ಶುಕ್ರವಾರ, ಜೂನ್ 18, 2021
20 °C

ಕಠಿಣ ಕ್ರಮ ಖಚಿತ: ಕಾಗೇರಿ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ದ್ವಿತೀಯ ಪಿಯುಸಿ ಪ್ರಶ್ನೆಪತ್ರಿಕೆ ಬಹಿರಂಗ ಪ್ರಕರಣದಲ್ಲಿ ಭಾಗಿಯಾದವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ. ತಪ್ಪಿತಸ್ಥರು ಎಷ್ಟೇ ಪ್ರಭಾವಿಗಳಿದ್ದರೂ ಬಿಡುವುದಿಲ್ಲ~ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಸೋಮವಾರ ವಿಧಾನಮಂಡಲದ ಉಭಯ ಸದನಗಳಲ್ಲಿ ಭರವಸೆ ನೀಡಿದರು.ಇದೊಂದು ಗಂಭೀರ ಪ್ರಕರಣ. ಸಿಐಡಿಯಿಂದ ತನಿಖೆ ಸಾಧ್ಯ ಇಲ್ಲ. ಹೀಗಾಗಿ ಸಿಬಿಐ ತನಿಖೆಗೆ ಒಪ್ಪಿಸಿ ಎಂದು ಕಾಂಗ್ರೆಸ್ ಸದಸ್ಯರು ವಿಧಾನಸಭೆಯಲ್ಲಿ ಆಗ್ರಹಪಡಿಸಿದರು. ಇದಕ್ಕೆ ಸಚಿವರು ಒಪ್ಪಲಿಲ್ಲ. ಒಂದು ವೇಳೆ ಅಕ್ರಮದ ತನಿಖೆ ಸಿಐಡಿ ವ್ಯಾಪ್ತಿ ಮೀರಿದ್ದಾದರೆ ಅದನ್ನು ಸಿಬಿಐ ತನಿಖೆಗೆ ವಹಿಸುವುದಕ್ಕೂ ಹಿಂದೇಟು ಹಾಕುವುದಿಲ್ಲ ಎಂದರು.ಈ ಉತ್ತರದಿಂದ ತೃಪ್ತರಾಗದ ಕಾಂಗ್ರೆಸ್ ಸದಸ್ಯರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭಾತ್ಯಾಗ ಮಾಡಿದರು.ಇದಕ್ಕೂ ಮುನ್ನ ಸಿದ್ದರಾಮಯ್ಯ ಮಾತನಾಡಿ, `ಪ್ರಶ್ನೆಪತ್ರಿಕೆಗಳ ಬಹಿರಂಗದಿಂದ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಆತಂಕ ಹೆಚ್ಚಾಗಿದ್ದು, ಇದರ ನೇರ ಹೊಣೆಯನ್ನು ಶಿಕ್ಷಣ ಸಚಿವರೇ ಹೊರಬೇಕಾಗುತ್ತದೆ. ಇದಕ್ಕೆ ಅಂತಿಮ ತೆರೆ ಎಳೆಯಬೇಕಾದರೆ ಸಿಬಿಐ ತನಿಖೆಯೊಂದೇ ಇರುವ ದಾರಿ~ ಎಂದರು.ಕಾಂಗ್ರೆಸ್‌ನ ಡಿ.ಕೆ.ಶಿವಕುಮಾರ್ ಮಾತನಾಡಿ, `ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆ ಹೆಚ್ಚಿಸಿಕೊಳ್ಳಲು ಕೆಲ ಶಿಕ್ಷಣ ಸಂಸ್ಥೆಗಳು ಈ ರೀತಿಯ ಅಕ್ರಮದಲ್ಲಿ ಭಾಗಿಯಾಗಿರುವ ಶಂಕೆ ಇದೆ. ಆ ಬಗ್ಗೆಯೂ ತನಿಖೆ ನಡೆಸಬೇಕು~ ಎಂದರು. ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಬೇಕಾದರೆ ಒಂದು ಸಮಿತಿಯನ್ನು ರಚಿಸಬೇಕು ಎಂದೂ ಆಗ್ರಹಪಡಿಸಿದರು.ಕಾಂಗ್ರೆಸ್‌ನ ವಿ.ಶ್ರೀನಿವಾಸ ಪ್ರಸಾದ್, ಡಾ.ಶರಣಪ್ರಕಾಶ ಪಾಟೀಲ, ನೆ.ಲ.ನರೇಂದ್ರಬಾಬು ಸೇರಿದಂತೆ ಇತರರು ಕೂಡ ಸೂಕ್ತ ಕ್ರಮಕ್ಕೆ ಒತ್ತಾಯಿಸಿದರು. ಜೆಡಿಎಸ್‌ನ ಎಚ್.ಡಿ.ರೇವಣ್ಣ ಕೂಡ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು. ವಿಧಾನ ಪರಿಷತ್ತಿನಲ್ಲಿ ಸದಸ್ಯರಾದ ಪಟೇಲ್ ಶಿವರಾಂ, ಬಸವರಾಜ ಹೊರಟ್ಟಿ, ಆರ್.ವಿ.ವೆಂಕಟೇಶ್, ಪುಟ್ಟಣ್ಣ, ಮರಿತಿಬ್ಬೇಗೌಡ, ಗಣೇಶ್ ಕಾರ್ಣಿಕ್ ಮತ್ತಿತರರು ಶೂನ್ಯ ವೇಳೆಯಲ್ಲಿ ಇದೇ ವಿಷಯ ಪ್ರಸ್ತಾಪಿಸಿದರು.ಈ ಹಿನ್ನೆಲೆಯಲ್ಲಿ ಹೇಳಿಕೆ ನೀಡಿದ ಸಚಿವರು, `ಪರೀಕ್ಷೆಗೆ ಸಿದ್ಧರಾಗಿದ್ದ ಮಕ್ಕಳು ಮತ್ತು ಅವರ ಪೋಷಕರಲ್ಲಿ ಆತಂಕ ಸೃಷ್ಟಿಸಿರುವ ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಪ್ರಕರಣದ ತನಿಖೆಯನ್ನು ಸಿಐಡಿ ಪೊಲೀಸರಿಗೆ ಒಪ್ಪಿಸಲಾಗಿದೆ. ಕಾಲಮಿತಿಯೊಳಗೆ ತನಿಖೆ ಪೂರ್ಣಗೊಳಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು~ ಎಂದರು.`ಈ ಪ್ರಕರಣದ ಹಿಂದಿರುವ ಜಾಲದ ಬಗ್ಗೆ ಸಿಐಡಿ ತನಿಖೆ ಪ್ರಗತಿಯಲ್ಲಿದೆ. ಹಣ ಗಳಿಕೆ ದುರುದ್ದೇಶ ಹೊಂದಿರುವವರು, ಮನೆಪಾಠ (ಟ್ಯೂಷನ್) ಮಾಫಿಯಾ, ಖಾಸಗಿ ಶಿಕ್ಷಣ ಸಂಸ್ಥೆಗಳ ಲಾಬಿಯ ಕೈವಾಡ ಪ್ರಶ್ನೆಪತ್ರಿಕೆ ಬಹಿರಂಗದಲ್ಲಿ ಇರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಇದು ಒಂದು ಅನಿರೀಕ್ಷಿತ ಘಟನೆ. ಯಾವ ಕಾರಣಕ್ಕಾಗಿ ನಡೆದಿದೆ ಎಂಬುದು ಈವರೆಗೂ ಗೊತ್ತಾಗಿಲ್ಲ. ಘಟನೆಯ ಇಡೀ ಸ್ವರೂಪ ಕಲ್ಪನೆಗೂ ನಿಲುಕುತ್ತಿಲ್ಲ~ ಎಂದರು.ಮಾರ್ಚ್ 19ರ ರಾತ್ರಿ ಗಣಿತ ಪ್ರಶ್ನೆಪತ್ರಿಕೆ ಬಯಲಾಯಿತು. ರಾತ್ರೋರಾತ್ರಿ ಅದನ್ನು ಖಚಿತಪಡಿಸಿಕೊಂಡು, ಪರೀಕ್ಷೆ ಮುಂದೂಡಲಾಯಿತು. ಮಾ. 20ರಂದೇ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಲಾಯಿತು.ಮಾ.21ರಂದು ರಾತ್ರಿ ಭೌತವಿಜ್ಞಾನ ಪತ್ರಿಕೆಯೂ ಬಯಲಾಯಿತು. ಈ ಪ್ರಕರಣದಿಂದ ಮಕ್ಕಳು ಮತ್ತು ಪೋಷಕರಲ್ಲಿ ಆತಂಕದ ಭಾವನೆ ಇದೆ. ಈ ವಿಷಯದಲ್ಲಿ ತಾವೂ ಸೇರಿದಂತೆ ಎಲ್ಲರ ಭಾವನೆಯೂ ಒಂದೇ ರೀತಿ ಇದೆ ಎಂದರು.`ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಟ್ಯೂಷನ್ ನಡೆಸುತ್ತಿರುವ ಕೆಲವು ಉಪನ್ಯಾಸಕರು ಬಯಲಾದ ಪ್ರಶ್ನೆಪತ್ರಿಕೆಯನ್ನು ಮಕ್ಕಳಿಗೆ ಪೂರೈಸಿರುವ ಬಗ್ಗೆ ವರದಿ ಇದೆ. ಈ ಕಾರಣಕ್ಕಾಗಿಯೇ ಅವರನ್ನು ಅಮಾನತು ಮಾಡಲಾಗಿದೆ. ಪ್ರಕರಣದಲ್ಲಿ ಭಾಗಿಯಾಗದೇ ಇರುವ ಯಾರನ್ನೂ ಶಿಕ್ಷಿಸುವುದಿಲ್ಲ. ನಿರಪರಾಧಿಗಳಿಗೆ ಶಿಕ್ಷೆ ಆಗಬಾರದು ಎಂಬುದು ಸರ್ಕಾರದ ನಿಲುವು. ಆತುರದಲ್ಲಿ ಯಾರ ವಿರುದ್ಧವೂ ಕ್ರಮ ಜರುಗಿಸುವುದಿಲ್ಲ.ಪ್ರಕರಣದಲ್ಲಿ ಭಾಗಿಯಾಗಿರುವ ಯಾರನ್ನೂ ಸಮರ್ಥಿಸುವುದಿಲ್ಲ~ ಎಂದು ಸದಸ್ಯರ ಆಕ್ಷೇಪಕ್ಕೆ ಪ್ರತಿಕ್ರಿಯಿಸಿದರು.

`ಪದವಿಪೂರ್ವ ಶಿಕ್ಷಣ ಇಲಾಖೆ ಆಯುಕ್ತರಾದ ವಿ.ರಶ್ಮಿ ಅವರು ಇಲಾಖೆಯಲ್ಲಿ ಆಡಳಿತ ಬಿಗಿಗೊಳಿಸಿದ್ದರು.ಅವರನ್ನು ಎತ್ತಂಗಡಿ ಮಾಡಿಸಲೆಂದೇ ದುಷ್ಟ ಶಕ್ತಿಗಳು ಪ್ರಶ್ನೆಪತ್ರಿಕೆ ಬಹಿರಂಗ ಮಾಡಿವೆ ಎಂಬ ಅನುಮಾನವಿದೆ. ರಶ್ಮಿ ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಈಗ ನಡೆದಿರುವ ಘಟನೆಗೆ ಅವರನ್ನು ಹೊಣೆ ಮಾಡುವುದಿಲ್ಲ~ ಎಂದರು.ಸಂಪೂರ್ಣ ಭದ್ರತೆ: ಬದಲಿ ದಿನಾಂಕಗಳಂದು ಬಿಗಿ ಭದ್ರತೆಯಲ್ಲಿ ಪರೀಕ್ಷೆ ನಡೆಯಲಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಗೂ ಸಂಪೂರ್ಣ ಭದ್ರತೆ ಒದಗಿಸಲಾಗುವುದು. ಉತ್ತರ ಪತ್ರಿಕೆಗಳ ಮೌಲ್ಯಮಾಪನದಲ್ಲೂ ಯಾವುದೇ ಲೋಪ ನಡೆಯದಂತೆ ಎಚ್ಚರ ವಹಿಸಲಾಗುವುದು ಎಂದು ಭರವಸೆ ನೀಡಿದರು.ಅಮಾನತಿಗೆ ಅಸಮಾಧಾನ: ಪ್ರಕರಣಕ್ಕೆ ಸಂಬಂಧಿಸಿದಂತೆ ಉಪನ್ಯಾಸಕರನ್ನು ಅಮಾನತು ಮಾಡಿರುವ ಸರ್ಕಾರದ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಪುಟ್ಟಣ್ಣ, ನಾರಾಯಣಸ್ವಾಮಿ, ಶಿವಯೋಗಿಸ್ವಾಮಿ, ಗಣೇಶ್ ಕಾರ್ಣಿಕ್ ಮತ್ತಿತರರು, `ಗಣಿತ ಮತ್ತು ಭೌತ ವಿಜ್ಞಾನ ಪತ್ರಿಕೆಗಳು ಬಹಿರಂಗವಾಗಿವೆ. ಆದರೆ, ಕನ್ನಡ, ಇಂಗ್ಲಿಷ್, ವಾಣಿಜ್ಯ ಮತ್ತಿತರರ ವಿಷಯಗಳ ಉಪನ್ಯಾಸಕರನ್ನು ಅಮಾನತು ಮಾಡಲಾಗಿದೆ. ತಪ್ಪೇ ಮಾಡದವರನ್ನು ಶಿಕ್ಷಿಸುವುದು ಸರಿಯಲ್ಲ. ಶಿಕ್ಷಕರ ಮನೋಸ್ಥೈರ್ಯ ಕುಗ್ಗಿಸುವಂಥ ಕ್ರಮ ಸರಿಯಲ್ಲ~ ಎಂದು ಆಕ್ಷೇಪಿಸಿದರು.`ಟ್ಯೂಷನ್ ಮಾಫಿಯಾ ಕೈವಾಡವೇ ಪ್ರಕರಣದ ಹಿಂದಿದೆ. ಟ್ಯೂಷನ್ ನಿಷೇಧಿಸಿದರೆ ಈ ಸಮಸ್ಯೆಯೇ ಇರುವುದಿಲ್ಲ. ರಶ್ಮಿ ಅವರ ವಿರುದ್ಧ ಇರುವವರೇ ಇಂತಹ ಕೃತ್ಯ ಎಸಗಿರುವ ಸಾಧ್ಯತೆ ಇದೆ~ ಎಂದು ಹೊರಟ್ಟಿ ಅನುಮಾನ ವ್ಯಕ್ತಪಡಿಸಿದರು. ಪ್ರಕರಣದಲ್ಲಿ ಪಿಯು ಮಂಡಳಿ ಅಧಿಕಾರಿಗಳ ಕೈವಾಡದ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಸದಸ್ಯರು ಆಗ್ರಹಿಸಿದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.