ಕಡಲ್ಕೊರೆತ ಶಾಶ್ವತ ತಡೆಗೆ 912 ಕೋಟಿ :ಪಾಲೆಮಾರ್

7

ಕಡಲ್ಕೊರೆತ ಶಾಶ್ವತ ತಡೆಗೆ 912 ಕೋಟಿ :ಪಾಲೆಮಾರ್

Published:
Updated:

ಉಡುಪಿ: ಕರಾವಳಿಯಲ್ಲಿ ಸಮುದ್ರ ಕೊರೆತ ಬಹುದೊಡ್ಡ ಸಮಸ್ಯೆಯಾಗಿ ಕಾಡುತ್ತಿದ್ದು ಕಡಲು ಕೊರೆತಕ್ಕೆ ಸುಮಾರು 912 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದ್ದು 2018ಕ್ಕೆ ಈ ಯೋಜನೆ ಪೂರ್ಣಗೊಳ್ಳಲಿದೆ ಎಂದು ಬಂದರು ಮತ್ತು ಮೀನುಗಾರಿಕಾ ಸಚಿವ ಕೃಷ್ಣ ಜೆ. ಪಾಲೇಮಾರ್ ಇಲ್ಲಿ ತಿಳಿಸಿದರು.ಉಡುಪಿ ಮತ್ತು ದ.ಕ.ಜಿಲ್ಲಾ ಸಹಕಾರಿ ಮೀನು ಮಾರಾಟ ಒಕ್ಕೂಟದ ವತಿಯಿಂದ ಮಲ್ಪೆಯ ಮೀನುಗಾರಿಕಾ ಬಂದರಿನಲ್ಲಿ ಸರ್ಕಾರದ ಯೋಜನೆಗಳ ಹಾಗೂ ಸಂಸ್ಥೆಯ ಇತರ ಸೌಲಭ್ಯಗಳನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.ಕರಾವಳಿಗೆ ಶಾಶ್ವತವಾದ ಯೋಜನೆ ರೂಪಿಸುವ ನಿಟ್ಟಿನಲ್ಲಿ ಎಡಿಬಿಯಿಂದ 912 ಕೋಟಿ ಸಾಲ ಪಡೆಯಲಾಗಿದ್ದು ಈಗಾಗಲೇ ಕರಾವಳಿಯುದ್ದಕ್ಕೂ 223 ಕೋಟಿ ರೂಪಾಯಿಗಳ ಮೊದಲ ಹಂತದ ಕೆಲಸ ಆರಂಭವಾಗಿದೆ. ಈ ಯೋಜನೆಯ ಎರಡು ಮತ್ತು ಮೂರನೇ ಹಂತ 2018ರಲ್ಲಿ ಪೂರ್ಣಗೊಳ್ಳಲಿದೆ. ಆ ಮೂಲಕ ಕರಾವಳಿ ಭಾಗದ ಬಹುದೊಡ್ಡ ಸಮಸ್ಯೆಗೆ ‘ತಡೆಗೋಡೆ’ ನಿರ್ಮಾಣವಾಗಲಿದೆ ಎಂದು ಹೇಳಿದರು.ಕರಾವಳಿ ಭಾಗದ ಮೀನುಗಾರರ ಸಮಗ್ರ ಅಭಿವೃದ್ಧಿ ಹಾಗೂ ಅವರನ್ನು ರಕ್ಷಣೆ ಮಾಡುವ ಹೊಣೆ ನಿಮ್ಮದು ಎಂದು ತಮ್ಮನ್ನು ಮೀನುಗಾರಿಕಾ ಸಚಿವನಾಗಿ ಮಾಡಿದಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆ ನೀಡಿದ್ದರು. ಮೀನುಗಾರರ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಬದ್ಧ ಎಂದರು.ಕಳೆದ ಬಜೆಟ್‌ನಲ್ಲಿ ಉಡುಪಿ ಜಿಲ್ಲೆಗೆ ರೂ.90.34 ಕೋಟಿ ಅನುದಾನ ನೀಡಲಾಗಿದೆ. ದ.ಕಕ್ಕೆ ರೂ.59.29 ಲಕ್ಷ ರೂಪಾಯಿ ಅನುದಾನ ನೀಡಲಾಗಿದೆ. ಈ ವರ್ಷದ ಬಜೆಟ್‌ನಲ್ಲಿ ಕೂಡ ಈ ಭಾಗಗಳಿಗೆ ಹೆಚ್ಚಿನ ಅನುದಾನ ನಿರೀಕ್ಷೆ ಮಾಡಲಾಗಿದೆ ಎಂದರು.ರಾಜ್ಯ ಸರ್ಕಾರ ಮೀನುಗಾರಿಕೆಗೆ ಹೆಚ್ಚಿನ ನೆರವು ನೀಡುತ್ತಿದೆ. ಅವರಿಗೆ ನಿರಂತರ ಪ್ರೋತ್ಸಾಹ ನೀಡುತ್ತ ಬಂದಿದೆ. ಮತ್ಸ್ಯಾಶ್ರಯ ಯೋಜನೆಯಡಿ ಸುಮಾರು ರೂ.2 ಕೋಟಿ ವಿತರಿಸಲಾಗಿದೆ. ಒಂದು ಲಕ್ಷ ಲೀಟರ್ ಡೀಸೆಲ್ ಸಬ್ಸಿಡಿ ನೀಡಲಾಗುತ್ತಿದೆ.   ಮೀನುಗಾರರಿಗೆ ಹೆಚ್ಚಿನ ಉತ್ತೇಜನ ನೀಡಲಾಗುತ್ತಿದೆ ಎಂದರು.ಸುಮಾರು 2 ಕೋಟಿ ರೂಪಾಯಿ ಸಹಾಯಧನದಲ್ಲಿ ಖರೀದಿಸಿರುವ ಮೀನುಗಾರರರ ಸುರಕ್ಷತಾ ಉಪಕರಣಗಳನ್ನು ಫಲಾನುಭವಿಗಳಿಗೆ ಸಚಿವರು ವಿತರಿಸಿದರು. ಸಂಸ್ಥೆಯ ಡೀಸೆಲ್ ಖರೀದಿದಾರರಿಗೆ ಉಚಿತ ಆಯಿಲ್ ವಿತರಿಸಿ ಸಂಸದ ಡಿ.ವಿ.ಸದಾನಂದ ಗೌಡ ಮಾತನಾಡಿ, ಯಾವುದೇ ಸಂಘಟನೆಗಳು ಬದ್ಧತೆಯಿಂದ ಕೆಲಸ ಮಾಡಿದರೆ ಯಾವ ಯೋಜನೆಯನ್ನಾದರೂ ಅನುಷ್ಠಾನಗೊಳಿಸಿಕೊಳ್ಳಬಹುದು ಎಂದರು.ಸದ್ಯಕ್ಕೆ ಕರಾವಳಿ ಭಾಗದಲ್ಲಿ ಕರಾವಳಿ ನಿಯಂತ್ರಣ ವಲಯ (ಸಿಆರ್‌ಝೆಡ್) ಸಾಕಷ್ಟು ತೊಂದರೆ ಉಂಟು ಮಾಡುತ್ತಿದೆ. ನೆರೆಯ ಕೇರಳ ಹಾಗೂ ಗೋವಾಗಳಿಗೆ ಇಲ್ಲದ ನಿಯಮಗಳನ್ನು ನಮ್ಮ ರಾಜ್ಯದ ಕರಾವಳಿ ಭಾಗಕ್ಕೆ ಅನ್ವಯ ಮಾಡಲಾಗಿದೆ. ಆ ಮೂಲಕ ಕೇಂದ್ರ ಸರ್ಕಾರ ಮೀನುಗಾರರಿಗೆ ತೊಂದರೆಯುಂಟು ಮಾಡುತ್ತಿದೆ ಎಂದು ದೂರಿದರು.ಈಗಾಗಲೇ ಕೇಂದ್ರ ಪರಿಸರ ಖಾತೆ ಸಚಿವರೊಂದಿಗೆ ಮಾತುಕತೆ ನಡೆಸಲಾಗಿದ್ದು 100 ಮೀಟರ್‌ಗೆ ಮಾತ್ರವೇ ಸಿಆರ್‌ಝೆಡ್ ವಲಯ ಅನ್ವಯವಾಗುವಂತೆ ಮಾಡುವ ಮೂಲಕ ಮೀನುಗಾರರ ಹಿತ ಕಾಯಬೇಕೆಂದು ಒತ್ತಡ ತರಲಾಗುತ್ತಿದೆ ಎಂದು ಹೇಳಿದರು.ಸಂಸ್ಥೆಯ ಗಣಕೀಕೃತ ಕಚೇರಿಯನ್ನು ಶಾಸಕ ಲಕ್ಷ್ಮಿನಾರಾಯಣ ಉದ್ಘಾಟಿಸಿದರು. ಮತ್ಸ್ಯ ಮಹಿಳಾ ಸ್ವಾವಲಂಬನಾ ಯೋಜನೆಯ ಚೆಕ್ ಅನ್ನು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ವಿತರಿಸಿದರು. ಸಂಸ್ಥೆಯ ನೂತನ ನವೀಕೃತ ಕಚೇರಿಯನ್ನು ಸೋಮಶೇಖರ್ ಭಟ್ ಉದ್ಘಾಟಿಸಿದರು. ಸಂಸ್ಥೆಯ ನೂತನ 70 ಕೆ.ಎಲ್.ಡೀಸಿಲ್ ದಾಸ್ತಾನು ಟ್ಯಾಂಕ್ ಅನ್ನು ಮಂಗಳೂರು ಐಓಸಿ ಹಿರಿಯ ವಿಭಾಗೀಯ ವ್ಯವಸ್ಥಾಪಕ ಪಾಂಡುರಂಗ ರಾವ್ ಉದ್ಘಾಟಿಸಿದರು. ಶಾಸಕ ರಘುಪತಿ ಭಟ್ ಧನಸಹಾಯ ವಿತರಿಸಿದರು. ಹೊಸ ಟ್ಯಾಂಕರ್ ಅನ್ನು ಶಾಸಕ ಲಾಲಾಜಿ ಮೆಂಡನ್ ಉದ್ಘಾಟಿಸಿದರು.  ಒಕ್ಕೂಟದ ಅಧ್ಯಕ್ಷ ಯಶಪಾಲ್ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಅವರು ಒಕ್ಕೂಟದ ಹಲವು ಬೇಡಿಕೆಗಳ ಮನವಿಯೊಂದನ್ನು ಸಚಿವರಿಗೆ ಸಲ್ಲಿಸಿದರು.ಜಿ.ಪಂ. ಅಧ್ಯಕ್ಷ ಕಟಪಾಡಿ ಶಂಕರ ಪೂಜಾರಿ, ಮೀನುಗಾರಿಕಾ ಅಭಿವೃದ್ಧಿ ನಿಗಮದ ಜಂಟಿ ನಿರ್ದೇಶಕ ವಿ.ಕೆ.ಶೆಟ್ಟಿ, ವಿಜಯ ಕುಂದರ್, ಕಿರಣ್ ಕುಮಾರ್, ಸರಳಾ ಕಾಂಚನ್, ಹಿರಿಯಣ್ಣ ಟಿ.ಕಿದಿಯೂರು. ಕಿಶನ್ ಹೆಗ್ಡೆ, ಬೇಬಿ ಎಸ್.ಸಾಲ್ಯಾನ್, ಅಪ್ಪಿ ಸುವರ್ಣ, ರಾಮ ಕಾಂಚನ್ ಆಡಳಿತ ನಿರ್ದೇಶಕ ಗಣಪತಿ ಭಟ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry