ಕಡಿಮೆ ಅವಧಿಯ ಬೆಳೆ ಮಾಹಿತಿ ನೀಡಿ

7
ತಾಲ್ಲೂಕು ಪಂಚಾಯ್ತಿ ಕೆಡಿಪಿ ಸಭೆಯಲ್ಲಿ ಅಧ್ಯಕ್ಷ ದೊಗ್ಗಳ್ಳಿ ರೇವಣಸಿದ್ದಪ್ಪ ಸೂಚನೆ

ಕಡಿಮೆ ಅವಧಿಯ ಬೆಳೆ ಮಾಹಿತಿ ನೀಡಿ

Published:
Updated:

ದಾವಣಗೆರೆ: ಭದ್ರಾ ನಾಲೆಯಲ್ಲಿ ನೀರು ಹರಿಸುವ ಬಗ್ಗೆ ಅನಿಶ್ಚಿತತೆ ಮುಂದುವರಿದಿದೆ. ನೀರು ದೊರೆತರೂ ಇಡೀ ಹಂಗಾಮಿಗೆ ಲಭ್ಯವಾಗುವ ಸೂಚನೆಗಳಿಲ್ಲ. ಹೀಗಾಗಿ, ಕಡಿಮೆ ಅವಧಿಯಲ್ಲಿಯೇ ಇಳುವರಿ ಬರುವ ಬೆಳೆ ಬೆಳೆಯುವಂತೆ ರೈತರಿಗೆ ಸಲಹೆ ನೀಡಬೇಕು ಎಂದು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ದೊಗ್ಗಳ್ಳಿ ರೇವಣಸಿದ್ದಪ್ಪ ಸೂಚಿಸಿದರು.ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಬುಧವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಬೇಗ ಕೈಗೆ ಬರುವಂತಹ ಬತ್ತದ ಬಿತ್ತನೆ ಬೀಜ ಕೊಡಬೇಕು. ಈ ಬಗ್ಗೆ ಪ್ರಚಾರ ಕಾರ್ಯ ಹಮ್ಮಿಕೊಳ್ಳಬೇಕು. ಕೊನೆ ಹಂತದಲ್ಲಿ ನೀರು ಅಲಭ್ಯವಾದರೆ, ಮೂರು ತಿಂಗಳು ಕಷ್ಟಪಟ್ಟಿದ್ದೆಲ್ಲ ವ್ಯರ್ಥವಾದಂತಾಗುತ್ತದೆ. ರೈತರು ವಿಷ ಸೇವಿಸಬೇಕಾಗುತ್ತದೆ ಎಂದು ಹೇಳಿದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಬಿ. ರಾಜಶೇಖರ ಮಾತನಾಡಿ, ಹಳ್ಳಿಹಳ್ಳಿಗಳಲ್ಲಿ ಅನುವುಗಾರರು, ಕೃಷಿ ಸಿಬ್ಬಂದಿ ಮೂಲಕ ಪ್ರಚಾರಾಂದೋಲನ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.ತಾಲ್ಲೂಕಿನಲ್ಲಿಈ ವರ್ಷ 649 ಮಿ.ಮೀ. ಮಳೆಯಾಗಬೇಕಿತ್ತು. ಆದರೆ, 482 ಮಿ.ಮೀ. ಮಳೆ ಬಂದಿದೆ. ಆನಗೋಡು ಹೋಬಳಿಯಲ್ಲಿ ಬರದ ಛಾಯೆ ಇದೆ. ಮಾಯಕೊಂಡ ಹೋಬಳಿಯಲ್ಲಿ ಶೇ 50ರಷ್ಟು ಇಳುವರಿ ಕಡಿಮೆಯಾಗುವ ಸಾಧ್ಯತೆ ಇದೆ. ಬತ್ತ ಬಿತ್ತನೆಬೀಜ ವಿತರಿಸಲಾಗಿದೆ. `ಬಿಪಿಟಿ 5204' ತಳಿಯ 1972 ಕ್ವಿಂಟಲ್ ಬಿತ್ತನೆಬೀಜವನ್ನು ವಿತರಣೆ ಮಾಡಲಾಗಿದೆ. `ಮಧು',  `ಮಂಗಳಾ', `ಪುಷ್ಪಾ', `ಪ್ರಕಾಶ್' ಎಂಬ ಕಡಿಮೆ ಅವಧಿಯ ತಳಿಯ ಬಿತ್ತನೆಬೀಜಗಳನ್ನು ಹಾಕಲು ರೈತರು ಒಲವು ತೋರುತ್ತಿಲ್ಲ ಎಂದು ತಿಳಿಸಿದರು.ಯೂರಿಯಾ ಜಾಸ್ತಿ ಬಳಸಬೇಡಿ

ರೈತರು ಯೂರಿಯಾ ಜಾಸ್ತಿ ಬಳಸಬಾರದು. ಜಿಪ್ಸಂ ಮೊದಲಾದ ಪೋಷಕಾಂಶಗಳನ್ನು ಜಮೀನಿಗೆ ಕೊಡಬೇಕು. ಈ ಸಂಬಂಧ ವಾಹನದಲ್ಲಿ ಪ್ರಚಾರ ಕಾರ್ಯ ನಡೆಸಲಾಗುವುದು ಎಂದು ಸಲಹೆ ನೀಡಿದರು.ತೋಟಗಾರಿಕೆ ಇಲಾಖೆ ಅಧಿಕಾರಿ ಮಾತನಾಡಿ, ರಾಷ್ಟ್ರೀಯ ತೋಟಗಾರಿಕೆ ಯೋಜನೆಯ ಅಡಿ 25 ಎಕರೆ ದಾಳಿಂಬೆಗೆ ಸಹಾಯಧನ ನೀಡಲಾಗಿದೆ. ಮತ್ತೆ 25 ಎಕರೆಗೆ ವಿಸ್ತರಿಸಲಾಗುವುದು. 40 ಎಕರೆ ಅಂಗಾಶ ಕೃಷಿ ಬಾಳೆಗೆ ನೆರವು ನೀಡಲಾಗಿದ್ದು, ಹೆಚ್ಚುವರಿಯಾಗಿ 30 ಎಕರೆಗೆ ವಿಸ್ತರಿಸಲಾಗುವುದು. ಪ್ರಸ್ತುತ 50 ಎಕರೆ ಕಂದುಬಾಳೆಗೆ ಸಹಾಯಧನ ಕೊಡಲಾಗಿದ್ದು, 200 ಎಕರೆಗೆ ವಿಸ್ತರಿಸಲಾಗುವುದು ಎಂದು ಮಾಹಿತಿ ನೀಡಿದರು.ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಅನುಷ್ಠಾನದಲ್ಲಿ ದಾವಣಗೆರೆ ಮುಂಚೂಣಿಯಲ್ಲಿದೆ. ತಾಲ್ಲೂಕಿನ ಗುಚ್ಛ ಗ್ರಾಮಗಳಲ್ಲಿ ಬಾಳೆ ಹಾಕಲಾಗಿದೆ. ಹಿಂದೆ ಎರಡೂವರೆಗೆ ಎಕರೆಗೆ 2,500 ಗಿಡಗಳನ್ನು ಹಾಕಲಾಗುತ್ತಿತ್ತು. ಈಗ, ಆದಾಯ ಹೆಚ್ಚು ಬರಲೆಂದು 3,300 ಗಿಡಗಳನ್ನು ಹಾಕಲಾಗಿದೆ (ಹಿಂದೆ 9 ಅಡಿ ಅಂತರ, ಈಗ 6/4 ಅಡಿ). ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಲಾಗಿದೆ. ಜೇನುಕೃಷಿಯನ್ನು ತೋಟಗಾರಿಕೆ ಇಲಾಖೆ ವ್ಯಾಪ್ತಿಗೆ ತರಲಾಗಿದೆ. ರೈತರನ್ನು ಪ್ರೋತ್ಸಾಹಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಅಧ್ಯಕ್ಷ ದೊಗ್ಗಳ್ಳಿ ರೇವಣಸಿದ್ದಪ್ಪ, ಯೋಜನೆಯ ಕುರಿತು ಸದಸ್ಯರೆಲ್ಲರಿಗೂ ಮಾಹಿತಿ ನೀಡುವಂತೆ ಸೂಚಿಸಿದರು.ಗುಣಮಟ್ಟದ ಬೈಸಿಕಲ್ ಕೊಡಿ

ಕಾರ್ಯನಿರ್ವಾಹಕ ಅಧಿಕಾರಿ ಎಲ್.ಎಸ್. ಪ್ರಭುದೇವ ಮಾತನಾಡಿ, ಸರ್ವ ಶಿಕ್ಷಣ ಅಭಿಯಾನದ ಅಡಿಯಲ್ಲಿ 22 ಶಾಲಾ ಕಾಂಪೌಂಡ್ ಮಂಜೂರಾಗಿದೆ. ದೊರೆತ ಹಣ ಕಡಿಮೆ ಇರುವುದರಿಂದ, ಕೊರತೆಯಾಗುವ ಹಣವನ್ನು ಉದ್ಯೋಗ ಖಾತ್ರಿಯಡಿ ಬಳಸುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.ದೊಡ್ಡಬಾತಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ. ಹೀಗಾಗಿ, ಹೆಚ್ಚುವರಿಯಾಗಿ ಶೌಚಾಲಯ ನಿರ್ಮಿಸಬೇಕು. ಕೆಲ ಶಾಲೆಗಳಲ್ಲಿ, ಮಕ್ಕಳು ನೆಲದ ಮೇಲೆ ಕುಳಿತುಕೊಳ್ಳುತ್ತಿದ್ದಾರೆ. ಇದು ತಪ್ಪಬೇಕು. ಅಗತ್ಯ ಡೆಸ್ಕ್‌ಗಳನ್ನು ಕಲ್ಪಿಸಬೇಕು ಎಂದು ಅಧ್ಯಕ್ಷ ದೊಗ್ಗಳ್ಳಿ ರೇವಣಸಿದ್ದಪ್ಪ ಶಿಕ್ಷಣ ಇಲಾಖೆ ಅಧಿಕಾರಿಗೆ ಸೂಚಿಸಿದರು.ಉಪಾಧ್ಯಕ್ಷೆ ನಿರ್ಮಲಮ್ಮ ಅಜ್ಜಪ್ಪ ಮಾತನಾಡಿ, ಶಾಲೆಗಳಿಗೆ ಬೈಸಿಕಲ್‌ಗಳನ್ನು ವಿತರಿಸುವಾಗ ಬಿಡಿಭಾಗಗಳು ಇವೆಯೇ? ಸರಿಯಾಗಿವೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಹೊರೆಯಾಗುವಂತೆ ಮಾಡಬಾರದು ಎಂದು ಸೂಚಿಸಿದರು.ಹಳ್ಳಿಗಳ ಸರ್ಕಾರಿ ಶಾಲೆಯಲ್ಲಿ ಒಳ್ಳೆಯ ಶಿಕ್ಷಕರಿಲ್ಲ ಎಂದು, ಪೋಷಕರು ಮಕ್ಕಳನ್ನು ಕಾನ್ವೆಂಟ್‌ಗಳಿಗೆ ಕಳುಹಿಸುತ್ತಿದ್ದಾರೆ. ಇದು ಹೀಗೆಯೇ ಮುಂದುವರಿದರೆ ಇನ್ನೆರಡು ವರ್ಷಗಳಲ್ಲಿ ಸರ್ಕಾರಿ ಶಾಲೆಗಳು ಖಾಲಿಯಾಗಲಿವೆ. ಈ ಬಗ್ಗೆ ಗಮನಹರಿಸಬೇಕು ಎಂದು ತಿಳಿಸಿದರು.ಹಕ್ಕಿಜ್ವರ ಇಲ್ಲ

ಆರೋಗ್ಯ ಇಲಾಖೆಯ ಸಮರ್ಪಕ ಮಾಹಿತಿ ಒದಗಿಸಲು ಅಧಿಕಾರಿ ವಿಫಲವಾದರು. ಇದಕ್ಕೆ ಕುಪಿತರಾದ ಅಧ್ಯಕ್ಷರು, ಮಾಹಿತಿ ಇಲ್ಲದೇ ಏಕೆ ಬಂದಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು. ತಾಲ್ಲೂಕು ಆರೋಗ್ಯಾಧಿಕಾರಿ ಮೈಸೂರಿಗೆ `ಸಕಾಲ' ತರಬೇತಿಗೆ ಹೋಗಿದ್ದಾರೆ. ಹೀಗಾಗಿ, ಪ್ರತಿನಿಧಿಯಾಗಿ ಬಂದಿದ್ದೇನೆ ಎಂದು ತಿಳಿಸಿದರು. ನಂತರ, ಗೈರು ಹಾಜರಾದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡುವಂತೆ ನಿರ್ಣಯಿಸಲಾಯಿತು.

ಜಿಲ್ಲೆಯಲ್ಲಿ ಜಾನುವಾರು ಮೇವಿಗೆ ಕೊರತೆ ಇಲ್ಲ. ಹಕ್ಕಿಜ್ವರ ಇಲ್ಲವೇ ಇಲ್ಲ. ಮಾಂಸ ತಿನ್ನುವುದಕ್ಕೆ ಜನರು ಹಿಂಜರಿಯಬಾರದು ಎಂದು ತಿಳಿಸಿದರು.ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ ಅಡಿಯಲ್ಲಿ ಬಿತ್ತನೆಬೀಜ ವಿತರಣೆ ಮಾಡಲಾಗುವುದು ಎಂದು ಪಶು ವೈದ್ಯ ಇಲಾಖೆ ಅಧಿಕಾರಿ ಸಭೆಗೆ ತಿಳಿಸಿದರು. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಂ. ರುದ್ರಗೌಡ ಇದ್ದರು.ಹಣ ಬೇಡವೆಂದ ಎಚ್‌ಎಂ!

ಶಾಲೆಯಲ್ಲಿ ಸೌಲಭ್ಯ ಕಲ್ಪಿಸಲೆಂದು ನೀಡಿದ ರೂ. 1.40 ಲಕ್ಷ ಹಣವನ್ನು ದೊಡ್ಡಬಾತಿ ಶಾಲೆಯ ಮುಖ್ಯೋಪಾಧ್ಯಾಯರು ಹಿಂತಿರುಗಿಸಿದ ಪ್ರಸಂಗ ಸಭೆಯಲ್ಲಿ ಚರ್ಚೆಗೆ ಒಳಗಾಯಿತು. ಅಧ್ಯಕ್ಷ ರೇವಣಸಿದ್ದಪ್ಪ ಈ ವಿಷಯ ಪ್ರಸ್ತಾಪಿಸಿದರು. ಶಾಲೆಯಲ್ಲಿ ಸಮಸ್ಯೆ ಇದ್ದರೂ ಹಣ ವಾಪಸ್ ಮಾಡಿದ್ದು, ಸರಿಯಲ್ಲ ಎಂದರು.ಅವರ ಕೈಲಿ ಕೆಲಸ ಆಗದಿದ್ದರೆ, ಇನ್ನೊಬ್ಬರಿಂದ ಮಾಡಿಸಲಿ. ಹಣವನ್ನೇಕೆ ವಾಪಸ್ ಮಾಡಬೇಕು ಎಂದರು. ಶಿಕ್ಷಣ ಇಲಾಖೆ ಅಧಿಕಾರಿ ಮಾತನಾಡಿ, ಹಣ ಮತ್ತೆ ಕೊಟ್ಟಾಗಲೂ ಮುಖ್ಯ ಶಿಕ್ಷಕರು ಬೇಡ ಎಂದರು. ಖರ್ಚು ಮಾಡಬೇಕಾಗುತ್ತದೆ ಎಂಬ ಕಾರಣಕ್ಕೆ ಹೀಗೆ ನಡೆದುಕೊಂಡಿದ್ದಾರೆ ಎಂದು ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry