ಕಡೂರು: ಕಳಪೆ ಕಾಮಗಾರಿ ಸಾರ್ವಜನಿಕರ ಆಕ್ರೋಶ

ಕಡೂರು: ಕಳೆದ ವರ್ಷ ಕಡೂರು ಮರವಂಜಿ ರಸ್ತೆಯ ಮಲ್ಲಿದೇವಿಹಳ್ಳಿಯ ಸಮೀಪ ನಿರ್ಮಿಸಿದ ಟಾರ್ ರಸ್ತೆ ಕಳಪೆ ಕಾಮಗಾರಿಯಿಂದ ಕಿತ್ತು ಹೋಗಿದ್ದು, ಎಂಜಿನಿಯರ್ ಮತ್ತು ಶಾಸಕರು ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿದ್ದಾರೆ.
ರಸ್ತೆ ಕಾಮಗಾರಿಗೆ ಆ ಯೋಜನೆ ಈ ಯೋಜನೆಯಿಂದ ಕೋಟಿಗಟ್ಟಲೆ ಹಣ ಬಿಡುಗಡೆಯಾಗಿದೆ ಎಂದು ಭಾಷಣ ಗಳಲ್ಲಿ ಬಡಾಯಿ ಕೊಚ್ಚಿಕೊಳ್ಳುವ ಜನ ಪ್ರತಿನಿಧಿಗಳು ಕ್ಷೇತ್ರದಲ್ಲಿ ಇದ್ದಾರೆಯೇ ? ಎಂಬ ಅನುಮಾನ ಈ ರಸ್ತೆಯಲ್ಲಿ ಸಂಚರಿಸುವಾಗ ಮೂಡುತ್ತಿದೆ ಎಂದು ಮಲ್ಲಿದೇವಿಹಳ್ಳಿಯ ರಂಗಪ್ಪ ಜನಪ್ರತಿ ನಿಧಿಗಳನ್ನು ಪ್ರಶ್ನಿಸುತ್ತಾರೆ.
ಮಲ್ಲಿದೇವಿಹಳ್ಳಿಯ ಸಮೀಪ ಕಳೆದ ವರ್ಷ ಅಂದಾಜು 28 ಲಕ್ಷ ರೂಗಳಲ್ಲಿ ನಿರ್ಮಿಸಿರುವ ಟಾರ್ ರಸ್ತೆ ಕಳಪೆ ಕಾಮಗಾರಿಯಿಂದ ಕಿತ್ತುಹೋಗಿದ್ದರೂ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಸ್ವತಃ ಶಾಸಕರೇ ಗುತ್ತಿಗೆದಾರನ ಪರವಾಗಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿದ್ದು, ಗುತ್ತಿಗೆದಾರನ ವಿರುದ್ಧ ಕಾನೂನು ಕ್ರಮಕ್ಕೆ ಗ್ರಾಮಸ್ಥರು ಹೋರಾಟ ಮಾಡಲು ಮುಂದಾಗಿದ್ದಾರೆ.
ಎಸ್ಸಿಪಿ ಯೋಜನೆಯಡಿಯಲ್ಲಿ ತಾಲ್ಲೂಕಿನ ಹರಿಜನ, ಗಿರಿಜನ ಕಾಲೊನಿ, ತಾಂಡ್ಯ, ಕೊರಮರ ಕಾಲೊನಿಗಳಲ್ಲಿ ನಿರ್ಮಿಸುತ್ತಿರುವ ಕಾಂಕ್ರಿಟ್ ರಸ್ತೆಗಳು ಕಳಪೆಯಿಂದ ಕೂಡಿದ್ದು ಅನೇಕ ಗ್ರಾಮಗಳಲ್ಲಿ ಕಾಂಕ್ರಿಟ್ಗೆ ಉತ್ತಮ ಗುಣಮಟ್ಟದ ಸಿಮೆಂಟ್ ಬಳಸಿಲ್ಲ ದಿರುವುದು ಬೆಳಕಿಗೆ ಬಂದಿದೆ.
ಹಿರೇನಲ್ಲೂರು, ಗಿರಿಯಾಪುರ ಸೊಲ್ಲಾಪುರಕ್ಕೆ ತೆರಳುವ ರಸ್ತೆ, ಎಮ್ಮೆದೊಡ್ಡಿ ಮದಗದಕೆರೆಗೆ ತೆರಳುವ ರಸ್ತೆಗಳ ದುರಸ್ಥಿಗೆ ನಾಗರಿಕರು ಚಾತಕಪಕ್ಷಿಯಂತೆ ಕಾಯುತ್ತಿದ್ದಾರೆ. ಸಿಂಗಟಗೆರೆ, ಪಂಚನಹಳ್ಳಿ, ಮರ ವಂಜಿ ರಸ್ತೆಗಳು ಸ್ವಲ್ಪ ಉತ್ತಮ ವಾಗಿದ್ದು. ಈ ಮಳೆಗಾಲದ ನಂತರ ರಸ್ತೆಯ ನಿರ್ಮಾಣದ ನಿಜವಾದ ಬಣ್ಣ ಬಯಲಾಗುತ್ತದೆ ಎನ್ನುತ್ತಾರೆ ಕೃಷಿಕ ಕಲ್ಲೇಶಪ್ಪ.
ಜಿಲ್ಲಾ ಪಂಚಾಯಿತಿ ಎಂಜಿನಿಯರ್ ವಿಭಾಗಕ್ಕೆ ಒಳಪಡುವ 861 ಕಿ.ಮೀ. ರಸ್ತೆ ಇದ್ದು, ಇದರಲ್ಲಿ 250 ಕೀ.ಮೀ ಡಾಂಬರೀಕರಣವಾಗಿದೆ ನಬಾರ್ಡ್ನ 17 ನೇ ಯೋಜನೆಯಲ್ಲಿ 110 ಲಕ್ಷ, ಆರ್ಡಿಆರ್ ಯೋಜನೆಯಲ್ಲಿ 45 ಲಕ್ಷ, ವಿಶೇಷ ಅನುದಾನದಲ್ಲಿ 9.65ಕೋಟಿ ಅನುದಾನ ಬಂದಿರುವುದಾಗಿ ಎಂಜಿನಿ ಯರ್ ಶಂಕರನಾಯ್ಕ ಮಾಹಿತಿ ನೀಡಿದರು.
ಲೋಕೋಪಯೋಗಿ ಇಲಾ ಖೆಯ ವ್ಯಾಪ್ತಿಗೆ ಬರುವ 404 ಕಿ.ಮೀ.ರಸ್ತೆ ಇದ್ದು 380 ಕಿ.ಮೀ. ಹೀಗಾಗಲೇ ಡಾಂಬರೀಕರಣವಾಗಿದ್ದು, 20 ಕಿ.ಮೀ ಮಾತ್ರ ಬಾಕಿ ಇದೆ.ಒಆರ್ಎಸ್ ಯೋಜನೆಯಡಿಯಲ್ಲಿ 12 ಕೋಟಿ ಅನುದಾನ ಬಂದಿದ್ದು, ತುರುವನಹಳ್ಳಿ, ಗಿರಿಯಾಪುರ, ಸೊಲ್ಲಾಪುರ ಮಾರ್ಗದ ರಸ್ತೆ ಕಾಮಗಾರಿ ನಡೆಯಲಿದೆ.
ಕಡೂರು ಮರವಂಜಿ ರಾಜ್ಯ ಹೆದ್ದಾರಿ ನವೀಕರಣಕ್ಕೆ 1.60 ಕೋಟಿ ಬಿಡುಗಡೆಯಾಗಿದೆ ನಂಜುಂಡಪ್ಪ ಯೋಜನೆಯಡಿಯಲ್ಲಿ ಬಳ್ಳೆಕೆರೆ ರಸ್ತೆಗೆ 43 ಲಕ್ಷ ರೂ ನೀಡಿದ್ದು, 1.30ಕೋಟಿಯಲ್ಲಿ 13 ಗ್ರಾಮಗಳ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ, ಸುವರ್ಣ ವಿಕಾಸ ಯೋಜನೆಯಡಿಯಲ್ಲಿ ಮಲ್ಲೇಶ್ವರ, ಪುರ, ಮಾದಾಪುರ, ಗರ್ಜೆ ರಸ್ತೆಗೆ 53 ಲಕ್ಷ ನೀಡಿರುವುದಾಗಿ ಎಂಜಿನಿಯರ್ ರವಿಕುಮಾರ್ ಮಾಹಿತಿ ನೀಡಿದರು.
ಕಡೂರು ಪುರಸಭೆಯ ರಸ್ತೆಗಳು ಇತ್ತೀಚೆಗೆ ಉತ್ತಮವಾಗಿದ್ದು, ಮಸೀದಿ ಮುಂದಿನ ರಸ್ತೆಯ ಕಾಮಗಾರಿ ಯಾವುದೋ ಒಂದು ಸಮಾಜವನ್ನು ಓಲೈಸಲು ಕೆಲವು ಸಂಘ ಸಂಸ್ಥೆಗಳ ಒತ್ತಡಕ್ಕೆ ಮಣಿದು ಪುರಸಭೆ ಆಡಳಿತ ಕಾಮಗಾರಿಯನ್ನು ನಡೆಸದೆ ಮೀನ ಮೇಷ ಎಣಿಸುತ್ತಿದೆ ಎಂದು ಅನೇಕ ವರ್ತಕರು ಆರೋಪಿಸಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.