ಸೋಮವಾರ, ಮೇ 16, 2022
29 °C

ಕಟ್ಟುಪಾಡುಗಳ ಗೋಡೆ ಒಡೆದು ಮುನ್ನುಗ್ಗಿ - ಡಾ.ಬಿ.ಟಿ.ಲಲಿತಾನಾಯಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ‘ವ್ಯಾಪಾರೀಕರಣದ ಇಂದಿನ ಯುಗದಲ್ಲಿ ಎಲ್ಲವನ್ನೂ ವ್ಯಾಪಾರದ ವಸ್ತುವನ್ನಾಗಿಸಿದ್ದೇವೆ. ನಮ್ಮ ಶಿಕ್ಷಣ, ಆಟಗಳೂ ಸಹ ವ್ಯಾಪಾರೀಕರಣಗೊಂಡು ಸಮಾಜದಲ್ಲಿ ದೊಡ್ಡ ಗೋಡೆಗಳು ನಿರ್ಮಾಣ ವಾಗಿವೆ. ಮಹಿಳೆಯರು ಕಟ್ಟುಪಾಡುಗಳ ಗೋಡೆಯನ್ನು ಒಡೆದು ಮುನ್ನುಗ್ಗಬೇಕು’ ಎಂದು ಮಾಜಿ ಸಚಿವೆ, ಲೇಖಕಿ ಡಾ. ಬಿ.ಟಿ. ಲಲಿತಾನಾಯಕ್  ನುಡಿದರು.

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಭಾರತ ವಿದ್ಯಾರ್ಥಿ ಫೆಡರೇಶನ್‌ನವರು ಹಾಸನದಲ್ಲಿ ಹಮ್ಮಿಕೊಂಡಿರುವ ವಿದ್ಯಾರ್ಥಿನಿಯರ ಐದನೇ ರಾಜ್ಯ ಸಮಾವೇಶವನ್ನು ಉದ್ಘಾಟಿಸಿ, ಡಾ. ಎನ್ ಗಾಯತ್ರಿ ಅವರು ಕನ್ನಡಕ್ಕೆ ಅನುವಾದ ಮಾಡಿರುವ ಪಾರ್ವತಿ ಮೆನನ್ ಅವರ ‘ಅಡ್ಡಗೋಡೆಗಳನ್ನೊಡೆದು...’ ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ನಮ್ಮ ಯುವತಿಯರು ಶಿಕ್ಷಣವನ್ನು ಬಿಟ್ಟು ಬೇರೆ ಮರೀಚಿಕೆಗಳ ಬೆನ್ನು ಹತ್ತಿದ್ದಾರೆ. ಯುವತಿಯರು ಮೊದಲು ನಾವೆತ್ತ ಸಾಗುತ್ತಿದ್ದೇವೆ, ನಾವೆಂಥ ಶಿಕ್ಷಣ ಪಡೆಯಬೇಕು ಎಂಬ ಬಗ್ಗೆ ಚಿಂತನೆ ನಡೆಸಬೇಕು. ಸಾಮಾಜಿಕ ಕಟ್ಟುಪಾಡುಗಳು ಹಿಂದೆಯೂ ಇದ್ದವು. ಅನೇಕ ಮಹಿಳೆಯರು ಇಂಥ ಗೋಡೆಗಳನ್ನು ಕೆಡವಿ ಮುಂದೆ ಬಂದಿದ್ದಾರೆ. ಅವರಿಂದ ಪ್ರೇರಣೆ ಪಡೆದು ತಾವೂ ಮುನ್ನುಗ್ಗಬೇಕು. ಹಣ ಸಂಪಾದನೆಗಿಂತ ಮಾನವೀಯ ಗುಣಗಳನ್ನು ಮೂಡಿಸುವ ಶಿಕ್ಷಣಕ್ಕೆ ಆದ್ಯತೆ ನೀಡಬೇಕು’ ಎಂದು ಲಲಿತಾ ನಾಯಕ್ ನುಡಿದರು.

ಭಾನು ಮುಷ್ತಾಕ್ ಮಾತನಾಡಿ, ‘ಇಂದು ಮಾಧ್ಯಮಗಳು, ಕಾನೂನು ಎಲ್ಲವೂ ಮಹಿಳೆಯರ ಪರವಾಗಿದ್ದರೂ ಆಕೆಯ ಮುಂದೆ ಸವಾಲುಗಳು ಹೆಚ್ಚಾಗಿವೆಯೇ ವಿನಾ ಕಡಿಮೆ ಯಾಗಿಲ್ಲ. ಮಹಿಳೆಯನ್ನು ಸಮಾನವಾಗಿ ಕಾಣಲು ಸಾಕಷ್ಟು ಕಾನೂನು ಗಳನ್ನು ರೂಪಿ ಸಿದ್ದರೂ ಅನುಷ್ಠಾನದ ಹಂತದಲ್ಲಿ ಅವುಗಳನ್ನು ಉದ್ದೇಶಪೂರ್ವಕವಾಗಿ ದುರ್ಬಲ ಗೊಳಿಸಲಾಗುತ್ತಿದೆ ಎಂದರು.

ಲೈಂಗಿಕ ಕಿರುಕುಳ ತಡೆಗೆ ಎಲ್ಲ ಕಚೇರಿಗಳಲ್ಲೂ ಮಹಿಳೆಯ ಅಧ್ಯಕ್ಷತೆಯಲ್ಲೇ ಒಂದು ಸಮಿತಿ ರಚಿಸಬೇಕು ಎಂಬ ನಿಯಮವಿದೆ. ಆದರೆ ಯಾವ ಸರ್ಕಾರವೂ ಈ ನಿಯಮ ಜಾರಿಗೆ ಆಸಕ್ತಿ ತೋರುತ್ತಿಲ್ಲ. ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ ಪ್ರಕಾರ ಪ್ರತಿ ತಾಲ್ಲೂಕಿಗೂ ಒಬ್ಬೊಬ್ಬ ಸಂರಕ್ಷಣಾಧಿಕಾರಿ ಯನ್ನು ನೇಮಿಸಬೇಕು. ಆದರೆ ಸರ್ಕಾರಗಳು ಈ ಜವಾಬ್ದಾರಿಯನ್ನು ಮಹಿಳಾ ಮತ್ತು ಮಕ್ಕಳಕಲ್ಯಾಣ ಇಲಾಖೆಯ ಅಧಿಕಾರಿಗಳ ಹೆಗಲಿಗೇರಿಸಿ ಸುಮ್ಮನಾಗಿವೆ ಎಂದರು.

ಸ್ತ್ರೀರೋಗ ಹಾಗೂ ಪ್ರಸೂತಿ ತಜ್ಞೆ ಡಾ. ರಂಗಲಕ್ಷ್ಮಿ ಗಂಡು ಹೆಣ್ಣಿನ ನಡುವಿನ ಅನುಪಾತ ಕಡಿಮೆಯಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿ, ‘ಹೆಣ್ಣನ್ನು ರಕ್ಷಿಸುವ ಹೊಣೆಯನ್ನು ಮಹಿಳೆಯರೇ ವಹಿಸಿ ಕೊಳ್ಳಬೇಕು. ಹೆಣ್ಣು ತನ್ನನ್ನು ತಾನು ಗೌರವಿಸ ದಿದ್ದರೆ, ರಕ್ಷಿಸಕೊಳ್ಳದಿದ್ದರೆ ಇನ್ನೊಬ್ಬರನ್ನು ಗೌರವಿಸಲಾರಳು. ಸಮಾನತೆಯ ಹೋರಾಟದ ಜತೆಗೆ ಮಹಿಳೆ ತಮ್ಮ ಕಲೆ, ಸಂಸ್ಕೃತಿಗಳನ್ನು ಉಳಿಸುವ ಕಾರ್ಯವನ್ನೂ ಮಾಡಬೇಕು’ ಎಂದರು.

ಮಾಜಿ ಶಾಸಕ ಜಿ.ವಿ. ಶ್ರೀರಾಮರೆಡ್ಡಿ, ಲೇಖಕಿ ರೂಪ ಹಾಸನ, ಎಸ್.ಎಫ್.ಐ ರಾಜ್ಯ ಘಟಕದ ಕಾರ್ಯದರ್ಶಿ ಅನಂತ ನಾಯಕ್ ವೇದಿಕೆಯಲ್ಲಿದ್ದರು. ಎಸ್.ಎಫ್.ಐ ರಾಜ್ಯ ಘಟಕದ ಅಧ್ಯಕ್ಷ ಎಚ್.ಆರ್. ನವೀನ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಮಾ ವೇಶಕ್ಕೂ ಮೊದಲು ವಿದ್ಯಾರ್ಥಿನಿಯರು ಮಹಿಳಾ ಸರ್ಕಾರಿ ಕಾಲೇಜಿನಿಂದ ಸಾಹಿತ್ಯ ಪರಿಷತ್ ಭವನದವರೆಗೆ ಮೆರವಣಿಗೆ ನಡೆಸಿದರು.

ವಿದ್ಯಾರ್ಥಿನಿಯರ ರಾಜ್ಯ ಉಪ ಸಮಿತಿ ಸಂಚಾಲಕಿ ಸೌಮ್ಯಾ ಪ್ರಾಸ್ತಾವಿಕ ಮಾತನಾಡಿ ದರು. ಪೃಥ್ವಿ ನಿರೂಪಿಸಿದರು. ಮಧ್ಯಾಹ್ನದ ಬಳಿಕ ಎರಡು ಗೋಷ್ಠಿಗಳು ನಡೆದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.