ಬುಧವಾರ, ಮೇ 18, 2022
27 °C

ಕಠಿಣ ಕ್ರಮಕ್ಕೆ ಕೆಆರ್‌ಎಸ್ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ತಾಲ್ಲೂಕಿನ ಉಪ್ರಾಳ ಗ್ರಾಮದಲ್ಲಿ ಪುನರ್ವಸತಿ ಹಂಚಿಕೆಯಲ್ಲಿಯಾದ ತಾರತಮ್ಯ ಸರಿಪಡಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರೈತ ಸಂಘದ ತಾಲ್ಲೂಕು ಸಮಿತಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸೋಮವಾರ ಟಿಪ್ಪು ಸುಲ್ತಾನ ರಸ್ತೆಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ನಡೆಸಿದರು.ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಉಪ್ರಾಳ ಗ್ರಾಮದಲ್ಲಿ ಪುನರ್ವಸತಿ ಹಂಚಿಕೆ ತಾರತಮ್ಯದಿಂದಾಗಿ  ನೆರೆ ಸಂತ್ರಸ್ತ ನೈಜ ಫಲಾನುಭವಿಗಳ ವಂಚಿಸಲಾಗಿದೆ ಎಂದು ಆರೋಪಿಸಿದರು.ಪುನರ್ವಸತಿ ನಿರ್ಮಾಣಕ್ಕಾಗಿ ಸರ್ಕಾರಿ ಸಾಗುವಳಿಯ ತುಂಡು ಭೂಮಿ ಕಳೆದುಕೊಂಡ ದಲಿತರಿಗೆ ಸರಿಯಾಗಿ ಮನೆ ಹಂಚಿಕೆ ಮಾಡಬೇಕು, ಅವರಿಗೆ ಪರ್ಯಾಯ ಭೂಮಿಯನ್ನು ಕಲ್ಪಿಸಬೇಕು ಎಂದು ಆಗ್ರಹಿಸಿದರು.ಉಪ್ರಾಳ ಗ್ರಾಮದಲ್ಲಿ ಪುನರ್ವಸತಿ ಯೋಜನೆಯಡಿ ಮನೆ ಹಂಚಿಕೆಯಲ್ಲಿ ಅನ್ಯಾಯ ಮತ್ತು ಅವ್ಯವಹಾರ ನಡೆದಿದೆ. ತನಿಖೆ ನಡೆಸಿ ಇದಕ್ಕೆ ಕಾರಣರಾದವರ ವಿರುದ್ಧ ಕ್ರಮ ಜರುಗಿಸಬೇಕು. ಸೂರು ಸಿಗದೇ ಬೀದಿಯಲಿ ಬಿದ್ದ ಸಂತ್ರಸ್ತ ದಲಿತ, ನಾಯಕ, ಮುಸ್ಲಿಂ, ಗೊಪ್ಪೆರ, ಮಡಿವಾಳ ಮತ್ತು ಬಡಿಗೇರ ಸಮುದಾಯದ ಜನತೆಗೆ ಮನೆ ಸಿಗುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಉಪ್ರಾಳ ಗ್ರಾಮದಲ್ಲಿ 14ಕ್ಕೂ ಹೆಚ್ಚು ಭೂಹೀನ ದಲಿತರಿಗೆ ಸಂಬಂಧಿಸಿದ 20 ಎಕರೆ ಸರ್ಕಾರಿ ಸಾಗುವಳಿ ತುಂಡು ಭೂಮಿಯನ್ನು ನೆರೆ ಸಂತ್ರಸ್ತರಿಗೆ ಪುನರ್ವಸತಿಗಾಗಿ ಜಿಲ್ಲಾಡಳಿತ ಖರೀದಿಸಿ ಪರಿಹಾರ ನೀಡಿದೆ. ಆದರೆ ಅವರಿಗೆ ಪರ್ಯಾಯ ಭೂಮಿ ದೊರಿಕಿಸಿಲ್ಲ. ಜೊತೆಗೆ ಈ ಜಮೀನು ಹೊಂದಿದ್ದ ದಲಿತರಿಗೆ ಒಂದು ಮನೆ ಕೊಡುವ ಭರವಸೆಯೂ ಈಡೇರಿಲ್ಲ ಎಂದು ದೂರಿದರು.20 ಎಕರೆ ಭೂಮಿಯಲ್ಲಿ 5 ಎಕರೆ ಭೂಮಿಯನ್ನು ಗೋಡಿಹಾಳ ಗ್ರಾಮದ ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ಹಾಗೂ 15 ಎಕರೆ ಉಪ್ರಾಳ ಗ್ರಾಮದ ಸಂತ್ರಸ್ತರ ಮನೆ ನಿರ್ಮಾಣಕ್ಕೆ ಬಳಸಲಾಗಿದೆ.ಇಲ್ಲಿ 203 ಮನೆ ನಿರ್ಮಿಸಿದ್ದರೂ ದಲಿತ, ನಾಯಕ, ಮುಸ್ಲಿಂ, ಗೊಪ್ಪೆರ, ಮಡಿವಾಳ ಮತ್ತು ಬಡಿಗೇರ ಸಮುದಾಯದ ಜನತೆಗೆ ಮನೆ ದೊರಕಿಸಿಲ್ಲ. ಗಂಭೀರವಾಗಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಸಂಘಟನೆ ತಾಲ್ಲೂಕು ಘಟಕದ ಅಧ್ಯಕ್ಷ ಎಸ್ ರಾಜಶೇಖರ್, ಯರಗೇರಾ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಜಾನಪ್ಪ ಉಪ್ರಾಳ, ಬಿ ಬಸವಲಿಂಗಪ್ಪ, ಶ್ರೀನಿವಾಸ ಕೊಪ್ಪರ, ಸುಮನ್, ರಾಮು, ಉರುಕುಂದಪ್ಪ, ರಘು ಇಟಿಕರ್, ರಂಗಮ್ಮ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.