ಕಠಿಣ ಕ್ರಮ ಎಲ್ಲಿ?

ಗುರುವಾರ , ಮೇ 23, 2019
28 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಕಠಿಣ ಕ್ರಮ ಎಲ್ಲಿ?

Published:
Updated:

ಮಂಗಳೂರಿನ `ಹೋಂ ಸ್ಟೇ~ ದಾಳಿ ಪ್ರಕರಣ ನಡೆದು, ಎರಡು ವಾರಕ್ಕಿಂತ ಹೆಚ್ಚಿನ ದಿನಗಳಾದವು. ಹೀಗಿದ್ದೂ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ರಾಜ್ಯದ ಬಿಜೆಪಿ ಸರ್ಕಾರ ಮೀನಮೇಷ ಎಣಿಸುತ್ತಿದೆ ಎಂಬುದು ಎದ್ದು ಕಾಣುತ್ತಿರುವ ಸಂಗತಿ.ತಮ್ಮಷ್ಟಕ್ಕೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ಯುವಜನರ ಮೇಲೆ `ಭಾರತೀಯ ಸಂಸ್ಕೃತಿ~ ರಕ್ಷಿಸುವ ನೆಪದಲ್ಲಿ  ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ದೈಹಿಕ ಹಲ್ಲೆ ನಡೆಸಿದ್ದು ರಾಷ್ಟ್ರದಾದ್ಯಂತ ತೀವ್ರ ಖಂಡನೆಗೆ ಒಳಗಾಗಿದೆ. ರಾಜ್ಯದ ಹೈಕೋರ್ಟ್ ಸಹ ಈ ಪ್ರಕರಣ ಕುರಿತಂತೆ ತೀವ್ರ ಟೀಕೆಗಳನ್ನು ಮಾಡಿದೆ.ಹೀಗಿದ್ದೂ ಈ ಪ್ರಕರಣ ಕುರಿತಂತೆ ಕಠಿಣ ನಿಲುವನ್ನು ಸರ್ಕಾರ ಪ್ರದರ್ಶಿಸದಿರುವುದು ಖಂಡನೀಯ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದಷ್ಟು ಜನರನ್ನು ಬಂಧಿಸಲಾಗಿದೆ ಅಷ್ಟೆ. ಆದರೆ ರಾಜ್ಯ ವಿಧಾನಸಭೆಯಲ್ಲಿ ಗೃಹ ಸಚಿವರು ವಚನ ನೀಡಿದಂತೆ, ಈ ದುಷ್ಕರ್ಮಿಗಳ ವಿರುದ್ಧ ಗೂಂಡಾ ಕಾಯಿದೆ ಅನ್ವಯ ಪ್ರಕರಣಗಳನ್ನು ದಾಖಲಿಸಲು ಹಿಂದೇಟು ಹಾಕುತ್ತಿರುವುದು ಅನೇಕ ಪ್ರಶ್ನೆಗಳಿಗೆ ಕಾರಣವಾಗಿದೆ.ಹೀಗಾಗಿಯೇ ಬಿಜೆಪಿ ಯಥಾಪ್ರಕಾರ ಈ ಪ್ರಕರಣವನ್ನೂ ತನ್ನ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಿರುವುದು ಸಹಜ. ಈ ಮಧ್ಯೆ ರಾಜ್ಯ ಮಹಿಳಾ ಆಯೋಗ, ಈ ಪ್ರಕರಣ ಕುರಿತಂತೆ ನೀಡಿರುವ ವರದಿ ಹಾಗೂ ಶಿಫಾರಸುಗಳು ಆಯೋಗದ ಸ್ಥಾಪನೆಯ ಉದ್ದೇಶವನ್ನೇ ಅಣಕಿಸುವಂತಿದೆ. ಈ ಘಟನೆಯ ಬಗ್ಗೆ ತೋರಬೇಕಿದ್ದ ಕಾಳಜಿಯನ್ನಾಗಲಿ, ಸಂವೇದನಾಶೀಲತೆಯನ್ನಾಗಲಿ ಮಹಿಳಾ ಆಯೋಗ ತೋರದಿರುವುದು ದುರದೃಷ್ಟಕರ.  ಬಿಜೆಪಿ ಸರ್ಕಾರದಿಂದ ಮಹಿಳಾ ಆಯೋಗದ ಅಧ್ಯಕ್ಷೆಯಾಗಿ ನೇಮಕಗೊಂಡಿರುವ ಸಿ. ಮಂಜುಳಾ ಅವರು, ದಾಳಿ ನಡೆಸಿದ `ಹಿಂದೂ ಜಾಗರಣ ವೇದಿಕೆ~ ಹೆಸರನ್ನೇ ಗೃಹ ಸಚಿವರಿಗೆ ನೀಡಿರುವ ತಮ್ಮ ವರದಿಯಲ್ಲಿ ಪ್ರಸ್ತಾಪಿಸದಿರುವುದು ದುರುದ್ದೇಶಪೂರಿತ.ಆಡಳಿತ ಪಕ್ಷದೊಂದಿಗೆ ಸಂಪರ್ಕಗಳನ್ನು ಹೊಂದಿರುವ ಈ `ಸ್ವಘೋಷಿತ ನೈತಿಕ ಪೊಲೀಸ್ ಗೂಂಡಾ~ಗಳ ವಿರುದ್ಧದ ಆರೋಪಗಳ ಮೇಲಿನ ಗಮನವನ್ನು ಬೇರೆಡೆಗೆ ಸೆಳೆಯುವ ತಂತ್ರ ಇದು.ಇದನ್ನು  ಅರಿಯದಷ್ಟು ಜನರು ದಡ್ಡರಲ್ಲ. ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದ ಪೊಲೀಸರನ್ನು ಟೀಕಿಸಿರುವ ಈ ವರದಿ, `ಸ್ವೇಚ್ಛೆಯತ್ತ ಕರೆದೊಯ್ಯುತ್ತಿರುವ ಶಕ್ತಿಗಳಿಂದ ಯುವಜನರನ್ನು ರಕ್ಷಿಸಬೇಕಿದೆ~ಎಂಬಂಥ ಬುದ್ಧಿವಾದ ಹೇಳಿದೆ. ಮಹಿಳಾ ಆಯೋಗದ ಪೂರ್ವಗ್ರಹ ಹಾಗೂ ಅದರ ರಾಜಕೀಯ ಕಾರ್ಯಸೂಚಿಗೆ ಸ್ಪಷ್ಟ ನಿದರ್ಶನ ಇದು.ಪಾರ್ಟಿಯಲ್ಲಿದ್ದ ಹುಡುಗರು ಮಾದಕವಸ್ತು ಸೇವಿಸುತ್ತಿದ್ದರೆಂದು ಯಾವುದೇ ಸಾಕ್ಷಿ ಇಲ್ಲದೆ ವರದಿಯಲ್ಲಿ ಹೇಳಿರುವುದಂತೂ ಬೇಜವಾಬ್ದಾರಿಯ ಪರಮಾವಧಿ. ದಾಳಿ ನಡೆದ ನಂತರ ಸ್ಥಳ ಪರಿಶೀಲಿಸಿದ್ದ ಪೊಲೀಸರೇ, `ಯಾವುದೇ ಮಾದಕವಸ್ತುಗಳಿರಲಿಲ್ಲ~ ಎಂಬುದನ್ನು ಸ್ಪಷ್ಟಪಡಿಸ್ದ್ದಿದುದನ್ನು ಇಲ್ಲಿ ಸ್ಮರಿಸಬಹುದು.ಈ ಬಗೆಯ ತನಿಖೆ, ವರದಿ ಎಂಬಂತಹ ಪ್ರಹಸನಗಳಲ್ಲಿ ಕಾಲ ತಳ್ಳುವ ಬದಲು, ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಕೆಯಾಗಬೇಕಿರುವುದು ತುರ್ತು ಅಗತ್ಯ. ಕಾನೂನಿನ ಕುಣಿಕೆಯಿಂದ ಪಾರಾಗಲು ಅಪರಾಧಿಗಳಿಗೆ ಅವಕಾಶ ನೀಡುವುದಿಲ್ಲವೆಂದು ಭರವಸೆ ನೀಡಿದ್ದ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ತಮ್ಮ ಮಾತನ್ನು ಉಳಿಸಿಕೊಳ್ಳಬೇಕು.

 

ಆ ಮೂಲಕ ರಾಷ್ಟ್ರವ್ಯಾಪಿ ಪ್ರಚಾರ ಪಡೆದ ಇಂತಹ ಅನಾಗರೀಕ, ಅಮಾನವೀಯ ಘಟನೆಗಳಿಗೆ ಸರ್ಕಾರದ ಬೆಂಬಲ ಇಲ್ಲ ಎಂಬ ಗಟ್ಟಿ ಸಂದೇಶವನ್ನು ರಾಷ್ಟ್ರದ ಜನತೆಗೆ ರವಾನಿಸಬೇಕು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry