ಬುಧವಾರ, ಡಿಸೆಂಬರ್ 11, 2019
21 °C

ಕಡಿಮೆ ಖರ್ಚಿನಲ್ಲಿ ಸಮೃದ್ಧ ಫಸಲು

Published:
Updated:
ಕಡಿಮೆ ಖರ್ಚಿನಲ್ಲಿ ಸಮೃದ್ಧ ಫಸಲು

ರೈತ ಸಂಘದ ಗೆಳೆಯರ ಜತೆಯಲ್ಲಿ 2002ರಲ್ಲಿ ಮೈಸೂರು ಜಿಲ್ಲೆಯ ಸಾವಯವ ರೈತ ಎ.ಪಿ.ಚಂದ್ರಶೇಖರ್ ಅವರ ಅಡಿಕೆ ತೋಟ ನೋಡಿ ಬಂದ ಮೇಲೆ ಅವರಂತೆ ನಾನೂ ಅಡಿಕೆ ತೋಟದಲ್ಲಿ ಕಳೆ ತೆಗೆಯುವುದನ್ನೇ ನಿಲ್ಲಿಸಿದೆ. ಅವರೆ, ಅಲಸಂದೆ, ಉದ್ದು ಮತ್ತಿತರ ವಿವಿಧ ಬಳ್ಳಿ ಗಿಡಗಳ ಬೀಜಗಳನ್ನು ಅಡಿಕೆ ತೋಟದಲ್ಲಿ ಚೆಲ್ಲಿದೆ. ಅಡಿಕೆ ಮರಗಳ ಕಾಂಡ ಬಿಸಿಲಿಗೆ ಒಣಗದಂತೆ ನೆರಳಿಗೆ ಏಲಕ್ಕಿ ಬಾಳೆ ಸಸಿಗಳನ್ನು ನಾಟಿ ಮಾಡಿದೆ.ಅಂದು ನಾಟಿ ಮಾಡಿದ ಬಾಳೆಗಿಡಗಳಲ್ಲಿ ಇವತ್ತಿಗೂ ಫಸಲು ಪಡೆಯುತ್ತಿದ್ದೇನೆ. ಅಂದಿನಿಂದ ಒಂದೇ ಒಂದು ಹಿಡಿ ರಾಸಾಯನಿಕ ಗೊಬ್ಬರ ಹಾಕಿಲ್ಲ. ಮೂರು ಸಲ ಕೆರೆ ಮಣ್ಣು, ಕೊಟ್ಟಿಗೆ ಗೊಬ್ಬರ ಹಾಕಿದ್ದೇನೆ. ಕೊಳವೆ ಬಾವಿಯಿಂದ ಅಡಿಕೆ ಮರಗಳಿಗೆ ನೀರು ಹಾಯಿಸಲು ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದೇನೆ... ಹೀಗೆ ಒಂದೇ ಸಮನೆ ಹೇಳುತ್ತ  ತೋಟ ತೋರಿಸಲು ಕರೆದೊಯ್ದರು ಚೆನ್ನಬಸಣ್ಣ.ಒಂದೂವರೆ ಎಕರೆ ನೀರಾವರಿ ಭೂಮಿ ಇರುವ ದೊಡ್ಡಬಳ್ಳಾಪುರ ತಾಲ್ಲೂಕಿನ ನಾಗಸಂದ್ರದ ರೈತ ಚೆನ್ನಬಸಣ್ಣ ಅವರ ಅಡಿಕೆ ತೋಟ ಮೇಲುನೋಟಕ್ಕೆ ಪಾಳುಬಿದ್ದ ತೋಟದಂತೆ ಕಾಣುತ್ತದೆ. ಹಲವು ಬಗೆಯ ಬಳ್ಳಿ ಗಿಡಗಳು, ಒಣಗಿದ ಮುಸುಕಿನ ಜೋಳದ ದಂಟುಗಳು ತೋಟದಲ್ಲಿ ಬೇಕಾಬಿಟ್ಟಿ ಬಿದ್ದಿವೆ. ಆದರೆ ಅಡಿಕೆ ಮರಗಳು ದಷ್ಟ ಪುಷ್ಟವಾಗಿ ಬೆಳೆದು ಗೊನೆಗಳನ್ನು ಹೊತ್ತು ನಗುತ್ತಿವೆ. ಪ್ರತಿ ಮರದಲ್ಲೂ ನಾಲ್ಕೈದು ಸಮೃದ್ಧ ಗೊನೆಗಳಿವೆ!ಚೆನ್ನಬಸಣ್ಣ ಮೊದಲ ವರ್ಷ 500 ಅಡಿಕೆ ಮರಗಳ ಫಸಲನ್ನು 12 ಸಾವಿರ (ವರ್ಷಕ್ಕೆ) ರೂಗಳಿಗೆ ಮಾರಾಟ ಮಾಡಿದ್ದರು. ಈ ವರ್ಷ 80 ಸಾವಿರ ರೂಗಳಿಗೆ ಮಾರಾಟ ಮಾಡಿದ್ದಾರೆ. ಇಲ್ಲಿಯವರೆಗೆ ಅವರು ಮರಗಳಿಗೆ ಬೋರ್ಡೊ ದ್ರಾವಣ ಸೋಕಿಸಿಲ್ಲ. ಯಾವುದೇ ರಾಸಾಯನಿಕ ಕೀಟನಾಶಕ ಸಿಂಪರಣೆ ಮಾಡಿಲ್ಲ. ಆದರೂ ಅಡಿಕೆಮರಗಳು ಸಮೃದ್ಧವಾಗಿವೆ. ಅದೇ ಅವರ ತೋಟದ ವಿಶೇಷ.ನಿರ್ವಹಣೆ ಖರ್ಚು ಕಡಿಮೆ: ಅಡಿಕೆ ತೋಟದಲ್ಲಿ ವರ್ಷಕ್ಕೆ ಮೂರು ಸಲ ಕಳೆ ತೆಗೆಯಬೇಕು. ಒಮ್ಮೆ ಗೊಬ್ಬರ, ಕೆರೆ ಮಣ್ಣು ಹಾಕಲೇಬೇಕು. ಜೊತೆಗೆ ಇಡೀ ತೋಟವನ್ನು ಉಳುಮೆ ಇಲ್ಲವೆ ಗುದ್ದಲಿಯಿಂದ ಅಗೆದು ಮಣ್ಣು  ಸಡಿಲಮಾಡಬೇಕು. ಇಲ್ಲವಾದರೆ ಮರಗಳ ಬೆಳವಣಿಗೆ ಸಾಧ್ಯವಿಲ್ಲ ಎನ್ನುವುದು ಅನೇಕ ಬೆಳೆಗಾರರ ನಂಬಿಕೆ.ಆದರೆ ಚನ್ನಬಸಣ್ಣ ಅವರ ತೋಟದ ನಿರ್ವಹಣೆ ಕ್ರಮ ಇದಕ್ಕೆ ತದ್ವಿರುದ್ಧ. ನವೆಂಬರ್ ತಿಂಗಳಲ್ಲಿ ಮಳೆ ಕಡಿಮೆ ಯಾಗುತ್ತಿದ್ದಂತೆ ಅವರು ತಮ್ಮ ಊರಿನ ರೈತರಿಂದ ಮುಸುಕಿನ ಜೋಳದ ದಂಟನ್ನು ಖರೀದಿಸಿ ಅಡಿಕೆ ಮರಗಳ ನಡುವೆ ಬಿಸಿಲು ಬೀಳುವ ಕಡೆಗಳಲ್ಲಿ ಹೊದಿಕೆಯಾಗಿ ಹಾಸುತ್ತಾರೆ. ದಂಟು ಹಾಗೇ ಕೊಳೆತು ಗೊಬ್ಬರವಾಗುತ್ತದೆ. ಅಷ್ಟೇ ಅಲ್ಲ ಭೂಮಿಯ ತೇವಾಂಶ ಹೆಚ್ಚು ಕಾಲ ಉಳಿಯುವಂತೆ ಮಾಡುತ್ತದೆ.ಅಡಿಕೆ ಮರಗಳಿಗೆ 6 ರಿಂದ 8 ದಿನಗಳಿಗೊಮ್ಮೆ ಡ್ರಿಪ್ ಮೂಲಕ ನೀರು ಹಾಯಿಸುತ್ತಾರೆ. ಅಡಿಕೆ ಕೊಯ್ಲು ಮಾಡುವ ಸಮಯದಲ್ಲಿ ಕೆಳಗೆ ಬೆಳೆದ ಸಣ್ಣಪುಟ್ಟ ಗಿಡಗಳನ್ನು ಕಿತ್ತು ಅಡಿಕೆ ಕಾಯಿ, ಗೊನೆ ಆರಿಸಲು ಅನುವು ಮಾಡಿಕೊಳ್ಳುತ್ತಾರೆ. ಇಷ್ಟನ್ನು ಬಿಟ್ಟರೆ ಅವರದು ಶೂನ್ಯ ಬಂಡವಾಳದ ಬೇಸಾಯ.ಇತರ ರೈತರು ಸಾವಿರಾರು ರೂಳನ್ನು ಖರ್ಚು ಮಾಡಿ ಸ್ವಲ್ಪ ಹೆಚ್ಚು ಹಣ ಗಳಿಸಬಹುದು. ಆದರೆ ನಾನು ಅತ್ಯಂತ ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಪಡೆಯುತ್ತಿದ್ದೇನೆ ಎನ್ನುತ್ತಾರೆ ಚೆನ್ನಬಸಣ್ಣ.ಅಡಿಕೆ ಮರಗಳ ನೆರಳಿಗಾಗಿ ಹತ್ತು ವರ್ಷಗಳ ಹಿಂದೆ ನಾಟಿ ಮಾಡಿದ್ದ ಏಲಕ್ಕಿ ಬಾಳೆ ಗಿಡಗಳು ಈಗಲೂ ಫಲ ಕೊಡುತ್ತಿವೆ. ಈ ಹಣ ಅವರ ಮನೆ ಖರ್ಚಿಗೆ ಸಾಕಾಗುತ್ತದೆ. ಉಳಿದ ಅರ್ಧ ಎಕರೆಯಲ್ಲಿ ಕೋಳಿ, ಹಸು, ಮೇಕೆಗಳಿಗೆ ಶೆಡ್ ಕಟ್ಟಿಕೊಂಡಿದ್ದಾರೆ. ಸ್ವಲ್ಪ ಜಾಗದಲ್ಲಿ ಮೇವು ಬೆಳೆದುಕೊಳ್ಳುತ್ತಾರೆ. ಇರುವ ಸ್ವಲ್ಪ ಭೂಮಿಯಲ್ಲಿ ಕಡಿಮೆ  ಶ್ರಮ ಹಾಗೂ ಬಂಡವಾಳದಲ್ಲಿ ಅಡಿಕೆ ಬೆಳೆದು ಜೀವನ ನಡೆಸುವ ಅವರ ಬೇಸಾಯ ಕ್ರಮ ಅನೇಕರಿಗೆ ಮಾದರಿ.  ಆಸಕ್ತರು ಚೆನ್ನಬಸಣ್ಣ ಅವರನ್ನು ಸಂಜೆ ವೇಳೆ ಸಂಪರ್ಕಿಸ ಬಹುದು. ಅವರ ಮೊಬೈಲ್ ನಂಬರ್ 9164277604.

ಪ್ರತಿಕ್ರಿಯಿಸಿ (+)