ಮಂಗಳವಾರ, ನವೆಂಬರ್ 19, 2019
29 °C
ರೇಣುಕಾಚಾರ್ಯ ವಿರುದ್ಧ ಶಾಂತನಗೌಡ ಆರೋಪ

ಕಣದಿಂದ ಹಿಂದೆ ಸರಿಯಲು ರೂ. 10 ಕೋಟಿ ಆಮಿಷ

Published:
Updated:

ಹೊನ್ನಾಳಿ: ಚುನಾವಣಾ ಕಣದಿಂದ ಹಿಂದೆ ಸರಿದರೆ ರೂ. 10 ಕೋಟಿ ನೀಡುವುದಾಗಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ತಮಗೆ ಆಮಿಷ ಒಡ್ಡಿದ್ದರು ಎಂದು ಹೊನ್ನಾಳಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಜಿ. ಶಾಂತನಗೌಡ ಗಂಭೀರ ಆರೋಪ ಮಾಡಿದರು.ಇಲ್ಲಿಗೆ ಸಮೀಪದ ಗೊಲ್ಲರಹಳ್ಳಿಯಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಕಣದಿಂದ ಹಿಂದೆ ಸರಿಯುವಂತೆ ತಮಗೆ ಮಧ್ಯವರ್ತಿ ಮೂಲಕ ಆಮಿಷ ಒಡ್ಡಲಾಯಿತು. ಒಬ್ಬ ಅಭ್ಯರ್ಥಿಗೆ ಈ ರೀತಿ ಆಮಿಷ ಒಡ್ಡುವುದನ್ನು ನೋಡಿದರೆ ರೇಣುಕಾಚಾರ್ಯ ಯಾವ ಮಟ್ಟದ ಭ್ರಷ್ಟಾಚಾರ ಮಾಡಿ ಎಷ್ಟು ಹಣ ಸಂಪಾದಿಸಿರಬಹುದು? ಇಂತಹವರಿಗೆ ಮತದಾರರು ಸೂಕ್ತ ಪಾಠ ಕಲಿಸಬೇಕು ಎಂದು ಕರೆ ನೀಡಿದರು. ರೇಣುಕಾಚಾರ್ಯ ತಾಲ್ಲೂಕಿನ ಹಳ್ಳಿಗಳಿಗೆ ಭೇಟಿ ನೀಡಿ ಸ್ತ್ರೀ ಶಕ್ತಿ ಸಂಘಗಳು, ಮಹಿಳೆಯರಿಗೆ ಅನುದಾನ ಕೊಡಿಸುವ ಭರವಸೆ ನೀಡುತ್ತಿದ್ದಾರೆ. ಹಣ, ಹೆಂಡ, ಸೀರೆ, ಮೂಗುತಿ ವಿತರಿಸುವ ಮೂಲಕ ಮತ್ತೊಮ್ಮೆ ಜನರಿಗೆ ಮೋಸ ಮಾಡಲು ಮುಂದಾಗಿದ್ದಾರೆ. ಇಂತಹ ರಾಜಕಾರಣಿಗಳನ್ನು ಕ್ಷೇತ್ರದಿಂದ ಹೊರಗಿಡುವ ಮೂಲಕ ಕ್ಷೇತ್ರದ ಪಾವಿತ್ರ್ಯತೆ, ಮರ್ಯಾದೆ ಉಳಿಸಬೇಕು ಎಂದು ವಿನಂತಿಸಿದರು.

ಪ್ರತಿಕ್ರಿಯಿಸಿ (+)