ಕಡ್ಡಾಯ ಮಲಯಾಳ ಹೇರಿಕೆಗೆ ಆಕ್ಷೇಪ

ಶುಕ್ರವಾರ, ಜೂಲೈ 19, 2019
26 °C

ಕಡ್ಡಾಯ ಮಲಯಾಳ ಹೇರಿಕೆಗೆ ಆಕ್ಷೇಪ

Published:
Updated:

ಬದಿಯಡ್ಕ: ಕೇರಳದ ಎಲ್ಲಾ ಶಾಲೆಗಳಲ್ಲಿ ಈ ವರ್ಷದಿಂದಲೇ ಜಾರಿಗೆ ಬರುವಂತೆ ಮಲಯಾಳವನ್ನು ಪ್ರಥಮ ಭಾಷೆಯಾಗಿ ಕಲಿಸಬೇಕೆಂಬ ಕೇರಳ ಸರ್ಕಾರದ ಆದೇಶವು ಕಾಸರಗೋಡಿನ ಕನ್ನಡಿಗರಿಗೆ ನುಂಗಲಾರದ ತುತ್ತಾಗಿದೆ.

 ಈ ಆದೇಶದಿಂದ ಕಾಸರಗೋಡಿನ ಶೈಕ್ಷಣಿಕ ಕ್ಷೇತ್ರಕ್ಕೆ ಬಲವಾದ ಹೊಡೆತ ಬೀಳಲಿದೆ. ಕನ್ನಡ ಭಾಷಾ ಅಲ್ಪಸಂಖ್ಯಾತರಿಗೆ ದೊರೆಯುವ ಅನೇಕ ಸವಲತ್ತುಗಳು ಕಡಿತಗೊಳ್ಳಲಿದೆ.ಯಾವುದೇ ಭಾಷೆ ಬಳಕೆಯಾದರೆ ಮಾತ್ರ ಅದರ ಅಸ್ತಿತ್ವ ಉಳಿಸಿಕೊಳ್ಳುತ್ತದೆ. ಕೇರಳ ಸರ್ಕಾರದ ಮಲಯಾಳೀಕರಣದ ಆದೇಶವು  ಸಾರ್ವತ್ರಿಕವಾಗಿ ಅನುಷ್ಠಾನಕ್ಕೆ ಬಂದರೆ ಕಾಸರಗೋಡಿನ ಕನ್ನಡಿಗರೂ ಕೂಡಾ ಅನಿವಾರ್ಯವಾಗಿ ಮಲಯಾಳ ಕಲಿಯಬೇಕಾದೀತು. ಆಗ ಕ್ರಮೇಣ ಕನ್ನಡವು ಕಾಸರಗೋಡಿನಲ್ಲಿ ಮನೆಯೊಳಗಿನ ಭಾಷೆಗೆ ಸೀಮಿತವಾಗಿ, ಕ್ರಮೇಣ ಕಣ್ಮರೆಯಾಗುವ ಸಾಧ್ಯತೆ ಹೆಚ್ಚಿದೆ. ಈ ನಿಟ್ಟಿನಲ್ಲಿ ಕನ್ನಡಿಗರು ಸರ್ಕಾರಿ ಆದೇಶದ ವಿರುದ್ಧ ಕಳವಳದಲ್ಲೇ ಪ್ರತಿಭಟನೆ ಮಾಡುತ್ತಿದ್ದಾರೆ.ಜಿಲ್ಲೆಯ ಶಿಕ್ಷಣ, ಆಡಳಿತದಂತಹ ಪ್ರಮುಖ ರಂಗವು ಮಲಯಾಳಿ ಪ್ರವೇಶದಿಂದ ಸತ್ವಹೀನವಾಗಲಿದೆ. ಕಾಸರಗೋಡಿನ ಕನ್ನಡಿಗರು ಮಲಯಾಳ ಭಾಷೆಯ ವಿರೋಧಿಗಳಲ್ಲ. ಅವರು ಮಲಯಾಳೀಕರಣವನ್ನು ಕನ್ನಡಿಗರ ಮೇಲೆ ಹೇರುವ ಪ್ರಯತ್ನವನ್ನು ವಿರೋಧಿಸುತ್ತಾರೆ. ಕರ್ನಾಟಕ ರಾಜ್ಯದಲ್ಲಿ ಕಾಸರಗೋಡಿನ ಕನ್ನಡಿಗರಿಗೆ ಕನ್ನಡ ಭಾಷಾ ಅಲ್ಪಸಂಖ್ಯಾತರೆಂದು ಹೆಚ್ಚಿನ  ದೊರೆತಲ್ಲಿ ಮಾತ್ರ ಕಾಸರಗೋಡಿನಲ್ಲಿ ಕನ್ನಡ ಉಳಿಯಬಹುದು ಎಂದು ಖ್ಯಾತ ವೈದ್ಯ ಡಾ.ನರೇಶ್ ಮುಳ್ಳೇರಿಯಾ ಹೇಳುತ್ತಾರೆ.ಶಾಲೆಗಳಲ್ಲಿ ಕನ್ನಡ ಹಾಗೂ ಮಲಯಾಳ ಭಾಷೆಯು ವಿದ್ಯಾರ್ಥಿಯ ಐಚ್ಛಿಕ ವಿಷಯವಾಗಿರಲಿ. ಭಾಷೆ ಕಲಿಯುವ ಹಕ್ಕು ಎಲ್ಲರಿಗೂ ಇದೆ. ಕನ್ನಡ ಪ್ರದೇಶದಲ್ಲಿ ಮಲಯಾಳ ಎರಡನೇ ಭಾಷೆಯಾಗಿ ನಿಲ್ಲಲಿ. ಪ್ರಥಮ ಭಾಷೆಯಾಗಿ ಕನ್ನಡವೇ ಇರಲಿ ಎಂಬುದು ಮುಳ್ಳೇರಿಯಾದ ಪತ್ರಿಕಾ ಪ್ರತಿನಿಧಿ ಪಿ.ಕೆ. ವಿಷ್ಣುಪ್ರಕಾಶ್ ಅಭಿಮತ. ಕೇರಳ ಸರ್ಕಾರದ ಈ ಆದೇಶವು ಕಾಸರಗೋಡು ಜಿಲ್ಲೆಯಲ್ಲಿ ಕನ್ನಡ ನಿರ್ಮೂಲನಕ್ಕೆ ಇರುವ ಹೊಸ ತಂತ್ರ ಎಂದು ಮುಳ್ಳೇರಿಯಾದ ಹಿರಿಯ ನಾಗರಿಕರ ವೇದಿಕೆಯ ಕಾರ್ಯದರ್ಶಿ ಕೆ.ಎಂ. ಗೋಪಾಲಕೃಷ್ಣ ಭಟ್ ಪ್ರತಿಕ್ರಿಯಿಸುತ್ತಾರೆ.ಮಹಾಜನ ವರದಿಯ ಅನುಷ್ಠಾನದಲ್ಲಿನ ಲೋಪದಿಂದಾಗಿ ಇಂದೂ ಕೂಡಾ ಕಾಸರಗೋಡಿನ ಕನ್ನಡಿಗರಿಗೆ ಅನಾಥಪ್ರಜ್ಞೆ ಕಾಡುತ್ತಿದೆ. ಕರ್ನಾಟಕವೂ ಕೂಡಾ ಕ್ರಿಯಾತ್ಮಕವಾಗಿ ಬೆಂಬಲಿಸುತ್ತಿಲ್ಲ. ಕಾಸರಗೋಡಿನ ಕನ್ನಡ ಹೇರಿಕೆಯ ವಿರುದ್ಧ ಕರ್ನಾಟಕದ ಪ್ರಬಲ ಬೆಂಬಲವನ್ನು ಈ ತನಕ ಕಾಸರಗೋಡಿನ ಕನ್ನಡಿಗರು ಪಡೆದಿಲ್ಲ ಎಂದು ಯುವ ಸಾಹಿತಿ ಬದಿಯಡ್ಕದ ಶ್ರೀಶಕುಮಾರ ಪಂಜಿತ್ತಡ್ಕ ಬೇಸರಪಡುತ್ತಾರೆ.ಕನ್ನಡಿಗರು ಪ್ರಥಮ ಭಾಷೆಯಾಗಿ ಮಲಯಾಳ ಕಲಿಯಬೇಕಾಗಿ ಬಂದರೆ ಕಾಸರಗೋಡಿನ ಕನ್ನಡ ಸಂಸ್ಕೃತಿಯನ್ನು ಉಳಿಸುವ ಪ್ರಯತ್ನ ನಡೆಯಬೇಕು. ಇಲ್ಲಿನ ಕನ್ನಡ ಕಾರ್ಯಕ್ರಮಗಳು, ಯಕ್ಷಗಾನ, ಗಡಿನಾಡ ಸಮ್ಮೇಳನಗಳು ನಿಲ್ಲಬಾರದು. ಕನ್ನಡಿಗರ ಜಮೀನುಗಳನ್ನು ಕನ್ನಡಿಗರೇ ಖರೀದಿಸಬೇಕು. ಈ ರೀತಿ ಕನ್ನಡಿಗರ ಒಗ್ಗಟ್ಟಿನಿಂದ ಮಲಯಾಳೀಕರಣದ ದಬ್ಬಾಳಿಕೆಯನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡಬಹುದು. ಆದರೆ ಇದು ಭಾಷೆಯ ಹೆಸರಿನಲ್ಲಿ ಜನತೆಯೊಳಗಿನ ವೈಷಮ್ಯಕ್ಕೆ ಕಾರಣವಾಗಹುದು  ಎಂದು ಡಾ.ಗಣಪತಿ ಭಟ್ ಬೆಳ್ಳೂರು ಹೇಳುತ್ತಾರೆ.ಕೇರಳ ಸರ್ಕಾರವು ಕನ್ನಡಿಗರಿಗೆ ಮಲಯಾಳ ಕಲಿಯುವಂತೆ ಒತ್ತಡ ಹೇರುತ್ತಿದೆ. ಕನ್ನಡಿಗರ ನಾಡಿಮಿಡಿತವನ್ನು ಕೇರಳ ಸರ್ಕಾರಕ್ಕೆ ಅರ್ಥ ಮಾಡಿಸುವ ಮೂಲಕ, ಮಲಯಾಳ ಭಾಷಾ ಕಲಿಕೆಯಿಂದ ಕಾಸರಗೋಡು ಜಿಲ್ಲೆಯನ್ನು ಹೊರಗಿಡುವಂತೆ ಮಾಡುವಲ್ಲಿ ಕಾಸರಗೋಡು ಹಾಗೂ ಮಂಜೇಶ್ವರದ ಜನಪ್ರತಿನಿಧಿಗಳು ಪ್ರಯತ್ನಿಸಬೇಕು ಎಂಬುದು ಸಾರ್ವತ್ರಿಕ ಅಭಿಪ್ರಾಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry