ಕಡ್ಡಾಯ ಶಿಕ್ಷಣ ಕಾನೂನು ಜಾರಿ: ನಾಳೆ ತಮಟೆ ಚಳವಳಿ

7

ಕಡ್ಡಾಯ ಶಿಕ್ಷಣ ಕಾನೂನು ಜಾರಿ: ನಾಳೆ ತಮಟೆ ಚಳವಳಿ

Published:
Updated:

ಬೆಂಗಳೂರು: `ಕಡ್ಡಾಯ ಶಿಕ್ಷಣ ಹಕ್ಕು ಕಾನೂನನ್ನು ರಾಜ್ಯ ಸರ್ಕಾರ ಪರಿಣಾಮಕಾರಿಯಾಗಿ ಜಾರಿಗೆ ತರಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳ ಒತ್ತಡಕ್ಕೆ ಮಣಿದು ಆರ್ಥಿಕವಾಗಿ ಹಿಂದುಳಿದ ಕುಟುಂಬದ ಮಕ್ಕಳ ಶಿಕ್ಷಣ ಹಕ್ಕನ್ನು ಕಸಿದುಕೊಳ್ಳಬಾರದು~ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ಮೂರ್ತಿ ಬಣ) ರಾಜ್ಯ ಘಟಕದ ಅಧ್ಯಕ್ಷ ಎನ್. ಮೂರ್ತಿ ಮನವಿ ಮಾಡಿದರು.`ಈ ಕಾನೂನನ್ನು ಈ ಸಾಲಿನಿಂದಲೇ ಪರಿಣಾಮಕಾರಿ ಜಾರಿ ಮಾಡುವಂತೆ ಆಗ್ರಹಿಸಿ ಇದೇ 7ರಂದು ಎಂ.ಜಿ. ರಸ್ತೆಯ ಮಹಾತ್ಮ ಗಾಂಧಿ ಪ್ರತಿಮೆಯ ಎದುರು ತಮಟೆ ಚಳವಳಿ ನಡೆಸಿ ಸರ್ಕಾರಕ್ಕೆ ಒತ್ತಡ ಹೇರಲಾಗುವುದು. ಪ್ರತಿ ಜಿಲ್ಲಾ ಕೇಂದ್ರಗಳಲ್ಲೂ ಈ ರೀತಿಯ ಚಳವಳಿ ನಡೆಸಲಾಗುವುದು~ ಎಂದು ಅವರು ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.`ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿಗಳಿಗೆ ಎಷ್ಟು ಸೀಟು ನೀಡಬೇಕು ಎಂಬ ಕುರಿತು ರಾಜ್ಯ ಸರ್ಕಾರ ಸ್ಪಷ್ಟ ಚಿತ್ರಣ ನೀಡಿಲ್ಲ. ಶಿಕ್ಷಣ ಹಕ್ಕು ಕಾಯ್ದೆ ಅನುಷ್ಠಾನದ ಬಗ್ಗೆ ಸರ್ಕಾರದಲ್ಲೇ ಅನೇಕ ಗೊಂದಲಗಳಿವೆ. ಅದನ್ನು ಮೊದಲು ಸರಿಪಡಿಸಿಕೊಳ್ಳಬೇಕು. ಕಾನೂನು ಅನುಷ್ಠಾನದ ಬಗ್ಗೆ ಸುಪ್ರಿಂ ಕೋರ್ಟ್ ಆದೇಶ ನೀಡಿದ ದಿನದಿಂದಲೇ ರಾಜ್ಯ ಸರ್ಕಾರ ಕಾರ್ಯೋನ್ಮುಖವಾಗಿದ್ದರೆ ಈ ರೀತಿಯ ಸಮಸ್ಯೆಗಳು ಎದುರಾಗುತ್ತಿರಲಿಲ್ಲ~ ಎಂದು ಅವರು ಅಭಿಪ್ರಾಯಪಟ್ಟರು.`ನಗರದ ಬಹುತೇಕ ಖಾಸಗಿ ಶಾಲೆಗಳು ಈಗಾಗಲೇ ತಮ್ಮ ಪ್ರವೇಶ ಪ್ರಕ್ರಿಯೆಯನ್ನು ಪೂರ್ಣಗೊಳಿಸಿವೆ. ಇನ್ನು ಕೆಲವೇ ದಿನಗಳಲ್ಲಿ ಶಾಲೆಗಳು ಆರಂಭಗೊಳ್ಳಲಿವೆ. ಸರ್ಕಾರ ಈ ಬಗ್ಗೆ ಚಿಂತಿಸದೆ, ಸುತ್ತೋಲೆ ಹೊರಡಿಸಲು ವಿಳಂಬ ಮಾಡುತ್ತಿದೆ~ ಎಂದು ಅವರು ದೂರಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry