ಕಟ್ಟೆಚ್ಚರ ಅಗತ್ಯ

7

ಕಟ್ಟೆಚ್ಚರ ಅಗತ್ಯ

Published:
Updated:

ದೆಹಲಿಯಲ್ಲಿರುವ ಇಸ್ರೇಲ್ ರಾಜತಾಂತ್ರಿಕ ಅಧಿಕಾರಿಯೊಬ್ಬರ ಮೇಲೆ ಉಗ್ರರು ನಡೆಸಿರುವ ದಾಳಿಯಿಂದಾಗಿ ಇರಾನ್ ಮತ್ತು ಇಸ್ರೇಲ್ ನಡುವಣ ವೈಷಮ್ಯದ ಪ್ರತಿಧ್ವನಿಯಾಗಿ ಸಿಡಿದಿರುವ ಅಂತರರಾಷ್ಟ್ರೀಯ ಉಗ್ರವಾದ ಭಾರತಕ್ಕೆ ಬಂದಿಳಿದಂತಾಗಿದೆ. ಪ್ರಧಾನಿ ಮನೆಗೆ ಅತಿ ಸಮೀಪದಲ್ಲಿಯೇ ಈ ದಾಳಿ ನಡೆದಿರುವುದನ್ನು ನೋಡಿದರೆ ಭಾರತದ ಭದ್ರತಾ ವೈಫಲ್ಯ ಎದ್ದು ಕಾಣುತ್ತದೆ.ಇರಾನ್ ಪರಮಾಣು ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಉಂಟಾಗಿರುವ ಅಂತರರಾಷ್ಟ್ರೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಉಗ್ರರ ದಾಳಿ ಬೆದರಿಕೆ ಇಸ್ರೇಲ್‌ಗೆ ಈಗ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ದೆಹಲಿಯಲ್ಲಿ ದಾಳಿ ನಡೆದ ದಿನದಂದೇ ಜಾರ್ಜಿಯಾದಲ್ಲಿ ವಿಫಲ ದಾಳಿ ನಡೆದಿದೆ.ಕಳೆದ ತಿಂಗಳು ಇರಾನ್‌ನ ಪರಮಾಣು ವಿಜ್ಞಾನಿಯೊಬ್ಬರನ್ನು ಹತ್ಯೆ ಮಾಡಲು ಬಳಸಿದಂಥ ಮ್ಯಾಗ್ನೆಟಿಕ್ ಬಾಂಬ್‌ಗಳನ್ನೇ  ದೆಹಲಿ ಮತ್ತು ಜಾರ್ಜಿಯಾ ದಾಳಿಗಳಲ್ಲೂ ಬಳಸಲಾಗಿರುವುದು ಈ ಘಟನೆಗಳ ಹಿಂದೆ ದೊಡ್ಡ ಸಂಚು ಇರಬಹುದೆಂಬ ಅನುಮಾನ ಏಳಲು ಕಾರಣವಾಗಿದೆ.ತನ್ನ ಪರಮಾಣು ವಿಜ್ಞಾನಿಯ ಹತ್ಯೆಯ ಹಿಂದೆ ಅಮೆರಿಕ ಮತ್ತು ಇಸ್ರೇಲ್ ಕೈವಾಡ ಇದೆಯೆಂದು ಇರಾನ್ ದೂಷಿಸಿತ್ತು. ಭಾರತ ಮತ್ತು ಜಾರ್ಜಿಯಾ ದಾಳಿ ಘಟನೆಗಳ ಹಿಂದೆ ಇರಾನ್ ಮತ್ತು ಅದರ ಬೆಂಬಲಿತ ಲೆಬನಾನ್ ಮೂಲದ ಹೆಜಬುಲ್ಲಾ ಉಗ್ರವಾದಿಗಳು ಇದ್ದಾರೆ ಎಂದು ಇದೀಗ ಇಸ್ರೇಲ್ ಆಪಾದಿಸಿದೆ.

 

ಪರಸ್ಪರ ವೈಷಮ್ಯದ ದೇಶಗಳ ನಡುವೆ ಆಪಾದನೆಗಳು ಬರುವುದರಲ್ಲಿ ಹೊಸದೇನೂ ಇಲ್ಲ. ಈ ಘಟನೆಗಳ ಹಿಂದೆ ಇರುವ ಉಗ್ರವಾದಿಗಳು ಯಾರು ಎಂಬುದನ್ನು ತನಿಖೆ ಮಾತ್ರ ಬಯಲಿಗೆಳೆದೀತು. ಭಾರತ ಎರಡೂ ದೇಶಗಳ ಜೊತೆ ಉತ್ತಮ ಬಾಂಧವ್ಯ ಹೊಂದಿದೆ. ಇಸ್ರೇಲ್ ಜೊತೆ ಉತ್ತಮ ರಕ್ಷಣಾ ಸಹಕಾರ ಇದೆ. ತೈಲಕ್ಕಾಗಿ ಭಾರತ ಇರಾನನ್ನು ಅವಲಂಬಿಸಿದೆ. ಪರಮಾಣು ಕಾರ್ಯಕ್ರಮ ಸೃಷ್ಟಿಸಿರುವ ವಿವಾದದಿಂದಾಗಿ ಅಮೆರಿಕ, ಯೂರೋಪ್ ಒಕ್ಕೂಟ ಇರಾನ್ ಮೇಲೆ ಕಠಿಣ ಆರ್ಥಿಕ ನಿರ್ಬಂಧಗಳನ್ನು ವಿಧಿಸಿವೆ. ವಿಶ್ವಸಂಸ್ಥೆಯ ನಿರ್ಬಂಧಗಳು ಈ ಮೊದಲೇ ಜಾರಿಯಲ್ಲಿವೆ.

 

ಇರಾನ್ ಜೊತೆ ಎಲ್ಲ ಸಂಬಂಧಗಳನ್ನು ಕಡಿದುಕೊಳ್ಳಬೇಕೆಂಬ ಒತ್ತಡವಿದ್ದರೂ ಭಾರತ ಅದನ್ನು ಪ್ರತಿರೋಧಿಸಿ ಇರಾನ್ ಜೊತೆ ಬಾಂಧವ್ಯ ಹೊಂದಿದೆ. ಇದು ಇರಾನ್ ದ್ವೇಷಿ ರಾಷ್ಟ್ರಗಳನ್ನು ಕೆರಳಿಸಿದೆ ಎನ್ನುವುದು ನಿಜ. ಇರಾನ್ ಜೊತೆಗಿನ ಬಾಂಧವ್ಯ ಮುರಿಯುವ, ಭಾರತದ ಪ್ರಗತಿಯನ್ನು ಸಹಿಸದ ಶಕ್ತಿಗಳ ಸಂಚಿನ ಭಾಗವಾಗಿಯೂ ದೆಹಲಿ ದಾಳಿ ನಡೆದಿರುವ ಸಾಧ್ಯತೆ ಇದೆ.

 

ಈ ವೈಷಮ್ಯದ ನಡುವೆ ತಾನು ಸಿಕ್ಕಿಕೊಳ್ಳದಂತೆ ಭಾರತ ನೋಡಿಕೊಳ್ಳಬೇಕಿದೆ. ಇರಾನ್‌ನ ಪರಮಾಣು ಸ್ಥಾವರಗಳ ಮೇಲೆ ದಾಳಿ ನಡೆಸಲು ಇಸ್ರೇಲ್ ಸಿದ್ಧತೆ ನಡೆಸಿದ್ದರೆ ಅದಕ್ಕೆ ಪ್ರತೀಕಾರ ಕ್ರಮ ತೆಗೆದುಕೊಳ್ಳಲು ಇರಾನ್ ಕೂಡಾ ತಯಾರಾಗಿದೆ ಎಂಬ ವರದಿಗಳಿಂದಾಗಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ.ಪರಿಸ್ಥಿತಿ ಕೈಮೀರಿ ಹೋಗುವುದಕ್ಕೆ ಅಂತರರಾಷ್ಟ್ರೀಯ ಸಮುದಾಯ ಅವಕಾಶ ನೀಡಬಾರದು. ಇರಾನ್ ಅಂತೆಯೇ ಅಮೆರಿಕ, ಯೂರೋಪ್ ಒಕ್ಕೂಟದ ನಾಯಕರು ಇರಾನ್ ಜೊತೆ ಮತ್ತೊಮ್ಮೆ ಮಾತುಕತೆಗೆ ಮುಂದಾಗಬೇಕು.ಇರಾನ್ ಕೂಡಾ ಪ್ರತಿಷ್ಠೆಯನ್ನು ಕೈಬಿಟ್ಟು ಸಮಸ್ಯೆಗೆ ಪರಿಹಾರ ಕಂಡುಹಿಡಿಯುವಲ್ಲಿ ಸಹಕರಿಸಬೇಕು. ಹಿಂಸೆ ಪರಿಹಾರವಲ್ಲ ಎನ್ನುವುದನ್ನು ಎರಡೂ ಕಡೆಯವರು ಮರೆಯಬಾರದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry