ಶುಕ್ರವಾರ, ಡಿಸೆಂಬರ್ 13, 2019
26 °C

ಕಟ್ಟುವೆವು ನಾವು

ಸುಮಲತಾ ಎನ್. Updated:

ಅಕ್ಷರ ಗಾತ್ರ : | |

ಕಟ್ಟುವೆವು  ನಾವು

ವಿಜ್ಞಾನದ ಅರಿವಿಗೆ ‘ಅರಿಮೆ’

ವಿಜ್ಞಾನ, ತಾಂತ್ರಿಕ  ವಿಷಯಗಳನ್ನು ಸರಳ ಕನ್ನಡದಲ್ಲಿ ಅತಿ ನಯವಾಗಿ ಬಿಡಿಸಿಡುವ ಪ್ರಯತ್ನ ಮಾಡುತ್ತಿದೆ ‘ಅರಿಮೆ’ ತಾಣ. ಕನ್ನಡದಲ್ಲಿ ವಿಜ್ಞಾನ ಪದಗಳು ಹೆಚ್ಚೆಚ್ಚು ಬರಬೇಕು. ವಿಜ್ಞಾನ ಅಭಿವೃದ್ಧಿಯ ಸಂಕೇತವಾಗಿರುವುದರಿಂದ ನಮ್ಮ ನುಡಿಯಲ್ಲೇ ವಿಜ್ಞಾನವನ್ನೂ ಬೆಳೆಸುವ ಪ್ರಯತ್ನ ಮಾಡಬೇಕು ಎಂಬ ಉದ್ದೇಶದೊಂದಿಗೆ ‘ಅರಿಮೆ’ ರೂಪುಗೊಂಡಿದೆ. ತಿಳಿಗನ್ನಡದಲ್ಲೇ ಪದಗಳನ್ನು ಬಳಸಿ ಲೇಖನಗಳನ್ನು ಹೊರತರುತ್ತಿರುವ ಈ ಜಾಲತಾಣಕ್ಕೆ ಪ್ರಮುಖವಾಗಿ ಮೂರು ಮಂದಿ ಲೇಖಕರಿದ್ದಾರೆ. ಸಂಪಾದಕತ್ವ ಪ್ರಶಾಂತ್ ಸೊರಟೂರು ಅವರದು.ವಿಜ್ಞಾನ (ಅರಿಮೆ), ತಂತ್ರಜ್ಞಾನ (ಚಳಕ)ದ ವಿವರಗಳು, ವಿವಿಧ ವೈಜ್ಞಾನಿಕ ಸಂಶೋಧನೆಯ ಸುದ್ದಿಗಳೂ ಸೇರಿದಂತೆ ವಿಜ್ಞಾನದ ವಿಷಯಗಳೆಲ್ಲ ಒಂದೆಡೆ ಸಿಗುವಂತೆ ಮಾಡುವುದು ‘ಅರಿಮೆ’ ಉದ್ದೇಶ. ಇರುವರಿಮೆ (ಭೌತವಿಜ್ಞಾನ), ಅರ್ಪರಿಮೆ (ರಸಾಯನ ವಿಜ್ಞಾನ), ಉಸಿರರಿಮೆ (ಜೀವವಿಜ್ಞಾನ), ಎಣಿಕೆಯರಿಮೆ (ಗಣಿತ) ...ಹೀಗೆ  ವಿಜ್ಞಾನದ ಹಲವು ಕವಲುಗಳು ಇದರಲ್ಲಿವೆ. ಇಂಗ್ಲಿಷ್ ಪದಗಳಿಗೆ ಕನ್ನಡದ ಪದಗಳನ್ನು ಕೊಡುವ ಪ್ರಯತ್ನವೂ ಇದೆ. ಈವರೆಗೆ ಒಂದೂವರೆ ಸಾವಿರ ಪದಗಳು ಈ ವಿಭಾಗದಲ್ಲಿ ಸಂಗ್ರಹವಾಗಿವೆ.ವೆಬ್‌ತಾಣದೊಂದಿಗೆ ಫೇಸ್‌ಬುಕ್, ಟ್ವಿಟರ್‌ನಲ್ಲಿಯೂ ‘ಅರಿಮೆ’ಯ ಕುರಿತು ಜಾಗೃತಿ ನಡೆಯುತ್ತಿದೆ. ವಿಜ್ಞಾನ ಪದಗಳನ್ನು ಹುಡುಕಲು ಸಲಹೆ ಸೂಚನೆಗಳನ್ನೂ ಕೊಡುವವರಿದ್ದಾರೆ. ಸದ್ಯಕ್ಕೆ ಇಲ್ಲಿ ವಾರಕ್ಕೆ ಒಂದು ಬರಹ ಪ್ರಕಟವಾಗುತ್ತಿದೆ.

‘ಅರಿಮೆ’ಯ ಕೊಂಡಿ: arime.org***

ಮಹಾಪ್ರಾಣಗಳ ಹಂಗಿಲ್ಲದ ‘ಹೊನಲು’


ಕನ್ನಡದಲ್ಲಿ ಬೇಡದೆ ಇರುವ ಪದಗಳನ್ನು ಕೈಬಿಟ್ಟು, ಆಡು ಮಾತಿನ ಕನ್ನಡವನ್ನು ಪ್ರಚುರಪಡಿಸುವ ಮೂಲಕ ಅದು ಪ್ರಸ್ತುತವಾಗುವಂತೆ ಮಾಡಬೇಕು ಎಂಬ ಗಟ್ಟಿ ನೆಲೆಯಲ್ಲಿ ‘ಹೊನಲು’ ಬಳಗ ಹುಟ್ಟಿಕೊಂಡಿದೆ. ಮಹಾಪ್ರಾಣದ ಹಂಗು ತೊರೆದು, ಕೀಳರಿಮೆ ಇಲ್ಲದೆ ನಾವು ‘ಉಲಿದಂತೆ ಬರೆಯುವ’ ರೂಢಿ ಇಟ್ಟುಕೊಳ್ಳಬೇಕು ಎಂಬುದು ಇದರ ಮುಖ್ಯ ನಿಯಮ. ಏಪ್ರಿಲ್ ಬಂದರೆ ‘ಹೊನಲು’ ಜಾಲತಾಣಕ್ಕೆ  ಮೂರು ವರ್ಷ ತುಂಬುತ್ತದೆ. ಆಡು ಮಾತಿನಲ್ಲಿ ಬಳಸದ ಮಹಾಪ್ರಾಣಗಳನ್ನು ಬರೆಯುವುದಕ್ಕೆ ಏಕೆ ಬಳಸಬೇಕು ಎಂಬ ಪ್ರಶ್ನೆ ಹೊತ್ತು, ತಮ್ಮದೇ ‘ಹೊಸಗನ್ನಡ’ ರೂಪಿಸಲು ಹೊರಟಿದೆ ತಂಡ.

ಎರವಲು ಪದಗಳಿಂದ ಬರೆಯಲು ತಡವರಿಸುವ ಬದಲು, ನಮಗೆ ಬಂದಂತೆ ಬರೆಯುವುದೇ ಕನ್ನಡಕ್ಕೆ ಹೆಚ್ಚು ಆಪ್ತವಾಗುವ ಪ್ರಕ್ರಿಯೆ ಎಂದು ಹೇಳಿಕೊಂಡಿದೆ. ಅನ್ನದಾನೇಶ್, ಪ್ರಿಯಾಂಕ್, ಪ್ರಶಾಂತ್, ಯಶವಂತ್ ಇನ್ನಿತರರು ಈ ವೆಬ್‌ತಾಣದ ಆಗು ಹೋಗುಗಳನ್ನು ನೋಡಿಕೊಳ್ಳುತ್ತಿದ್ದಾರೆ. ನೂರೈವತ್ತಕ್ಕೂ ಹೆಚ್ಚು ಮಂದಿ ಲೇಖನಗಳನ್ನು ಬರೆದರೆ, ಐವತ್ತು ಮಂದಿ ನಿರಂತರವಾಗಿ ಬರೆಯುತ್ತಿದ್ದಾರೆ. ಹೊರ ನಾಡು, ಹೊರದೇಶಗಳಿಂದ ಸಾಕಷ್ಟು ಮಂದಿ ಈ ತಾಣದೊಂದಿಗೆ ಕೈ ಜೋಡಿಸಿದ್ದಾರೆ. ಸರಳ ಕನ್ನಡದಲ್ಲೇ ನಡೆ ನುಡಿ,  ತಂತ್ರಜ್ಞಾನ,  ನಲ್ಬರಹ, ನಾಡು  ಎಂಬ ಶೀರ್ಷಿಕೆಯಡಿಯಲ್ಲಿ ಲೇಖನಗಳು ಈ ಜಾಲತಾಣದಲ್ಲಿವೆ.

‘ಹೊನಲು’ ಸಂಪರ್ಕ ಕೊಂಡಿ: honalu.net***

‘ಭಾಷಾ ಸಮಾನತೆ’ ಜೊತೆ ಹೆಜ್ಜೆ ಹಾಕಿ


ಜನರ ಜೀವನದಲ್ಲಿ ಸರ್ಕಾರದ ಪಾತ್ರ ತುಂಬಾ ಮುಖ್ಯ. ಅಂಚೆ, ರೈಲ್ವೆ, ಬ್ಯಾಂಕ್ ಹೀಗೆ ಹಲವು ಸೇವೆಗಳನ್ನು ಜನರಿಗೆಂದೇ ಸರ್ಕಾರ ನೀಡುತ್ತಿದೆ. ಆದರೆ ಅವು ಜನರಿಗೆ ತಲುಪುತ್ತಿಲ್ಲ. ಕಾರಣ ಇಷ್ಟೆ. ಈ ಎಲ್ಲಾ ಸೇವೆಗಳಲ್ಲೂ ಮಾಹಿತಿ, ಸೂಚನೆಗಳನ್ನು ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ನೀಡಿರುವುದು. ಒಂದು ಭಾಷಾ ನೀತಿ ಜನರಿಗೆ ಹೇಗೆ  ಹೊರೆಯಾಗುತ್ತದೆ ಎಂಬುದನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಪ್ರಯತ್ನ ‘ಭಾಷಾ ಸಮಾನತೆ’ ತಂಡದ್ದು. ‘ನಾವು ಒಂದೂವರೆ ವರ್ಷದಿಂದ ಇದೇ ವಿಷಯವನ್ನು ಎದುರಿಗಿಟ್ಟುಕೊಂಡು ಜಾಗೃತಿ ಪ್ರದರ್ಶನಗಳನ್ನು ನಡೆಸಿಕೊಡುತ್ತಿದ್ದೇವೆ’ ಎಂದು ಬಳಗದ ವಸಂತ ಶೆಟ್ಟಿ ಹೇಳುತ್ತಾರೆ.

ಸುರಕ್ಷತೆ, ಸೇವೆ, ವಿಮಾನ ಯಾನ, ಔಷಧ– ಹೀಗೆ ಹಲವು ಸೇವೆಗಳಲ್ಲಿ ನಡೆಯುವ ಭಾಷಾ ಅಸಮಾನತೆಯನ್ನು ಎತ್ತಿ ತೋರಿಸುವುದು ಇದರ ಮುಖ್ಯ ಉದ್ದೇಶ. ಪ್ರಾದೇಶಿಕ ಭಾಷೆಯ ಮಹತ್ವವನ್ನು ಮನವರಿಕೆ ಮಾಡುವ ಪ್ರಯತ್ನದಲ್ಲಿ, ಸರ್ಕಾರಕ್ಕೆ ಹಲವು ಅರ್ಜಿಗಳನ್ನೂ ಸಲ್ಲಿಸಲಾಗಿದೆ. ‘ಭಾಷಾ ಸಮಾನತೆ’ಯ ಪ್ರದರ್ಶನಗಳಲ್ಲಿ ಹಿಂದಿ ಹೇರಿಕೆ, ಅದರ ಪರಿಣಾಮ, ಸಮಸ್ಯೆಗಳ ಕುರಿತು ಹತ್ತಾರು ಭಿತ್ತಿ ಚಿತ್ರಗಳನ್ನು ಮಾಡಿ ಇಡಲಾಗುತ್ತದೆ. ಈ ವಿಷಯಕ್ಕೆ ಸಂಬಂಧಿಸಿ ಹಕ್ಕೊತ್ತಾಯ, ಜನದನಿ, ಆರ್‌ಟಿಐ,  ಲೇಖನಗಳು, ಸುದ್ದಿಗಳನ್ನು ಇಲ್ಲಿ ಕಾಣಬಹುದು.

ಅಂತರ್ಜಾಲ ಕೊಂಡಿ: bhashasamanathe.wordpress.com

ಪ್ರತಿಕ್ರಿಯಿಸಿ (+)