ಭಾನುವಾರ, ಮೇ 9, 2021
28 °C

ಕಠಿಣ ಕ್ರಮ ಜರುಗಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂಗವಿಕಲರು ಸಮಾಜದ ಅವಿಭಾಜ್ಯ ಅಂಗ. ಹುಟ್ಟಿನಿಂದ ಬಂದ ಅಂಗವೈಕಲ್ಯದಿಂದ ನಿತ್ಯ ನೋವು ಅನುಭವಿಸುವ ಅವರು, ಸಮಾಜದ ಮುಖ್ಯವಾಹಿನಿಗೆ ಬರಲು ವ್ಯಕ್ತಿ, ಕುಟುಂಬ, ಸಂಸ್ಥೆ, ಸರ್ಕಾರಗಳು ಮುಕ್ತವಾಗಿ ಅವಕಾಶ ಮಾಡಿಕೊಡಬೇಕು.ಸಹಾಯಹಸ್ತ ಚಾಚಬೇಕು. ಅಂಗವಿಕಲರು ಸಮಾಜಕ್ಕೆ ಹೊರೆಯಾಗಬಾರದು. ಕೀಳರಿಮೆಗೆ ಒಳಗಾಗಬಾರದು. ಅವರ ಪ್ರತಿಭೆ ಮತ್ತು ಶ್ರಮ ಸದ್ಬಳಕೆಯಾಗಬೇಕು ಎಂಬ ಆಶಯದಿಂದ ಸರ್ಕಾರ ಅವರಿಗೆ ಉದ್ಯೋಗಗಳಲ್ಲಿ ಮೀಸಲಾತಿ ಒದಗಿಸಿದೆ. ಆದರೆ, ಸರ್ಕಾರದ ಉದ್ದೇಶ ಪೂರ್ಣ ಪ್ರಮಾಣದಲ್ಲಿ ಈಡೇರಿಲ್ಲ. ಮೀಸಲಾತಿ ಕುರಿತಂತೆ ಸರ್ಕಾರದ ನಿಯಮಗಳಿದ್ದರೂ ಅವು ಪರಿಣಾಮಕಾರಿಯಾಗಿ ಜಾರಿ ಆಗುತ್ತಿಲ್ಲ. ಅಂಗವಿಕಲರು ತಮ್ಮ ಹಕ್ಕುಗಳಿಗಾಗಿ ಹಲವಾರು ಬಾರಿ ಹೋರಾಟ ನಡೆಸಿದ್ದಾರೆ. ತಮಗಾಗಿರುವ ಅನ್ಯಾಯದ ವಿರುದ್ಧ ಅವರ ಪ್ರತಿನಿಧಿಗಳು ಹಲವು ಬಾರಿ ನ್ಯಾಯಾಲಯಗಳ ಮೊರೆ ಹೋಗಿದ್ದಾರೆ.ಅಂಗವಿಕಲರಿಗೆ ವಿವಿಧ ಕ್ಷೇತ್ರಗಳಲ್ಲಿ ಮೀಸಲಾತಿ ಒದಗಿಸುವ ಅಗತ್ಯವನ್ನು ಸುಪ್ರೀಂಕೋರ್ಟ್ ಸಹ ಒತ್ತಿ ಹೇಳಿದೆ. ಆದರೂ ಮೀಸಲಾತಿ ನಿಯಮಗಳು ಸಮರ್ಪಕವಾಗಿ ಜಾರಿ ಆಗುತ್ತಿಲ್ಲ ಎಂಬುದು ವಿಷಾದಕರ. ನ್ಯಾಯಬದ್ಧವಾಗಿ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸಿಕೊಟ್ಟರೆ ಆ ಅವಕಾಶಗಳನ್ನು ಬಳಸಿಕೊಂಡು ಅವರು ತಮ್ಮ ಭವಿಷ್ಯ ರೂಪಿಸಿಕೊಳ್ಳಬಲ್ಲರು. ಆದರೆ ಅವಕಾಶದ ಬಾಗಿಲು ನಿರೀಕ್ಷಿತ ಪ್ರಮಾಣದಲ್ಲಿ ತೆರೆದುಕೊಳ್ಳುತ್ತಿಲ್ಲ.ನೇಮಕಾತಿ ತೊಡಕುಗಳದು ಒಂದು ಬಗೆಯ ವ್ಯಥೆಯಾದರೆ, ಅಂಗವಿಕಲರ ಸೌಲಭ್ಯವನ್ನು ಕಬಳಿಸುವ ಹುನ್ನಾರಗಳದು ಮತ್ತೊಂದು ರೀತಿಯ ವ್ಯಥೆ. ಆರೋಗ್ಯವಂತ ಸಮಾಜವನ್ನು ರೂಪಿಸಬೇಕಾದ ಶಿಕ್ಷಕರಿಂದಲೇ ಅಂಗವಿಕಲರ ಕೋಟಾ ದುರುಪಯೋಗ ಆಗಿರುವುದು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನಲ್ಲಿ ಬೆಳಕಿಗೆ ಬಂದಿದೆ. 11 ಮಂದಿ ಶಿಕ್ಷಕರು ಖೊಟ್ಟಿ ವೈದ್ಯಕೀಯ ಪ್ರಮಾಣಪತ್ರ ನೀಡಿ ಅಂಗವಿಕಲರ ಕೋಟಾದಡಿ ನೌಕರಿ ಗಿಟ್ಟಿಸಿದ್ದಾರೆ. ಏಳು ಮಂದಿ ತೆರಿಗೆ ವಿನಾಯ್ತಿ ಹಾಗೂ ವಿಶೇಷ ಭತ್ಯೆಗಳ ಸೌಲಭ್ಯ ಪಡೆದಿದ್ದಾರೆ.ರಾಜ್ಯ ಅಂಗವಿಕಲ ವ್ಯಕ್ತಿಗಳ ಆಯುಕ್ತರ ಕಚೇರಿ ನಡೆಸಿದ ತನಿಖೆಯಿಂದ ಈ ವಂಚನೆ ಬಯಲಾಗಿದೆ. ವಂಚನೆ ಎಸಗಿದ ಶಿಕ್ಷಕರ ದೈಹಿಕ ತಪಾಸಣೆಯನ್ನು ಪುನಃ ನಡೆಸುವ ಕೋರಿಕೆಯೊಂದಿಗೆ ಅವರ ವೈದ್ಯಕೀಯ ಪ್ರಮಾಣಪತ್ರಗಳನ್ನು ಮರುಪರಿಶೀಲನೆಗೆ ವೈದ್ಯಕೀಯ ಮೇಲ್ವಿಚಾರಣಾ ಪ್ರಾಧಿಕಾರ ಕ್ಕೆ ಕಳುಹಿಸಲು ತೀರ್ಮಾನಿಸಿರುವುದು ಸರಿಯಾದ ಕ್ರಮವಾಗಿದೆ. ವಂಚನೆ ದೃಢಪಟ್ಟರೆ ಅಂಗವಿಕಲರ ಕೋಟಾದಡಿ ಪಡೆದಿರುವ ಸೌಲಭ್ಯಗಳನ್ನು ರದ್ದುಪಡಿಸಬೇಕು.ಜತೆಗೆ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಸೇವೆಗೆ ಸೇರಿದ ಬಳಿಕ ಅಂಗವೈಕಲ್ಯಕ್ಕೆ ಒಳಗಾದ ಮೂವರು ಶಿಕ್ಷಕರಿಗೆ ವೇತನ ನೀಡದಿರುವ ವಿಷಯವೂ ತನಿಖೆಯ ವೇಳೆ ಬಹಿರಂಗ ಆಗಿದೆ. ದೃಷ್ಟಿ ಕಳೆದುಕೊಂಡ ಶಿಕ್ಷಕರೊಬ್ಬರಿಗೆ ಮೂರು ವರ್ಷಗಳಿಂದ ವೇತನ ನೀಡದಿರುವುದು ಅತ್ಯಂತ ಅಮಾನವೀಯ. ಸೇವಾ ಅವಧಿಯಲ್ಲಿ ಅಂಗವೈಕಲ್ಯಕ್ಕೆ ಒಳಗಾದವರನ್ನು ಬದಲಿ ಕೆಲಸಕ್ಕೆ ನಿಯೋಜಿಸಬಹುದು.ಇಂತಹ ಅವಕಾಶಗಳ ಕುರಿತು ಶಿಕ್ಷಕರಿಗೆ ಇರಲಿ, ಶಿಕ್ಷಕ ಸಂಘದ ಪದಾಧಿಕಾರಿಗಳಿಗೇ ಮಾಹಿತಿ ಇರಲಿಲ್ಲ ಎಂದು ಅಂಗವಿಕಲ ವ್ಯಕ್ತಿಗಳ ಆಯುಕ್ತರ ಕಚೇರಿ ಗುರುತಿಸಿದೆ. ಈ ಕುರಿತು ಅರಿವು ಹೆಚ್ಚಿಸುವ ಕೆಲಸಗಳು ನಿರಂತರವಾಗಿ ನಡೆಯಲು ಸರ್ಕಾರ ಕ್ರಮ ಕೈಗೊಳ್ಳಬೇಕು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.