ಕಡಲಾಮೆ ಕಳೇಬರ ಪತ್ತೆ

7

ಕಡಲಾಮೆ ಕಳೇಬರ ಪತ್ತೆ

Published:
Updated:
ಕಡಲಾಮೆ ಕಳೇಬರ ಪತ್ತೆ

 


ಕಾರವಾರ: ಪಶ್ಚಿಮ ಕರಾವಳಿ ತೀರದಲ್ಲಿ ಹೆಚ್ಚಾಗಿ ಕಂಡುಬರುವ ಹಸಿರು ಕಡಲಾಮೆಯೊಂದರ ಕಳೇಬರ ಇಲ್ಲಿಯ ರವೀಂದ್ರನಾಥ ಟ್ಯಾಗೋರ ಕಡಲತೀರದಲ್ಲಿ  ಗುರುವಾರ ಪತ್ತೆಯಾಗಿದೆ.

 

ಸುಮಾರು 70 ವರ್ಷ ವಯಸ್ಸಿನ ಈ ಹೆಣ್ಣು ಆಮೆ 5 ಅಡಿ ಉದ್ದವಿದ್ದು, ಅಂದಾಜು ಒಂದು ಕ್ವಿಂಟಲ್ ಭಾರವಿದೆ. ಆಮೆಯ ವೈಜ್ಞಾನಿಕ ಹೆಸರು 'ಚೆಲೊನಿಯಾ ಮೈಡಾಸ್'. ವಿಶ್ವದಲ್ಲಿ ಒಟ್ಟು ಏಳು ಜಾತಿಗೆ ಸೇರಿದ ಕಡಲಾಮೆಗಳಿದ್ದು ಆ ಪೈಕಿ ಐದು ಜಾತಿಯ ಆಮೆಗಳು ಭಾರತದಲ್ಲಿವೆ.

 

ಮುಂಜಾನೆ ವಾಯುವಿಹಾರಕ್ಕೆ ಬಂದವರು ಇದನ್ನು ನೋಡಿ ಅರಣ್ಯ ಇಲಾಖೆಗೆ ತಿಳಿಸಿದರು. ಸ್ಥಳಕ್ಕೆ ಬಂದ ಅರಣ್ಯ ಇಲಾಖೆಯ ಸಿಬ್ಬಂದಿ ಆಮೆಯನ್ನು ವಲಯ ಅರಣ್ಯ ಇಲಾಖೆಯ ಅಧಿಕಾರಿಗಳ ಕಚೇರಿಗೆ ತೆಗೆದುಕೊಂಡು ಹೋದರು.

 

'ಆಮೆ ಸಾವನ್ನಪ್ಪಿ ಒಂದೆರಡು ದಿನಗಳಾಗಿರಬಹುದು. ಇದು ಯಾವುದೇ ಕಾಯಿಲೆ ಬಂದು ಸಾವನ್ನಪ್ಪಿಲ್ಲ. ಹಸಿರು ಆಮೆಗಳು 70ರಿಂದ 75 ವರ್ಷಗಳ ಕಾಲ ಮಾತ್ರ ಬದುಕುತ್ತವೆ. ಅದು ಸಹಜ ಸಾವು' ಎಂದು ಆಮೆ ಕುರಿತು ಅಧ್ಯಯನ ನಡೆಸಿದ ಇಲ್ಲಿಯ ಕವಿವಿ ಸಾಗರ ಅಧ್ಯಯನ ಕೇಂದ್ರದ ಉಪನ್ಯಾಸಕ ಡಾ. ಉಲ್ಲಾಸ ನಾಯಕ, ಡಾ ಶಿವಕುಮಾರ ಹರಗಿ ಮತ್ತು ಡಾ. ಜೆ.ಎಲ್.ರಾಠೋಡ ಹೇಳಿದ್ದಾರೆ.

 

`ಶೈಕ್ಷಣಿಕ ಉದ್ದೇಶಕ್ಕಾಗಿ ಇಲ್ಲಿಯ ಕವಿವಿ ಸಾಗರ ಅಧ್ಯಯನ ಕೇಂದ್ರದವರು ಕಡಲಾಮೆಯನ್ನು ತಮಗೆ ಒಪ್ಪಿಸಬೇಕು ಎಂದು ಕೇಳಿಕೊಂಡಿದ್ದಾರೆ. ವನ್ಯಜೀವಿ ವಿಭಾಗ ಅನುಮತಿ ನೀಡಿದಲ್ಲಿ ಅದನ್ನು ಹಸ್ತಾಂತರಿಸಲಾಗುವುದು. ಅಲ್ಲಿಯವರೆಗೆ ಆಮೆಯನ್ನು ಸಾಗರ ಅಧ್ಯಯನ ಕೇಂದ್ರದಲ್ಲಿ ಸಂರಕ್ಷಿಸಿಡಲಾಗುವುದು' ಎಂದು ಎಸಿಎಫ್ ಮೋಹನ ಕಣಗಿಲ `ಪ್ರಜಾವಾಣಿ'ಗೆ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry