ಕಡ್ಡಾಯ ದೈಹಿಕ ಶಿಕ್ಷಣದಿಂದ ದೇಶವೂ ಬಲಿಷ್ಠ...

7

ಕಡ್ಡಾಯ ದೈಹಿಕ ಶಿಕ್ಷಣದಿಂದ ದೇಶವೂ ಬಲಿಷ್ಠ...

Published:
Updated:
ಕಡ್ಡಾಯ ದೈಹಿಕ ಶಿಕ್ಷಣದಿಂದ ದೇಶವೂ ಬಲಿಷ್ಠ...

ನಮ್ಮ ಶಿಕ್ಷಣ ರಂಗದಲ್ಲಿ ದೈಹಿಕ ಶಿಕ್ಷಣಕ್ಕೆ ಸಂಬಂಧಿಸಿದ ಚಟುವಟಿಕೆಗಳು ಮುಂದಿನ ದಿನಗಳಲ್ಲಿ ಬಲು ಮುಖ್ಯ ಪಾತ್ರ ವಹಿಸಲಿರುವುದಂತು ನಿಜ. ಪಾಶ್ಚಿಮಾತ್ಯ ದೇಶಗಳು ಮತ್ತು ನಮ್ಮ ನೆರೆಯ ಚೀನಾ ದೇಶದಲ್ಲಿ ಈ ದಿಸೆಯಲ್ಲಿ ಸಾಧಿಸಿದ ಯಶಸ್ಸು ಭಾರತಕ್ಕೆ ಇದೀಗ ಮಾದರಿಯಾಗಿ ಕಾಣತೊಡಗಿದೆ.ಭಾರತದಲ್ಲಿ ದೈಹಿಕ ಕ್ರೀಡಾ ಚಟುವಟಿಕೆ, ಆರೋಗ್ಯ ಶಿಕ್ಷಣಗಳನ್ನು ಗಂಭೀರವಾಗಿ ಪರಿಗಣಿಸಿದವರು ಕಡಿಮೆಯೇ. ಶಾಲಾ ಕಾಲೇಜುಗಳಲ್ಲಿ ಯಾರೋ ಕೆಲವರು ಹಾಕಿ, ಫುಟ್‌ಬಾಲ್, ಕ್ರಿಕೆಟ್  ಆಡುವುದನ್ನು ಹೊರತು ಪಡಿಸಿದರೆ ವಿದ್ಯಾರ್ಥಿಗಳಲ್ಲಿ ವ್ಯಾಪಕವಾದ ಕ್ರೀಡಾ ಚಟುವಟಿಕೆ ಎದ್ದು ಕಾಣುವುದೇ ಇಲ್ಲ.ಈಗ ಕಾಲ ಬದಲಾಗಿದೆ. ಸರ್ಕಾರ ಕೂಡಾ ದೈಹಿಕ ಶಿಕ್ಷಣವನ್ನು ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಕರ್ನಾಟಕ ಸರ್ಕಾರವೇ ಈ ದಿಸೆಯಲ್ಲಿ 6ನೇ ತರಗತಿಯಿಂದ 10ನೇ ತರಗತಿಯವರೆಗೆ ದೈಹಿಕ ಶಿಕ್ಷಣವನ್ನು ಶಿಕ್ಷಣದ ಭಾಗವನ್ನಾಗಿ ಮಾಡುತ್ತಿರುವ ಯೋಜನೆಯ ಪ್ರಮುಖ ಕಾರ್ಯಕ್ರಮದಲ್ಲಿ ನಾನೂ ಪಾಲ್ಗೊಂಡಿದ್ದೇನೆ. ಇನ್ನೊಂದು ವರ್ಷದಲ್ಲಿ ಇದು ಜಾರಿಗೆ ಬರುವ ಸಾಧ್ಯತೆಗಳಿವೆ.ಒಬ್ಬ ವಿದ್ಯಾರ್ಥಿಯನ್ನು ದೈಹಿಕ ಚಟುವಟಿಕೆ ಮತ್ತು ಕ್ರೀಡೆಯ ಮೂಲಕ ಬಲಿಷ್ಠಗೊಳಿಸುವುದೇ ಈ ಕಾರ್ಯಕ್ರಮದ ಹೆಗ್ಗುರಿ. ಇಲ್ಲಿ ವಿದ್ಯಾರ್ಥಿಯ `ಫಿಟ್‌ನೆಸ್' ಅನ್ನು ಅಳೆಯುವ ಮಾನದಂಡ ವಿಭಿನ್ನ ವಯೋಮಿತಿಯವರಿಗೆ ವಿಭಿನ್ನ ರೀತಿಯದ್ದಾಗಿರುತ್ತದೆ. ಈ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಪಠ್ಯಪುಸ್ತಕಗಳು ಕೂಡಾ ವೈಜ್ಞಾನಿಕ ಸ್ವರೂಪದ್ದಾಗಿದೆ.ಇಂತಹ ದೈಹಿಕ ಚಟುವಟಿಕೆ ಅಥವಾ `ಫಿಟ್‌ನೆಸ್' ಕಾರ್ಯಕ್ರಮಗಳು ಶಾಲಾ ಕಾಲೇಜುಗಳಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಒಳಗೊಳ್ಳುವುದರಿಂದ ಮುಂದೊಂದು ದಿನ ಚೀನಾ ಮಾದರಿಯ ಕ್ರೀಡಾ `ಹೆಗ್ಗಳಿಕೆ'ಯ ಎತ್ತರಕ್ಕೆ ಭಾರತ ಏರಿದರೂ ಅಚ್ಚರಿ ಪಡುವಂತಹದ್ದೇನಿಲ್ಲ. ಚೀನಾದಲ್ಲಿ ರಾಷ್ಟ್ರೀಯ ಟೇಬಲ್ ಟೆನಿಸ್ ತಂಡವೊಂದನ್ನು ಆಯ್ಕೆ ಮಾಡಲು ನಡೆಯುವ ಪ್ರಕ್ರಿಯೆ ಬಲು ಕುತೂಹಲಕಾರಿ.ದೇಶದ ಮೂಲೆಮೂಲೆಗಳಿಂದ ಸುಮಾರು ಎರಡು ಲಕ್ಷ ಮಂದಿ ಪೈಪೋಟಿಗಿಳಿದು, ಅಂತಿಮ ಹಂತದಲ್ಲಿ ಆಯ್ಕೆ ನಡೆಯುತ್ತೆ. ಇಂತಹ ಕ್ರೀಡಾ ಸಂಸ್ಕೃತಿ ಚೀನಾದಲ್ಲಿ ಜೀವ ಪಡೆದಿದೆ. ಈ ಕಾರಣದಿಂದಲೇ ಚೀನಾ ಕೇವಲ ಕಾಲು ಶತಮಾನದ ಅವಧಿಯಲ್ಲಿ ಒಲಿಂಪಿಕ್ಸ್ ಪದಕ ಪಟ್ಟಿಯಲ್ಲಿ ಏರಿದ ಎತ್ತರ ಅನನ್ಯ.ದೈಹಿಕ ಶಿಕ್ಷಣವನ್ನು ಕಡ್ಡಾಯಗೊಳಿಸುವುದರಿಂದ ಆರೋಗ್ಯವಂತ ವಿದ್ಯಾರ್ಥಿಗಳನ್ನು ರೂಪಿಸಿದಂತಾಗುತ್ತದೆ. ಇಂತಹ ವಿದ್ಯಾರ್ಥಿಗಳೇ ಬಲಿಷ್ಠ ದೇಶ ಕಟ್ಟಲು ಸಮರ್ಥರು ಎಂದರೆ ಅತಿಶಯೋಕ್ತಿ ಎನಿಸುವುದಿಲ್ಲ.

ಶಾಲಾ ಕಾಲೇಜುಗಳಲ್ಲಿ ಇಂತಹ ಚಟುವಟಿಕೆಗೆ ಪೋಷಕರನ್ನೂ ಜಾಗೃತಗೊಳಿಸಬೇಕಾದ ಅಗತ್ಯವನ್ನೂ ನಾವು ಮರೆಯುವಂತಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry