ಕಡಿಮೆ ಖರ್ಚಿನಲ್ಲಿ ಅರಳಿದ ಚೆಂಡು ಹೂವು ಕೃಷಿ

7

ಕಡಿಮೆ ಖರ್ಚಿನಲ್ಲಿ ಅರಳಿದ ಚೆಂಡು ಹೂವು ಕೃಷಿ

Published:
Updated:

ಆನೇಕಲ್ : ಪುಷ್ಪ ಮೂಲಕ ಹಲವಾರು ರೈತರ ಆರ್ಥಿಕ ಪರಿಸ್ಥಿತಿ ಉತ್ತಮಗೊಂಡ ಉದಾಹರಣೆಗಳು ತಾಲ್ಲೂಕಿನಲ್ಲಿ ಹೆಚ್ಚಾಗಿವೆ.ಹೆಚ್ಚಿನ ಖರ್ಚಿಲ್ಲದೆ ಚೆಂಡು ಹೂವು ಬೆಳೆದು ಉತ್ತಮ ಸಾಧನೆ ಮಾಡಿರುವ ಪ್ರಗತಿಪರ ರೈತ ತಾಲ್ಲೂಕಿನ ಭಕ್ತಿಪುರದ ಹರೀಶ್ ಅವರ ಯಶೋಗಾಥೆ ಇಲ್ಲಿದೆ.ಪಿ.ಯು.ಸಿವರೆಗೆ ವ್ಯಾಸಂಗ ಮಾಡಿರುವ ಹರೀಶ್ ಆನೇಕಲ್-ಅತ್ತಿಬೆಲೆ ರಸ್ತೆಯ ಭಕ್ತಿಪುರದ ಬಳಿಯ ಒಂದೂವರೆ ಎಕರೆ ಜಮೀನಿನಲ್ಲಿ ಚೆಂಡು ಹೂವಿನ ಬೆಳೆ ಬೆಳೆದಿದ್ದಾರೆ.ಎ.ವಿ.ಟಿ.ರೆಡ್ ಚೆಂಡು ಹೂವಿನ ಬೆಳೆ ಬೆಳೆದಿರುವ ಹರೀಶ್ 30 ಸಾವಿರ ರೂ. ವೆಚ್ಚ ಮಾಡಿ ಒಂದೂವರೆ ಲಕ್ಷ ರೂ.ಗಳಿಗೂ ಹೆಚ್ಚು ಆದಾಯ ಗಳಿಸಿದ್ದಾರೆ.ಒಂದೂವರೆ ಎಕರೆಗೆ 16 ಸಾವಿರ ಸಸಿ ನೆಡಲಾಯಿತು.ಸಸಿ ನೆಟ್ಟ 40 ದಿನಗಳಿಗೆ ಫಸಲು ಬರಲು ಪ್ರಾರಂಭವಾಯಿತು.50 ರಿಂದ 60 ದಿನಗಳು ಫಸಲು ಬರುತ್ತದೆ.ಪ್ರಾರಂಭದಲ್ಲಿ 100 ಕೆ.ಜಿಯಿಂದ ಪ್ರಾರಂಭವಾದ ಹೂವಿನ ಕೊಯ್ಲು ಮೂರು ಕೊಯ್ಲಿನ ನಂತರ 1500ರಿಂದ 1800 ಕೆ.ಜಿ ಬರುತ್ತಿದೆ.ಪ್ರತಿ ಕೆ.ಜಿಗೆ 16 ರೂ. ಮಾರುಕಟ್ಟೆ ಬೆಲೆಯಿದೆ. ಕನಿಷ್ಠ ಬೆಲೆ 16ರೂ. ಇದ್ದರೂ ಸಹ ಒಂದು ಲಕ್ಷ ರೂಪಾಯಿ ಆದಾಯ ಗಳಿಸಬಹುದು ಎಂದು ಹರೀಶ್ ಹೇಳುತ್ತಾರೆ. ಕೆಲವೊಮ್ಮೆ 50ರಿಂದ 70ರೂಪಾಯಿವರೆಗೆ ಸಹ ಮಾರಾಟವಾಗಿದೆ.25ರಿಂದ 30ರೂ. ಬೆಲೆ ದೊರೆತರೂ ರೈತರಿಗೆ ಬಂಪರ್ ಬೆಲೆಯಾಗುತ್ತದೆ ಎಂದು ಹೇಳುತ್ತಾರೆ.ಆನೇಕಲ್‌ನಿಂದ ಬೆಂಗಳೂರು, ಹೊಸೂರು ಮಾರುಕಟ್ಟೆಗಳಿಗೆ ಹೂವುಗಳನ್ನು ಕೊಂಡೊಯ್ಯಲಾಗುತ್ತಿದೆ.ಚೆಂಡು ಹೂ ಸುಗಂಧ ದ್ರವ್ಯಗಳ ತಯಾರಿಕೆ ಹಾಗೂ ಆಯಿಲ್ ಪೈಂಟ್‌ಗೆ ಸಹ ಬಳಸಲಾಗುತ್ತದೆ.ಹಾಗಾಗಿ ಚಂಡು ಹೂವಿಗೆ ಒಳ್ಳೆಯ ಬೆಲೆ ದೊರೆಯುತ್ತಿದೆ ಎಂದು ರೈತ ಹರೀಶ್ ತಿಳಿಸಿದರು.ಸಾಂಪ್ರದಾಯಿಕ ಬೆಳೆಗಳ ಜೊತೆಗೆ ಅಲ್ಪಾವಧಿ ಬೆಳೆಗಳಾಗಿ ಕೆಂಪು ಚೆಂಡು ಹೂ ಹಾಗೂ ಹಳದಿ ಬಣ್ಣದ ಚೆಂಡು ಹೂಗಳನ್ನು ಬೆಳೆಯುವ ಮೂಲಕ ಲಾಭಗಳಿಸಬಹುದು ಎಂಬುದು ಅವರ ಅಭಿಪ್ರಾಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry