ಬುಧವಾರ, ನವೆಂಬರ್ 20, 2019
25 °C
ಧಾರವಾಡ ಜಿಲ್ಲೆ: ಮತ್ತೆ ಪುರುಷ ಅಭ್ಯರ್ಥಿಗಳದ್ದೇ ಪ್ರಾಬಲ್ಯ

ಕಣದಲ್ಲಿ 6 ಮಹಿಳೆಯರು ಮಾತ್ರ

Published:
Updated:

ಹುಬ್ಬಳ್ಳಿ: ರಾಜಕೀಯದಲ್ಲಿ ಮಹಿಳೆಯರಿಗೆ ಸ್ಥಾನಮಾನ ನೀಡುವ ಬಗ್ಗೆ ಸಂಸತ್ ಹಾಗೂ ವಿಧಾನಸಭೆ, ವಿಧಾನಪರಿಷತ್‌ನ ಅಧಿವೇಶನ ನಡೆದಾಗಲೆಲ್ಲ  ಚರ್ಚೆಯಾಗುತ್ತಲೇ ಬಂದಿದೆ. ಆದರೆ ಈ ವಿಚಾರ ಚರ್ಚೆಗಷ್ಟೇ ಸೀಮಿತವಾಗಿದ್ದು ಅಧಿಕಾರ ನೀಡುವ ಸಂದರ್ಭ ಬಂದಾಗ ಮಾತ್ರ ಈ ವಿಷಯ ಮೂಲೆಗುಂಪಾಗುತ್ತಿದೆ.ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕೂಡ ಯಥಾ ಪ್ರಕಾರ ಮಹಿಳೆಯರ ರಾಜಕೀಯ ಸ್ಥಾನಮಾನ ಏರಿಕೆಯಾಗಲೇ ಇಲ್ಲ. ಧಾರವಾಡ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳು ಸೇರಿ ಮಹಿಳಾ ಮತದಾರರ ಸಂಖ್ಯೆ ಒಟ್ಟು 6.22 ಲಕ್ಷ. ಆದರೆ ಕಣಕ್ಕಿಳಿದಿರುವ ಮಹಿಳೆಯರ ಪ್ರಮಾಣ ಮಾತ್ರ ಬಹಳ ಕಡಿಮೆ. ಜಿಲ್ಲೆಯಲ್ಲಿ ಒಟ್ಟು  94 ಅಭ್ಯರ್ಥಿಗಳು ಕಣದಲ್ಲಿದ್ದರೆ ಅವರಲ್ಲಿ ಮಹಿಳಾ ಅಭ್ಯರ್ಥಿಗಳ ಸಂಖ್ಯೆ ಕೇವಲ 6 ಮಾತ್ರ.ಬಿಜೆಪಿ, ಬಿಎಸ್‌ಪಿ ಹಾಗೂ ಎನ್‌ಸಿಪಿಯಿಂದ ತಲಾ ಒಬ್ಬರು ಹಾಗೂ ಉಳಿದ ಮೂವರು ಪಕ್ಷೇತರಾಗಿ ಮಹಿಳೆಯರು ಕಣಕ್ಕಿಳಿದಿದ್ದಾರೆ. ಮಹಿಳೆಯೊಬ್ಬರು ಹೈಕಮಾಂಡ್ ಆಗಿರುವ ಕಾಂಗ್ರೆಸ್ ಪಕ್ಷದಿಂದಾಗಲಿ, ಹೊರೆ ಹೊತ್ತ ಮಹಿಳೆಯ ಚಿತ್ರವನ್ನೇ ಚುನಾವಣೆ ಚಿಹ್ನೆಯಾಗಿ ಹೊಂದಿರುವ  ಜೆಡಿಎಸ್‌ನಿಂದಾಗಲಿ, ಬಿ.ಎಸ್.ಯಡಿಯೂರಪ್ಪನವರ ಕೆಜೆಪಿ ಪಕ್ಷದಿಂದಾಗಲಿ ಜಿಲ್ಲೆಯಲ್ಲಿ ಯಾವ ಮಹಿಳೆಗೂ ಟಿಕೆಟ್ ದೊರೆತಿಲ್ಲ.ಶೆಟ್ಟರ್ ವಿರುದ್ಧ ಮಹಿಳಾ ಅಭ್ಯರ್ಥಿ: `ಯಾವ ರಾಜಕೀಯ ಪಕ್ಷಗಳು ಮಹಿಳೆಯರಿಗೆ ಪ್ರಾತಿನಿಧ್ಯ ನೀಡುತ್ತಿಲ್ಲ. ಹೀಗಾಗಿ ನಾನು ಕಣಕ್ಕಿಳಿದಿದ್ದೇನೆ' ಎನ್ನುತ್ತಾರೆ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಅಭ್ಯರ್ಥಿ ಶಾಂತಿನಗರದ ರೇಣುಕಾ ಎನ್. ಶಿಂಧೆ ಹುಬ್ಬಳ್ಳಿ-ಧಾರವಾಡದ ಸೆಂಟ್ರಲ್ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಶೆಟ್ಟರ್ ವಿರುದ್ಧ ಕಣಕ್ಕಿಳಿದಿದ್ದಾರೆ.ಜೀವನೋಪಾಯಕ್ಕೆ ಸಣ್ಣ ಉದ್ಯಮ ಮಾಡಿಕೊಂಡಿರುವ ಇವರು ಪಕ್ಷದ ರಾಜ್ಯ ಘಟಕದ ಮಹಿಳಾ ವಿಭಾಗದ  ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದು ಇದೇ ಮೊದಲ ಬಾರಿಗೆ ಚುನಾವಣೆಗೆ ಸ್ಫರ್ಧಿಸುತ್ತಿರುವುದಾಗಿ `ಪ್ರಜಾವಾಣಿ'ಗೆ ತಿಳಿಸಿದರು. `ಮಹಿಳೆಯರ ಬಗ್ಗೆ ಯಾರೂ ಕಾಳಜಿ ವಹಿಸುವ ರಾಜಕೀಯ ಪಕ್ಷಗಳೇ ಇಲ್ಲ. ಹೀಗಾಗಿ   ಕಣಕ್ಕಿಳಿದಿದ್ದೇನೆ. ಗೆದ್ದುಬಂದರೆ ಮಹಿಳೆಯರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವುದು ನನ್ನ ಆದ್ಯತೆ' ಎನ್ನುತ್ತಾರೆ.ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿಯ ಹಾಲಿ ಶಾಸಕಿ ಸೀಮಾ ಮಸೂತಿ ಮರಳಿ ಕಣಕ್ಕಿಳಿದರೆ, ಅವರ ವಿರುದ್ಧ ಪಕ್ಷೇತರರಾಗಿ ಫರೀದಾ  ರೋಣದ ಸ್ಪರ್ಧಿಸಿದ್ದಾರೆ. ಇನ್ನು ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದಲ್ಲಿ ಅನಿತಾ ಹೊರಡಿ ಪಕ್ಷೇತರಾಗಿ ಕಣಕ್ಕಿಳಿದಿದ್ದಾರೆ.ಕಲಘಟಗಿಯಲ್ಲಿ ಶೋಭಾ ಬಳ್ಳಾರಿ ಬಹುಜನ ಸಮಾಜವಾದಿ ಪಕ್ಷದಿಂದ ಇದೇ ಮೊದಲ ಬಾರಿಗೆ  ಸ್ಪರ್ಧಿಸಿದ್ದಾರೆ. ಹುಬ್ಬಳ್ಳಿ ಆನಂದನಗರದ ಸಿದ್ಧರಾಮೇಶ್ವರ ನಗರದ ನಿವಾಸಿಯಾಗಿದ್ದು ತಮ್ಮ ಪ್ರಮಾಣ ಪತ್ರದಲ್ಲಿ ಸಲ್ಲಿಸಿರುವಂತೆ ಇವರ  ಆಸ್ತಿಯ ಒಟ್ಟು ಮೌಲ್ಯ ರೂ 44.52 ಲಕ್ಷ.ನವಲಗುಂದದಲ್ಲಿ ಪಕ್ಷೇತರರಾಗಿ ಬಸವಣ್ಣೆವ್ವಾ ಕದ್ರೊಳ್ಳಿ ಸ್ಪರ್ಧಿಸಿದ್ದಾರೆ. ಕುಂದಗೋಳದಲ್ಲಿ ಮತ್ತು ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರದಲ್ಲಿ ಯಾವ ಮಹಿಳೆಯರೂ ಕಣಕ್ಕಿಳಿದಿಲ್ಲ.

ಪ್ರಮುಖ ಪಕ್ಷಗಳ ಅಭ್ಯರ್ಥಿಗಳು


  • ಸೀಮಾ ಮಸೂತಿ (ಬಿಜೆಪಿ)-ಧಾರವಾಡ ಗ್ರಾಮೀಣ

  • ರೇಣುಕಾ ಶಿಂಧೆ (ಎನ್‌ಸಿಪಿ)-ಹು-ಧಾ ಸೆಂಟ್ರಲ್

  • ಶೋಭಾ ಬಳ್ಳಾರಿ (ಬಿಎಸ್‌ಪಿ)-ಕಲಘಟಗಿ

  ಪಕ್ಷೇತರರು


  • ಅನಿತಾ ಹೊರಡಿ (ಹು-ಧಾ ಪಶ್ಚಿಮ)

  • ಫರೀದಾ ರೋಣದ (ಧಾರವಾಡ ಗ್ರಾಮೀಣ)

  • ಬಸವಣ್ಣೆವ್ವಾ ಕದ್ರೊಳ್ಳಿ (ನವಲಗುಂದ)

(ಹು-ಧಾ ಪೂರ್ವ ಮತ್ತು ಕುಂದಗೋಳದಲ್ಲಿ ಮಹಿಳೆಯರು ಕಣದಲ್ಲಿಲ್ಲ)

ಪ್ರತಿಕ್ರಿಯಿಸಿ (+)