ಶನಿವಾರ, ಫೆಬ್ರವರಿ 27, 2021
28 °C
ಬೆಲೆ ಕುಸಿತದ ಭೀತಿ, ಹುಳು ಕಾಟ

ಕಡಲೆಕಾಳು ದಾಸ್ತಾನಿಗೆ ಇಲ್ಲದ ಮಳಿಗೆ:ರೈತರ ಆತಂಕ

ಪ್ರಜಾವಾಣಿ ವಾರ್ತೆ/ಉಮೇಶ್‌ ಕುಮಾರ್‌.ಜೆ.ಓ Updated:

ಅಕ್ಷರ ಗಾತ್ರ : | |

ಕಡಲೆಕಾಳು ದಾಸ್ತಾನಿಗೆ ಇಲ್ಲದ ಮಳಿಗೆ:ರೈತರ ಆತಂಕ

ಅಜ್ಜಂಪುರ: ತಾಲ್ಲೂಕಿನಲ್ಲಿಯೇ ಅತ್ಯಧಿಕ ಕಡಲೆಕಾಳು ಬೆಳೆಯುವ ಅಜ್ಜಂಪುರ ಮತ್ತು ಶಿವನಿ ಹೋಬಳಿಯ ರೈತ ಈ ಬಾರಿ ಇಳುವರಿ ಕೊರತೆ ಮತ್ತು ಬೆಲೆ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿದ್ದಾನೆ. ಅಲ್ಲದೇ ಈ ಭಾಗದಲ್ಲಿ ಕಾಳು ಸಂಗ್ರಹಿಸಿಡಲು ‘ಸಂಗ್ರಹ ಮಳಿಗೆ’ ಇಲ್ಲದೇ ಇರುವುದರಿಂದ, ರೈತರು ಕಡಿಮೆ ಬೆಲೆಗೆ ಮಾರಾಟ ಮಾಡುವ ಅನಿವಾರ್ಯ ಪರಿಸ್ಥಿತಿ ಬಂದಿದೆ.‘ಕಡಲೆ ಕಾಳು ಬೆಳೆಯಲು ಬೇಸಾಯ, ಬಿತ್ತನೆ, ಗೊಬ್ಬರ, ಕಾಳು ಮಾಡಿಸುವಿಕೆ ಹಾಗೂ ಇನ್ನಿತರ ಕೆಲಸಗಳಿಗೆ ಸುಮಾರು ₨8 ಸಾವಿರ ವೆಚ್ಚ ಮಾಡಿ  ದ್ದೇವೆ. ಮಳೆ ಕೊರತೆ ಹಾಗೂ ವ್ಯತಿರಿಕ್ತ ಹವಾಮಾನದ ಹಿನ್ನೆಲೆಯಲ್ಲಿ ಎಕರೆಗೆ 6ರಿಂದ 8 ಕ್ವಿಂಟಲ್‌ ಇಳುವರಿ ಬಂದಿದೆ.ಕಳೆದ ಬಾರಿಗೆ ಹೋಲಿಸಿದರೆ ಕನಿಷ್ಠ 2ರಿಂದ 3 ಕ್ವಿಂಟಲ್‌ನಷ್ಟು ಪ್ರಮಾಣ ಕಡಿಮೆ ಆಗಿದೆ. ಕಳೆದ ವರ್ಷ ಕ್ವಿಂಟಲ್‌ಗೆ ₨ 3500ರಿಂದ 3700ರೂ ಇದ್ದ ಬೆಲೆ ಈಗ ₨2500ರಿಂದ 2600ಗೆ ಕುಸಿದಿದೆ. ಇನ್ನಷ್ಟು ದಿನ ಸಂಗ್ರಹಿಸಿಡೋಣ ಎಂದರೆ ಮನೆಯಲ್ಲಿ ಸ್ಥಳದ ಕೊರತೆ ಇದೆ ಅಲ್ಲದೇ ಹುಳು ಹಿಡಿದು ಕಾಳು ಹಾಳಾಗುವ ಬೀತಿ ಕಾಡುತ್ತಿದೆ’ ಎನ್ನುತ್ತಾರೆ ರೈತ ರಂಗಸ್ವಾಮಿ.   ಅಜ್ಜಂಪುರ ಶಿವನಿ ಹೋಬಳಿಯ ಹಿಂಗಾರು ಹಂಗಾಮಿನ ಪ್ರಮುಖ ಬೆಳೆ ಕಡಲೆಕಾಳು. ಈ ಎರಡೂ ಅವಳಿ ಹೋಬಳಿಗಳಲ್ಲಿ ಬಿತ್ತನೆಯಾಗುವ 15ಸಾವಿರ ಎಕರೆಗೂ ಅಧಿಕ ಕೃಷಿ ಭೂಮಿಯಲ್ಲಿ ಪ್ರತೀ ವರ್ಷ ಒಂದು ಲಕ್ಷಕ್ಕೂ ಅಧಿಕ ಕ್ವಿಂಟಲ್‌ ಕಡಲೆ ಉತ್ಪಾದನೆ ಆಗುತ್ತಿದೆ.   ಸ್ಥಳಾವಕಾಶದ ಕೊರತೆ ಮತ್ತು ಹುಳುಗಳಿಂದ ಕಾಳನ್ನು ರಕ್ಷಿಸಲು ಸಾಧ್ಯ ಆಗದೇ ಇರುವುದರಿಂದ ಬೆಲೆ ಕುಸಿತ ದಂತಹ ಸಂದರ್ಭದಲ್ಲಿಯೂ ಬೆಳೆದ ಧಾನ್ಯವನ್ನು ಮಾರಾಟ ಮಾಡುವ ಅನಿವಾರ್ಯತೆಗೆ ಸಿಲುಕಿ ನಷ್ಟ ಅನುಭವಿಸುವಂತಾಗಿದೆ. ರೈತರು ತಾವು ಬೆಳೆದ ಕಾಳನ್ನು ಅವಶ್ಯ ಹಾಗೂ ಬೆಲೆ ಏರಿಕೆ ಸಂದರ್ಭದಲ್ಲಿ ಮಾರಾಟ ಮಾಡುವವರೆಗೂ ಸಂಗ್ರಹಿಸಿಡಲು ಶೀಘ್ರವೇ ದಾಸ್ತಾನು ಮಳಿಗೆ ನಿರ್ಮಿಸ ಬೇಕು.ಆ ಮೂಲಕ ಸರ್ಕಾರ ಹಾಗೂ ಕೃಷಿ ಅಧಿಕಾರಿಗಳು ರೈತರ ನೆರವಿಗೆ ಧಾವಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಹೋಬಳಿಯ ಕೃಷಿ ಭೂಮಿಯಲ್ಲಿ ಲಘು ಪೋಷಕಾಂಶಗಳ ಕೊರತೆ ಇದೆ. ಈ ಬಾರಿ ಜಿಂಕ್‌, ಬೋರಾನ್‌, ಜಿಪ್ಸಂ ಬಳಸಿದ್ದ ರೈತರು ಮಳೆ ಕೊರತೆ ನಡುವೆಯೂ 10 ರಿಂದ 11 ಕ್ವಿಂಟಲ್‌ ಕಡಲೆಕಾಳು ಬೆಳೆದಿದ್ದಾರೆ.

ರೈತರು ಮುಂದಿನ ಬೆಳೆಗಳಲ್ಲಿ ಇವುಗಳ ಬಳಕೆ ಮಾಡಿಕೊಂಡು, ಅಧಿಕ ಇಳುವರಿ ಸಾಧಿಸಿ, ಲಾಭ ಗಳಿಸಬಹುದು ಎನ್ನು ತ್ತಾರೆ ರೈತ ಅನುವುಗಾರ ಸತೀಶ್‌ ಮತ್ತು ಶಿವಕುಮಾರ್‌.ಸಂಗ್ರಹಿಸಿಡುವ ಕಡಲೆಕಾಳಿಗೆ ಬ್ರೂಚಿ ಡ್ಸ್‌ ಎಂಬ ಹುಳು ತಗುಲಿ, ಕಾಳು ಹಾಳಾಗುವ ಅಪಾಯವಿದೆ. ಇವುಗಳ ಹಾವಳಿಯಿಂದ ಕಾಳು ರಕ್ಷಿಸಿಡಲು, ಮೊದಲು ಕಾಳನ್ನು ಒಣಗಿಸಿ, ಮೆಲಥಿಯನ್‌ ಪೌಡರ್‌ ಮಿಶ್ರಣ ಮಾಡಬೇಕು. ನಂತರ ಶೇ 9 ರಿಂದ 10ರಷ್ಟು ತೇವಾಂಶದ ಸ್ವಚ್ಚಗೊಳಿಸಿದ ಕೋಣೆಯಲ್ಲಿ, ಶಿಲೀಂದ್ರ ಮತ್ತು ಕೀಟಮುಕ್ತ ಗೋಣಿ ಚೀಲಗಳಿಗೆ ಕಾಳು ತುಂಬಿ, ಚೀಲಗಳು ನೆಲಕ್ಕೆ ತಾಗದಂತೆ ಮರದ ಹಲಗೆಯ ಮೇಲೆ ಇರಿಸಬೇಕು ಎಂದು ಪಟ್ಟಣದ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಅರುಣ್‌ ಕುಮಾರ್‌ ಸಲಹೆ ನೀಡುತ್ತಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.