ಬುಧವಾರ, ನವೆಂಬರ್ 13, 2019
23 °C

ಕಣದಿಂದ ಹಿಂದೆ ಸರಿದ ಚಂದ್ರಶೇಖರ್

Published:
Updated:

ಬೆಂಗಳೂರು: ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡಲಾಗುವುದು ಎಂದು ಕಾಂಗ್ರೆಸ್ ಮುಖಂಡರು ಭರವಸೆ ನೀಡಿದ ಹಿನ್ನೆಲೆಯಲ್ಲಿ ಬಸವನಗುಡಿ ವಿಧಾನಸಭಾ ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಮಾಜಿ ಶಾಸಕ ಕೆ.ಚಂದ್ರಶೇಖರ್ ಶನಿವಾರ ಮಧ್ಯಾಹ್ನ ನಾಮಪತ್ರ ವಾಪಸ್ ಪಡೆದಿದ್ದಾರೆ. ಈ ನಿರ್ಧಾರದಿಂದ ಅಸಮಾಧಾನಗೊಂಡ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ ಘಟನೆಯೂ ನಡೆದಿದೆ.ಬಂಡಾಯ ಶಮನ ಮಾಡಲು ಕಾಂಗ್ರೆಸ್ ಮುಖಂಡ ಕೆ.ಎಂ.ನಾಗರಾಜ್ ಮನೆಯಲ್ಲಿ ಶುಕ್ರವಾರ ಮಧ್ಯಾಹ್ನ ಸಂಧಾನ ಸಭೆ ನಡೆದಿತ್ತು. ಈ ಸಭೆಯಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಆಸ್ಕರ್ ಫರ್ನಾಂಡಿಸ್, ಮಾಜಿ ಸಚಿವ ಎಚ್.ಎಂ. ರೇವಣ್ಣ, ಅಭ್ಯರ್ಥಿ ಪ್ರೊ.ಬಿ.ಕೆ.ಚಂದ್ರಶೇಖರ್ ಮತ್ತಿತರರು ಪಾಲ್ಗೊಂಡು ಮನವೊಲಿಕೆಗೆ ಯತ್ನಿಸಿದರು.ಶನಿವಾರ ಮಧ್ಯಾಹ್ನ ಕೇಂದ್ರ ಸಚಿವ ಸರ್ವೆ ಸತ್ಯನಾರಾಯಣ್, ಆಸ್ಕರ್ ಫರ್ನಾಂಡಿಸ್, ಕೇಂದ್ರ ವೀಕ್ಷಕ ಮುರಳಿ, ಎಚ್.ಎಂ. ರೇವಣ್ಣ ಅವರು ಮತ್ತೆ ಮನವೊಲಿಕೆ ಮಾಡಿದರು. ಭವಿಷ್ಯದಲ್ಲಿ ಪಕ್ಷದಲ್ಲಿ ಉತ್ತಮ ಸ್ಥಾನಮಾನ ನೀಡಲಾಗುವುದು ಎಂದು ಈ ಮುಖಂಡರು ಭರವಸೆ ನೀಡಿದರು ಎಂದು ಗೊತ್ತಾಗಿದೆ. ಕೇಂದ್ರ ರಕ್ಷಣಾ ಸಚಿವ ಎ.ಕೆ. ಆಂಟನಿ ಅವರು ದೂರವಾಣಿ ಕರೆ ಮಾಡಿ ನಾಮಪತ್ರ ವಾಪಸ್ ಪಡೆಯುವಂತೆ ವಿನಂತಿಸಿದರು ಎಂದು ಆಪ್ತರು ತಿಳಿಸಿದ್ದಾರೆ.

ಮುಖಂಡರ ಭರವಸೆ ಮೇರೆಗೆ ಮಧ್ಯಾಹ್ನ 1.30ರ ವೇಳೆಗೆ ನಾಮಪತ್ರ ವಾಪಸ್ ಪಡೆದರು. ಈ ನಡುವೆ, ನಾಮಪತ್ರ ವಾಪಸ್ ಪಡೆಯುವ ವಿಚಾರ ತಿಳಿದ ನೂರಾರು ಬೆಂಬಲಿಗರು ಚಂದ್ರಶೇಖರ್ ನಿವಾಸಕ್ಕೆ ತೆರಳಿ ಕಣದಿಂದ ಹಿಂದಕ್ಕೆ ಸರಿಯದಂತೆ  ಒತ್ತಾಯಿಸಿದರು. `ಪ್ರೊ.ಬಿ.ಕೆ.ಸಿ. ಅವರಿಂದ ರೂ 2 ಕೋಟಿ ಹಣ ಪಡೆದು ನಾಮಪತ್ರ ವಾಪಸ್ ಪಡೆದಿದ್ದೀರಿ' ಎಂದು ಕೆಲವು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

`ಕ್ಷೇತ್ರದಲ್ಲಿ ಗೆಲ್ಲುವ ಅವಕಾಶ ಇದ್ದು, ಇಂತಹ ಸಂದರ್ಭದಲ್ಲಿ ಕಣದಿಂದ ಹಿಂದಕ್ಕೆ ಸರಿಯುವುದು ಸರಿಯಲ್ಲ' ಎಂದು ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ಕಾರ್ಯಕರ್ತರ ಮನವೊಲಿಸಲು ಚಂದ್ರಶೇಖರ್ ಯತ್ನಿಸಿದರು.`ವರಿಷ್ಠರ ಭರವಸೆ ಹಿನ್ನೆಲೆಯಲ್ಲಿ ನಾಮಪತ್ರ ವಾಪಸ್ ಪಡೆದಿದ್ದೇನೆ. ಬೆಂಬಲಿಗರು 6 ತಿಂಗಳಿಂದ ಚುನಾವಣಾ ಸಿದ್ಧತೆ ಮಾಡಿದ್ದರು. ಈ ನಿರ್ಧಾರ ಕೆಲವು ಕಾರ್ಯಕರ್ತರಿಗೆ ಅಸಮಾಧಾನ ತಂದಿದೆ. ಹಣ ಪಡೆದಿದ್ದೇನೆ ಎಂದು ಕೆಲವರು ಆರೋಪಿಸಿದರು. ಹಣ ಪಡೆದಿಲ್ಲ ಎಂದು ದೇವರ ಮುಂದೆ ಪ್ರಮಾಣ ಮಾಡಿ ಹೇಳಿದ್ದೇನೆ. ನಾನು ಯಾರಿಂದಲೂ ಹಣ ಪಡೆದಿಲ್ಲ. ನನಗೆ ಅದರ ಅಗತ್ಯವೂ ಇಲ್ಲ' ಎಂದು ಚಂದ್ರಶೇಖರ್ ಸ್ಪಷ್ಟಪಡಿಸಿದರು.

ಆಧಾರ ರಹಿತ ಆರೋಪ

`ಕೆ.ಚಂದ್ರಶೇಖರ್ ಅವರು ಹೈಕಮಾಂಡ್ ಆದೇಶದಂತೆ ನಡೆದುಕೊಂಡಿದ್ದಾರೆ. ಅವರು ನಾಮಪತ್ರ ವಾಪಸ್ ಪಡೆಯಲು ಸ್ಥಳೀಯ ಮುಖಂಡರ ಒತ್ತಡವಿಲ್ಲ. ಅವರು ನನ್ನಿಂದ ಹಣ ಪಡೆದಿದ್ದಾರೆ ಎನ್ನುವ ಆರೋಪ ಆಧಾರ ರಹಿತವಾದುದು. ಇಂತಹ ಅನಾಗರಿಕ ಊಹಾಪೋಹಗಳನ್ನು ನಾನು ಖಂಡಿಸುತ್ತೇನೆ'

-ಪ್ರೊ.ಬಿ.ಕೆ.ಚಂದ್ರಶೇಖರ್

ಪ್ರತಿಕ್ರಿಯಿಸಿ (+)