ಕಠಿಣ ಪರಿಸ್ಥಿತಿಯಿಂದ ಹೊರಬರುವೆವು

7

ಕಠಿಣ ಪರಿಸ್ಥಿತಿಯಿಂದ ಹೊರಬರುವೆವು

Published:
Updated:

ಬಸೆಲ್ಟನ್, ಆಸ್ಟ್ರೇಲಿಯ (ಪಿಟಿಐ): ಪ್ರಸಕ್ತ ಎದುರಾಗಿರುವ ಬಿಕ್ಕಟ್ಟಿನ ಪರಿಸ್ಥಿತಿಯಿಂದ ಶೀಘ್ರದಲ್ಲೇ ಹೊರಬರುವುದಾಗಿ ಭಾರತ ಹಾಕಿ ತಂಡದ ನಾಯಕ ತುಷಾರ್ ಖಾಂಡೇಕರ್ ಹೇಳಿದ್ದಾರೆ. ಇಲ್ಲಿ ನಡೆಯುತ್ತಿರುವ ಮೂರು ರಾಷ್ಟ್ರಗಳ ಹಾಕಿ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದ ವೇಳೆ ಅನುಚಿತ ವರ್ತನೆ ತೋರಿದ್ದಕ್ಕೆ ಭಾರತದ ಮೂವರು ಆಟಗಾರರನ್ನು ಅಮಾನತು ಮಾಡಲಾಗಿದೆ.ಗುರ್ಬಾಜ್ ಸಿಂಗ್, ಗುರ‌್ವಿಂದರ್ ಸಿಂಗ್ ಚಾಂಡಿ ಮತ್ತು ನಾಯಕ ತುಷಾರ್ ಅಮಾನತು ಶಿಕ್ಷೆಗೆ ಒಳಗಾಗಿದ್ದಾರೆ. ಜೊತೆಗೆ ತಂಡದ ಸಹಾಯಕ ಕೋಚ್ ಜುಗ್ರಾಜ್ ಸಿಂಗ್ ಹಾಗೂ ಮ್ಯಾನೇಜರ್ ಡೇವಿನ್ ಜಾನ್ ಅವರೂ ಕೆಲವು ಪಂದ್ಯಗಳಿಗೆ ಅಮಾನತುಗೊಂಡಿದ್ದಾರೆ. ಪಾಕ್ ವಿರುದ್ಧದ ಪಂದ್ಯದ ವೇಳೆ ಎದುರಾಳಿ ಆಟಗಾರರ ಜೊತೆ ಅಂಗಳದಲ್ಲಿ `ಕಚ್ಚಾಟ~ ನಡೆಸಿದ್ದು ಇದಕ್ಕೆ ಕಾರಣ.`ಕೊನೆಯ ಐದು ನಿಮಿಷಗಳಲ್ಲಿ ನಾನು ಕಣದಲ್ಲಿರಲಿಲ್ಲ. ಕೋಚ್ ನನ್ನ ಬದಲಿಗೆ ಬೇರೆ ಆಟಗಾರನನ್ನು ಕಣಕ್ಕಿಳಿಸಿದ್ದರು. ಘಟನೆ ನಡೆದ ಸ್ಥಳದಲ್ಲಿ ನಾನಿರಲಿಲ್ಲ. ಆದರೆ ಅಂಗಳದಲ್ಲಿ ನಡೆಯುವ ಎಲ್ಲ ಘಟನೆಗಳಿಗೆ ನಾಯಕನೂ ಜವಾಬ್ದಾರನಾಗುವನು ಎಂದು ನಿಯಮ ಹೇಳುತ್ತದೆ~ ಎಂದರು ತುಷಾರ್.ಪ್ರಮುಖ ಆಟಗಾರರ ಅನುಪಸ್ಥಿತಿ ಇನ್ನುಳಿದ ಪಂದ್ಯಗಳಲ್ಲಿ ತಂಡದ ಮೇಲೆ ಪರಿಣಾಮ ಬೀರಲಿದೆಯೇ ಎಂಬ ಪ್ರಶ್ನೆಗೆ ತುಷಾರ್, `ನಮ್ಮಲ್ಲಿ 22 ಆಟಗಾರರಿದ್ದಾರೆ. ಅಮಾನತುಗೊಂಡ ಆಟಗಾರರ ಬದಲು ಯಾರನ್ನು ಕಣಕ್ಕಿಳಿಸಬೇಕು ಎಂುದನ್ನು ಕೋಚ್ ನಿರ್ಧರಿಸಲಿದ್ದಾರೆ. ಅಮಾನತುಗೊಂಡ ಇಬ್ಬರು ಆಟಗಾರರೂ ಅನುಭವಿಗಳು. ಅವರ ಸ್ಥಾನ ತುಂಬುವುದು ಕಷ್ಟ ಎಂದರು.ಮೇಲ್ಮನವಿಗೆ ನಿರ್ಧಾರ: `ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸುವಂತೆ ತಂಡದ ಆಡಳಿತಕ್ಕೆ ಸೂಚಿಸಿದ್ದೇವೆ~ ಎಂದು ಹಾಕಿ ಇಂಡಿಯಾ ಕಾರ್ಯದರ್ಶಿ ನರೀಂದರ್ ಬಾತ್ರ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry