ಶುಕ್ರವಾರ, ಜುಲೈ 30, 2021
25 °C
ಕೆರೋಳ್ಳಿ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿ ಸಾಧನೆ

ಕಡಿಮೆ ಖರ್ಚಿನಲ್ಲಿ ಬೆಳೆ ಕಟಾವು ಯಂತ್ರ!

ಪ್ರಜಾವಾಣಿ ವಾರ್ತೆ/ ಜಗನ್ನಾಥ ಡಿ. ಶೇರಿಕಾರ Updated:

ಅಕ್ಷರ ಗಾತ್ರ : | |

ಚಿಂಚೋಳಿ: ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕರ ಮಾತ್ರ ಹಿರಿದಾಗಿದೆ. ಶಿಕ್ಷಕರು ತಮ್ಮಲ್ಲಿರುವ ಜ್ಞಾನವನ್ನು ಮಕ್ಕಳಿಗೆ ಧಾರೆ ಎರೆದಾಗ ಮಾತ್ರ ಮಕ್ಕಳ ಮನಸ್ಸು ವಿಕಾಸಗೊಳ್ಳಲು ಸಾಧ್ಯ. ಇದಕ್ಕೆ ಪೂರಕ ಎಂಬಂತೆ ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಕೆರೋಳ್ಳಿ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕ ಆನಂದಪ್ಪ ಚಂಡ್ರಿಕಿ ಹಾಗೂ ಪ್ರವೀಣ ಎಚ್‌.ವಿ ಅವರ ಮಾರ್ಗದರ್ಶನದಲ್ಲಿ ಶಾಲೆಯ 10ನೇ ತರಗತಿಯ ವಿದ್ಯಾರ್ಥಿ ರಮೇಶ ವೀರಭದ್ರಪ್ಪ ಜಡಿ  ನಿರುಪಯುಕ್ತ ವಸ್ತುಗಳಿಂದ ಬೆಳೆ ಕಟಾವು ಯಂತ್ರ ತಯಾರಿಸಿ ಗಮನ ಸೆಳೆದಿದ್ದಾರೆ.ಬಾಲಕನ ತಂದೆ ಚಿಂಚೋಳಿ ತಾಲ್ಲೂಕು ಭಂಟನಳ್ಳಿ ಗ್ರಾಮದ ನಿವಾಸಿ ಕೃಷಿಕ ವೀರಭದ್ರಪ್ಪ ಜಡಿ ಅವರ ಪ್ರೋತ್ಸಾಹ ಹಾಗೂ ಶಿಕ್ಷಕರ ಮಾರ್ಗ ದರ್ಶನ ಮತ್ತು ವಿದ್ಯಾರ್ಥಿಯ ಸೃಜನಶೀ ಲತೆಯಿಂದ ಈ ಬೆಳೆ ಕಟಾವು ಯಂತ್ರ ಆವಿಷ್ಕಾರಗೊಂಡಿದೆ.  ಪುಟಾಣಿಗಳು ಓಡಿಸುವ ಬೈಸಿಕಲ್‌, ಕೆಟ್ಟು ಹೋದ ಫ್ಯಾನಿನ ಮೋಟಾರ್‌ ಮತ್ತು ಕಲ್ಲು ಕೊರೆಯುವ ಯಂತ್ರದ ನಿರುಪಯುಕ್ತ ಬ್ಲೇಡ್‌ ಮತ್ತು ಒಂದು ಮಣೆ ಹಾಗೂ ಕಬ್ಬಿಣದ ಸರಳು ಬಳಸಿ ಇವರು ಸರಳವಾದ ಬೆಳೆ ಕಟಾವು ಯಂತ್ರ ತಯಾರಿಸಿದ್ದಾರೆ. ವಿದ್ಯುತ್‌ನಿಂದ ಚಲಿಸಬಹುದಾದ ಈ ಯಂತ್ರ ವನ್ನು ಸೌರಶಕ್ತಿಯಿಂದಲೂ ಚಾಲನೆ ಮಾಡಲು ಅವಕಾಶವಿದೆ. 

 ಕೂಲಿ ಕಾರ್ಮಿಕರ ಕೊರತೆ ನೀಗಿಸುವ, ಕಡಿಮೆ ಬೆಲೆಯಲ್ಲಿ ಖರೀದಿಸುವ ಮತ್ತು ಸಮಯ ಉಳಿ ಸುವ ಕೃಷಿಸ್ನೇಹಿ ಹಾಗೂ ಸರಳವಾದ ಸಾಧನ ಈ ವಿದ್ಯಾರ್ಥಿಯ ಪ್ರತಿಭೆಗೆ ಸಾಕ್ಷಿಯಾಗಿದೆ.ತಾಲ್ಲೂಕು, ಜಿಲ್ಲೆ, ವಿಭಾಗ ಹಾಗೂ ರಾಜ್ಯ ರಾಷ್ಟ್ರಮಟ್ಟದಲ್ಲಿ ಬೆಳೆ ಕಟಾವು ಸಾಧನ ಪ್ರದರ್ಶಿಸಿ ಮೆಚ್ಚುಗೆಗೆ ಪಾತ್ರರಾಗಿ ರಮೇಶ ಜಡಿ ಶಾಲೆಗೆ ಕೀರ್ತಿ ತಂದಿದ್ದಾರೆ.

 

ವಿಜಯಾಪುರದಲ್ಲಿ ಡಿಎಸ್‌ಇಆರ್‌ಟಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಜಂಟಿಯಾಗಿ ಆಯೋಜಿಸಿದ್ದ ರಾಜ್ಯ ಮಟ್ಟದ ಪ್ರೌಢ ಶಾಲಾ ಮಕ್ಕಳ ವಿಜ್ಞಾನ ಮಾದರಿ ಪ್ರದರ್ಶನದಲ್ಲಿ ಮೆಚ್ಚುಗೆ ಗಳಿಸಿ ‘ಇನ್ಸ್‌ಪೈರ್‌ ಅವಾರ್ಡ್‌ –2014’ ಪಡೆದಿರುವ ಬಾಲಕ ರಮೇಶ, ನವ ದೆಹಲಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿ ವಾಲಯ ಅಕ್ಟೋಬರ್‌ನಲ್ಲಿ ಹಮ್ಮಿಕೊಂಡಿದ್ದ 4ನೇ ರಾಷ್ಟ್ರಮಟ್ಟದ ‘ವಸ್ತುಪ್ರದರ್ಶನ ಮತ್ತು ಸ್ಪರ್ಧೆಯಲ್ಲಿ ಭಾಗವಹಿಸಿ ಇನ್ಸ್‌ಪೈರ್‌ ಅವಾರ್ಡ್‌ ಹಾಗೂ ಪ್ರಶಸ್ತಿ ಫಲಕ ಮತ್ತು ನಗದು ಪುರಸ್ಕಾರ ಪಡೆದಿದ್ದಾರೆ.ಈ ಸಾಧನ ನೋ ಕಾಸ್ಟ್‌ –ಲೋ ಕಾಸ್ಟ್‌ ನಿಯಮ ಒಳಗೊಂಡಿದೆ. ಇದರ ತಯಾರಿಕೆಗೆ ಹೆಚ್ಚು ಹಣದ ಅವಶ್ಯಕತೆಯಿಲ್ಲ ಹೀಗಾಗಿ ನೋ ಕಾಸ್ಟ್‌. ಇದರ ಮಾರಾಟಕ್ಕೆ ಕಡಿಮೆ ಬೆಲೆ ನಿಗದಿಯಾಗಲಿದೆ ಹೀಗಾಗಿ ಇದೊಂದು ಲೋ ಕಾಸ್ಟ್‌ ಸಾಧನ ಎಂಬುದು ಸ್ಥಳೀಯರ ಮೆಚ್ಚುಗೆಯ ಮಾತುಗಳು.2002–03ರಲ್ಲಿ ಪ್ರಾರಂಭವಾದ ಕೆರೋಳ್ಳಿಯ ಸರ್ಕಾರಿ ಪ್ರೌಢ   ಶಾಲೆಯಲ್ಲಿ 143 ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. 7–ಕೊಠಡಿಗಳ ಸ್ವಂತ ಕಟ್ಟಡ ಹೊಂದಿರುವ ಇಲ್ಲಿ  8 ಮಂದಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ದೈಹಿಕ ಶಿಕ್ಷಣ ಶಿಕ್ಷಕ ಮತ್ತು ಚಿತ್ರಕಲೆ ಶಿಕ್ಷಕ ಹುದ್ದೆ ಖಾಲಿಯಿವೆ. ಎಸ್ಸೆಸ್ಸೆಲ್ಸಿಯಲ್ಲಿ ಶೇ 93 ಫಲಿತಾಂಶ ಪಡೆದ ಶಾಲೆ ಯಲ್ಲಿ 30 ಮಕ್ಕಳ ಪೈಕಿ 12 ಮಕ್ಕಳು ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದಾರೆ.ಶಾಲೆಗೆ ಆವರಣ ಗೋಡೆ ಇಲ್ಲ, ಕಂಪ್ಯೂಟರ್‌ ಇದ್ದರೂ ಅವು ದೂಳು ತಿನ್ನುತ್ತಿವೆ. ಇದರಿಂದ ಕಂಪ್ಯೂಟರ್‌ ತರಗತಿ ಇಲ್ಲಿನ ವಿದ್ಯಾರ್ಥಿಗಳಿಗೆ ಮರಿಚೀಕೆಯಾಗಿದೆ.

‘ದೂರದೃಷ್ಟಿಯ ಬಾಲಕ’

ವಿದ್ಯಾರ್ಥಿ ರಮೇಶ ಜಡಿ ದೂರದೃಷ್ಟಿ ಹಾಗೂ ಉತ್ತಮ ಕೌಶಲ ಹೊಂದಿರುವ ಬಾಲ ಪ್ರತಿಭೆ. ಕೃಷಿಕ ಕುಟುಂಬದಿಂದ ಬಂದವರಾಗಿದ್ದರಿಂದ ಸಹಜವಾಗಿ ಕೃಷಿಯ ಸೆಳೆತ ಆತನಲ್ಲಿದೆ. ಇದುವೇ ಕೃಷಿ ಉಪಕರಣ ತಯಾರಿಸಲು ಪ್ರೇರಣೆಯಾಗಿದೆ. ಇದಕ್ಕೆ ನಾನು ಪೂರಕ ಮಾರ್ಗದರ್ಶನ ನೀಡಿದ್ದೇನೆ.

–ಆನಂದಪ್ಪ ಚಂಡ್ರಿಕಿ, ಮಾರ್ಗದರ್ಶಕ ಶಿಕ್ಷಕ‘ಕ್ರಿಯಾಶೀಲ ಬಾಲಕ’


ಬೆಳೆ ಕಟಾವು ಸಾಧನ ತಯಾರಿಸಿರುವ ಬಾಲಕ ರಮೇಶ ಪ್ರತಿಭಾವಂತ ವಿದ್ಯಾರ್ಥಿ. ಶಾಲೆಯ ಎಲ್ಲಾ ಚಟುವಟಿಕೆಗಳಲ್ಲಿ ಕ್ರೀಯಾಶೀಲತೆಯಿಂದ ಪಾಲ್ಗೊಳ್ಳುವ ಈತ ಶಿಕ್ಷಕರು ಹೇಳಿದ್ದನ್ನು ಚಾಚು ತಪ್ಪದೇ ಪಾಲಿಸುತ್ತಾನೆ

–ಪ್ರವೀಣ ಎಚ್‌.ವಿ, ಶಿಕ್ಷಕರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.