ಕಡಲ ತೀರದ ಭಾರ್ಗವ ಅಲ್ಲ, ಕರಾವಳಿ ತೀರದ ಕಣ್ವ

7

ಕಡಲ ತೀರದ ಭಾರ್ಗವ ಅಲ್ಲ, ಕರಾವಳಿ ತೀರದ ಕಣ್ವ

Published:
Updated:

ಪುತ್ತೂರು: `ಮಾನವೀಯ ಕಾಳಜಿಯೊಂದಿಗೆ ಸಾಮಾಜಿಕ ಬದಲಾವಣೆ ಡಾ. ಶಿವರಾಮ ಕಾರಂತರ  ಚಿಂತನೆಯಾಗಿತ್ತು. ಪ್ರತಿಯೊಂದು ಕ್ಷೇತ್ರದಲ್ಲೂ ಮಾನವೀಯ ಮೌಲ್ಯಗಳಿಗೆ ಬೆಲೆ ನೀಡುವ ಮೂಲಕ  ಮನುಷ್ಯ ಭಾವಗಳನ್ನು  ಕಲೆಯ ಮೂಲಕ ಬಿಂಬಿಸಿದ ಕಾರಂತರ ಪ್ರಯೋಗಗಳು ಸದಾ ನೆನಪಿಸಿಕೊಳ್ಳುವಂತಿವೆ~ ಎಂದು ರಾಜ್ಯ ಯಕ್ಷಗಾನ ಬಯಲಾಟ ಅಕಾಡೆಮಿಯ ಅಧ್ಯಕ್ಷ ಎಂ.ಎಲ್. ಸಾಮಗ ಹೇಳಿದರು.ಪುತ್ತೂರಿನ ಬಾಲವನದಲ್ಲಿ ಬುಧವಾರ ನಡೆದ ಡಾ. ಶಿವರಾಮ ಕಾರಂತರ ಜನ್ಮ ದಿನಾಚರಣೆ-2012 `ಬಾಲವನ ಹಬ್ಬ~ ರಾಜ್ಯ ಮಟ್ಟದ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಯಕ್ಷಗಾನಕ್ಕೆ ಹೊಸ ಚಿಂತನೆ ನೀಡಿದ ಡಾ. ಕಾರಂತರು ಕರಾವಳಿಯ ಈ ಕಲೆಗೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಾನ್ಯತೆ ಸಿಗುವಲ್ಲಿ ಕಾರಣಕರ್ತರಾಗಿದ್ದಾರೆ. ಅವರನ್ನು ನಾಸ್ತಿಕ ಎಂದು ಬಿಂಬಿಸಲಾಗುತ್ತಿದ್ದರೂ ಅವರು ವಾಸ್ತವವಾಗಿ ನಾಸ್ತಿಕರಲ್ಲ. ಡಾ.ಕಾರಂತರ ಕುರಿತು ಅಧ್ಯಯನ ನಡೆಸುವವರು ಅವರ ಕ್ಷೇತ್ರದ ಎಲ್ಲಾ ಮುಖಗಳನ್ನು ಲೆಕ್ಕ ಹಾಕಲು ಸಾಧ್ಯವಿಲ್ಲ ಎಂದು ವಿಶ್ಲೇಷಿಸಿದರು.`ಕಾರಂತರ ಬಗ್ಗೆ ನಿರ್ಲಕ್ಷ್ಯ~: ಮಂಗಳೂರು ವಿಶ್ವವಿದ್ಯಾಲಯದ ಡಾ.ಶಿವರಾಮ ಕಾರಂತ ಅಧ್ಯಯನ ಪೀಠದ ನಿರ್ದೇಶಕಿ ಡಾ. ಸಬೀಹಾ ಭೂಮಿ ಗೌಡ ಅಧ್ಯಕ್ಷತೆ ವಹಿಸಿದ್ದರು.ಮಂಗಳೂರು ವಿಶ್ವವಿದ್ಯಾಲಯದಲ್ಲಿ ಡಾ. ಕಾರಂತರ ಅಧ್ಯಯನ ಪೀಠವಿದ್ದರೂ ಅವರ ಚಿಂತನೆಗೆ ಪೂರಕವಾದ ಕೆಲಸಗಳು ನಡೆಯುತ್ತಿಲ್ಲ. ಕಾರಂತರ ಬಗ್ಗೆ ನಿರ್ಲಕ್ಷ್ಯ ಧೋರಣೆ ಕಂಡುಬರುತ್ತಿದೆ. ಈ ಪೀಠಕ್ಕೆ ಸರ್ಕಾರದ ಅನುದಾನ ಸಮರ್ಪಕವಾಗಿ ಸಿಗುತ್ತಿಲ್ಲ. ಇದರಿಂದಾಗಿ ಶೈಕ್ಷಣಿಕವಾಗಿ ಕಾರಂತರ ಬಗ್ಗೆ ಕಾರ್ಯಕ್ರಮಗಳು ನಡೆಯುತ್ತಿಲ್ಲ ಎಂದರು.ಕಾರಂತರ ದೃಷ್ಟಿಕೋನ ಮತ್ತು ಚಿಂತನೆಗಳನ್ನು ಪಠ್ಯಗಳಲ್ಲಿ ಸೇರ್ಪಡೆಗೊಳಿಸುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.`ಕರಾವಳಿ ತೀರದ ಕಣ~್ವ:
