ಬುಧವಾರ, ಮೇ 18, 2022
23 °C

ಕಡೂರು: ಹೆಚ್ಚುತ್ತಿರುವ ಅಗ್ನಿ ದುರಂತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಡೂರು: ತಾಲ್ಲೂಕಿನಾದ್ಯಂತ ಇತ್ತೀಚೆಗೆ ಅಗ್ನಿದುರಂತ ಹೆಚ್ಚುತ್ತಿದ್ದು ಸಾರ್ವಜನಿಕರು ಆತಂಕಪಡುವಂತಾಗಿದೆ. ಕಳೆದ ವರ್ಷ 18 ಅಗ್ನಿ ದುರಂತ ಪ್ರಕರಣಗಳು ದಾಖಲಾಗಿದ್ದರೆ ಈ ಬಾರಿ 2011 ಜ.1ರಿಂದ ಫೆ. 22 ರವರೆಗೆ 50 ಕ್ಕೂ ಹೆಚ್ಚು ದುರಂತ ಸಂಭವಿಸಿವೆ. 112 ಕ್ವಿಂಟಲ್ ಅಡಿಕೆ, 25 ಕ್ವಿಂಟಲ್ ಕೊಬ್ಬರಿ, 40 ಎಕರೆ ಕಬ್ಬು, 12 ತೆಂಗಿನ ತೋಟ, ಅಮೃತ್ ಮಹಲ್ ಕಾವಲ್‌ನ 2 ಎಕರೆ ಹುಲ್ಲುಗಾವಲು, 12 ಹಂಚಿನಮನೆ, 16 ಗುಡಿಸಲು, ದೊಡ್ಡಬುಕ್ಕಸಾಗರದ 11 ಎಕರೆ ಮಾವಿನ ತೋಟ, ಕಡೂರು ಪಟ್ಟಣದ 2 ಪೆಟ್ಟಿಗೆ ಅಂಗಡಿ, ಚನ್ನಾಪುರದ ಕೊಬ್ಬರಿ, ಅಡಿಕೆ, ರಾಗಿ ಗೋದಾಮು, 100 ಕ್ಕೂ ಹೆಚ್ಚು ರಾಗಿ ಬಣವೆ, 4 ಬೇವಿನ ಮರಗಳು ಬೆಂಕಿಗೆ ಆಹುತಿಯಾಗಿವೆ.ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಬೆಂಕಿಯ ಆಕಸ್ಮಿಕಗಳು ಹೆಚ್ಚಾಗಿದ್ದು, ಬೇಸಿಗೆಯಲ್ಲಿ ಸಂಭವಿಸುವ ಅನಾಹುತಗಳಿಗೆ ಮುನ್ನೆಚ್ಚರಿಕೆಯಾಗಿ ಕ್ರಮ ಕೈಗೊಳ್ಳದೆ ಇರುವುದು, ಬೆಂಕಿ ಹೊತ್ತಿಕೊಳ್ಳುವಂತಹ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆಯುವುದು ಇದಕ್ಕೆ ಕಾರಣ.ಅಗ್ನಿ ಸಂಭವಿಸಿದಾಗ ಮೊದಲು ಬೆಂಕಿ ತಗುಲಿರುವ ಆಸ್ತಿ ರಕ್ಷಿಸಲು ಪ್ರಯತ್ನ ಪಡಬೇಕು. ಒಂದು ವೇಳೆ ಅದು ಕೈಮೀರುತ್ತಿದ್ದರೆ ಅಕ್ಕ ಪಕ್ಕದ ಆಸ್ತಿಯನ್ನು ರಕ್ಷಿಸಲು ಮೊದಲು ನೀರನ್ನು ಎರಚುವುದು ಸೂಕ್ತ. ಜನ ಹಾಗೂ ದನ ಕರುಗಳಿದ್ದರೆ ಭಯ ಪಡಿಸದೇ ಮೊದಲು ಅವುಗಳನ್ನು ರಕ್ಷಿಸಲು ಕೊಟ್ಟಿಗೆ ಒಂದು ಭಾಗವನ್ನು ಕಿತ್ತು ಕಟ್ಟಿರುವ ಹಗ್ಗಗಳನ್ನು ಕಡಿದು ಹೊರಗೆ ಓಡಿಸಲು ಪ್ರಯತ್ನಿಸಬೇಕು. ವಿದ್ಯುತ್ ಲೈನ್‌ಗಳಿದ್ದರೆ ಗ್ರಾಮದಲ್ಲಿರುವ ಲೈನ್‌ಮನ್ ಕರೆಸಿ ಮೊದಲು ಸಂಪರ್ಕ ಕಡಿತಗೊಳಿಸಲು ತಿಳಿಸಬೇಕು ಎಂಬುದರ ಬಗ್ಗೆ ಜನರಲ್ಲಿ ಅರಿವು ಇಲ್ಲ.ಬಣವೆಗಳನ್ನು ಮಾಡುವಾಗ ಮನೆಯಿಂದ ಕನಿಷ್ಠ 30 ಅಡಿಗಳ ಅಂತರವಿರಬೇಕು. ಬಣವೆಗಳ ಸಮೀಪ ತಿಪ್ಪೆಗಳಿರಬಾರದು ಕಸ, ಕಡ್ಡಿಗಳನ್ನು ಎಸೆಯಬಾರದು ಕಾರಣ ತಿಪ್ಪೆಗಳಿಗೆ ಹಾಕುವ ಬೂದಿ ಹೊಗೆಯಾಡಿ ಕಿಡಿಗಳು ಬಣವೆಗಳನ್ನು ತಲುಪುವ ಸಾಧ್ಯತೆಗಳಿರುತ್ತವೆ. ಸಾರ್ವ–ಜನಿಕರು ಬೀಡಿ, ಸಿಗರೇಟ್‌ಗಳನ್ನು ಸೇದಿ ಎಲ್ಲೆಂದರಲ್ಲಿ ಎಸೆಯುವುದು ಅಗ್ನಿಗೆ ಆಸ್ಪದ ನೀಡಿದಂತೆ ಆದ್ದರಿಂದ ತಾವುಗಳು ಸೇದುವ ಬೀಡಿಗಳನ್ನು ನಂದಿಸಿ ಎಸೆದರೆ ಆಗುವ ಅಗ್ನಿ ದುರಂತವನ್ನು ತಪ್ಪಿಸಿದಂತಾಗುತ್ತದೆ. ಕೊಟ್ಟಿಗೆಗಳಲ್ಲಿ ದೀಪಗಳನ್ನು ದನಕರುಗಳ ಸಮೀಪ ಇಡಬಾರದು ಕಾರಣ ದನಗಳು ಕಾಲಿನಿಂದ ಬೀಳಿಸಿದರೆ ಹುಲ್ಲಿಗೆ ಬೆಂಕಿ ಬಿದ್ದು ದುರಂತಗಳು ಸಂಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ.ತಾಲ್ಲೂಕಿನಲ್ಲಿ 12 ಮನೆಗಳು, 27 ಬಣವೆ, 5 ತೆಂಗಿನತೋಟ, 11 ಕಬ್ಬಿನಗದ್ದೆಗಳಿಗೆ ಬೆಂಕಿ ತಗುಲಿದ್ದು, ಒಟ್ಟು 36 ಲಕ್ಷ ಮೌಲ್ಯದ ಆಸ್ತಿಗೆ ಹಾನಿಯಾಗಿದ್ದು, 27 ಲಕ್ಷರೂ ಗಳ ಆಸ್ತಿ ಉಳಿಸಿರುವುದಾಗಿ ಕಡೂರು ಅಗ್ನಿ ಶಾಮಕ ದಳದ ಅಧಿಕಾರಿ ಕೆ.ಜವರಯ್ಯ ತಿಳಿಸಿದರು.ಕಡೂರು ತಾಲ್ಲೂಕು ಅಗ್ನಿ ಶಾಮಕದ ದೂರವಾಣಿಯ ಮೊದಲು ಚಾಲ್ತಿಯಲ್ಲಿದ್ದ 101 ದೂರವಾಣಿ ಸಂಖ್ಯೆಯನ್ನು ದೂರಸಂಪರ್ಕ ಇಲಾಖೆ ಕಡಿತಗೊಳಿಸಿದೆ. ಆದರೆ ಚಿಕ್ಕಮಗಳೂರಿನ ಅಗ್ನಿಶಾಮಕ ದಳದಲ್ಲಿ ಇದೇ ಸಂಖ್ಯೆ ಚಾಲ್ತಿಯಲ್ಲಿದೆ. ಇದಕ್ಕೆ ಕರೆ ಮಾಡಿದರೆ ಅದು ಚಿಕ್ಕಮಗಳೂರಿಗೆ ಹೋಗಿ ನಂತರ ನಮ್ಮ ಕಚೇರಿಗೆ ಮಾಹಿತಿ ಬರುತ್ತದೆ. ಇಲ್ಲಿನ  ದೂರಸಂಪರ್ಕ ಇಲಾಖೆ 101 ರ ಸಂಖ್ಯೆಯನ್ನು ಚಾಲ್ತಿಗೆ ತರಲು ನಾವು ಮನವಿ ಮಾಡಿದರೂ ಇಲಾಖೇ ಸ್ಪಂದಿಸುತ್ತಿಲ್ಲ ಎಂದು ದೂರಿದರು.  ಕೆಲವರು 108(ಆರೋಗ್ಯ ಕವಚ) ಕ್ಕೆ ಕರೆ ಮಾಡುತ್ತಿದ್ದು ಅವರು ನಮಗೆ ವಿಳಾಸ ತಿಳಿಸಲು ಕನಿಷ್ಟ 15 ನಿಮಿಷಗಳು ತೆಗೆದುಕೊಳ್ಳುತ್ತದೆ ಆದ್ದರಿಂದ ನೇರವಾಗಿ ಕಡೂರು ಅಗ್ನಿ ಶಾಮಕಕ್ಕೆ  ಸಂಪರ್ಕಿಸುವುದು ಸೂಕ್ತ. ಸ್ಥಿರ ದೂರವಾಣಿ 08267-221800 ಅಥವಾ 9844317745 ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು. 

 

                   

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.