ಗುರುವಾರ , ಅಕ್ಟೋಬರ್ 17, 2019
22 °C

ಕಠಿಣ ಕ್ರಮ ಅಗತ್ಯ

Published:
Updated:

ಚೀನಾದ ಶಾಂಘೈನಲ್ಲಿರುವ ಭಾರತದ ರಾಜತಾಂತ್ರಿಕ ಅಧಿಕಾರಿ ಎಸ್. ಬಾಲಚಂದ್ರನ್ ಜೊತೆಗೆ ಯಿವು ನಗರದ ಅಧಿಕಾರಿಗಳು ಮತ್ತು ಸ್ಥಳೀಯ ಜನರು ನಡೆದುಕೊಂಡ ರೀತಿ ಖಂಡನೀಯವಾದುದು.ಈ ಸಂಬಂಧ ಭಾರತದ ವಿದೇಶಾಂಗ ವ್ಯವಹಾರ ಸಚಿವಾಲಯ ಚೀನಾ ರಾಯಭಾರ ಕಚೇರಿಯ ಉನ್ನತ ಅಧಿಕಾರಿಯೊಬ್ಬರನ್ನು ಕರೆಸಿಕೊಂಡು ತನ್ನ ಅಸಮಾಧಾನ ವ್ಯಕ್ತಮಾಡಿರುವುದು ಸರಿಯಾಗಿಯೇ ಇದೆ.ಚೀನದ ಯಿವು ನಗರದ ಅಧಿಕಾರಿಗಳು  ಸಮಸ್ಯೆಯನ್ನು ಸರಿಯಾಗಿ ನಿಭಾಯಿಸಿಲ್ಲ. ಅಷ್ಟೇ ಅಲ್ಲ, ಜನರ ದುಂಡಾವರ್ತನೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಹೀಗೆ ಮಾಡಿದರೆ ತೀವ್ರ ಕ್ರಮ ಎದುರಿಸಬೇಕಾಗುತ್ತದೆ ಎನ್ನುವ ಕಾನೂನಿನ ಭೀತಿಯೂ ಅವರಿಗೆ ಇದ್ದಂತಿಲ್ಲ. ಈ ವಿವಾದ ಯೆಮನ್ ದೇಶದವರೊಬ್ಬರು ಅಲ್ಲಿ ನಡೆಸುತ್ತಿದ್ದ ಸಂಸ್ಥೆಗೆ ಸಂಬಂಧಿಸಿದ್ದು.ಆ ಸಂಸ್ಥೆ ನಡೆಸುತ್ತಿದ್ದ ಯೆಮನ್ ದೇಶದವರು ಸ್ಥಳೀಯವಾಗಿ ಸಾಕಷ್ಟು ಹಣ ಸಂಗ್ರಹಿಸಿ ಪರಾರಿಯಾಗಿದ್ದರು. ಹಣ ಕಳೆದುಕೊಂಡವರು ಆ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಭಾರತೀಯರನ್ನು ಅಪಹರಿಸಿ ಹಣ ವಾಪಸ್ ಮಾಡಲು ಒತ್ತಾಯಿಸಿ ಹಿಂಸಿಸಿದ್ದಾರೆ.

 

ಈ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವ ಉದ್ದೇಶದಿಂದ ಅಲ್ಲಿಗೆ ಹೋಗಿದ್ದ ಬಾಲಚಂದ್ರನ್ ಕುಸಿದು ಬೀಳುವಂತಹ ಸ್ಥಿತಿ ನಿರ್ಮಾಣವಾದದ್ದು ಆಘಾತಕಾರಿಯಾದುದು.

 

ಈ ವಿಚಾರವನ್ನು ಚೀನಾ ಸರ್ಕಾರ ಗಂಭೀರವಾಗಿ ಪರಿಗಣಿಸಿ ಸಂಬಂಧಿಸಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಮತ್ತೆ ಇಂಥ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು.ಚೀನಾ ಮತ್ತು ಭಾರತದ ನಡುವೆ ಬಾಂಧವ್ಯ ಉತ್ತಮಗೊಳ್ಳಬೇಕಿರುವ ಈ ಸಂದರ್ಭದಲ್ಲಿ ಅಹಿತಕರ ಘಟನೆಗಳು ನಡೆಯುತ್ತಲೇ ಇವೆ. ಅರುಣಾಚಲ ಪ್ರದೇಶ ತನಗೆ ಸೇರಿದ್ದೆಂದು ಚೀನ ಮತ್ತೆ ಮತ್ತೆ ಹೇಳುತ್ತಾ ವಿವಾದ ಎಬ್ಬಿಸುತ್ತಲೇ ಇದೆ. ಭಾರತದ ಆಕ್ಷೇಪದ ನಡುವೆಯೂ ಗಡಿಯಲ್ಲಿ ಸೈನಿಕ ನೆಲೆಗಳ ಮೂಲ ಸೌಲಭ್ಯಗಳನ್ನು ಹೆಚ್ಚಿಸುತ್ತಲೇ ಬಂದಿದೆ.

ಟಿಬೆಟ್‌ನ ಧರ್ಮಗುರು ದಲೈ ಲಾಮಾಗೆ ಸಂಬಂಧಿಸಿದಂತೆ ಚೀನಾ ಮತ್ತು ಭಾರತದ ನಡುವಣ ಮನಸ್ತಾಪ ಹಳೆಯದು. ಕೋಲ್ಕತ್ತದಲ್ಲಿ ಕಳೆದ ವರ್ಷ ನಡೆದ ಬೌದ್ಧರ ಅಂತರರಾಷ್ಟ್ರೀಯ ಸಮಾವೇಶದಲ್ಲಿ ದಲೈಲಾಮಾ ಭಾಗವಹಿಸಿದ್ದಕ್ಕೆ ಚೀನಾ ಪ್ರತಿಭಟನೆ ನಡೆಸಿತು.ಇದರಿಂದಾಗಿ ನಡೆಯಬೇಕಿದ್ದ ಗಡಿ ವಿವಾದ ಕುರಿತ ಮಾತುಕತೆಗಳನ್ನು ಮುಂದೂಡಲಾಯಿತು. ಚೀನಾದ ದಕ್ಷಿಣ ಭಾಗದಲ್ಲಿರುವ ಸಮುದ್ರದಲ್ಲಿ ಭಾರತ ತೈಲ ಮತ್ತು ಅನಿಲ ಶೋಧನೆ ಆರಂಭಿಸಿದಾಗ ಚೀನಾ ಮತ್ತೆ ಆಕ್ಷೇಪಿಸಿತು.ಭಾರತ ಆ ಆಕ್ಷೇಪಣೆಗೆ ಕಿವಿಕೊಡಲಿಲ್ಲವಾದರೂ ಬಾಂಧವ್ಯ ಕೆಡಲು ಈ ಬೆಳವಣಿಗೆ ಕಾರಣವಾಯಿತು. ಉಭಯ ದೇಶಗಳ ನಡುವಣ ರಕ್ಷಣಾ ಸಹಕಾರ ಕುರಿತ ಮಾತುಕತೆಗಳು ಪುನರಾರಂಭವಾಗಿರುವುದು ಮತ್ತು ವಾಣಿಜ್ಯ ಸಂಬಂಧ ವೃದ್ಧಿಯಾಗುತ್ತಿರುವುದು ಒಳ್ಳೆಯ ಬೆಳವಣಿಗೆ.ಆದರೆ ಭಾರತ ಮತ್ತು ಪಾಕಿಸ್ತಾನದ ನಡುವಣ ವಿವಾದಗಳ ಸಂದರ್ಭದ್ಲ್ಲಲಿ ಚೀನಾ ಆಡಳಿತ ಸದಾ ಪಾಕಿಸ್ತಾನದ ಪರ ನಿಲ್ಲುತ್ತಿರುವುದು ಆತಂಕಕಾರಿ. ಈ ಹಿನ್ನೆಲೆಯಲ್ಲಿ ಭಾರತವು ಚೀನಾಕ್ಕೆ ಸಂಬಂಧಿಸಿದ ಯಾವುದೇ ಬೆಳವಣಿಗೆಯನ್ನು ಎಚ್ಚರಿಕೆಯಿಂದಲೇ ನಿಭಾಯಿಸಬೇಕಿದೆ.

Post Comments (+)