ಕಡಬ: ಸಮಸ್ಯೆಯ ಆಗರ ನೆಮ್ಮದಿ ಕೇಂದ್ರ

ಶನಿವಾರ, ಜೂಲೈ 20, 2019
22 °C

ಕಡಬ: ಸಮಸ್ಯೆಯ ಆಗರ ನೆಮ್ಮದಿ ಕೇಂದ್ರ

Published:
Updated:

ಕಡಬ (ಉಪ್ಪಿನಂಗಡಿ): ಜನರ ಅಗತ್ಯಕ್ಕೆ ಅನುಗುಣವಾಗಿ ಬೇಕಾಗುವ ಜಾತಿ, ಆದಾಯ, ವಾಸ್ತವ್ಯ ಸೇರಿದಂತೆ ನಾನಾ ರೀತಿಯ ಸರ್ಟಿಫಿಕೇಟ್ ಪಡೆಯಲು ಗ್ರಾಮಸ್ಥರು ಅಲೆದಾಡುವುದನ್ನು ತಪ್ಪಿಸಲು ಎಲ್ಲವೂ ಒಂದೇ ಸೂರಿನಡಿ ಎಂಬ ಘೋಷಣೆಯೊಂದಿಗೆ ಆರಂಭವಾದ ನೆಮ್ಮದಿ ಕೇಂದ್ರ ದಿನೇ ದಿನೇ ಸಮಸ್ಯೆಯ ಆಗರವಾಗಿದೆ.  ಬಂದವರ ನೆಮ್ಮದಿ ಕಡೆಸುವ ಕೇಂದ್ರ ಎಂಬ ಲೇವಡಿಗೆ ಒಳಗಾಗಿದೆ.ಭಾವೀ ತಾಲ್ಲೂಕು ಕೇಂದ್ರ ಎಂದು ಹೇಳಿಕೊಳ್ಳುವ ಕಡಬ ಹೋಬಳಿ ವ್ಯಾಪ್ತಿಯಲ್ಲಿ 26 ಗ್ರಾಮಗಳಿವೆ. ಇದರ ಅಡಿ ಕಾರ್ಯಾಚರಿಸುತ್ತಿರುವ ಏಕೈಕ ನೆಮ್ಮದಿ ಕೇಂದ್ರ ಇದು. ತನ್ನ ವ್ಯಾಪ್ತಿಯಲ್ಲಿರುವ 30ರಿಂದ 40 ಕಿ.ಮೀ. ದೂರದ ಸವಣೂರು, ಕಾಣಿಯೂರು, ಬೆಳಂದೂರು, ಚಾರ್ವಾಕ, ಆಲಂಕಾರು, ಕೊಯಿಲ, ಹಳೆನೇರೆಂಕಿ, ನೂಜಿಬಾಳ್ತಿಲ, ರೆಂಜಿಲಾಡಿ ಮೊದಲಾದ ಪ್ರದೇಶದ ಗ್ರಾಮಸ್ಥರು ಆದಾಯ, ಜಾತಿ ಪ್ರಮಾಣ ಪತ್ರ ಮುಂತಾದ ದಾಖಲೆಗಳನ್ನು ಪಡೆಯಲು ಈ ಕೇಂದ್ರಕ್ಕೆ ಬರಬೇಕಾಗಿದೆ.

ಆದರೆ ಒಂದು ಕೆಲಸಕ್ಕಾಗಿ ಕನಿಷ್ಠ 2-3 ಬಾರಿ ಬಂದು ಕೇಂದ್ರದ ಸುತ್ತ ಗಿರಕಿ ಹೊಡೆದು ಕೆಲಸವಾಗದೇ ಅಲೆದಾಡಬೇಕಾದ ಸ್ಥಿತಿ ಇಲ್ಲಿದೆ ಎಂದು ಗ್ರಾಮಸ್ಥರು `ಪ್ರಜಾವಾಣಿ~ ಮುಂದೆ ಅಳಲು ತೋಡಿಕೊಂಡರು.ವಿದ್ಯಾರ್ಥಿಗಳು ಸಂಕಷ್ಟದಲ್ಲಿ: ಶಾಲೆ, ಕಾಲೇಜುಗಳು ಆರಂಭವಾಗಿವೆ. ಶಾಲಾ ದಾಖಲಾತಿ ಸಮಯದಲ್ಲಿ ಜಾತಿ, ಆದಾಯ ಪ್ರಮಾಣ ಪತ್ರದ ಅಗತ್ಯವಿದ್ದು, ಆದರೆ ಈ ಭಾಗದ ವಿದ್ಯಾರ್ಥಿಗಳು ಮತ್ತು ಪಾಲಕರು ಇದನ್ನು ಪಡೆಯಲು ಹರಸಾಹಸ ಪಡೆಯುವಂತಾಗಿದೆ. ಸಮಸ್ಯೆಯ ಗಂಭೀರತೆ ಅರಿತು ಕೆಲಸ ಮಾಡಬೇಕಾದ ಕಂದಾಯ ಇಲಾಖೆಯ ಅಧಿಕಾರಿಗಳು ತಮಗೇನೂ ಅರಿವಿಲ್ಲದ ರೀತಿ `ನೆಮ್ಮದಿ~ಯಿಂದ ಇದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.ಸಿಬ್ಬಂದಿ ಕೊರತೆ: ಕಡಬದ ಈ ಕೇಂದ್ರಕ್ಕೆ 26 ಗ್ರಾಮ ವ್ಯಾಪ್ತಿಯಿಂದ ನಿತ್ಯ ವಿವಿಧ ಕೆಲಸಗಳಿಗಾಗಿ ನೂರಾರು ಮಂದಿ ಬರುತ್ತಾರೆ. ಆದರೆ ಒಬ್ಬ ಸಿಬ್ಬಂದಿ ಮಾತ್ರ ಇದ್ದು ಒತ್ತಡದಲ್ಲಿ ಕೆಲಸ ನಿರ್ವಹಿಸಬೇಕಾಗಿದೆ. ಈ ಬಗ್ಗೆ ಸಿಬ್ಬಂದಿ ರವಿ ಎಂಬವರು ಪ್ರತಿಕ್ರಿಯಿಸಿ `ಇಲ್ಲಿ ಒಬ್ಬರೇ ಕೆಲಸ ನಿರ್ವಹಿಸಬೇಕಾಗಿದೆ.

ವಿದ್ಯುತ್ ಮತ್ತು ಇಂಟರ್‌ನೆಟ್ ಸಮಸ್ಯೆಯಿಂದ ನಿರೀಕ್ಷಿತ ರೀತಿ ಕೆಲಸ ಮಾಡಲಾಗುವುದಿಲ್ಲ. ಸಮಸ್ಯೆಯನ್ನು ಸಂಸ್ಥೆಗೆ ತಿಳಿಸಲಾಗಿದ್ದು ಇನ್ನೊಬ್ಬ  ಸಿಬ್ಬಂದಿಗೆ ಕೋರಿಕೆ ಸಲ್ಲಿಸಲಾಗಿದೆ~ ಎಂದು ತಿಳಿಸಿದರು.

ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಇಲ್ಲಿನ ಸಮಸ್ಯೆಯನ್ನು ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

-ಸಿದ್ದಿಕ್ ನೀರಾಜೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry