ಶುಕ್ರವಾರ, ನವೆಂಬರ್ 22, 2019
22 °C
ಕಾಂಗ್ರೆಸ್‌ನ 23 ಬಂಡುಕೋರರು ಸ್ಪರ್ಧೆಯಿಂದ ಹಿಂದಕ್ಕೆ

ಕಣದಲ್ಲಿ 3000 ಸ್ಪರ್ಧಿಗಳು

Published:
Updated:

ಬೆಂಗಳೂರು: ವಿಧಾನಸಭೆಗೆ ಮೇ 5ರಂದು ನಡೆಯಲಿರುವ `ಮತ ಮಹಾಸಮರ'ಕ್ಕೆ ಅಖಾಡ ಸಜ್ಜುಗೊಂಡಿದೆ. ಅಂತಿಮವಾಗಿ ಕಣದಲ್ಲಿ ಉಳಿಯುವ ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಯಾರು ಎಂಬ ಕುತೂಹಲಕ್ಕೆ ತೆರೆಬಿದ್ದಿದೆ. ನಾಮಪತ್ರ ಹಿಂದಕ್ಕೆ ಪಡೆಯಲು ಶನಿವಾರ ಕಡೆಯ ದಿನವಾಗಿತ್ತು. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ನ 224, ಬಿಜೆಪಿಯ 223 ಹಾಗೂ ಜೆಡಿಎಸ್‌ನ 222 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.ನಾಮಪತ್ರ ಸಲ್ಲಿಸಿದ್ದ ಒಟ್ಟು 3,945 ಅಭ್ಯರ್ಥಿಗಳ ಪೈಕಿ 3,692 ಅಭ್ಯರ್ಥಿಗಳ ನಾಮಪತ್ರಗಳು ಅಂಗೀಕಾರವಾಗಿವೆ. 253 ನಾಮಪತ್ರಗಳು ತಿರಸ್ಕೃತವಾಗಿವೆ. ಪ್ರಾಥಮಿಕ ವರದಿಗಳ ಪ್ರಕಾರ 28 ಜಿಲ್ಲೆಗಳ ಮಾಹಿತಿ ದೊರೆತಿದ್ದು, 662 ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದಿದ್ದಾರೆ.  ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ ಮಾಹಿತಿ ರಾಜ್ಯ ಚುನಾವಣಾ ಅಧಿಕಾರಿ ಕಚೇರಿಗೆ ತಲುಪಿಲ್ಲ.19 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನ 23 ಬಂಡಾಯ ಅಭ್ಯರ್ಥಿಗಳು ಶನಿವಾರ ನಾಮಪತ್ರ ವಾಪಸ್ ಪಡೆದಿದ್ದಾರೆ. ಆದರೆ, ಭದ್ರಾವತಿ (ಬಿ.ಕೆ.ಸಂಗಮೇಶ), ಬೆಳಗಾವಿ ಗ್ರಾಮಾಂತರ (ಆನಂದಸ್ವಾಮಿ ಗಡ್ಡದೇವರಮಠ), ಖಾನಾಪುರ (ಅಂಜಲಿ ನಿಂಬಾಳ್ಕರ್), ತರೀಕೆರೆ (ಬಿ.ಆರ್.ನೀಲಕಂಠಪ್ಪ), ಕಾರವಾರ- ಅಂಕೋಲಾ (ಸತೀಶ್ ಸೈಲ್), ಕುಣಿಗಲ್ (ರವಿಕಿರಣ್), ಶ್ರೀರಂಗಪಟ್ಟಣ (ರವೀಂದ್ರ ಶ್ರೀಕಂಠಯ್ಯ), ಹನೂರು (ಡಾ.ಎಸ್.ದತ್ತೇಶ್‌ಕುಮಾರ್), ಮಾಯಕೊಂಡ (ವೈ.ರಾಮಪ್ಪ), ಕಂಪ್ಲಿ (ನೆಲಗಡಲೆ ಗಣೇಶ್), ಬೀಳಗಿ (ಡಿ.ಬಿ.ಪೂಜಾರ), ಜಮಖಂಡಿ (ಜಗದೀಶ ಗುಡಗುಂಟಿ) ಸೇರಿದಂತೆ ಕೆಲವು ಕ್ಷೇತ್ರಗಳಲ್ಲಿ ಬಂಡಾಯ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.ಬಸವನಗುಡಿ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಕಾಂಗ್ರೆಸ್‌ನ ಕೆ. ಚಂದ್ರಶೇಖರ್ ನಾಮಪತ್ರ ಹಿಂಪಡೆದಿದ್ದಾರೆ. ಅಲ್ಲದೇ ಹನುಮಂತರಾಯಪ್ಪ (ರಾಜರಾಜೇಶ್ವರಿ ನಗರ). ಅಮುದಾ ಗೋಪಿಚಂದ್ರ (ಸಿ.ವಿ.ರಾಮನ್‌ನಗರ), ಟಿ.ಮಲ್ಲೇಶ್ (ಗಾಂಧಿನಗರ), ಜಿ.ಪದ್ಮಾವತಿ (ರಾಜಾಜಿನಗರ), ನಾಗೇಶ್ (ಮಾಲೂರು), ಓಂಕಾರಪ್ಪ (ತರೀಕೆರೆ), ಶಿವು ಯಾದವ್ (ಚಿತ್ರದುರ್ಗ), ಬಷೀರುದ್ದೀನ್ (ರಾಯಚೂರು), ಸಂಗೂರ್ ಪಾಟೀಲ (ಬಸವನ ಬಾಗೇವಾಡಿ), ಅಲ್ತಾಫ್ ಖಾನ್ (ಚಾಮರಾಜಪೇಟೆ), ಸುಷ್ಮಾ ರಾಜಗೋಪಾಲ ರೆಡ್ಡಿ (ಬೆಂಗಳೂರು ದಕ್ಷಿಣ), ಮುನಿಸ್ವಾಮಯ್ಯ (ದೇವನಹಳ್ಳಿ), ಪಿ.ರಾಜಣ್ಣ, ಕೆ.ಎಂ.ನಾಗರಾಜ್ (ಮಹದೇವಪುರ) ಅವರು ನಾಮಪತ್ರ ವಾಪಸ್ ಪಡೆದಿದ್ದಾರೆ ಎಂದು ಕೆಪಿಸಿಸಿ ಪ್ರಕಟಣೆ ತಿಳಿಸಿದೆ.ಬಂಡಾಯ ಅಭ್ಯರ್ಥಿಗಳ ಮನವೊಲಿಸುವ ಕಾರ್ಯದಲ್ಲಿ ಎಲ್ಲ ಪಕ್ಷಗಳೂ ಒಂದು ಹಂತದವರೆಗೆ ಸಫಲವಾಗಿವೆ. ಅಂಬರೀಷ್ ವಿರುದ್ಧ ಮಂಡ್ಯದಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದ ರವೀಂದ್ರ ಶ್ರೀಕಂಠಯ್ಯ ನಾಮಪತ್ರ ಹಿಂಪಡೆದಿದ್ದಾರೆ. ಆದರೆ, ಅವರು ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿ ಉಳಿದುಕೊಂಡಿದ್ದಾರೆ.ಭದ್ರಾವತಿಯಲ್ಲಿ ಕೆಜೆಪಿ ಅಭ್ಯರ್ಥಿ ಕದಿರೇಶ್ ನಾಮಪತ್ರ ವಾಪಸ್ ಪಡೆಯುವ ಮೂಲಕ ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿ ಬಿ.ಕೆ.ಸಂಗಮೇಶ್ ಅವರಿಗೆ ಬೆಂಬಲ ಘೋಷಿಸಿದ್ದಾರೆ.ಜೆಡಿಎಸ್ ಬಂಡಾಯ ಅಭ್ಯರ್ಥಿಗಳಾದ ಮಾಜಿ ಸ್ಪೀಕರ್ ಕೃಷ್ಣ (ಕೃಷ್ಣರಾಜಪೇಟೆ), ಅಶೋಕ್ ಜಯರಾಂ (ಮಂಡ್ಯ), ಕಲ್ಪನಾ ಸಿದ್ದರಾಜು (ಮದ್ದೂರು), ಆದಿನಾರಾಯಣ (ಮುಳಬಾಗಲು) ಕಣದಲ್ಲಿ ಉಳಿಯುವ ಮೂಲಕ ಕುತೂಹಲ ಹೆಚ್ಚಿಸಿದ್ದಾರೆ.ಮಹತ್ವದ ಬೆಳವಣಿಗೆಯಲ್ಲಿ ಎಂ.ಎಸ್.ಆತ್ಮಾನಂದ ಅವರು ಕಾಂಗ್ರೆಸ್‌ನ ಮಂಡ್ಯ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರಿಗೆ ಪತ್ರವನ್ನು ರವಾನಿಸಿದ್ದಾರೆ. ಜಿಲ್ಲಾ ಕಾಂಗ್ರೆಸ್ ಘಟಕದಲ್ಲಿ ತಾರಕಕ್ಕೇರಿರುವ ಭಿನ್ನಮತಕ್ಕೆ ಇದರಿಂದ ಇನ್ನಷ್ಟು ತುಪ್ಪ ಸುರಿದಂತಾಗಿದೆ.ಧಾರವಾಡ ಜಿಲ್ಲೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ಗೆ ಬಂಡಾಯದ ಬಿಸಿ ತಾಗಿದ್ದು, ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಅರವಿಂದ ಬೆಲ್ಲದ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಗುರುರಾಜ ಹುಣಸಿಮರದ ಕಣದಲ್ಲಿ ಉಳಿದಿದ್ದಾರೆ. ಇದೇ ಕ್ಷೇತ್ರದಲ್ಲಿ ಜೆಡಿಎಸ್‌ನ ಅಧಿಕೃತ ಅಭ್ಯರ್ಥಿ ಇಸ್ಮಾಯಿಲ್ ತಮಟಗಾರ ವಿರುದ್ಧ ಮಹಾನಗರಪಾಲಿಕೆ ಸದಸ್ಯ ಈಶ್ವರ ಸಾಣಿಕೊಪ್ಪ ಸ್ಪರ್ಧೆಯಲ್ಲಿದ್ದಾರೆ.ಪ್ರಚಾರ ಬಿರುಸು

ಚುನಾವಣೆ ಎದುರಿಸಲು ರಾಜಕೀಯ ಪಕ್ಷಗಳು ತುರುಸಿನ ತಯಾರಿ ನಡೆಸಿವೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿ ಡಾ. ಮನಮೋಹನ್ ಸಿಂಗ್ ರಾಜ್ಯದಲ್ಲಿ ಕಾಂಗ್ರೆಸ್ ಪರವಾಗಿ ಮತ ಯಾಚಿಸಲಿದ್ದಾರೆ. ರಾಹುಲ್ ಮಂಗಳವಾರ ರಾಯಚೂರು, ವಿಜಾಪುರ, ಬಾಗಲಕೋಟೆ ಜಿಲ್ಲೆಗಳಿಗೆ ಬರಲಿದ್ದಾರೆ. ಎಸ್.ಎಂ. ಕೃಷ್ಣ ಅವರು ಬೆಂಗಳೂರಿನ ವಿಜಯನಗರ ಕ್ಷೇತ್ರದಿಂದ ಭಾನುವಾರ ಪ್ರಚಾರ ಆರಂಭಿಸಲಿದ್ದಾರೆ.

ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ರಾಜನಾಥ ಸಿಂಗ್ ಭಾನುವಾರ ಚಿಕ್ಕೋಡಿಗೆ ಬಂದು ಮತ ಬೇಟೆಗೆ ವೇಗ ನೀಡಲಿದ್ದಾರೆ. ಹಿರಿಯ ಮುಖಂಡ ಎಲ್.ಕೆ. ಅಡ್ವಾಣಿ ಅವರು ರಾಣೆಬೆನ್ನೂರು, ದಾವಣಗೆರೆ ಹಾಗೂ ಸುಷ್ಮಾ ಸ್ವರಾಜ್ ಅವರು ಬೆಂಗಳೂರಿನ ಮಲ್ಲೇಶ್ವರದಲ್ಲಿ ನಡೆಯುವ  ಪ್ರಚಾರದ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಪ್ರತಿಕ್ರಿಯಿಸಿ (+)