ಕಡ್ಡಾಯ ಶೌಚಾಲಯ: ಶಾಸಕ ಸಲಹೆ

7
ರೂ. 184 ಲಕ್ಷ ವೆಚ್ಚದ ಒಳಚರಂಡಿ ಕಾಮಗಾರಿಗೆ ಭೂಮಿ ಪೂಜೆ

ಕಡ್ಡಾಯ ಶೌಚಾಲಯ: ಶಾಸಕ ಸಲಹೆ

Published:
Updated:

ಗದಗ: ಮನೆಗಳಲ್ಲಿ ಕಡ್ಡಾಯವಾಗಿ ಶೌಚಾಲಯ ನಿರ್ಮಿಸಿಕೊಳ್ಳಬೇಕು ಎಂದು ಶಾಸಕ ಶ್ರೀಶೈಲಪ್ಪ ಬಿದರೂರ ಕರೆ ನೀಡಿದರು.

ನಗರದಲ್ಲಿ ಮಂಗಳವಾರ ರಾಜೀವ ಗಾಂಧಿ ಗ್ರಾಮೀಣ ವಸತಿ ನಿಗಮದ ಅನುದಾನದಲ್ಲಿ ವಾರ್ಡ್ ನಂ.22ರ ಗಂಗಿ ಮಡಿ ಆಶ್ರಯ ಬಡಾವಣೆಗೆ ರೂ. 184 ಲಕ್ಷ ವೆಚ್ಚದ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಚೆಂಬು ಹಿಡಿದು ಜಾಲಿ ಮರದ ಮರೆಗೆ ಹೋಗುವುದನ್ನು ಬಿಟ್ಟು ಈಗಲಾದರೂ ನಿವಾಸಿಗಳು ಶೌಚಾಲಯ ನಿರ್ಮಿಸಿ ಕೊಳ್ಳಬೇಕು. ರಾತ್ರಿ ವೇಳೆ ಹೆಣ್ಣುಮಕ್ಕಳಿಗೆ ಸಾಕಷ್ಟು ತೊಂದರೆಯಾಗಲಿದೆ. ಒಟ್ಟು 2.70 ಕೋಟಿ ವೆಚ್ಚದಲ್ಲಿ ಗಂಗಿಮಡಿ ಪ್ರದೇಶ ಅಭಿವೃದ್ಧಿ ಪಡಿಸಲಾಗುತ್ತಿದೆ. ರೂ. 1.14 ಕೋಟಿ ಜಲ ಶುದ್ಧೀಕರಣಕ್ಕೆ ಹಾಗೂ 64 ಲಕ್ಷ ವೆಚ್ಚದಲ್ಲಿ ಪೈಪ್‌ಲೈನ್ ಸಂಪರ್ಕ ಕಲ್ಪಿಸಲಾಗುವುದು ಎಂದು ಹೇಳಿದರು.ಫಲಾನುಭವಿಗಳ ಒತ್ತಾಯದಂತೆ ಆಶ್ರಯ ಮನೆಗಳ ಬಡ್ಡಿ ಮನ್ನಾ ಮಾಡಲಾಯಿತು. ಈಗ ಮನೆಗಳ ಸಾಲ ಮನ್ನಾ ಮಾಡಲು ಮನವಿ ನೀಡಿದ್ದೀರಿ. ಸರ್ಕಾರದ ಜತೆ ಮಾತುಕತೆ ನಡೆಸಿ ಸಾಲ ಮನ್ನಾ ಮಾಡಲು ಒತ್ತಡ ಹೇರುತ್ತೇನೆ ಎಂದು ಭರವಸೆ ನೀಡಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ನಗರಸಭೆ ಅಧ್ಯಕ್ಷ ಶಿವಣ್ಣ ಮುಳಗುಂದ, ಗಂಗಿಮಡಿಗೆ ಅನುದಾನ ಬಿಡುಗಡೆಯಾಗಿ ನಾಲ್ಕು ವರ್ಷ ವಾದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಯೋಜನೆ ಕಾರ್ಯ ರೂಪಕ್ಕೆ ಬಾರಲಿಲ್ಲ. ಅಧಿಕಾರಿಗಳು ಜನಪ್ರತಿನಿಧಿಗಳ ದಿಕ್ಕು ತಪ್ಪಿಸುತ್ತಿದ್ದರು. ಈಗ 9 ತಿಂಗಳಲ್ಲಿ ಈ ಕಾಮಗಾರಿ ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಜನರು ಎಚ್ಚೆತ್ತು ಕೊಳ್ಳದಿದ್ದರೆ 9 ವರ್ಷವಾದರೂ ಕಾಮಗಾರಿ ಪೂರ್ಣಗೊಳ್ಳುವುದಿಲ್ಲ ಎಂದರು.ಹತ್ತು ದಿನಗಳಲ್ಲಿ ನಗರಸಭೆಗೆ ಜೆಸಿಬಿ ಖರೀದಿಸಲಾಗುತ್ತಿದೆ. ಸುತ್ತಲಿನ ಗಿಡಗಂಟಿಗಳನ್ನು ತೆಗೆದು ಹಾಕಲಾಗುವುದು. ನಗರದ ಹೊರ ವಲಯದ ವಾರ್ಡ್‌ಗಳ ಅಭಿವೃದ್ಧಿಗೆ ರೂ. 30 ಕೋಟಿ ಬಿಡುಗಡೆಯಾಗಿದ್ದು, ಹತ್ತು ದಿನಗಳಲ್ಲಿ ಟೆಂಡರ್ ಕರೆಯಲಾಗುವುದು. ಎರಡು ತಿಂಗಳ ಅವಧಿಯಲ್ಲಿ ಅಭಿವೃದ್ಧಿ ಕಾರ್ಯ ಪೂರ್ಣ ಗೊಳಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು. ನನಗರಸಭೆ ಉಪಾಧ್ಯಕ್ಷೆ ಖಮರ ಸುಲ್ತಾನ ಜಿ. ನಮಾಜಿ,ಎಂ.ಎಂ.ಹಿರೇಮಠ, ವಂದನಾ ವೆರ್ಣೆಕರ, ಶ್ರೀನಿವಾಸ ಭಾಂಡಗೆ, ಸಿದ್ದಪ್ಪ ಪಲ್ಲೇದ, ಸಿರಾಜ ಬಳ್ಳಾರಿ, ಪೌರಾಯುಕ್ತ ಎಂ.ಬಿ.ನಡುವಿನ ಮನಿ, ಒಳಚರಂಡಿ ಮಂಡಳಿ ಅಧಿಕಾರಿ ಸಿದ್ದು ನಾಯಕ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry