ಗುರುವಾರ , ಜೂನ್ 4, 2020
27 °C

ಕಡೂರು: ಬರಪೀಡಿತ ಪ್ರದೇಶಕ್ಕೆ ಸಿದ್ದರಾಮಯ್ಯ ಭೇಟಿ....

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಡೂರು: ಬರಪೀಡಿತ ಪ್ರದೇಶಕ್ಕೆ ಸಿದ್ದರಾಮಯ್ಯ ಭೇಟಿ....

ಕಡೂರು: ಬೇಸಿಗೆ ಇನ್ನೂ ಆರಂಭವಾಗಿಲ್ಲ. ಆದರೆ ರಾಜ್ಯ ವಿದ್ಯುತ್ ಕೊರತೆಯಿಂದ ಕತ್ತಲಲ್ಲಿ ಮುಳುಗಿರುವುದಕ್ಕೆ ಭ್ರಷ್ಟ ಬಿಜೆಪಿ ಸರ್ಕಾರ ಕಾರಣ ಎಂದು ವಿಧಾನ ಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

ತಾಲ್ಲೂಕಿನ ಬರಪೀಡಿತ ಗ್ರಾಮಗಳಿಗೆ ಭಾನುವಾರ ಭೇಟಿ ನೀಡಿ ಗ್ರಾಮಸ್ಥರ, ರೈತರ ಸಮಸ್ಯೆ ಆಲಿಸಿ ಪ್ರತಿಕ್ರಿಯಿಸಿದರು.

 

ವಿದ್ಯುತ್ ಕೊರತೆ ನೀಗಿಸಲು ಸರ್ಕಾರವು ವಿಫಲವಾಗಿದ್ದು, ಶೋಭಾ ಕರಂದ್ಲಾಜೆ ಮತ್ತು ಮುಖ್ಯಮಂತ್ರಿ ಸದಾನಂದಗೌಡ ಕಲ್ಲಿದ್ದಲನ್ನು ಖರೀದಿಸಲು ಸರ್ಕಾರದಲ್ಲಿ ಹಣವಿಲ್ಲದೆ ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರ ಸಹಕಾರ ನೀಡುತ್ತಿಲ್ಲ ಎಂಬ ತಪ್ಪು ಮಾಹಿತಿಯನ್ನು ಸಾರ್ವಜನಿಕರಿಗೆ ನೀಡುತ್ತಿದ್ದಾರೆ ಎಂದು ದೂರಿದರು.ಕಳೆದ ಮೂರುವರೆ ವರ್ಷಗಳಿಂದ ಎಷ್ಟು ವಿದ್ಯುತ್ ಉತ್ಪತ್ತಿ ಮಾಡಿದ್ದಾರೆ ? ರಾಯಚೂರು, ಬಳ್ಳಾರಿ, ಉಡುಪಿ, ಮೈಸೂರು ಕೇಂದ್ರಗಳ ಅನೇಕ ಯುನಿಟ್‌ಗಳನ್ನು ಕಲ್ಲಿದ್ದಲ ಕೊರತೆಯಿಂದ ನಿಲ್ಲಿಸಲಾಗಿದ್ದು, ಕಲ್ಲಿದ್ದಲನ್ನು ಕೊಂಡು ಕೊಳ್ಳಲು ಹಣದ ಕ್ಷಾಮವಾಗಿದೆ ಆಡಳಿತ ವೈಪಲ್ಯವೇ ಇದಕ್ಕೆ ಮೂಲಕಾರಣವಾಗಿದೆ.ಬಿಜೆಪಿ ಗಣಿಗಾರಿಕೆಯಲ್ಲಿ ನಡೆಸಿರುವ ಭ್ರಷ್ಟಾಚಾರವನ್ನೇ ಕಲ್ಲಿದ್ದಲ ಖರೀದಿಯಲ್ಲೂ ನಡೆಸಿರುವುದು ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರ ವರದಿಯಲ್ಲಿ ಬಹಿರಂಗವಾಗಿರುವುದು ಎದ್ದು ಕಾಣುತ್ತಿದೆ ಎಂದು ದೂರಿದರು.

 

ಯಗಟಿ ರೈತ ಚಂದ್ರಪ್ಪ ಬರಗಾಲದಿಂದ ತತ್ತರಿಸುತ್ತಿರುವ ಜಾನುವಾರುಗಳಿಗೆ ಹುಲ್ಲಿನ ವ್ಯವಸ್ಥೆ ಮಾಡಿ ಎಂದು ಮನವಿ ಮಾಡಿದಾಗ ಗೋಶಾಲೆಗಳನ್ನು ತೆರೆದು ಜಾನುವಾರುಗಳಿಗೆ ಹ್ಲ್ಲುಲು ನೀರಿನ ವ್ಯವಸ್ಥೆ ಮಾಡಲು ಹಾಗು ಗುಳೇ ಹೋಗುತ್ತಿರುವ ಜನರಿಗೆ ಉದ್ಯೋಗವಕಾಶಗಳನ್ನು ನೀಡಲು ಸರ್ಕಾರಕ್ಕೆ ಒತ್ತಾಯ ಮಾಡುವುದಾಗಿ ಸಿದ್ದರಾಮಯ್ಯ ರೈತರಿಗೆ ಭರವಸೆ ನೀಡಿದರು.ತಾಲ್ಲೂಕಿನಲ್ಲಿ ಅಕ್ರಮವಾಗಿ ನಡೆಯುತ್ತಿರುವ ಕಲ್ಲುಗಣಿಗಾರಿಕೆ ವಿಷಯವನ್ನು ಮುಂದಿನ ವಿಧಾನ ಸಭೆಯಲ್ಲಿ ಪ್ರಸ್ತಾವನೆ ಮಾಡುವುದಾಗಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದರು. ಕೆರೆಗಳಿಗೆ ಹೂಳೆತ್ತಲು ಹಣ ಬಿಡುಗಡೆ ಮಾಡಿದರೆ ಗುತ್ತಿಗೆದಾರ ಮತ್ತು ಅಧಿಕಾರಿಗಳ ಜೇಬುಗಳು ತುಂಬುತ್ತವೆ. ಬರಗಾಲ ಬಂದರೆ ಕೆಲವು ಜನರಿಗೆ ಹಬ್ಬವಾಗುತ್ತದೆ ಎಂದು ವ್ಯಂಗ್ಯವಾಡಿದರು.  ಅನುಭವವಿಲ್ಲದ ಮುಖ್ಯಮಂತ್ರಿ ಸದಾನಂದಗೌಡ, ಯಡಿಯೂರಪ್ಪನವರ ರಿಮೋಟ್ ಕಂಟ್ರೋಲ್‌ನಿಂದ ಕಾರ್ಯನಿರ್ವಹಿಸುತ್ತಿದ್ದು, ಸ್ವತಂತ್ರ ನಿರ್ಧಾರ ಕೈಗೊಳ್ಳಲು ಆಗುತ್ತಿಲ್ಲ. ರಾಜ್ಯ ಬೊಕ್ಕಸ ಖಾಲಿಯಾಗಿ ಜಿಲ್ಲಾಧಿಕಾರಿಗಳಿಗೆ ಹಣ ಬಿಡುಗಡೆಯಾಗುತ್ತಿಲ್ಲ ಎಂದು ಚಾಮರಾಜನಗರ ಮತ್ತು ಮಂಡ್ಯ ಜಿಲ್ಲಾಧಿಕಾರಿಗಳು ತಿಳಿಸಿದರು ಎಂದು ಹೇಳಿದರು. 

 

ಕಾಂಗ್ರೆಸ್ ಮುಖಂಡ ಕೆ.ಬಿ.ಮಲ್ಲಿಕಾರ್ಜುನ್, ವಿಧಾನ ಪರಿಷತ್ ಸದಸ್ಯೆ ಗಾಯಿತ್ರಿ ಶಾಂತೇಗೌಡ, ಕಡೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಪ್ಪ,ಬೀರೂರು ಬ್ಲಾಕ್ ಅಧ್ಯಕ್ಷ ವಿನಾಯಕ,ಕಡೂರು ಪುರಸಭೆ ಸದಸ್ಯರಾದ ರೇಣೂಕಾರಾಧ್ಯ, ಆನಂದ್ ಮತ್ತು ಸಾವಿತ್ರಿ ಗಂಗಣ್ಣ, ಡಿ.ಲಕ್ಷ್ಮಣ್ ಹಾಗು ಕಾಂಗ್ರೆಸ್ ಕಾರ್ಯಕರ್ತರು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.