ಕಡತಗಳ ಪರಿಶೀಲನೆ ಆರಂಭ

7
ವಿದ್ಯಾರ್ಥಿ ವೇತನ ವಿತರಣೆ ಅವ್ಯವಹಾರ ಪ್ರಕರಣ

ಕಡತಗಳ ಪರಿಶೀಲನೆ ಆರಂಭ

Published:
Updated:

ರಾಮನಗರ: ಸಮಾಜ ಕಲ್ಯಾಣ ಇಲಾಖೆಯಿಂದ ಕನಕಪುರ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆಯಲ್ಲಿ ಆಗಿರುವ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಇಲಾಖೆಯ ಆಯುಕ್ತರ ಕಚೇರಿಯ ಲೆಕ್ಕ ಪರಿಶೋಧಕರ ತಂಡ ಬುಧವಾರದಿಂದ ಕಡತಗಳ ಪರಿಶೀಲನೆ ಕೈಗೊಂಡಿದೆ.ಇಲಾಖೆಯ ಆಯುಕ್ತರ ಕಚೇರಿಯ ಮುಖ್ಯ ಲೆಕ್ಕಾಧಿಕಾರಿ (ಸಿಎಒ) ಮಂಜುನಾಥ ಸ್ವಾಮಿ ಹಾಗೂ ಶಿಕ್ಷಣ ವಿಭಾಗದ ಉಪ ನಿರ್ದೇಶಕ ನಾಗೇಶ್‌ ಅವರು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯಲ್ಲಿ ಕಡತಗಳ ಪರಿಶೀಲನೆ ಆರಂಭಿಸಿದ್ದಾರೆ.ಇಲಾಖೆಯಿಂದ ವಿದ್ಯಾರ್ಥಿಗಳಿಗೆ ವಿತರಿಸಬೇಕಿದ್ದ ವಿದ್ಯಾರ್ಥಿ ವೇತನದ ಮೊತ್ತ ಕನಕಪುರದ ಸಮಾಜ ಕಲ್ಯಾಣ ಇಲಾಖೆ ಕಚೇರಿಯ ಪ್ರಥಮ ದರ್ಜೆ ಸಹಾಯಕನ (ಲೆಕ್ಕ ವಿಭಾಗ) ವೈಯಕ್ತಿಕ ಖಾತೆಗೆ ವರ್ಗವಾಗಿದ್ದರ ಕುರಿತು ಮಾಹಿತಿ ಪಡೆಯುವುದು ಇದರ ಹಿಂದಿನ ಉದ್ದೇಶವಾಗಿದೆ ಎಂದು ತಿಳಿದು ಬಂದಿದೆ.ಜಿ.ಪಂ ಮತ್ತು ಡಿಎಸ್‌ಡಬ್ಲ್ಯು ವರದಿ:  ವಿದ್ಯಾರ್ಥಿ ವೇತನ ವಿತರಣೆಯಲ್ಲಿ ಆಗಿರುವ ಅವ್ಯವಹಾರ ಕುರಿತು ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಅವರು ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರ ಕಚೇರಿಗೆ ವರದಿ ನೀಡಿದ್ದರು. ಅದರ ಆಧಾರ ಮೇಲೆ ಆಯುಕ್ತರ ಕಚೇರಿ ಲೆಕ್ಕ ಪರಿಶೀಲನೆಗಾಗಿ ಜಿಲ್ಲೆಗೆ ಅಧಿಕಾರಿಗಳನ್ನು ಕಳುಹಿಸಿದೆ ಎಂದು ಗೊತ್ತಾಗಿದೆ.ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ತಿಮ್ಮಪ್ಪ ಅವರು, ಕನಕಪುರ ವ್ಯಾಪಿ್ತಯಲ್ಲಿ 1ರಿಂದ 10ನೇ ತರಗತಿ ಹಾಗೂ ಮೆಟ್ರಿಕ್‌ ನಂತರದ ವಿದ್ಯಾರ್ಥಿಗಳಿಗೆ ವಿತರಿಸುವ ವಿದ್ಯಾರ್ಥಿ ವೇತನದ ದುರ್ಬಳಕೆ ಆಗಿರುವ ಮಾಹಿತಿ ದೊರೆಯಿತು. ಅದನ್ನಾಧರಿಸಿ ತನಿಖೆ ನಡೆಸಲಾಯಿತು.ಕನಕಪುರದ ಎಫ್‌ಡಿಎ ಅರುಣ್‌ ಕುಮಾರ್‌ ಅವರು ಹಣ ದುರ್ಬಳಕೆ ಮಾಡಿ ಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿತು. ವಿದ್ಯಾರ್ಥಿಗಳಿಗೆ ತಲುಪಬೇಕಾದ ಮೂರು ಲಕ್ಷಕ್ಕೂ ಹೆಚ್ಚು ಹಣ ಈ ವ್ಯಕ್ತಿಯ ವೈಯಕ್ತಿಕ ಖಾತೆಗೆ ವರ್ಗಾವಣೆಯಾಗಿತ್ತು. ವಿಷಯ ಮೇಲಾಧಿಕಾರಿಗಳಿಗೆ ಗೊತ್ತಾದ ನಂತರ ಆ ಮೊತ್ತವನ್ನು ಸಂಬಂಧಿಸಿದ ಶಾಲಾ– ಕಾಲೇಜುಗಳ ಖಾತೆಗೆ ವರ್ಗವಾಗಿರುವುದು ಗೊತ್ತಾಯಿತು ಎಂದು ವಿವರಿಸಿದರು. ಈ ಕುರಿತು ವರದಿಯನ್ನು ಆಯುಕ್ತರ ಕಚೇರಿಗೆ ಕಳುಹಿಸಲಾಗಿತ್ತು. ಇದೀಗ ಕಡತಗಳ ಲೆಕ್ಕ ಪರಿಶೀಲನೆ ನಡೆಯುತ್ತಿದೆ ಎಂದರು.ಸಿಎಒ ಪ್ರತಿಕ್ರಿಯೆ :  ಪ್ರಕರಣಕ್ಕೆ ಸಂಬಂಧಿಸಿದಂತೆ ಜಿ.ಪಂ ನಿಂದ ವರದಿ ಬಂದ ಹಿನ್ನೆಲೆಯಲ್ಲಿ ಲೆಕ್ಕ ಪರಿಶೀಲನೆ ಕೈಗೊಳ್ಳಲಾಗಿದೆ. ಶಾಲೆ ಕಾಲೇಜುಗಳಿಗೆ ಸಂದಾಯವಾಗಿರುವ ಚೆಕ್‌ಗಳು ಹಾಗೂ ಅದರ ಮೊತ್ತವನ್ನು ಪರಿಶೀಲಿಸಲಾಗುತ್ತಿದೆ.ವಿದ್ಯಾರ್ಥಿ ವೇತನ ಪಾರ ದರ್ಶಕವಾಗಿ ಪಾವತಿಯಾಗಿರುವ ಕುರಿತು ಮೇಲ್ನೋಟಕ್ಕೆ ಅನು ಮಾನಗಳು ಮೂಡುತ್ತಿವೆ. ಆದರೆ ಎಲ್ಲ ಕಡತಗಳ ಪರಿಶೀಲನೆ ನಂತರ ಖಚಿತ ಮಾಹಿತಿ ದೊರೆಯುತ್ತದೆ ಎಂದು ಸಿಎಒ ಮಂಜುನಾಥ ಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry