ಕಡಲತಡಿ ಭಾರ್ಗವಗೆ ಒಂದು ಕೋಟಿ ವೆಚ್ಚದಲ್ಲಿ ಸ್ಮಾರಕ ಭವನ ಸಿದ್ಧ

ಮಂಗಳವಾರ, ಜೂಲೈ 23, 2019
20 °C

ಕಡಲತಡಿ ಭಾರ್ಗವಗೆ ಒಂದು ಕೋಟಿ ವೆಚ್ಚದಲ್ಲಿ ಸ್ಮಾರಕ ಭವನ ಸಿದ್ಧ

Published:
Updated:

ಬ್ರಹ್ಮಾವರ: ಕಡಲತಡಿಯ ಭಾರ್ಗವ ಎಂದೇ ಹೆಸರಾಗಿರುವ ಜ್ಞಾನಪೀಠ ವಿಜೇತ ಕನ್ನಡ ಸಾಹಿತಿ ಕೋಟ ಶಿವರಾಮ ಕಾರಂತರ ಹೆಸರಿನಲ್ಲಿ ಕಾರಂತ ಹುಟ್ಟೂರ ಪ್ರಶಸ್ತಿಯನ್ನು ಹುಟ್ಟುಹಾಕುವ ಮೂಲಕ ಗಮನ ಸೆಳೆದಿದ್ದ ಕೋಟ ತಟ್ಟು ಗ್ರಾಮ ಪಂಚಾಯಿತಿ ಇದೀಗ ಕಾರಂತರ ನೆನಪಿನಲ್ಲಿ ಭವ್ಯವಾದ ಮಂದಿರ ನಿರ್ಮಿಸಿ ಅವರ ಹುಟ್ಟೂರನ್ನು ಪ್ರವಾಸಿತಾಣವನ್ನಾಗಿ ಮಾಡುವ ಮೂಲಕ ಇತರ ಗ್ರಾ.ಪಂಗಳಿಗೂ ಮಾದರಿಯಾಗಿದೆ.ಡಾ. ಕಾರಂತರ ನೆನಪು ಶಾಶ್ವತಗೊಳಿಸಲು ಕೋಟತಟ್ಟು ಗ್ರಾ.ಪಂ ರೂ 1.25 ಕೋಟಿ ಯೋಜನೆ ಹಮ್ಮಿಕೊಂಡಿದ್ದು, ಕಾರಂತ ಸ್ಮಾರಕ ಭವನ ಮತ್ತು ಪುಷ್ಕರಣಿ  ನಿರ್ಮಿಸುತ್ತಿದೆ. ಎರಡು ವರ್ಷಗಳ ಹಿಂದೆ ಕಾರಂತ ಹುಟ್ಟೂರ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಮ್ಮುಖದಲ್ಲಿ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಸರ್ಕಾರ ಬೆಂಬಲ ನೀಡಿದರೆ ಕಾರಂತರ ಹೆಸರಿನ ಸ್ಮಾರಕ ನಿರ್ಮಿಸುವ ಇಚ್ಛೆ ವ್ಯಕ್ತಪಡಿಸಿದ್ದರು.ಅದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ತಕ್ಷಣವೇ, ಕಾರಂತರ ಹೆಸರಿನಲ್ಲಿ ಸ್ಮಾರಕ ನಿರ್ಮಿಸುವುದಾದರೆ ರೂ 1ಕೋಟಿ ರೂ. ನೀಡುವ ಭರವಸೆ ನೀಡಿದರಲ್ಲದೇ ಕೂಡಲೇ ಹಣವನ್ನು ಬಿಡುಗಡೆ ಮಾಡಿದರು.

ಗ್ರಾ.ಪಂ ಸದಸ್ಯರು ಪಕ್ಷಭೇದ ಮರೆತು ಒಟ್ಟಾಗಿ ಕಾಮಗಾರಿ ಗುಣಮಟ್ಟ ಮತ್ತು ಹಣ ದುರುಪಯೋಗವಾಗದಂತೆ ತಡೆಯಲು ಕಣ್ಗಾಗವಲು ಸಮಿತಿಯೊಂದನ್ನು ರಚಿಸಿ ಕೆಲಸ ಆರಂಭಿಸಿಯೇ ಬಿಟ್ಟರು. 1ಕೋಟಿ ವೆಚ್ಚದ ಕಾರಂತ ಸ್ಮಾರಕ ಭವನದ ಕೆಲಸ ನಿರ್ಮಿತಿ ಕೇಂದ್ರದ ಉಸ್ತುವಾರಿಯಲ್ಲಿ ಬಹುತೇಕ ಪೂರ್ಣಗೊಂಡಿದ್ದು, ಪುಷ್ಕರಣಿಯ ಕೆಲಸ ಸಾಗಿದೆ.ಸ್ಮಾರಕ ಭವನ-ಏನಿದರ ವಿಶೇಷ:  ವಿಶಾಲವಾದ ಬಯಲು ರಂಗ ಮಂದಿರವನ್ನು ಹೊಂದಿರುವ ಈ ಭವನದಲ್ಲಿ ಕಾರಂತರ ಸಾಹಿತ್ಯ ಕ್ಷೇತ್ರದ ಎಲ್ಲಾ ಮಜಲುಗಳು, ಜೀವನವನ್ನು ಬಿಂಬಿಸುವ ಭಿತ್ತಿಚಿತ್ರಗಳು, ಕಾರಂತ ಮ್ಯೂಸಿಯಂ, ರೇಖಾಚಿತ್ರಗಳು, ಕಾರಂತರ ಭವನವನ್ನು ರಾರಾಜಿಸಲಿವೆ.ಕಾರಂತರು ಮಕ್ಕಳೆಂದರೆ ಪ್ರಾಣಬಿಡುತ್ತಿದ್ದ ಕಾರಣ ಹತ್ತಿರದಲ್ಲಿರುವ ಅಂಗನವಾಡಿಯನ್ನು ಭವನದಲ್ಲಿ ನಡೆಸಲು ಚಿಂತಿಸಲಾಗಿದೆ. ವರ್ಷಪೂರ್ತಿ ಕಾರಂತರಿಗೆ ಸಂಬಂಧಪಟ್ಟ ನಾಟಕಗಳ ಪ್ರದರ್ಶನ, ಯಕ್ಷಗಾನ, ನೃತ್ಯ ಕಾರ್ಯಕ್ರಮಗಳನ್ನು ನಡೆಸಲು ಪ್ರೋತ್ಸಾಹಿಸಲಾಗುವುದು. ಯಕ್ಷಗಾನದ ಬಗ್ಗೆ ಅಪಾರ ಪ್ರೀತಿಯಿದ್ದ ಕಾರಂತರಿಗೆ ಯಕ್ಷಗಾನ ತರಬೇತಿ ಕಾರ್ಯಕ್ರಮವನ್ನೂ ಇಲ್ಲಿ ಹಮ್ಮಿಕೊಳ್ಳಲಾಗುವುದು. ಸ್ಮಾರಕ ಮಂದಿರವನ್ನು ಕಾರಂತರ ಜನ್ಮದಿನದ ಮೊದಲು (ಅಕ್ಟೋಬರ್‌ನಲ್ಲಿ) ಉದ್ಘಾಟಿಸುವ ಉದ್ದೇಶವಿದೆ ಎಂದು ಗ್ರಾ.ಪಂ. ತಿಳಿಸಿದೆ.ಪುಷ್ಕರಣಿ:  ಭವನದ ಎದುರು ರೂ 25 ಲಕ್ಷ ಅಂದಾಜಿನಲ್ಲಿ (ಜಿಲ್ಲಾಧಿಕಾರಿ ಅನುದಾನ) ಪುಷ್ಕರಣಿ ನಿರ್ಮಿಸಲಾಗುತ್ತಿದೆ. ಕಾರಂತರು ಹುಟ್ಟಿದ ಕೂಗಳತೆಯ ದೂರದಲ್ಲಿದ್ದ ಹಾಳು ಬಿದ್ದಿದ್ದ ಕೊಳ್‌ಕೆರೆಯನ್ನು ಇದೀಗ ಪುಷ್ಕರಣಿ ಎಂದು ಹೆಸರಿಸಲಾಗಿದೆ.ಕಾರಂತರು ಈ ಕೆರೆಯ ಸುತ್ತಮತ್ತ ಓಡಾಡಿ ಸವಿದ ಪ್ರಕೃತಿ ಸೊಬಗನ್ನು ತಮ್ಮ ಸಾಹಿತ್ಯದಲ್ಲಿ ಕಟ್ಟಿಕೊಟ್ಟಿದ್ದರು. ಪುಷ್ಕರಣಿಯ ಮಧ್ಯದಲ್ಲಿ ಕಾರಂತರ ಭವ್ಯಮೂರ್ತಿಯನ್ನು ನಿರ್ಮಿಸುವ, ಅದರ ಸುತ್ತಲೂ ಹೆಸರಾಂತ ಸಾಹಿತಿಗಳ ಶಿಲ್ಪ ನಿರ್ಮಿಸುವ ಹಾಗೂ ಕೆರೆಯ ಸುತ್ತಲೂ ಉದ್ಯಾನವನ ಮಾಡಿ ವಿಹಾರ ಅವಕಾಶ ಕಲ್ಪಿಸುವ ಯೋಜನೆ ಇದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry