ಕಡಂಗ ಮಸೀದಿಯಲ್ಲಿ ಘರ್ಷಣೆ:9 ಮಂದಿ ಬಂಧನ: ಪರಿಸ್ಥಿತಿ ಉದ್ವಿಗ್ನ

7

ಕಡಂಗ ಮಸೀದಿಯಲ್ಲಿ ಘರ್ಷಣೆ:9 ಮಂದಿ ಬಂಧನ: ಪರಿಸ್ಥಿತಿ ಉದ್ವಿಗ್ನ

Published:
Updated:

ವಿರಾಜಪೇಟೆ: ಕಡಂಗ ಗ್ರಾಮ ಜಮಾಯತ್ ಮಸೀದಿಯಲ್ಲಿ ಶುಕ್ರವಾರ ಮಧ್ಯಾಹ್ನ ಎರಡು ಗುಂಪುಗಳ ನಡುವಿನ ಘರ್ಷಣೆಯಲ್ಲಿ  7 ಮಂದಿಗೆ ತೀವ್ರ ಗಾಯವಾಗಿದ್ದು, ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.ಒಂದು ತಂಡದವರು ಕಲ್ಲು, ದೊಣ್ಣೆ, ಕಬ್ಬಿಣದ ಸಲಾಖೆಯಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದು ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಗ್ರಾಮಾಂತರ ಪೊಲೀಸರು 9ಮಂದಿಯನ್ನು ಬಂಧಿಸಿದ್ದಾರೆ.ಮಸೀದಿಯ ಧರ್ಮಗುರು(ಖತೀಬ್)ಗಳನ್ನು ಬದಲಾವಣೆ ಮಾಡುವ ವಿಚಾರದಲ್ಲಿ ಮಸೀದಿ ಸದಸ್ಯರ ಎರಡು ಗುಂಪುಗಳ ನಡುವೆ ವಿವಾದ ಉಂಟಾಗಿತ್ತು.ಶುಕ್ರವಾರ ಮಧ್ಯಾಹ್ನ 1ಗಂಟೆ ವೇಳೆಗೆ ಒಂದು ಗುಂಪು ಪ್ರಾರ್ಥನೆಯ ಸಿದ್ಧತೆಯಲ್ಲಿದ್ದಾಗ ಹೊರಗಿನಿಂದ ಬಂದ ಸುಮಾರು 50 ಮಂದಿಯ ತಂಡ ಕಲ್ಲು, ದೊಣ್ಣೆ ಕಬ್ಬಿಣದ ಸಲಾಕೆಯಿಂದ ಮಾರಣಾಂತಿಕ ಹಲ್ಲೆ ನಡೆಸಿದರು ಎನ್ನಲಾಗಿದೆ. ಆಗ ನಡೆದ ಘರ್ಷಣೆಯಲ್ಲಿ ಎರಡೂ ಗುಂಪಿನ 7 ಮಂದಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಗ್ರಾಮಾಂತರ ಪೊಲೀಸರು ಮಧ್ಯಾಹ್ನ 4 ಗಂಟೆಯ ವೇಳೆಗೆ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.ಎಚ್.ಉಂಬಾಯಿ, ನಸೀರ್, ಜಕ್ರಿಯಾ, ಜಲೀಲ್, ಅಬೂಬಕ್ಕರ್, ಶಮೀರ್, ಮುನೀರ್, ರಷೀದ್ ಹಾಗೂ ಅಜಿರುದ್ದೀನ್  ಎಂಬುವರನ್ನು  ಪೊಲೀಸರು ಬಂಧಿಸಿದ್ದಾರೆ. ಎರಡೂ ಗುಂಪಿನ ಒಟ್ಟು 90 ಮಂದಿ ವಿರುದ್ಧ ಕೊಲೆ ಯತ್ನದ ಪ್ರಕರಣ ದಾಖಲಾಗಿದೆ. ಘರ್ಷಣೆಯಲ್ಲಿ ಎಸ್.ಜಕ್ರಿಯಾ, ಅಶ್ರಫ್, ಶರೀಫ್, ಅಬೀದ್, ಅಬ್ದುಲ್ಲಾ, ಮಹಮ್ಮದ್ ಹಾಗೂ ಜುನೈದ್ ಗಾಯಗೊಂಡಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಒಟ್ಟು 5ವಾಹನಗಳನ್ನು ವಶಪಡಿಸಿ ಕೊಂಡಿದ್ದಾರೆ. ಕಡಂಗ ಗ್ರಾಮದ ಮಸೀದಿ ಬಳಿಯಲ್ಲಿ ಮಧ್ಯಾಹ್ನದಿಂದ ಜಿಲ್ಲಾ ಸಶಸ್ತ್ರಪಡೆ, ಗ್ರಾಮಾಂತರ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಪ್ರವೀಣ್ ಕುಮಾರ್ ಹಾಗೂ ಪೊಲೀಸ್ ಸಿಬ್ಬಂದಿ ಬಂದೋಬಸ್ತ್ ಏರ್ಪಡಿಸಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಡಿವೈಎಸ್‌ಪಿ ಅಣ್ಣಪ್ಪ ನಾಯಕ್ ಹಾಗೂ ಸರ್ಕಲ್ ಇನ್ಸ್‌ಪೆಕ್ಟರ್ ಗಂಗಾಧರಸ್ವಾಮಿ ಮಹಜರು ನಡೆಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry