ಗುರುವಾರ , ಮೇ 13, 2021
16 °C

ಕಡಲೆ ಬೀಜ ದರ ಹೆಚ್ಚಳಕ್ಕೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಡಲೆ ಬೀಜ ದರ ಹೆಚ್ಚಳಕ್ಕೆ ವಿರೋಧ

ತಾಳಿಕೋಟೆ: `ಕಡಲೆ ಬೀಜಕ್ಕೆ ಬುಧವಾರ ಕ್ವಿಂಟಲ್‌ಗೆ ರೂ. 2800 ರೂಪಾಯಿ ಪಡೆದು ರಸೀದಿ ಕೊಟ್ಟಾರ್, ಇವತ್ತು (ಗುರುವಾರ) ಬಂದರೆ ರೂ. 3600 ಕೊಟ್ಟರ್ ಹೆಂಗ್ರೀ, ಕ್ವಿಂಟಲ್‌ಗೆ ಎಂಟನೂರು ರೂಪಾಯಿ ಹೆಚ್ಚಿಗೆ ಹ್ಯಾಂಗ್ ಮಾಡಿದ್ರಿ, ನಿಮಗೆ ಆದೇಶ ಎಲ್ಲಿ ಬಂದಿದೆ ತೋರಸ್ರೀ~ ಎಂದು ತಾಳಿಕೋಟೆ ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯ ನೂರಾರು ರೈತರು ಕೃಷಿ ಕೇಂದ್ರದ ಅಧಿಕಾರಿಗಳಿಗೆ ಹರಿಹಾಯ್ದರು.ಇದಲ್ಲದೇ  ನಿನ್ನೆ 2800 ರೂಪಾಯಿ ಕೊಟ್ಟು ಬಿಲ್ ಮಾಡ್ಸಿವ್ರಿ. ಬೀಜ ಕಲಾಸಾಗ್ಯಾವ ನಾಳಿಗೆ ಬರ‌್ರಿ ಅಂದ್ರು, ಬಂದೀವಿ ಈಗ 3600ರೂಪಾಯಿ ರಸೀದಿ  ಹರಸ್ರಿ ಅಂತಾರ ಇದು ಹ್ಯಾಂಗ್ ತಿಳಿವಲ್ದು~ ಅಂತ ಹಲವು ಬಡ ರೈತರು ದಿಕ್ಕು ತಪ್ಪಿದಂತಾಗಿದ್ದರು.ಕೆಲ ರೈತರು ಬೀಜೋಪಚಾರಕ್ಕೆ ನೀಡುವ ಪುಡಿಗಳಿಗೆ ರಸೀದಿ ಕೊಡದೆ ಎರಡು ಪಾಕೀಟ್‌ಗೆ 180 ರೂಪಾಯಿ ತಗೋತಾರ ಯಾರಿಗೆ ಹೇಳೂಣ್ರಿ ಎಂದು ಗೊಣಗುತ್ತಿದ್ದರು.`ಇನ್ನು ಕೆಲವರು ನಿಮ್ಮ ಮೇಲಾಧಿ ಕಾರಿಗಳ ನಂಬರ್ ಕೊಡ್ರಿ ಮಾತಾಡ್ತೀವಿ ಆಟಾ ಹಚ್ಚಿರೇನ್ರೀ ಅಂತ ಜಗಳ ಮಾಡಿ ದರು. ಬೀಜ ಗುಣಮಟ್ಟ ಅಷ್ಟೊಂದು ಚೆನ್ನಾಗಿಲ್ಲ, ಒಂದು ವೇಳೆ ಈ ಬೀಜಗಳು ಸರಿಯಾಗಿ ಬಿತ್ತನೆ ಬರದಿದ್ದರೆ ಹೊಣೆ ಹೊರುವವರು ಯಾರು ಎಂಬುದಕ್ಕೆ ಇಲಾಖೆ ಉತ್ತರಿಸಬೇಕು~ ಎಂದು ಅನೇಕ ರೈತರು ಆಗ್ರಹಿಸಿದರು.ಅಲ್ಲದೇ ಬೇಡಿಕೆಯಿದ್ದಷ್ಟು ಕಡಲೆ ಬೀಜ ಇಲ್ಲ, ಬಿತ್ತನೆ ಅವಧಿಯೊಳಗೆ ಬೀಜ ಲಭ್ಯವಾಗದಿದ್ದರೆ ತುಂಬಾ ಕಷ್ಟವಾ ಗುತ್ತದೆ ಎಂದು ಕೊಡಗಾನೂರನ ಶಿವನಗೌಡ ಬಿರಾದಾರ, ಸಂತೋಷ ಬಿರಾದಾರ, ಪರುತಯ್ಯ ಸ್ಥಾವರಮಠ, ಗೋಟಖಿಂಡ್ಕಿಯ ಬಸವರಾಜ ಮುದ್ನೂರ, ಹಿರೂರನ ಟಿ.ಜಿ.ದೇಸಾಯಿ ಆತಂಕ ವ್ಯಕ್ತಪಡಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ರೈತ ಸಂಪರ್ಕ ಕೇಂದ್ರದ ತಾಂತ್ರಿಕ ಸಹಾಯಕ ಮಸರಕಲ್ಲ, `ನಿನ್ನೆ ರೂ. 2800 ಇದ್ದದ್ದು ನಿಜ, ನಿನ್ನೆ ಮಾಡಿದ್ದ ಬಿಲ್ಲುಗಳಿಗೆ ಬಂದಿದ್ದ ಬೀಜಕ್ಕೆ ರಶೀತಿ ಕೊಟ್ಟಿದ್ದೇವೆ ನಿನ್ನೆ ಮಧ್ಯಾಹ್ನವೇ ಕಡಲೆ ಬೀಜಕ್ಕೆ ಸಬ್ಸಿಡಿಯನ್ನು ಕಿಲೋಗೆ 12ರೂ.ಗಳಿಂದ 5ಕ್ಕೆ ಇಳಿಸುವಂತೆ ಮೇಲಾಧಿಕಾರಿಗಳು ದೂರವಾಣಿ ಮೂಲಕ ತಿಳಿಸಿದ್ದಾರೆ.ಆದೇಶ ಕೊಡು ಅಂದರೆ ಎಲ್ಲಿಂದ ತರುವುದು ಬೇಕಿದ್ದರೆ ನಂಬರ್ ತೆಗೆದುಕೊಂಡು ಮಾತನಾಡಿ, ಇದರಲ್ಲಿ ನಮ್ಮ ತಪ್ಪಿಲ್ಲ. ಹಣ ಪಡೆದದ್ದಕ್ಕೆ ರಸೀದಿ ಕೊಡ್ತೀವಿ ಆದೇಶ ಪ್ರತಿ ನಮ್ಮಲ್ಲಿಲ್ಲ~ ಎಂದರು.ಬೀಜಗಳಲ್ಲಿ ಬುಧವಾರ ಹಂಚಿದ್ದಕ್ಕೆ ಮತ್ತು ಇಂದಿನದು ಬೇರೆಯಿದೆ ಎಂದು ಆಕ್ಷೇಪಿಸಿದ  ರೈತರಿಗೆ ಪರಿಷ್ಕೃತ ಬೀಜ ಗಳಾದ ಜೆ.ಜಿ.11ನ್ನು ಕೊಡುತ್ತಿದ್ದೇವೆ. ಕಳೆದ ವರ್ಷ ವಿತರಿಸಿದ ಅಣ್ಣಿಗೇರಿ-1ಕ್ಕಿಂತ ಸದರಿ ಬೀಜಗಳು ಚೆನ್ನಾಗಿವೆ ತರಿಸಿ ಎಂದು ಹೆಚ್ಚಿನ ರೈತರು ಹೇಳಿದ್ದರಿಂದ ಅವನ್ನೇ ಬೇಡಿಕೆಯಿಟ್ಟು ತರಿಸಿದ್ದೇವೆ ಎಂದು ಕೃಷಿ ಅಧಿಕಾರಿಗಳು ಹೇಳಿದರು.ತಾಳಿಕೋಟೆ ಹೋಬಳಿ ವ್ಯಾಪ್ತಿಯಲ್ಲಿ ಮುಂಗಾರು ಕೈಕೊಟ್ಟಿರುವುದರಿಂದ, ತೊಗರಿ ಬೆಳೆ ಚೆನ್ನಾಗಿಲ್ಲ. ಹೀಗಾಗಿ ಎಲ್ಲ ಕಡಲೆ ಬೀಜ ಬಿತ್ತನೆಗೆ ಅಣಿಯಾಗಿದ್ದಾರೆ. ಬೇಡಿಕೆ 120ಟನ್ ಇದೆ ಆದರೆ ನಮಗೆ ಇಂದು ಬಂದಿರುವುದು ಕೇವಲ 10 ಟನ್ ಮಾತ್ರ.  ಈ ಬಗ್ಗೆ ಮೇಲಾಧಿಕಾರಿ ಗಳ ಗಮನಕ್ಕೆ ತಂದಿದ್ದೇವೆ ಎಂದು ಅಧಿಕಾರಿಗಳು `ಪ್ರಜಾವಾಣಿ~ಗೆ ತಿಳಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.