ಗುರುವಾರ , ಮೇ 19, 2022
21 °C

ಕಡಬದಲ್ಲಿ ವಲಯ ಕೃಷಿಮೇಳ.ಕೃಷಿ ಜೀವನದಿಂದ ಸ್ವಾಭಿಮಾನಿ ಬದುಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಡಬ(ಉಪ್ಪಿನಂಗಡಿ): ಕೃಷಿ ಆಧಾರಿತ ಜೀವನ ನಡೆಸುವಾತ ಸ್ವಾಭಿಮಾನದಿಂದ ಬದುಕಬಲ್ಲ, ಪ್ರಕೃತಿಯಲ್ಲಿ ಭಗವಂತನನ್ನು ನೋಡುವ ಕೃಷಿಕನನ್ನು ಅದು ಯಾವತ್ತೂ ಕೈಬಿಡಲಾರದು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.ಮರ್ಧಾಳದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಶನಿವಾರ ನಡೆದ ಕಡಬ ವಲಯ ಮಟ್ಟದ ಕೃಷಿ ಮೇಳ ಉದ್ಘಾಟಿಸಿದ ಅವರು, ಭಾರತದ ಮೂಲತತ್ವ ಕೃಷಿ ಆಗಬೇಕು. ನಮ್ಮ ಕೃಷಿ ಪದ್ಧತಿ ಉಳಿಯಬೇಕು. ಈ ನಿಟ್ಟಿನಲ್ಲಿ ಸರ್ಕಾರದ ವತಿಯಿಂದ ಸಹಕಾರ ತತ್ವವನ್ನು ಜಾರಿಗೆ ತರಬೇಕು. ಕೃಷಿಗೆ ಪ್ರೇರಣೆಯಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಈ ಕಾರ್ಯಕ್ರಮ ಶ್ಲಾಘನೀಯ ಎಂದರು.ಕಡಬ ಜಿ.ಪಂ. ಕ್ಷೇತ್ರ ಸದಸ್ಯೆ ಕುಮಾರಿ ಮಾತನಾಡಿ, ಕೃಷಿಕರು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಕೀಟನಾಶಕದಿಂದ ದೂರ ಇದ್ದು ಸಾವಯವ ಕೃಷಿ ಅಳವಡಿಸಿಕೊಳ್ಳಬೇಕು ಎಂದು ಗಮನ ಸೆಳೆದರು.ಮರ್ಧಾಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಲೈಮಾನ್ ಮಾತನಾಡಿ, ಕೃಷಿ ಪ್ರಧಾನ ರಾಜ್ಯವಾಗಿ ಹರಿಯಾಣವನ್ನು ನೋಡುತ್ತಿದ್ದೇವೆ. ಕರ್ನಾಟಕದ ಮಟ್ಟಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕವೇ ದ.ಕ ಜಿಲ್ಲೆ ಕೃಷಿ ಪ್ರಧಾನವಾಗಿ ಹೆಸರು ಮಾಡುತ್ತಿದೆ ಎಂದರು.ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ಎಲ್.ಎಚ್.ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಎಪಿಎಂಸಿ ಅಧ್ಯಕ್ಷ ಸೀತಾರಾಮ ಗೌಡ, ಪುತ್ತೂರು ತಾ.ಪಂ. ಉಪಾಧ್ಯಕ್ಷೆ ಪುಲಸ್ಯ ರೈ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಮಹಾಬಲ ಕುಲಾಲ್ ಮಾತನಾಡಿದರು.ಎಪಿಎಂಸಿ ಉಪಾಧ್ಯಕ್ಷ ಗುರುವ, ಕೃಷಿ ಮೇಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಜರತ್ನ ಆರಿಗ, ಸಮಿತಿ ಪದಾಧಿಕಾರಿಗಳಾದ ಎಬಿ ಮನೋಹರ ರೈ, ಚಂದ್ರಶೇಖರ, ದಯಾನಂದ, ವಾಸುದೇವ ಬೈಪಾಡಿತ್ತಾಯ, ವಾಸುದೇವ ಭಟ್, ಗ್ರಾಮಾಭಿವೃದ್ಧಿ ಒಕ್ಕೂಟದ ಪದಾಧಿಕಾರಿಗಳಾದ ತಿರುಮಲೇಶ್ವರ ಗೌಡ, ತಿಮ್ಮಪ್ಪ, ಸೀತಾರಾಮ ಗೌಡ, ಪುರುಷೋತ್ತಮ ಗೌಡ, ಕೊರಗಪ್ಪ ಪೂಜಾರಿ ಮಿತ್ತೋಡಿ ಇದ್ದರು.ವಸ್ತು ಪ್ರದರ್ಶನ: ಕೃಷಿ ಮೇಳದಲ್ಲಿ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ವಿವಿಧ ಇಲಾಖೆ ಮಳಿಗೆಗಳಲ್ಲಿ ಕೃಷಿ ಪರಿಕರಗಳು ಕೃಷಿಕರ ಗಮನ ಸೆಳೆದವು. ಕೆಲವರು ಖರೀದಿಯನ್ನೂ ಮಾಡು  ತ್ತಿದ್ದುದು ಕಂಡು ಬಂತು.‘ಎಸ್‌ಇಜೆಡ್ ಬೇಡ, ಎಸ್‌ಎಜೆಡ್ ಬೇಕು!’

‘ನಮ್ಮ ಜಿಲ್ಲೆಗೆ ಸ್ಪೆಷಲ್ ಎಕನಾಮಿಕ್ ಜೋನ್ ಸೂಕ್ತ ಅಲ್ಲ. ನಮಗೆ ಸ್ಪೆಷಲ್ ಅಗ್ರಿಕಲ್ಚರಲ್ ಜೋನ್ ಬೇಕು’ ಎಂದು ನಳಿನ್ ಕುಮಾರ್ ಕಟೀಲ್ ಆಗ್ರಹಿಸಿದರು.

ಉದ್ಯಮದಿಂದ ಕ್ರಾಂತಿ ಎನ್ನುತ್ತಾರೆ, ಆದರೆ ಯಾವ ರೈತರ ಜೀವನವೂ ಸುಂದರ ಆಗುವುದಿಲ್ಲ. ಆರ್ಥಿಕ ಅಭಿವೃದ್ಧಿ ಹೆಸರಿನಲ್ಲಿ ಗೂಂಡಾ, ದಬ್ಬಾಳಿಕೆ ನಡೆಯಲಾರಂಭಿಸಿದೆ. ಆದ ಕಾರಣ ನಮ್ಮ ಜಿಲ್ಲೆಗೆ ಕೃಷಿ ಆಧಾರಿತ ಎಸ್‌ಎಝಡ್ ಬೇಕು ಎಂದು ಗಮನ ಸೆಳೆದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.