`ಡಾ. ಶಿವರಾಮ ಕಾರಂತರ ಕೃತಿಗಳಲ್ಲಿ ಸಾಮಾಜಿಕ ತುಡಿತ~ ವಿಚಾರದ ಕುರಿತು ಪ್ರಬಂಧ ಮಂಡಿಸಿದ ಮೈಸೂರಿನ ಬಿಳಿಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ. ಗಣೇಶ್ ಚಿಕ್ಕಮಗಳೂರು ಅವರು ಕರ್ನಾಟಕವನ್ನು ವೈಚಾರಿಕ ಕ್ಷೇತ್ರವಾಗಿ ಕಟ್ಟಿದ ಡಾ. ಶಿವರಾಮ ಕಾರಂತರನ್ನು ಕಡಲ ತೀರದ ಭಾರ್ಗವ ಎಂಬ ಹೆಸರಿನಲ್ಲಿ ಪರಶುರಾಮನಿಗೆ ಹೋಲಿಸುವುದು ಸರಿಯಲ್ಲ.ಅದರ ಬದಲಾಗಿ ಅವರನ್ನು `ಕರಾವಳಿ ತೀರದ ಕಣ್ವ~ ಎಂದು ಕರೆಯುವುದು ಸೂಕ್ತ ಎಂದರು. ಡಾ. ಶಿವರಾಮ ಕಾರಂತರ ಸಾಧನೆಯ ಕ್ಷೇತ್ರವಾದ ಕರಾವಳಿಯಲ್ಲಿ ಕಾರಂತರ ಚಿಂತನೆಗಳು ಕಣ್ಮರೆಯಾಗುತ್ತಿವೆ ಎಂದು ವಿಷಾದಿಸಿದರು.`ಡಾ. ಶಿವರಾಮ ಕಾರಂತರ ಸಾಂಸ್ಕೃತಿಕ ಒಲವು~ ವಿಷಯದ ಕುರಿತು ಕುವೆಂಪು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಎಂ.ಡಿ.ಸುದರ್ಶನ ಪ್ರಬಂಧ ಮಂಡಿಸಿದರು. ಪುತ್ತೂರು ತಾಲ್ಲೂಕು ಕ.ಸಾ.ಪ. ಅಧ್ಯಕ್ಷ ಡಾ. ವರದರಾಜ ಚಂದ್ರಗಿರಿ ಅತಿಥಿಯಾಗಿದ್ದರು.ಬಾಲವನ ಸಮಿತಿಯ ಅಧ್ಯಕ್ಷರಾದ ಪುತ್ತೂರು ಉಪವಿಭಾಗಾಧಿಕಾರಿ ಎಚ್. ಪ್ರಸನ್ನ, ತಹಶೀಲ್ದಾರ್ ಡಾ. ಕುಳ್ಳೇ ಗೌಡ, ಬಾಲವನ ಈಜುಕೊಳ ಉಪ ಸಮಿತಿಯ ಅಧ್ಯಕ್ಷ ಕೆ.ಸೀತಾರಾಮ ರೈ ಸವಣೂರು, ಸಾಂಸ್ಕೃತಿಕ ಉಪ ಸಮಿತಿ ಅಧ್ಯಕ್ಷ ವಿಜಯ ಹಾರ್ವಿನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಳಾ ನಾಯ್ಕ, ಉದ್ಯಮಿ ಎಸ್.ಕೆ. ಆನಂದ್, ಉಪನ್ಯಾಸಕರಾದ ಪ್ರೊ.ಬಿ.ಜೆ.ಸುವರ್ಣ, ಡಾ. ರಾಜೇಶ್ ಬೆಜ್ಜಂಗಳ, ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜ ಮೊದಲಾದವರು ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry