ಭಾನುವಾರ, ಮೇ 16, 2021
26 °C

ಕಡ್ಡಾಯವಾಗಿ ಕರ ವಸೂಲಿಗೆ ತಾಕೀತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: `ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕರ ವಸೂಲಾತಿ ಕುಂಠಿತಗೊಂಡಿದೆ. ಶೀಘ್ರವೇ, ವಿಶೇಷ ಆಂದೋಲನ ಹಮ್ಮಿಕೊಂಡು ತೆರಿಗೆ ವಸೂಲಾತಿ ಆರಂಭಿಸಬೇಕು' ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಎಸ್. ಮಹದೇವಪ್ರಸಾದ್ ತಾಕೀತು ಮಾಡಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ನಗರ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ನಗರ ಸ್ಥಳೀಯ ಸಂಸ್ಥೆಗಳು ತೆರಿಗೆ ವಸೂಲಾತಿ ಕಾರ್ಯವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಕರ ವಸೂಲಾತಿ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸಿದರೆ ಸ್ಥಳೀಯ ಸಂಸ್ಥೆಗಳು ಆರ್ಥಿಕವಾಗಿ ಸದೃಢಗೊಳ್ಳುತ್ತವೆ. ಆದರೆ, ನಿರೀಕ್ಷಿತ ಗುರಿ ಸಾಧಿಸಲು ವಿಫಲವಾಗಿವೆ. ಕೂಡಲೇ, ಕರ ಸಂಗ್ರಹಣೆಗೆ ಅಧಿಕಾರಿಗಳು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಜುಲೈ ಅಂತ್ಯದೊಳಗೆ ಶೇ 80ರಷ್ಟು ಸಾಧನೆ ಮಾಡಬೇಕು ಎಂದು ಸೂಚಿಸಿದರು.ಆಸ್ತಿ ತೆರಿಗೆ ವಸೂಲಿ ಕೆಲಸವನ್ನು ಯೋಜನಾ ಬದ್ಧವಾಗಿ ನಿರ್ವಹಿಸಬೇಕು. ಕಟ್ಟಡ, ವಾಣಿಜ್ಯ ಸಮುಚ್ಚಯ, ಅಂಗಡಿಗಳು ಸೇರಿದಂತೆ ವಿವಿಧ ಮೂಲದಿಂದ ಬರಬೇಕಿರುವ ಆದಾಯ ಸಂಗ್ರಹ ಕುರಿತು ಮಾಹಿತಿ ಸಂಗ್ರಹಿಸಬೇಕು. ತೆರಿಗೆ ಸಂಗ್ರಹಣೆಯಲ್ಲಿ ಯಾವುದೇ ಪ್ರಭಾವಕ್ಕೆ ಮಣಿಯಬಾರದು ಎಂದರು.

ಚಾಮರಾಜನಗರದ ನಗರಸಭೆ ಪೌರಾಯುಕ್ತ ಶಿವಸ್ವಾಮಿ ಮಾತನಾಡಿ, `ಆಸ್ತಿ ತೆರಿಗೆ ಸಂಬಂಧ ಪಟ್ಟಿ ತಯಾರಿಸಲಾಗುತ್ತಿದೆ. ಶೀಘ್ರವೇ, ದರ ಪಟ್ಟಿ ಸಿದ್ಧಪಡಿಸಿ ವಸೂಲಾತಿ ಪ್ರಕ್ರಿಯೆ ಆರಂಭಿಸಲಾಗುವುದು' ಎಂದು ಸಭೆಗೆ ತಿಳಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಜೂ. 29ರೊಳಗೆ ಪಟ್ಟಿ ಅಂತಿಮಗೊಳಿಸಬೇಕು. ನಂತರ, ಆಸ್ತಿ ತೆರಿಗೆ ವಸೂಲಾತಿ ಕಾರ್ಯ ಚುರುಕುಗೊಳಿಸಬೇಕು ಎಂದು ಸೂಚಿಸಿದರು.ಅಕ್ರಮ ನಲ್ಲಿ ಸಂಪರ್ಕ: ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿ ಕೆಲವು ಹೋಟೆಲ್, ರೆಸ್ಟೋರೆಂಟ್, ಕೈಗಾರಿಕೆ, ಉದ್ದಿಮೆ ಘಟಕಗಳು ಅಕ್ರಮವಾಗಿ ಕುಡಿಯುವ ನೀರಿನ ಸಂಪರ್ಕ ಪಡೆದುಕೊಂಡಿವೆ. ಇದನ್ನು ಸಹಿಸುವುದಿಲ್ಲ. ಹೋಟೆಲ್, ವಾಣಿಜ್ಯ ಉದ್ದಿಮೆಗಳಿಗೆ ಸರಬರಾಜಾಗುವ ನೀರಿಗೆ ಪ್ರತ್ಯೇಕ ತೆರಿಗೆ ವಸೂಲಿ ಮಾಡಬೇಕು. ಅಕ್ರಮ ಸಂಪರ್ಕ ಕಡಿತಗೊಳಿಸಲು ಅಡಚಣೆ ಉಂಟು ಮಾಡಿದರೆ ಪೊಲೀಸರ ಸಹಕಾರ ಪಡೆದು ಪ್ರಕರಣ ದಾಖಲಿಸಬೇಕು. ಹೋಟೆಲ್‌ಗಳಿಗೆ ಪೂರೈಕೆಯಾಗುವ ನೀರಿನಿಂದ ನಾಗರಿಕರಿಗೆ ವ್ಯತ್ಯಯವಾದರೆ ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.ನೀರಿನ ತೆರಿಗೆ ವಸೂಲಾತಿಗೂ ಅಧಿಕಾರಿಗಳು ನಿರ್ಲಕ್ಷ್ಯವಹಿಸಬಾರದು. ವಿದ್ಯುತ್ ಬಿಲ್ ವಸೂಲಾತಿ ಮಾದರಿಯಲ್ಲಿಯೇ ನೀರಿನ ತೆರಿಗೆ ಪಾವತಿಸಲು ಜನರನ್ನು ಪ್ರೇರೇಪಿಸಬೇಕು. ಅನಧಿಕೃತ ನಲ್ಲಿ ಸಂಪರ್ಕಗಳನ್ನು ತಿಳಿವಳಿಕೆ ನೀಡಿ ಕಡಿತಗೊಳಿಸಬೇಕು ಎಂದರು.ಸ್ಥಳೀಯ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡ, ಹಿಂದುಳಿದ ವರ್ಗ, ಅಂಗವಿಕಲರ ಕಲ್ಯಾಣಕ್ಕೆ ಮೀಸಲಾಗಿರುವ ಅನುದಾನ ಸದ್ಬಳಕೆಯಾಗಬೇಕು. ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಯೋಜನೆಯಡಿ ಮೂಲ ಸೌಕರ್ಯ ಒದಗಿಸಲು ನಿಗದಿಯಾಗಿರುವ ರೂ 10 ಕೋಟಿಯಲ್ಲಿ ಜಿಲ್ಲಾ ಕೇಂದ್ರದ ಜೋಡಿರಸ್ತೆ ವಿಸ್ತರಣೆ ಕಾಮಗಾರಿಗೆ ಪ್ರಸ್ತಾವ ಸಿದ್ಧಪಡಿಸಬೇಕು ಎಂದು ಸೂಚಿಸಿದರು.ಸಭೆಯಲ್ಲಿ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಆರ್. ನರೇಂದ್ರ, ಎಸ್. ಜಯಣ್ಣ, ಜಿಲ್ಲಾಧಿಕಾರಿ ಎಂ.ವಿ. ಸಾವಿತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರಪ್ರಸಾದ್, ಹೆಚ್ಚುವರಿ ಜಿಲ್ಲಾಧಿಕಾರಿ ಡಿ. ಭಾರತಿ, ನಗರಸಭೆ, ಪಟ್ಟಣ ಪಂಚಾಯಿತಿ, ಪುರಸಭೆಯ ಮುಖ್ಯಾಧಿಕಾರಿಗಳು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.