ಕಡೂರು: ಪುರಸಭೆ ಶೌಚಾಲಯ ಈಗ ನಿವೇಶನ!

7

ಕಡೂರು: ಪುರಸಭೆ ಶೌಚಾಲಯ ಈಗ ನಿವೇಶನ!

Published:
Updated:

ಕಡೂರು: ಪಟ್ಟಣದ ಅನೇಕ ಶೌಚಾಲಯಗಳು ದುರಸ್ತಿ ಕಾಣದೆ, ನಿರ್ವಹಣೆ ಕೊರತೆಯಿಂದ ದುರ್ವಾಸನೆ ಬೀರುತ್ತಿದ್ದರೆ, ಕೆಲವು ಬಡಾವಣೆಗಳಲ್ಲಿ ಶೌಚಾಲಯಗಳನ್ನು ಸಂಘ, ಸಂಸ್ಥೆ, ವಿವಿಧ ಸಮಾಜಗಳಿಗೆ ಪುರಸಭೆ ಅಡಳಿತ ನಿವೇಶನಗಳಾಗಿ ನೀಡುತ್ತಿರುವುದು ಬೆಳಕಿಗೆ ಬಂದಿದೆ.ಸಂಘ ಸಂಸ್ಥೆಗಳು ನಿವೇಶನ ನೀಡಬೇಕೆಂದು ಪುರಸಭೆಗೆ ಬೇಡಿಕೆ ಇಟ್ಟು ಅರ್ಜಿ ಸಲ್ಲಿಸಿದರೆ, ಸಭೆಯ ಗಮನಕ್ಕೆ ಬಾರದೆ ಅಧ್ಯಕ್ಷರ ಇತರೆ ವಿಷಯದಲ್ಲಿ ಅರ್ಜಿಯನ್ನು ಸೇರಿಸಿ ಖಾಲಿ ಜಾಗಗಳನ್ನು ಗುರುತಿಸಿ ಸಂಘ, ಸಂಸ್ಥೆಗಳಿಗೆ ನಿವೇಶನ ನೀಡಿ ಖಾತೆ ಮಾಡಿ ಕೊಡುತ್ತಿರುವುದು ನಾಗರಿಕರ ಗಮನಕ್ಕೆ ಬಂದಿದೆ.ಸುಮಾರು 15 ಕ್ಕೂ ಹೆಚ್ಚು, ಸಂಘ, ಸಂಸ್ಥೆ, ವಿವಿಧ ಸಮಾಜಗಳು ನಿವೇಶನ ಕೋರಿ ಅರ್ಜಿ ಸಲ್ಲಿಸಿವೆ. ಅಧಿಕಾರ ಮತ್ತು ಹಣ ಬಲವಿರುವ ಸಮಾಜ, ಸಂಘಗಳಿಗೆ ಪುರಸಭೆ ಆಡಳಿತದ ಕೆಲವು ಸದಸ್ಯರು ಮಾರು ಹೋಗಿ ನಿವೇಶನಗಳನ್ನು ನೀಡುತ್ತಿದ್ದು `ನಮ್ಮ ಸಮಾಜವನ್ನು ಕಡೆಗಣಿಸುತ್ತಿದೆ~ ಎಂದು ವಿವಿಧ ಸಮಾಜದ ಮುಖಂಡರು ಆರೋಪಿಸಿದ್ದಾರೆ.ಪಟ್ಟಣದಲ್ಲಿ ಖಾಲಿ ನಿವೇಶನಗಳ ಕೊರತೆ ಇರುವುದರಿಂದ ಶೌಚಾಲಯಗಳ ನಿರ್ವಹಣೆ ಮಾಡದೆ ಹಾಳುಗೆಡವಿ ನಂತರ ಸಂಘ, ಸಂಸ್ಥೆಗಳಿಗೆ ನೀಡುತ್ತಿರುವುದು ಪಟ್ಟಣದ ನಾಗರಿಕರ ಅಸಮಾಧಾನಕ್ಕೆ ಕಾರಣವಾಗಿದೆ.ಪಟ್ಟಣ ಬೆಳೆದಂತೆ ಅಭಿವೃದ್ಧಿ ಹೊಂದುವುದರ ಜತೆಗೆ, ಸಾರ್ವಜನಿಕರಿಗೆ ಶೌಚಾಲಯ ನಿರ್ಮಿಸಬೇಕಾದ ಪುರಸಭೆ ಆಡಳಿತ ಶೌಚಾಲಯಗಳನ್ನು ವಿವಿಧ ಧರ್ಮ, ಜಾತಿ ಸಮಾಜಗಳಿಗೆ ನಿವೇಶನಗಳನ್ನಾಗಿ ನೀಡುತ್ತಿದ್ದಾರೆ. ಇದು ಖಂಡನೀಯ. ಇದನ್ನು ಗಮನಿಸಿದರೆ ಸದಸ್ಯರು ಇನ್ನು 10 ತಿಂಗಳ ನಂತರ ನಡೆಯುವ ಪುರಸಭೆ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ನಡೆಸುತ್ತಿದ್ದಾರೆ ಎಂದು ತಿಳಿಯುತ್ತದೆ ಎಂದು ಸಾರ್ವಜನಿಕರು ದೂರಿದ್ದಾರೆ.`ಮೂಲ ಸೌಕರ್ಯ ನೀಡಲು ಲಕ್ಷಗಟ್ಟಲೆ ಹಣವನ್ನು ಶೌಚಾಲಯದ ಹೆಸರಿನಲ್ಲಿ ವೆಚ್ಚ ಮಾಡಲಾಗುತ್ತಿದೆ. ಶೌಚಾಲಯ ಸ್ವಚ್ಛತೆ, ನಿರ್ವಹಣೆಗೆಂದು ವಾರ್ಷಿಕ ರೂ.3ಲಕ್ಷ, ಅಭಿವೃದ್ಧಿಗೆಂದು ರೂ.15 ಲಕ್ಷ ವೆಚ್ಚ ಮಾಡಲಾಗುತ್ತಿದೆ. ಆದರೂ ಇಲ್ಲಿ ಯಾವುದೇ ಅಭಿವೃದ್ಧಿಯಾಗುತ್ತಿಲ್ಲ. ಈ ಹಣ ಎಲ್ಲಿಗೆ ಹೋಗುತ್ತಿದೆ ಎಂಬುದೂ ನಿಗೂಢವಾಗಿದೆ~ ಎಂದು ಹೆಸರು ಹೇಳಲು ಇಚ್ಛಿಸದ ಪುರಸಭೆ ಸದಸ್ಯರೊಬ್ಬರು ಪ್ರಜಾವಾಣಿಗೆ ತಿಳಿಸಿದರು.

ಪಟ್ಟಣದ 12 ನೇ ವಾರ್ಡ್ ಲ್ಲಿರುವ ಶೌಚಾಲಯವನ್ನು ಉದ್ದೇಶ ಪೂರ್ವಕವಾಗಿ ಪುರಸಭೆ ಆಡಳಿತ ಸದಸ್ಯರೊಬ್ಬರ ಹಿತ ಕಾಪಾಡಲು ಒಂದು ಸಂಘಕ್ಕೆ ನೀಡಿದೆ ಎಂಬ ಆರೋಪ ಕೇಳಿ ಬರುತ್ತಿದೆ.  ವಿಶ್ವನಾಥ್ ವೃತ್ತದಲ್ಲಿ ನೂತನವಾಗಿ ನಿರ್ಮಿಸಿರುವ ಶೌಚಾಲಯ ಉದ್ಘಾಟನೆಗೊಂಡು ಕಾರ್ಯನಿರ್ವಹಿಸುತ್ತಿದ್ದರೂ, ನ್ಯಾಯಾಲಯದ ಕಾಂಪೌಂಡಿಗೆ ಮೂತ್ರ ವಿಸರ್ಜನೆ ಮಾಡುವುದು ತಪ್ಪುತ್ತಿಲ್ಲ ಎಂದು ಅಕ್ಕ ಪಕ್ಕದಲ್ಲಿ ವಾಸವಿರುವವರು ಅಳಲನ್ನು ತೋಡಿಕೊಂಡಿದ್ದಾರೆ. ತಾಲ್ಲೂಕು ಕಚೇರಿಗೆ ಪ್ರತಿದಿನ ಬಂದು ಹೋಗುವ ಸಾವಿರಾರು ಜನರಿಗೆ ಮೂತ್ರ ವಿಸರ್ಜನೆಗೆ ಶೌಚಾಲಯವಿಲ್ಲದೆ ಪರದಾಡುತ್ತಿದ್ದು ಅದರಲ್ಲು ಮಹಿಳೆಯರ ಗೋಳು ಕೇಳುವವರ‌್ಯಾರು? ಎಂದು ಪಂಚನಹಳ್ಳಿ ಗ್ರಾಮದಿಂದ ತಾಲ್ಲೂಕು ಕಚೇರಿ ಕೆಲಸಕ್ಕೆ ಬಂದಿದ್ದ ರಾಜೇಶ್ವರಿ ಸಮಸ್ಯೆ ತಿಳಿಸಿದರು.ಪುರಸಭೆ ಆಡಳಿತವಾರ್ಷಿಕ ಲಕ್ಷಗಟ್ಟಲೇ ಹಣವನ್ನು ಶೌಚಾಲಯಗಳ ಹೆಸರಿನಲ್ಲಿ ವೆಚ್ಚಮಾಡಿ ನಾಗರಿಕರಿಗೆ ಉತ್ತಮ ಸವಲತ್ತು ನೀಡುತ್ತಿಲ್ಲ. ಅವುಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿ ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗುವಂತೆ ಮಾಡಬೇಕು ಎಂದ ಸ್ಥಳೀಯರು ಒತ್ತಾಯಿಸಿದ್ದಾರೆ.

  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry