ಕಡಿಯಾಳಿಯ ಮಹಿಷಮರ್ಧಿನಿ

7

ಕಡಿಯಾಳಿಯ ಮಹಿಷಮರ್ಧಿನಿ

Published:
Updated:
ಕಡಿಯಾಳಿಯ ಮಹಿಷಮರ್ಧಿನಿ

ಉಡುಪಿಯಿಂದ ಮಣಿಪಾಲಕ್ಕೆ ಹೋಗುವ ದಾರಿಯಲ್ಲಿ ಸುಮಾರು ಒಂದು ಕಿಲೋ ಮೀಟರ್ ದೂರದಲ್ಲಿದೆ ಕಡಿಯಾಳಿ ಮಹಿಷ ಮರ್ಧಿನಿ ದೇವಸ್ಥಾನ. ಉಡುಪಿ ಆಸುಪಾಸಿನ ನಾಲ್ಕು ಪ್ರಮುಖ ದುರ್ಗಾ ದೇವಾಲಯಗಳಲ್ಲಿ  ಇದು ಅತ್ಯಂತ ಪುರಾತನವಾದದದು. ದೇವಿ ವಿಗ್ರಹ ಒಂದು ಸಾವಿರ ವರ್ಷಗಳಿಗಿಂತಲೂ ಪ್ರಾಚೀನವಾದದು ಎಂಬ ಅಭಿಪ್ರಾಯವಿದೆ. ಗರ್ಭಗುಡಿ  ಕಗ್ಗಲ್ಲಿನಿಂದ ನಿರ್ಮಾಣವಾಗಿದೆ. ಎರಡೂವರೆ ಅಡಿ ಎತ್ತರದ ದೇವಿ ಮುಖದಲ್ಲಿನ ಪ್ರಸನ್ನತೆ, ಮಂದಹಾಸ ಅವರ್ಣನೀಯ. ಮೇಲಿನ ಎರಡು ಕೈಗಳಲ್ಲಿ ಶಂಖ-ಚಕ್ರ, ಕೆಳಗಿನ ಬಲಗೈನಲ್ಲಿ ತ್ರಿಶೂಲ. ತ್ರಿಶೂಲದ ಕೆಳ ತುದಿ ದೇವಿಯ ಕಾಲಬುಡದಲ್ಲಿ ಸತ್ತು ಬಿದ್ದಿರುವ ಮಹಿಷನ ತಲೆಯನ್ನು ಒತ್ತಿಹಿಡಿದಿದೆ. ಮುಗ್ಗರಿಸಿದ ಮಹಿಷನ ಬಾಲ ದೇವಿಯ ಎಡಗೈನಲ್ಲಿದೆ. ಮಹಿಷಾಸುರ ರಾಕ್ಷಸ ರೂಪದಲ್ಲಿರದೆ ಸಹಜ ಕೋಣನ ಆಕೃತಿಯಲ್ಲಿ ಇರುವುದು ವಿಶೇಷ. ಮಹಿಷ  ನಮ್ಮ ಅಜ್ಞಾನ, ಆಲಸ್ಯ, ಮಾಂದ್ಯತೆಗಳ ಸಂಕೇತ. ದೇವಿ ಜ್ಞಾನ ಶಕ್ತಿಯ ಪ್ರತೀಕ ಎನ್ನಲಾಗಿದೆ.ಈ ದೇವಿಯ ವಿಗ್ರಹ ಬಾದಾಮಿ ಗುಹಾಲಯದ ಮಹಿಷ ಮರ್ಧಿನಿ, ಐಹೊಳೆಯ ಮಹಿಷ ಮರ್ಧಿನಿ ಹಾಗೂ ತಮಿಳುನಾಡಿನ ಮಹಾಬಲಿಪುರಂನ ಮಹಿಷ ಮರ್ಧಿನಿ ವಿಗ್ರಹಗಳ ಜತೆಯಲ್ಲಿ ಹೋಲಿಕೆ ಇದೆ ಎಂಬ ಅಭಿಪ್ರಾಯವಿದೆ. ದೇವಿಯ ತ್ರಿಶೂಲ ಚಾಲುಕ್ಯರ ಕಾಲಕ್ಕೆ ಸೇರಿದ್ದು ಎನ್ನುತ್ತಾರೆ.ಕಡಿಯಾಳಿಯ ಐತಿಹ್ಯ: ಹಿಂದೆ ತೌಳವ ಮಂಡಳದ ರಾಜ ರಾಮಭೋಜ ಸಂತಾನಕ್ಕಾಗಿ ಪುತ್ರಕಾಮೇಷ್ಠಿ ಯಾಗ ಮಾಡಲು ಭೂಮಿ ಉಳುವಾಗ ಸರ್ಪವೊಂದು ನೇಗಿಲಿಗೆ ಸಿಕ್ಕಿ ಸತ್ತುಹೋಯಿತು. ಸರ್ಪ ಹತ್ಯೆಯ ಪ್ರಾಯಶ್ಚಿತಕ್ಕಾಗಿ ರಾಜ ಬೆಳ್ಳಿಯ ಪೀಠದಲ್ಲಿ ಶೇಷಶಾಯಿಯಾದ ನಾರಾಯಣನ ವಿಶೇಷ ಸನ್ನಿಧಾನವುಳ್ಳ ಶಿವಲಿಂಗವನ್ನು ಪ್ರತಿಷ್ಠಾಪಿಸಿದರು. ಇದೇ ಉಡುಪಿಯ ರಥಬೀದಿಯಲ್ಲಿ ಈಗಿರುವ ಅನಂತೇಶ್ವರ ದೇವಾಲಯ. ನಂತರ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ನಾಗಾಲಯಗಳನ್ನು ಪ್ರತಿಷ್ಠಾಪಿಸಿದ. ಅವುಗಳಲ್ಲಿ ಒಂದು ಕಡಿಯಾಳಿ ದೇವಾಲಯದ ವ್ಯಾಪ್ತಿಗೆ ಸೇರುತ್ತದೆ. ಶ್ರೀಕೃಷ್ಣಮಠಕ್ಕೂ ಕಡಿಯಾಳಿ ದೇವಾಲಯಕ್ಕೂ ಬಹಳ ಹಿಂದಿನಿಂದ ನಿಕಟ ಸಂಬಂಧವಿದೆ. ಪರ್ಯಾಯ ಪೀಠವೇರುವ ಸ್ವಾಮೀಜಿ ಪೀಠಾರೋಹಣಕ್ಕೆ ಮೊದಲು ಇಲ್ಲಿಗೆ ಬಂದು ದುರ್ಗೆಯ ಪ್ರಾರ್ಥನೆ ಸಲ್ಲಿಸುವ ಸಂಪ್ರದಾಯವಿದೆ. ಪರ್ಯಾಯ ಕಾಲದಲ್ಲಿ ಆಯಾ ಸ್ವಾಮೀಜಿಗಳು ಪ್ರತಿ ಶುಕ್ರವಾರ ಹನ್ನೆರಡು ಸುವಾಸಿನಿಯರ ಸಮಾರಾಧನೆಯನ್ನು ಈ ದೇವಾಲಯದಲ್ಲಿ ನಡೆಸಿಕೊಂಡು ಬರುತ್ತಾರೆ. ವಿಜಯದಶಮಿಯ ದಿನ ಕೃಷ್ಣಮಠದಿಂದ ವಿಜಯ ಯಾತ್ರೆ ಹೊರಟು ಬಿರುದಾವಳಿಯೊಡನೆ ಕಡಿಯಾಳಿ ದೇವಿಯ ಸನ್ನಿಧಿಗೆ ಬಂದು ಇಲ್ಲಿಯೇ ದಶಮಿ ಪೂಜೆ ನಡೆಸಿ ಪ್ರಸಾದ ಪಡೆದು ಸಾಗುವ ಸಂಪ್ರದಾಯವಿದೆ.ವಾರ್ಷಿಕ ರಥೋತ್ಸವ: ಪ್ರತಿ ವರ್ಷ ಯುಗಾದಿಯ ಬಳಿಕ (ಏಪ್ರಿಲ್ ಎರಡನೇ ವಾರದಲ್ಲಿ) ವಾರ್ಷಿಕ ರಥೋತ್ಸವ ನಡೆಯುತ್ತದೆ. ಈ ವರ್ಷ ಏ.16ರಂದು ವಾರ್ಷಿಕ ರಥೋತ್ಸವ ನಡೆಯುತ್ತದೆ. ಯುಗಾದಿ ಸಮಯದಲ್ಲಿ ಇಲ್ಲಿ ಉತ್ಸವದ ಸಂಭ್ರಮ. ಸಾವಿರಾರು ಭಕ್ತರು ಈ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ನವರಾತ್ರಿಯ ಒಂಬತ್ತು ದಿನಗಳೂ ಇಲ್ಲಿ ವಿಶೇಷ ಪೂಜೆ, ಪಾರಾಯಣ, ಚಂಡಿಕಾ ಹವನ, ಉತ್ಸವ, ಸಂತರ್ಪಣೆ ನಡೆಯುತ್ತದೆ. ಇಲ್ಲಿ ನಡೆಯುವ ಕಾರ್ತಿಕ ದೀಪೋತ್ಸವವೂ  ಪ್ರಸಿದ್ಧ.ನಾಗತನು, ಪಂಚಾಮೃತ ಅಭಿಷೇಕ, ಗಣಹೋಮ, ವಾಹನ ಪೂಜೆ, ಶಾಶ್ವತ ಸೇವೆ ಇತ್ಯಾದಿ ಸೇವೆಗಳು ಇಲ್ಲಿ ನಡೆಯುತ್ತವೆ

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬೇಕಾದ ದೂರವಾಣಿ ನಂಬರ್: 0820- 2520875.ದೇವಸ್ಥಾನ ಬೆಳಿಗ್ಗೆ 5.30ಕ್ಕೆ ತೆರೆಯುತ್ತದೆ. ಮಧ್ಯಾಹ್ನ 1 ಗಂಟೆಯವರೆಗೆ ದೇವರ ದರ್ಶನಕ್ಕೆ ಅವಕಾಶವಿದೆ. ಮತ್ತೆ ಸಂಜೆ 4 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ದರ್ಶನಕ್ಕೆ ಅವಕಾಶವಿದೆ. ಶುಕ್ರವಾರ ಇಡೀ ದಿನ ತೆರೆದಿರುತ್ತದೆ.  ಈ ಹಿಂದೆ ಇಲ್ಲಿ ಮದುವೆ, ಉಪನಯನ ಇತ್ಯಾದಿಗಳನ್ನು ದೇವಸ್ಥಾನದ ಹೊರಗಿನ ಕಲ್ಯಾಣಮಂಟಪದಲ್ಲಿ ನಡೆಸಲಾಗುತ್ತಿತ್ತು. ಸದ್ಯಕ್ಕೆ ಅವುಗಳನ್ನು ಇಲ್ಲಿ ಸ್ಥಗಿತಗೊಳಿಸಲಾಗಿದೆ.ಭಕ್ತರು ಉಳಿದುಕೊಳ್ಳಲು ಉಡುಪಿಯಲ್ಲಿ ಸಾಕಷ್ಟು ವಸತಿ ಗೃಹಗಳು, ಹೋಟೆಲ್‌ಗಳಿವೆ.ಸೇವಾ ವಿವರ

*  ಹೂವಿನ ಸೇವೆ...  ರೂ.225

* ಚಂಡಿಕಾ ಹೋಮ...  ರೂ.6715

* ಮಹಾಪೂಜೆ  ....   ರೂ.205

* ಸತ್ಯನಾರಾಯಣ ಪೂಜೆ...ರೂ.250

* ನವರಾತ್ರಿ ಉತ್ಸವ ....  ರೂ.555

* ಸರ್ವಸೇವೆ....   ರೂ.1005

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry