡುಕೊಳ್ಳಲು ಯತ್ನಿಸುತ್ತಿದ್ದಾರೆ. ಮತದಾನದ ದಿನ ಸಮೀಪಿಸುತ್ತಿರುವಂತೆ ಮತದಾರರಿಗೆ ಮತ್ತು ರಾಜಕೀಯ ಪಕ್ಷಗಳ ಮುಖಂಡರಿಗೆ ಹಣ ತಲುಪಿಸಲು ವಾಮಮಾರ್ಗಗಳ ಬಗ್ಗೆ ಅಭ್ಯರ್ಥಿಗಳು ಯೋಜನೆ ರೂಪಿಸುತ್ತಿದ್ದಾರೆ.

ಈಗಾಗಲೇ ಹಲವು ಅಭ್ಯರ್ಥಿಗಳು ವಿವಿಧ ರೀತಿಯಲ್ಲಿ ಮತದಾರರಿಗೆ ಹಣ ತಲುಪಿಸುವಲ್ಲಿ ಯಶಸ್ವಿಯೂ ಆಗಿದ್ದಾರೆ.ಚುನಾವಣಾ ಆಯೋಗ ಅಬ್ಬರದ ಪ್ರಚಾರಕ್ಕೆ ಮಾದರಿ ನೀತಿಸಂಹಿತೆ ಅನುಷ್ಠಾನಗೊಳಿಸಿರುವುದರಿಂದ ಅಬ್ಬರದ ಪ್ರಚಾರಕ್ಕೆ ಕಡಿವಾಣ ಬಿದ್ದಿದೆ. ಹೀಗಾಗಿ ಅಭ್ಯರ್ಥಿಗಳು ಪಾದಯಾತ್ರೆಯಲ್ಲಿ ಮನೆ, ಮನೆಗೆ ತೆರಳಿ ಮತದಾರರ ಮನವೊಲಿಸುವಲ್ಲಿ ತೊಡಗಿದ್ದಾರೆ. ಬೆಳಿಗ್ಗೆಯಿಂದ ರಾತ್ರಿವರೆಗೂ ಹಳ್ಳಿಗಳಿಗೆ ತೆರಳಿ ಪ್ರಚಾರ ಮಾಡುತ್ತಿದ್ದಾರೆ.

ಪ್ರತಿಕ್ರಿಯಿಸಿ (+)