ಬುಧವಾರ, ನವೆಂಬರ್ 13, 2019
24 °C

ಕಣಕ್ಕಿಳಿದ ದಾಳಿಂಬೆ ಬೆಳೆಗಾರ

Published:
Updated:

ಕುಷ್ಟಗಿಯಲ್ಲಿ ಬೆಳೆಯುವ ದಾಳಿಂಬೆ ಸ್ವಾದಿಷ್ಟವಾಗಿದ್ದು ಅಂತರರಾಷ್ಟ್ರೀಯ ಮನ್ನಣೆ  ಪಡೆದುಕೊಂಡಿದೆ. ಆದರೆ ಅದನ್ನು ಬೆಳೆಯುವವರ ಬದುಕು ದುಸ್ತರವಾಗಿದೆ. ದುಂಡಾಣು ಅಂಗಮಾರಿ ರೋಗ ಈ ಬೆಳೆಯನ್ನು ನಾಶ ಮಾಡಿದೆ. ಹಳ್ಳಿಯಿಂದ ದಿಲ್ಲಿವರೆಗೆ ಐದು ವರ್ಷಗಳ ಕಾಲ ನಿರಂತರವಾಗಿ ನಡೆಸಿದ ಹೋರಾಟದ ಫಲವಾಗಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ 25 ಕೋಟಿ ರೂಪಾಯಿಯನ್ನು  ರಾಜ್ಯ ಸರ್ಕಾರ ರೈತರಿಗೆ ಹಸ್ತಾಂತರಿಸಿಲ್ಲ.ಈ ವಿಷಯದ ಬಗ್ಗೆ ಶಾಸಕರಷ್ಟೇ ಅಲ್ಲ, ಯಾವ ರಾಜಕಾರಣಿಯೂ ತಲೆಕೆಡಿಸಿಕೊಂಡಿಲ್ಲ. ನೊಂದ ದಾಳಿಂಬೆ ಬೆಳೆಗಾರರಿಗೆ  ನೆರವಾಗಬೇಕು ಎಂಬ ಕಾರಣದಿಂದ ರಾಜ್ಯ ದಾಳಿಂಬೆ ಬೆಳಗಾರರ ಹೋರಾಟ ಸಂಘದ ಅಧ್ಯಕ್ಷ ಅಬ್ದುಲ್ ನಯೀಂ ಕುಷ್ಟಗಿ ಕ್ಷೇತ್ರದಿಂದ ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ. ಪ್ರಜಾವಾಣಿಗೆ ನೀಡಿದ ಸಂದರ್ಶನದಲ್ಲಿ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

*ಸ್ಪರ್ಧೆ ದಿಢೀರ್ ನಿರ್ಧಾರವೇ?

ಹೌದು. ಸರ್ಕಾರ ನಮ್ಮ ನೆರವಿಗೆ ಬರಲಿಲ್ಲ. ಐದು ವರ್ಷಗಳಿಂದ ಹೋರಾಟ ಮಾಡಿದರೂ ಸರ್ಕಾರ ನಮ್ಮನ್ನು ಕಡೆಗಣಿಸಿದೆ. ಮುಖ್ಯಮಂತ್ರಿಗಳು, ಅಧಿಕಾರಿಗಳೊಂದಿಗೆ 20ಕ್ಕೂ ಹೆಚ್ಚು ಸಭೆಗಳು ನಡೆದಿವೆ. ಹಣ ಮಾತ್ರ ಕೈ ಸೇರಲಿಲ್ಲ. ರಾಜ್ಯದಲ್ಲಿ 13,187 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ದಾಳಿಂಬೆ ದುಂಡಾಣು ಅಂಗಮಾರಿ ರೋಗದಿಂದ ನಾಶವಾಯಿತು.ಒಟ್ಟಾರೆ ಈ ರೈತರ ಸಾಲ ಮತ್ತು ಬಡ್ಡಿ 205.37 ಕೋಟಿ ರೂಪಾಯಿ ಇದೆ. ತೋಟಗಾರಿಕೆ ಇಲಾಖೆಯೇ ಈ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಈ ಸಾಲ ಮತ್ತು ಬಡ್ಡಿ ಮನ್ನಾ ಮಾಡಿಸುವುದೇ ನನ್ನ ಗುರಿ. ಶಾಸನಸಭೆಯಲ್ಲಿ ರೈತರನ್ನು ಸಮರ್ಥವಾಗಿ ಪ್ರತಿನಿಧಿಸಬೇಕು ಎಂಬುದು ನನ್ನ ಉದ್ದೇಶ.

*ಈ ಜಿಲ್ಲೆಯಲ್ಲಿ ಜಾತಿ ರಾಜಕಾರಣಕ್ಕೆ ಹೆಚ್ಚು ಒತ್ತು ಎಂಬ ಮಾತಿದೆ. ನಿಮಗೆ ಬೆಂಬಲ ಸಿಗುತ್ತದೆಯೇ?

ನನ್ನದು ಹೋರಾಟದ ಬದುಕು. ಜಾತಿ ಮನೋಭಾವ ತೊರೆದು ಜನರು ಕೈ ಹಿಡಿಯುತ್ತಾರೆ ಎಂಬ ವಿಶ್ವಾಸವಿದೆ. ಗೆಲ್ಲದಿದ್ದರೂ ಪರವಾಗಿಲ್ಲ. ಸರ್ಕಾರಕ್ಕೆ ಬುದ್ಧಿ ಕಲಿಸಬೇಕು ಎಂಬುದಕ್ಕೆ ನನ್ನ ಸ್ಪರ್ಧೆ.

*ಏಕೆ ಈ ಸಿಟ್ಟು?

ಕೇಂದ್ರ ಸರ್ಕಾರ ಕೊಟ್ಟ ಹಣವನ್ನು ರಾಜ್ಯ ಸರ್ಕಾರ ಅನ್ಯ ಉದ್ದೇಶಕ್ಕೆ ಬಳಸಿಕೊಂಡಿದೆ. ಜತೆಗೆ ಆಯ್ದ ಶ್ರೀಮಂತ ರೈತರನ್ನು ವಿದೇಶ ಪ್ರವಾಸಕ್ಕೆ ಕಳುಹಿಸಿದೆ. ಇದು ಸರ್ಕಾರ ಮಾಡುವ ಕೆಲಸವಲ್ಲ. ಅದೇ ಹಣವನ್ನು ರೈತರ ಏಳಿಗೆಗೆ ಬಳಸಬಹುದಿತ್ತು. ಇದಕ್ಕಾಗಿ ಈ ಸರ್ಕಾರದ ಮೇಲೆ ಸಿಟ್ಟು.

*ಈಗಿನ ಪ್ರಚಾರದ ವೈಖರಿ, ಹಣ ವ್ಯಯ ನೋಡಿದರೆ ಏನು ಅನಿಸುತ್ತದೆ?

ನಾನು ಹಣ-ಹೆಂಡ ಹಂಚಲ್ಲ. ನನ್ನದು ಮನೆ ಮನೆ ಪ್ರಚಾರ. ನನ್ನ ಹೋರಾಟಕ್ಕೆ ಮತ ನೀಡಿ, ನಿಮ್ಮ ಪರ ಶಾಸನಸಭೆಯಲ್ಲಿ ಹೋರಾಟ ಮಾಡುತ್ತೇನೆ ಎಂದು ಮತದಾರರಿಗೆ ಭರವಸೆ ಕೊಡುತ್ತೇನೆ.

*ಗೆದ್ದರೆ ನಿಮ್ಮ ಆದ್ಯತೆ ಏನು?

ಸಾಲ ಮರುಪಾವತಿಸದ ರೈತರ ವಿರುದ್ಧ ಬ್ಯಾಂಕ್‌ಗಳು ಮೊಕದ್ದಮೆ ಹೂಡಿವೆ. ಈ  ರೈತರ  ಸಾಲ ಮನ್ನಾ ಆಗಬೇಕು. ಇದಕ್ಕಾಗಿ ನನ್ನ ಹೋರಾಟ. ಪ್ರಮಾಣವಚನ ಸ್ವೀಕಾರಕ್ಕೆ ವಿಧಾನಸಭೆಗೆ ಹೋಗದೆ ಮೊದಲು ರೈತರೊಂದಿಗೆ ಫ್ರೀಡಂ ಪಾರ್ಕ್‌ನಲ್ಲಿ ಧರಣಿ ನಡೆಸಿ, ಸರ್ಕಾರವೇ ಅಲ್ಲಿಗೆ ಬಂದು ಸಾಲ ಮನ್ನಾ ಮಾಡುವುದಾಗಿ ಒಪ್ಪಂದ ಮಾಡಿಕೊಳ್ಳುವಂತೆ ಮಾಡುತ್ತೇನೆ.

ಪ್ರತಿಕ್ರಿಯಿಸಿ (+)