ಕಡೂರಿನ ಹುಡುಗಿಯ ಗುಡುಗು

7

ಕಡೂರಿನ ಹುಡುಗಿಯ ಗುಡುಗು

Published:
Updated:

ಬೆಂಗಳೂರು: ಅಕ್ಕಪಕ್ಕದ ಮನೆಯ ಹುಡುಗರು ಕ್ರಿಕೆಟ್ ಆಡುತ್ತಿದ್ದನ್ನು ಕಂಡ ಮೂರು ವರ್ಷದ ಹುಡುಗಿ ವೇದಾ ಆಗಲೇ ಬ್ಯಾಟ್ ಹಿಡಿಯಲು ಶುರು ಮಾಡಿದ್ದಳು. ಹನ್ನೆರಡನೇ ವಯಸ್ಸಿಗೆ ಕಾಲಿಡುವ ಹೊತ್ತಿಗೆ ಕ್ರಿಕೆಟ್ ಮೇಲಿನ ಪ್ರೀತಿ ವಿಪರೀತವಾಯಿತು. ಭಾರತ ತಂಡದಲ್ಲಿ ಸ್ಥಾನ ಪಡೆಯಬೇಕೆಂಬ ಹಠಕ್ಕೆ ಬಿದ್ದಳು.ಇದನ್ನು ಕಂಡು ಅಚ್ಚರಿಗೆ ಒಳಗಾದ ತಂದೆ        ಎಸ್.ಜೆ.ಕೃಷ್ಣಮೂರ್ತಿ ತಮ್ಮ ಮಗಳು ವೇದಾಳೊಂದಿಗೆ ಬೆಂಗಳೂರಿಗೆ ಬಂದರು. ಉದ್ಯಾನ ನಗರಿಯಲ್ಲೇ ಬಾಡಿಗೆ ಮನೆ ಮಾಡಿ ತರಬೇತಿಗಾಗಿ ಕ್ರಿಕೆಟ್ ಅಕಾಡೆಮಿಯೊಂದಕ್ಕೆ ಮಗಳನ್ನು ಸೇರಿಸಿದರು. ಅದಾಗಿ ಎಂಟು ವರ್ಷಗಳಲ್ಲಿ ಕಡೂರಿನ ಕೇಬಲ್ ಆಪರೇಟರ್ ಪುತ್ರಿ ವೇದಾಗೆ ಭಾರತ ತಂಡದಲ್ಲಿ ಸ್ಥಾನ ಲಭಿಸಿತು.`ನಾನು ಹನ್ನೆರಡನೇ ವಯಸ್ಸಿನಲ್ಲಿಯೇ ಮನೆ ಬಿಟ್ಟು ಬೆಂಗಳೂರಿಗೆ ಬರಲು ಕ್ರಿಕೆಟ್ ಪ್ರೀತಿಯೇ ಮೂಲ ಕಾರಣ. ನಮ್ಮೂರಲ್ಲಿ ಹುಡುಗಿಯರು ಕ್ರಿಕೆಟ್ ಆಡುತ್ತಿರಲಿಲ್ಲ. ಆದರೆ ಅಕ್ಕಪಕ್ಕದ ಮನೆಯ ಹುಡುಗರೊಂದಿಗೆ ನಾನು ಆಡುತ್ತಿದ್ದೆ. ಅಲ್ಲಿ ಯಾವುದೇ ಅವಕಾಶಗಳಿರಲಿಲ್ಲ. ಹಾಗಾಗಿ ಅಪ್ಪನನ್ನು ಒತ್ತಾಯಿಸಿ ಬೆಂಗಳೂರಿಗೆ ಕರೆದುಕೊಂಡು ಬಂದೆ~ ಎಂದು ವೇದಾ ಕೃಷ್ಣಮೂರ್ತಿ `ಪ್ರಜಾವಾಣಿ~ಗೆ ತಿಳಿಸಿದರು.19ರ ಹರೆಯದ ವೇದಾ ಏಕದಿನ ಹಾಗೂ ಟ್ವೆಂಟಿ-20 ಕ್ರಿಕೆಟ್ ಸರಣಿಯಲ್ಲಿ ಆಡಲು ವೆಸ್ಟ್ ಇಂಡೀಸ್ ಪ್ರವಾಸಕ್ಕೆ ತೆರಳುತ್ತಿರುವ ಭಾರತ ಮಹಿಳಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಈಗಾಗಲೇ ಅವರು ನಾಲ್ಕು ಏಕದಿನ ಹಾಗೂ ಟ್ವೆಂಟಿ-20 ಪಂದ್ಯಗಳಲ್ಲಿ ಆಡಿದ್ದಾರೆ. ಕಳೆದ ವರ್ಷ ಇಂಗ್ಲೆಂಡ್ ವಿರುದ್ಧ ಪದಾರ್ಪಣೆ ಮಾಡಿದ್ದರು.ಅವರು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಹಾಗೂ ಸಾಂದರ್ಭಿಕ ಲೆಗ್ ಸ್ಪಿನ್ನರ್. ಕಡೂರಿನಿಂದ ಬೆಂಗಳೂರಿಗೆ ಬಂದ ವೇದಾ ಇಲ್ಲಿಯೇ ಪ್ರೌಢಶಾಲೆ ಹಾಗೂ ಪಿಯುಸಿ ಮುಗಿಸಿದರು. ಈಗ ಮೌಂಟ್ ಕಾರ್ಮೆಲ್ ಕಾಲೇಜ್‌ನಲ್ಲಿ ಪದವಿಗೆ ಸೇರಿದ್ದಾರೆ.`ನನಗೆ ಇಬ್ಬರು ಅಕ್ಕಂದಿರಿದ್ದಾರೆ. ಅಣ್ಣ ಕೂಡ ಸ್ಥಳೀಯ ಕ್ರಿಕೆಟ್ ಪಂದ್ಯಗಳಲ್ಲಿ ಆಡುತ್ತಿದ್ದ. ಆದರೆ ಹುಡುಗಿಯರು ಕ್ರಿಕೆಟ್ ಆಡುತ್ತಾರೆ ಎಂಬುದು ನಮ್ಮ ಕುಟುಂಬದಲ್ಲಿ ಯಾರಿಗೂ ಗೊತ್ತಿರಲಿಲ್ಲ. ಒಂದು ದಿನ ಪತ್ರಿಕೆಗಳಲ್ಲಿ ಮಹಿಳೆಯರು ಕ್ರಿಕೆಟ್ ಆಡುವ ಫೋಟೊ ಬಂದಿತ್ತು. ಅದನ್ನು ನೋಡಿದ ನಾನು ಮಾಹಿತಿ ಸಂಗ್ರಹಿಸಿದೆ. ನಾನೂ ಆಡಬೇಕೆಂಬ ಆಸೆ ಬಂತು~ ಎಂದು ವೇದಾ ಹೇಳಿದರು.`ಭಾರತ ತಂಡದಲ್ಲಿ ಆಡಬೇಕೆಂಬ ನನ್ನ ಕನಸು ಈಗ ನಿಜವಾಗಿದೆ. ಇದಕ್ಕೆ ಮೂಲ ಕಾರಣ ನನ್ನ ಕುಟುಂಬ. ಕ್ರಿಕೆಟ್ ಆಡಬೇಕೆಂಬ ನನ್ನ ಆಸೆಗೆ ಅವರು ಯಾವತ್ತೂ ಅಡ್ಡಿಯಾಗಲಿಲ್ಲ. ಹುಡುಗಿ ಎಂದು ಯಾರೂ ತಾತ್ಸಾರ ಮಾಡಲಿಲ್ಲ. ನಾನು ಕೇಳಿದ್ದನ್ನು ತಂದುಕೊಟ್ಟರು. ಇದು ನಾನು ಈ ಹಂತಕ್ಕೆ ಬೆಳೆದುನಿಲ್ಲಲು ಕಾರಣ~ ಎಂದು ಕರ್ನಾಟಕ ತಂಡದ ಉಪನಾಯಕಿ ಕೂಡ ಆಗಿರುವ ಅವರು ನುಡಿಯುತ್ತಾರೆ.ವೇದಾ ಕೋಚ್ ಇರ್ಫಾನ್ ಸೇಠ್ ಮಾರ್ಗದರ್ಶನದಲ್ಲಿ ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಕ್ರಿಕೆಟ್ (ಕೆಐಒಸಿ) ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದಾರೆ. `ಬೇಸಿಗೆ ಶಿಬಿರಕ್ಕೆಂದು ಪೋಷಕರು ವೇದಾಳನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ದರು. ಆದರೆ ಶಿಬಿರ ಮುಗಿದ ಮೇಲೆ ವಾಪಸ್ ಕರೆದುಕೊಂಡು ಹೋಗಲು ನಿರ್ಧರಿಸಿದ್ದರು. ಕಾರಣ ಅವರಿಗೆ ಇಲ್ಲಿ ಮನೆ ಇರಲಿಲ್ಲ. ಒಬ್ಬಳನ್ನೇ ಬಿಟ್ಟು ಹೋಗಲು ಆಕೆಯ ತಾಯಿಗೆ ಇಷ್ಟವಿರಲಿಲ್ಲ. ಆಗ ಆರಂಭದಲ್ಲಿ ನಾನು ಸ್ನೇಹಿತರ ಮನೆಯಲ್ಲಿ ಆಕೆಗೆ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದ್ದೆ~ ಎಂದು ಇರ್ಫಾನ್ ಆರಂಭದ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.`ನಮ್ಮ ಸಂಸ್ಥೆ ಆಶ್ರಯದಲ್ಲಿ ಅಖಿಲ ಭಾರತ ಕ್ರಿಕೆಟ್ ಟೂರ್ನಿ ಆಯೋಜಿಸುತ್ತಿದ್ದೆವು. ಅದರಲ್ಲಿ ಬಾಲಕರ ತಂಡದಲ್ಲಿ ವೇದಾ ಆಡುತ್ತಿದ್ದಳು. ಆಕೆ ಅತ್ಯುತ್ತಮ ಫೀಲ್ಡರ್. ಗ್ರಾಮೀಣ ಪ್ರದೇಶದಿಂದ ಬಂದಿದ್ದರೂ ಆಕೆ ಮನಸ್ಥಿತಿ ತುಂಬಾ ಗಟ್ಟಿ. ಕಠಿಣ ಪ್ರಯತ್ನ ಹಾಕಿ ಅಭ್ಯಾಸ ನಡೆಸುತ್ತಾಳೆ~ ಎಂದು ಅವರು ವಿವರಿಸುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry