ಗುರುವಾರ , ನವೆಂಬರ್ 21, 2019
21 °C

ಕಡಿಮೆ ಕಾಳಜಿ `ಸುವರ್ಣ' ಬೆಳೆ

Published:
Updated:

ಇದರ ಹೆಸರು ಸುವರ್ಣಗಡ್ಡೆ. ಇದನ್ನು ಕಂದಗಡ್ಡೆ ಎಂದೂ ಕರೆಯುವರು. ಆನೆಯ ಕಾಲಿನಂತೆ ಕಾಣಿಸುವ ಇದಕ್ಕೆ ಇಂಗ್ಲಿಷ್ ಹೆಸರು `ಎಲಿಫೆಂಟ್ ಫೂಟ್ ಯಾಮ್'. ಆಫ್ರಿಕಾ ಹಾಗೂ ಭಾರತ ಇದರ ತವರು. ಆಯುರ್ವೇದದಲ್ಲಿ ಇದಕ್ಕೆ ಪ್ರಮುಖ ಸ್ಥಾನ. ಮಾರುಕಟ್ಟೆ ಬೆಲೆ ನೋಡಿ ಭೂಮಿಯಿಂದ ಹೊರಕ್ಕೆ ತೆಗೆಯಲು ಇದು ಸುಲಭ!ಮನೆಯಂಗಳದಲ್ಲಿ, ಹೊಲ-ತೋಟಗಳ ಬದುವಿನಲ್ಲಿ, ಅಂತರ್‌ಬೆಳೆಯಾಗಿ ಹೆಚ್ಚು ಶ್ರಮವಿಲ್ಲದೆ ಬೆಳೆಯಬಲ್ಲಂಥ ತರಕಾರಿ ಇದು. ದೊಡ್ಡಗಡ್ಡೆಯಿಂದ ಹೊರಟ ಸಣ್ಣ ಗಡ್ಡೆಗಳನ್ನು ತೆಗೆದಿಟ್ಟುಕೊಂಡು  ಮಳೆಗಾಲದಲ್ಲಿ ಭೂಮಿಯಲ್ಲಿ 2 ಅಡಿಗೊಂದರಂತೆ ಊರಿದರೆ ಗಡ್ಡೆ ಚಿಗುರೊಡೆದು ಗಿಡ 3 ರಿಂದ 4 ಅಡಿಯಷ್ಟು ಬೆಳೆಯುತ್ತದೆ. ಭೂಮಿಯಲ್ಲಿ ಉಳಿದ ಸಣ್ಣ-ಸಣ್ಣ ಗಡ್ಡೆಗಳು ಮರುವರ್ಷ ಮೇಲೇಳುತ್ತವೆ.ಅದೇ ಜಾಗದಲ್ಲಿ ಗಿಡಗಳಾಗಿ ದೊಡ್ಡ ಗಡ್ಡೆಗಳಾಗುತ್ತವೆ. ಎಲೆಗಳು ಹಸಿರಾಗಿದ್ದು ಕಾಂಡವು ತಿಳಿಹಸಿರು ಮತ್ತು ಬಿಳಿಯ ಮಚ್ಚೆಗಳಿಂದ ಕೂಡಿರುತ್ತದೆ. ಚಳಿಗಾಲ ಮುಗಿಯುವ ಹೊತ್ತಿಗೆ ಗಡ್ಡೆ ಚೆನ್ನಾಗಿ ಬೆಳೆದು, ಗಿಡ ಒಣಗಿ ಬೀಳುತ್ತದೆ. ನಂತರ ಯಾವಾಗ ಬೇಕಾದರೂ ಮಾರುಕಟ್ಟೆಯ ದರ ನೋಡಿಕೊಂಡು ಭೂಮಿಯಿಂದ ಹೊರ ತೆಗೆಯಬಹುದು. ಗಡ್ಡೆ ತೆಗೆಯದೆ ಹಾಗೇ ಬಿಟ್ಟರೆ ಮರುವರ್ಷ ಪುನಃ ಗಿಡವಾಗಿ ಹೂವಾಗುತ್ತದೆ. ಹೂವು ಕೆಟ್ಟವಾಸನೆಯಿಂದ ಕೂಡಿದ್ದು, ಉಪಯೋಗವಿಲ್ಲ. ಆದರೆ ಗಡ್ಡೆ ದೊಡ್ಡದಾಗಿರುತ್ತದೆ. ಗಡ್ಡೆ ಹೊರ ತೆಗೆದ ನಂತರವೂ 10-12 ದಿನ ತಾಜಾ ಆಗಿರುತ್ತದೆ. ಕಡಿಮೆ ಆರೈಕೆ

ಸುವರ್ಣಗಡ್ಡೆಗೆ ಹೆಚ್ಚಿಗೆ ಏನೂ ಆರೈಕೆ ಬೇಕಿಲ್ಲ. ನೀರು, ಕೊಟ್ಟಿಗೆ ಗೊಬ್ಬರ ಸಾಕು. ಮನೆಯಂಗಳದಲ್ಲಿರುವ ಕಸ, ಬೂದಿ ಗೊಬ್ಬರವನ್ನು ಬಳಸಿ ಸುಲಭವಾಗಿ ಬೆಳೆಯಬಹುದು. ಇತ್ತೀಚೆಗೆ ಮಾರುಕಟ್ಟೆಯಲ್ಲಿ ಇದಕ್ಕೆ ಬೇಡಿಕೆ ಹೆಚ್ಚುತ್ತಿದೆ. ಒಳ್ಳೆಯ ಬೆಲೆಯೂ ಸಿಗುತ್ತಿದೆ. ಚೆನ್ನಾಗಿ ಬಲಿತ ಗಡ್ಡೆಯು 6 ರಿಂದ 8 ಕೆ.ಜಿಯವರೆಗೂ ತೂಗುತ್ತದೆ. ಕೆ.ಜಿಗೆ 40 ರಿಂದ 50 ರೂಪಾಯಿಯವರೆಗೂ ಇದ್ದು, ಉತ್ತಮ ಆದಾಯ ತರುವ ತರಕಾರಿ ಇದಾಗಿದೆ.ಅತಿ ಹೆಚ್ಚು ಪೌಷ್ಟಿಕಾಂಶಗಳನ್ನು ಹೊಂದಿರುವ ಈ ಗಡ್ಡೆಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಸಿಯಾಗಿ ಹಾಗೇ ತಿಂದರೆ ನಾಲಿಗೆ, ಗಂಟಲು ತುರಿಕೆ ಬರುವುದರಿಂದ ಜನರಲ್ಲಿ ಸ್ವಲ್ಪ ಭಯವಿದೆ. ಆದರೆ ಸರಿಯಾಗಿ ಬೇಯಿಸಿ ಅಡುಗೆಯಲ್ಲಿ ಬಳಸಿದರೆ ತುರಿಕೆಯ ಭಯವಿಲ್ಲ. ಧೈರ್ಯವಾಗಿ ತಿನ್ನಬಹುದು. ಪಲ್ಯ, ಸಾಂಬಾರ್, ಮಜ್ಜಿಗೆ ಹುಳಿ, ಬೋಂಡ, ತವಾಫ್ರೈ, ಹಲ್ವ ಅಲ್ಲದೇ ಹಸಿಯದನ್ನು ಬಳಸಿ ಚಟ್ನಿ ತಯಾರಿಸಬಹುದು. ಸರಿಯಾದ ಪ್ರಮಾಣದಲ್ಲಿ ಉಪ್ಪು-ಖಾರ-ಹುಳಿ ಸೇರಿಸಿ ಭಯವಿಲ್ಲದೆ ತಿನ್ನಬಹುದು. ಇದು ಹಲವಾರು ಔಷಧೀಯ ಗುಣ ಹೊಂದಿದ್ದು, ಪುಷ್ಟಿದಾಯಕವಾಗಿದೆ.ಸುವರ್ಣಗಡ್ಡೆಯಲ್ಲಿ ಅಧಿಕವಾದ ನಾರಿನಂಶವಿದೆ. ಶರೀರದ ತೂಕವನ್ನು ಇಳಿಸಲು ಸಹಕಾರಿ. ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗದಂತೆ ತಡೆಯುತ್ತದೆ. ಮಲಬದ್ಧತೆ ನಿವಾರಣೆಗೆ, ಮೂಲವ್ಯಾಧಿ ಸಮಸ್ಯೆಗಳಿಗೆ ರಾಮಬಾಣ. ಈಸ್ಟ್ರೋಜೆನ್ ಮಟ್ಟವನ್ನು ಹೆಚ್ಚಿಸುವ ಗುಣ ಹೊಂದಿದೆ. ವಿಟಮಿನ್ `ಬಿ6' ಇರುವುದರಿಂದ ಮಹಿಳೆಯರಲ್ಲಿ ಹಾರ್ಮೋನುಗಳನ್ನು ಸಮತೋಲನದಲ್ಲಿರಿಸಿ ಋತುಬಂಧದ ತೊಂದರೆಗಳನ್ನು ನಿವಾರಿಸುತ್ತದೆ. ದೇಹದಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ.ಇನ್ಸುಲಿನ್ ಮಟ್ಟವನ್ನು ಹೆಚ್ಚಿಸುತ್ತದೆಯಾದ್ದರಿಂದ ಮಧುಮೇಹಿಗಳಿಗೂ ಒಳ್ಳೆಯದು. ದೇಹಕ್ಕೆ ತಂಪು ನೀಡುವ ಗುಣ ಹೊಂದಿದ್ದು, ರಕ್ತದೊತ್ತಡವನ್ನು ಕಡಿಮೆಗೊಳಿಸುತ್ತದೆ. ತಾಮ್ರ, ಸತು, ಗಂಧಕ, ಮೆಗ್ನೀಷಿಯಂ ದೇಹಕ್ಕೆ ಅಗತ್ಯವಾದ ಖನಿಜಾಂಶಗಳನ್ನು ಹೊಂದಿದೆ. ಆದರೆ ಅಸ್ತಮಾ, ಸೈನಸ್ ಮತ್ತು ಶೀತ ಪ್ರಕೃತಿಯವರು ಹೆಚ್ಚಾಗಿ ತಿನ್ನಬಾರದು.

 

ಪ್ರತಿಕ್ರಿಯಿಸಿ (+)