ಕಡಲ್ಕೊರೆತ ಸಮಸ್ಯೆಗೆ ಸಿಕ್ಕೀತೆ ಮುಕ್ತಿ?

7

ಕಡಲ್ಕೊರೆತ ಸಮಸ್ಯೆಗೆ ಸಿಕ್ಕೀತೆ ಮುಕ್ತಿ?

Published:
Updated:

ಉಡುಪಿ: ಜಿಲ್ಲೆಯಲ್ಲಿ ಬಹುತೇಕವಾಗಿ ಕಡಲ್ಕೊರೆತ ಸಾಮಾನ್ಯ ಎನ್ನುವಂತಾಗಿದೆ. ಇತ್ತೀಚಿನ ಮಳೆಗೆ ಈ ಭಾಗದಲ್ಲಿ ಸಮುದ್ರ ಕೊರೆತಕ್ಕೆ ಕೋಟ್ಯಂತರ ರೂಪಾಯಿಗಳಷ್ಟು ನಷ್ಟವುಂಟಾಗಿದೆ. ವರ್ಷಂಪ್ರತಿ ಕಡಲ್ಕೊರೆತದ ಸಮಸ್ಯೆ ಮಳೆಗಾಲದ ದೊಡ್ಡ ತಲೆನೋವಾಗಿ ಪರಿಣಮಿಸುತ್ತಿದೆ.ಆದರೆ ಗುರುವಾರ ಮುಖ್ಯಮಂತ್ರಿಗಳು ಮಂಡಿಸಿದ ಬಾರಿಯ ಬಜೆಟ್‌ನಲ್ಲಿ ಕಡಲ್ಕೊರೆತ ತಡೆಗೆ ರೂ.350 ಕೋಟಿ ಯೋಜನೆಯೊಂದನ್ನು ಪ್ರಕಟಿಸಿದ್ದಾರೆ. ಆ ಮೂಲಕ ಕಡಲ್ಕೊರೆತಕ್ಕೆ ಏನಾದರೂ  ಮುಕ್ತಿ ಸಿಕ್ಕೀತೆ ಎಂದು ಕಾಯುವಂತಾ–ಗಿದೆ.ಪ್ರತಿ ವರ್ಷ ಮಳೆಗಾಲದಲ್ಲಿ ಈ ಭಾಗದಲ್ಲಿ ಭಾರಿ ಕಡಲ್ಕೊರೆತ ಕಾಣಿಸಿಕೊಳ್ಳುತ್ತದೆ. ಕಳೆದ  ಮಳೆಗಾಲದಲ್ಲಿ ಮಲ್ಪೆ-ಪಡುಕೆರೆ ಭಾಗದಲ್ಲಿ ಇದ್ದ ಏಕೈಕ ಮೀನುಗಾರಿಕಾ ರಸ್ತೆ ಸಮುದ್ರಕೊರತಕ್ಕೆ ಸಿಕ್ಕಿ ಸಂಪರ್ಕವೇ ಕಡಿದು ಹೋಗಿತ್ತು. ಕಡಲ್ಕೊರೆತ ಕಂಡು ಬಂದಾಗ ಲಾರಿಗಟ್ಟಲೆ ದೊಡ್ಡದೊಡ್ಡ ಕಲ್ಲುಗಳನ್ನು ತಂದು ಸುರಿಯಲಾಗುತ್ತದೆ. ಬಳಿಕ ಅದನ್ನು ಜನರು ಮರೆಯುತ್ತಾರೆ, ಜನಪ್ರತಿನಿಧಿಗಳು ಮರೆಯುತ್ತಾರೆ. ಇನ್ನೊಂದು ಮಳೆಗಾಲ ಬಂದಾಗಲೇ ಈ ಬಗ್ಗೆ ಗಮನ ಹರಿಸಲಾಗುತ್ತದೆ.ಕರಾವಳಿಯಲ್ಲಿ ಸಮುದ್ರ ಕೊರೆತ ಬಹುದೊಡ್ಡ ಸಮಸ್ಯೆಯಾಗಿ ಕಾಡುತ್ತಿದ್ದು ಕಡಲು ಕೊರೆತಕ್ಕೆ ಸುಮಾರು 912 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದ್ದು 2018ಕ್ಕೆ ಈ ಯೋಜನೆ ಪೂರ್ಣಗೊಳ್ಳಲಿದೆ ಎಂದು ಬಂದರು ಮತ್ತು ಮೀನುಗಾರಿಕಾ ಸಚಿವ ಕೃಷ್ಣ ಜೆ. ಪಾಲೇಮಾರ್ ಇತ್ತೀಚೆಗೆ ಮಲ್ಪೆಗೆ ಬಂದಾಗ ಹೇಳಿದ್ದರು.ಕರಾವಳಿಗೆ ಶಾಶ್ವತವಾದ ಯೋಜನೆಯನ್ನು ರೂಪಿಸುವ ನಿಟ್ಟಿನಲ್ಲಿ ಎಡಿಬಿಯಿಂದ 912 ಕೋಟಿ ಸಾಲ ಪಡೆಯಲಾಗಿದ್ದು ಈಗಾಗಲೇ ಕರಾವಳಿಯುದ್ದಕ್ಕೂ 223 ಕೋಟಿ ರೂಪಾಯಿಗಳ ಮೊದಲ ಹಂತದ ಕೆಲಸ ಪ್ರಾರಂಭವಾಗಿದೆ. ಈ ಯೋಜನೆಯ ಎರಡು ಮತ್ತು ಮೂರನೇ ಹಂತ 2018ರಲ್ಲಿ ಪೂರ್ಣಗೊಳ್ಳಲಿದೆ. ಆ ಮೂಲಕ ಕರಾವಳಿ ಭಾಗದ ಬಹುದೊಡ್ಡ ಸಮಸ್ಯೆಗೆ ‘ತಡೆಗೋಡೆ’ ನಿರ್ಮಾಣವಾಗಲಿದೆ ಎನ್ನುವ ಭರವಸೆ ಅವರಿಂದ ಬಂದಿತ್ತು.ಈಗ ಬಜೆಟ್ ಮೂಲಕ ಮತ್ತೊಮ್ಮೆ ಕಡಲ್ಕೊರೆತಕ್ಕೆ ಇತಿಶ್ರೀ ಹಾಡುವ ನಿಟ್ಟಿನಲ್ಲಿ ಸರ್ಕಾರ ರೂ.350 ಕೋಟಿ ಅನುದಾನ ಮೀಸಲಿಟ್ಟಿದೆ. ಆದರೆ ಇದು ಕೇವಲ ಉಡುಪಿ ಜಿಲ್ಲೆಗಾಗಿ ಮಾತ್ರವೇ ಮೀಸಲಿಟ್ಟ ಅನುದಾನವೇನೂ ಅಲ್ಲ. ಸಮಗ್ರವಾಗಿ ಕರಾವಳಿ ಭಾಗಕ್ಕೆ ಮೀಸಲಿಡಲಾಗಿದೆ. ಆದಾಗ್ಯೂ ಒಂದಷ್ಟು ಪ್ರಮಾಣದಲ್ಲಿ ಈ ಅನುದಾನ ಈ ಭಾಗಕ್ಕೂ ಲಭ್ಯವಾಗುವ ಮೂಲಕ ಕಡಲ್ಕೊರೆತದ ಸಮಸ್ಯೆಗೆ ಒಂದಿಷ್ಟು ಪರಿಹಾರ ದೊರಕೀತು ಎನ್ನುವ ಆಶಾಭಾವ ಈ ಭಾಗದ ಜನರದ್ದು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry