ಕಣ್ಣಾಮುಚ್ಚೇ ಕಾಡೇಗೂಡೇ...ನಾಟಕ ಕಂಪನಿಯ ನೆರಳಿನಿಂದ ಬದುಕಿನ ಆಗಸಕ್ಕೆ ‘ಗುಬ್ಬಿ’ಮರಿ

7
ಕಣ್ಣಾಮುಚ್ಚೇ ಕಾಡೇಗೂಡೇ... ಬಿ. ಜಯಶ್ರೀ ಆತ್ಮಕಥನ

ಕಣ್ಣಾಮುಚ್ಚೇ ಕಾಡೇಗೂಡೇ...ನಾಟಕ ಕಂಪನಿಯ ನೆರಳಿನಿಂದ ಬದುಕಿನ ಆಗಸಕ್ಕೆ ‘ಗುಬ್ಬಿ’ಮರಿ

Published:
Updated:
ಕಣ್ಣಾಮುಚ್ಚೇ ಕಾಡೇಗೂಡೇ...ನಾಟಕ ಕಂಪನಿಯ ನೆರಳಿನಿಂದ ಬದುಕಿನ ಆಗಸಕ್ಕೆ ‘ಗುಬ್ಬಿ’ಮರಿ

ಕನ್ನಡ ರಂಗಭೂಮಿ ಹಾಗೂ ಚಲನಚಿತ್ರ ಕಂಡ ಅಪೂರ್ವ ಕಲಾವಿದರಲ್ಲಿ ಬಿ. ಜಯಶ್ರೀ ಒಬ್ಬರು. ರಂಗಭೂಮಿ, ಕಿರುತೆರೆ ಹಾಗೂ ಸಿನಿಮಾ ಮಾಧ್ಯಮಗಳಲ್ಲಿ ತಮ್ಮ ಛಾಪು ಮೂಡಿಸಿರುವ ಅವರು, ‘ಗುಬ್ಬಿ ವೀರಣ್ಣನವರ ಮೊಮ್ಮಗಳು’ ಎನ್ನುವ ‘ವಿಶೇಷಣ’ದ ಆಚೆಗೆ ಸಾಧನೆಯಿಂದ ಗುರ್ತಿಸಿಕೊಂಡವರು.‘ರಂಗಾಯಣ’ದ ಮುಖ್ಯಸ್ಥರಾಗಿ, ರಾಜ್ಯಸಭೆ ಸದಸ್ಯರಾಗಿ ಕಾರ್ಯ ನಿರ್ವಹಿಸಿರುವ ಜಯಶ್ರೀ ತಮ್ಮ ಅಪೂರ್ವ ಕಂಠಸಿರಿಯಿಂದಲೂ ಪ್ರಸಿದ್ಧರು. ಈ ಹಿರಿಯ ಕಲಾವಿದೆ ಈಗ ಆತ್ಮಕಥೆಯ ನೆಪದಲ್ಲಿ ತಮ್ಮ ಬದುಕನ್ನು ಹಿಂತಿರುಗಿ ನೋಡಿದ್ದಾರೆ.ಧಾರವಾಡದ ‘ಮನೋಹರ ಗ್ರಂಥಮಾಲಾ’ ಪ್ರಕಟಿಸಲಿರುವ ಜಯಶ್ರೀ ಅವರ ಆತ್ಮಕಥನ ‘ಕಣ್ಣಾಮುಚ್ಚೇ ಕಾಡೇಗೂಡೇ’ ಕನ್ನಡದ ಆತ್ಮಕಥನ–ಜೀವನಕಥನಗಳ ಪರಂಪರೆಯನ್ನು ಶ್ರೀಮಂತಗೊಳಿಸಲಿರುವ ವಿಶಿಷ್ಟ ಕೃತಿ. ಪತ್ರಕರ್ತೆ ಪ್ರೀತಿ ನಾಗರಾಜ್‌ ನಿರೂಪಿಸಿರುವ ಈ ಆತ್ಮಕಥನದ ಕೆಲವು ಭಾಗಗಳು ‘ಮುಕ್ತಛಂದ’ದಲ್ಲಿ ಪ್ರಕಟಗೊಳ್ಳುತ್ತಿವೆ.ಕೋಪ ತಗ್ಗಿಸಲು ಹೆಸರು ಬದಲಾವಣೆ

ನನ್ನ ಹುಟ್ಟು ಹೆಸರು ‘ಸತ್ಯಭಾಮ’ ಉರುಫ್ ‘ಬಿ ಜಯಶ್ರೀ’!

ಪ್ಲೀಸ್, ನಗಬೇಡಿ! ಹೆಸರಿಗೆ ತಕ್ಕ ಹಾಗೆ ನನಗೆ ವಿಪರೀತ ಕೋಪವಿತ್ತಂತೆ. ಈಗಲೂ ಇದೆ. ಆದರೆ, ನಾನು ಚಿಕ್ಕವಳಿದ್ದಾಗ ಹೆಸರು ಬದಲಾಯಿಸಿದರೆ ನನ್ನ ಕೋಪ ತಗ್ಗೀತೇನೋ ಎಂಬ ಮಹದಾಸೆಯಿಂದ ನನ್ನ ಹೆಸರನ್ನು ‘ಜಯಶ್ರೀ’ಎಂದು ಬದಲಾಯಿಸಿದರು. ಹೆಸರಿನ ಪಕ್ಕ ‘ಶ್ರೀ’ ಅಂತ ಸೇರಿಸೋದು ನನ್ನಿಂದಲೇ ನಮ್ಮ ಮನೆಯಲ್ಲಿ ಶುರುವಾಯಿತು.ನನ್ನ ತಾತನ ಬಹುತೇಕ ಮೊಮ್ಮಕ್ಕಳಿಗೆಲ್ಲ ‘ಶ್ರೀ’ಯಿಂದಲೇ ಹೆಸರು ಕೊನೆಗೊಳ್ಳೋದು. ಶಿವಶ್ರೀ, ರಾಜಶ್ರೀ, ಪದ್ಮಶ್ರೀ, ವಿಜಯಶ್ರೀ – ಹೀಗೆ ಗುಬ್ಬಿ ವೀರಣ್ಣನವರ ವಂಶದ ಮೂರನೇ ತಲೆಮಾರು ಶ್ರೀಗಳ ಸರಮಾಲೆಯೇ!‘ಶ್ರೀ’ ಅಂತ ಬಾಲವೇನೋ ಬಂತು. ಆದರೆ, ಕೋಪ ಮಾತ್ರ ಹೆಚ್ಚು ಕಡಿಮೆ ಹಾಗೇ ಉಳಿಯಿತು. ಹೆಸರು ಬದಲಾಯಿಸಿದರೆ ಮನುಷ್ಯ ಬದಲಾಗುತ್ತಾನೇನು?

ನನಗೆ ಐದು ಜನ ಸೋದರ ಮಾವಂದಿರು. ಎಲ್ಲರೂ ನನ್ನನ್ನು ಬಹಳ ಪ್ರೀತಿಸುತ್ತಿದ್ದರು, ಅಂತೆಯೇ ಗೋಳು ಹೊಯ್ದುಕೊಳ್ಳುತ್ತಿದ್ದರು. ಆಗೆಲ್ಲ ಸೋದರ ಮಾವಂದಿರನ್ನ ಮದುವೆಯಾಗೋ ರಿವಾಜು ಚಾಲ್ತಿಯಲ್ಲಿ ಇತ್ತು. ನಾನು ಬಹಳ ಚಿಕ್ಕವಳು. ಮಾವಂದಿರೆಲ್ಲ ಸುಮ್ಮನೆ ತಮಾಷೆಗೆ ನನ್ನನ್ನು ರೇಗಿಸುತ್ತಿದ್ದರು.‘ನಾನ್ ನಿನ್ನ ಮದ್ವೆ ಆಗ್ತೀನಿ’ ಅಂತಲೋ ಇಲ್ಲಾ ‘ನನ್ನ ಮದ್ವೆ ಆಗ್ತೀಯಾ’ ಅಂತೆಲ್ಲ ಚೇಷ್ಟೆ ಮಾಡುತ್ತಿದ್ದರು. ನಾನೋ, ಇದು ತಮಾಷೆ ಅಂತ ಅರ್ಥವಾಗದೆ ಬಹಳ ಸೀರಿಯಸ್ ಆಗಿ ‘ಇಲ್ಲಪ್ಪ ನಾನು ಯಾರನ್ನೂ ಮದ್ವೆ ಆಗಲ್ಲ’ ಅಂತ ಸಿಟ್ಟು ಮಾಡಿಕೊಂಡು ಕೆಲವೊಮ್ಮೆ ಗಲಾಟೆಯನ್ನೂ ಮಾಡುತ್ತಿದ್ದೆ.ಆಗೆಲ್ಲ ಆಂಧ್ರದ ಕಡೆಯಿಂದ ಬರುವ ಕೊಂಡಮಾಮ ಕಾಣಿಸಿಕೊಳ್ಳುತ್ತಿದ್ದರು. ಅವರ ಮಾತಿನಲ್ಲಿ ದಟ್ಟ ತೆಲುಗು ಛಾಯೆ ಇರುತ್ತಿತ್ತು. ಕೊಂಡ ಮಾಮನ ಥರವೇ ಹಾಲಕ್ಕಿ ಶಾಸ್ತ್ರದವರೂ ಬುಡುಬುಡಿಕೆಯವರೂ ಬರುತ್ತಿದ್ದರು. ಬಹಳ ಕುತೂಹಲಕಾರಿಯಾದ ಜನ ಇವರು. ಇವರ ವೇಷಭೂಷಣಗಳು ನೋಡಲು ಬಹಳ ಆಸಕ್ತಿ ಹುಟ್ಟಿಸುತ್ತಿದ್ದವು.ಕೊಂಡಮಾಮ ಜೋಗಿಗಳ ಥರ ಮುಡಿ ಕಟ್ಟಿಕೊಂಡು, ಕಚ್ಚೆ ಉಟ್ಟು, ಮೇಲೆ ಬನಿಯನ್ ಹಾಕಿಕೊಂಡು, ತರತರದ ಮಣಿಸರ ಧರಿಸಿ, ಮುಡಿಗೆ ಒಂದು ನವಿಲು ಗರಿ ಸಿಕ್ಕಿಸಿಕೊಂಡು ಕೈಲಿ ಏಕತಾರಿ ಹಿಡಿದು ಹಾಡುತ್ತಾ ಬರುತ್ತಿದ್ದರು. ಅವರು ಬಹುತೇಕ ಕಗ್ಗಂಟು ಭಾಷೆಯಲ್ಲಿ ಜ್ಯೋತಿಷ ಕೂಡ ಹೇಳುತ್ತಿದ್ದರು. ಭಾಷೆ ಕೇಳುವುದಕ್ಕೆ ಕೆಲವೊಮ್ಮೆ ಸರಳವಾಗಿದ್ದರೆ, ಇನ್ನು ಕೆಲವು ಬಾರಿ – ವಿಶೇಷವಾಗಿ ಗಂಡಾಂತರಗಳ ಬಗ್ಗೆ ಹೇಳಬೇಕಾದರೆ – ಒಂದು ರೀತಿಯ ಅಮೂರ್ತ ಭಾಷೆಯಲ್ಲಿ ಮಾತನಾಡುತ್ತಿದ್ದರು.ನಾನು ಚಿಕ್ಕವಳಿದ್ದಾಗ ಹೀಗೇ ಒಮ್ಮೆ ಕೊಂಡಮಾಮನೊಬ್ಬ ಬಂದ ಸಂದರ್ಭದಲ್ಲಿ ಅಮ್ಮ ಅವನನ್ನು ಕೂರಿಸಿ ನನ್ನ ಶಾಸ್ತ್ರ ಕೇಳಿದರು. ಆ ಪುಣ್ಯಾತ್ಮನೋ “ಇವಳಿಗೆ ಒಳ್ಳೇದಾಗ್ತದೆ. ಇವಳು ಸಮುದ್ರ ದಾಟಿ ಹೋಗ್ತಾಳೆ. ಒಂದು ಬಾರಿ ಅಲ್ಲ, ಬೇಕಾದಷ್ಟು ಸಾರ್ತಿ ಹೋಗ್ತಾಳೆ. ಕೆಂಪು ಮೂತಿಯೋನ್ನ ಮದುವೆ ಆಗ್ತಾಳೆ” ಅಂತೆಲ್ಲ ಹೇಳಿಬಿಟ್ಟ.

ತಗೋ ಮತ್ತೆ. ನನ್ನ ಮಾವಂದಿರ ವರಸೆ ತಿರುಗಿ ಶುರುವಾಯಿತು. “ನನ್ನ ಮೂತಿ ಕೆಂಪಗಿದೆ. ನನ್ನೇ ಅವಳು ಮದುವೆ ಆಗೋದು. ಅಲ್ವಾ ಜಯಶ್ರೀ?”  ನಾನು ಎಲ್ಲಿ ಹೋದರೂ ಗೋಳು ಹೊಯ್ದುಕೊಳ್ಳುವುದು ಅವರಿಗೆ ಒಂಥರಾ ಮಜಾ ಕೊಡುತ್ತಿತ್ತು. ಚನ್ಬಸು ಮಾಮ, ಶಿವಾನಂದ ಮಾಮ, ರಾಜಶೇಖರ ಮಾಮ, ಗುರು ಮಾಮ, ಶಿವರಾಜ ಮಾಮ – ಎಲ್ಲರೂ ಸೇರಿ ಕಡೆಗೆ ಒಂದು ನಿರ್ಧಾರಕ್ಕೆ ಬಂದರು. ಐದೂ ಮಾವಂದಿರು ಚಿಕ್ಕ ಹುಡುಗಿ ನನ್ನನ್ನ ಅವರ ತಲೆ ಮೇಲೆ (ಅನಂತಶಯನನ ಹಾಗೆ) ಮಲಗಿಸಿಕೊಂಡು ಫೋಟೊ ತೆಗೆಯೋದಂತೆ.ಹಾಗೆ ಮಾಡಿದರೆ ಮಾತ್ರ ಯಾರೂ ಗಲಾಟೆ ಮಾಡೋಲ್ಲ ಅಂತ ಹೇಳಿದರು. ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ ಅಂತಾರಲ್ಲ? ಹಾಗೆ ನನಗಂತೂ ಸಾಕುಸಾಕಾಗಿ ಹೋಗುತ್ತಿತ್ತು. ಈಗ ನೆನೆಸಿಕೊಂಡರೆ ಆಗಿನ ದಿನಗಳ ಬಗ್ಗೆ ಮನಸ್ಸೆಲ್ಲ ಆರ್ದ್ರವಾಗುತ್ತದೆ. ಎಂಥಾ ಸಂತೋಷದ, ಮುಗ್ಧತೆಯ, ಸರಳ ದಿನಗಳು ಅವು!ಕಡೆಗೂ ಐದೂ ಜನ ನನ್ನ ಜೊತೆ ಫೋಟೋ ತೆಗೆಸಿಕೊಳ್ಳುವ ಸಂದರ್ಭ ಬಂದೇ ಬಂತು. ನಾನು ಋತುಮತಿಯಾದಾಗ. ನನಗೋ ಅದೇನು ಅಂತಲೂ ಅರ್ಥವಾಗಲಿಲ್ಲ. ಆದರೆ ಎಲ್ಲ ವಿಧಿ ವಿಧಾನಗಳು, ಸಂಭ್ರಮ ಎಲ್ಲ ನೋಡಿ ನನಗೇನೋ ಮಹತ್ತರವಾದದ್ದೇ ಆಗಿರಬೇಕು ಎಂದುಕೊಂಡೆ.ಆಗಿನ ಸಂದರ್ಭದಲ್ಲಿ ಎಲ್ಲ ಮಾಮಂದಿರೂ ಸೇರಿ “ನಾವು ಪಂಚಪಾಂಡವರು. ಇವಳೇ ನಮ್ಮ ದ್ರೌಪದಿ’’ ಎಂದು ಚೇಷ್ಟೆ ಮಾಡುತ್ತಾ ಫೋಟೋ ತೆಗೆಸಿಕೊಂಡರು. ಎಷ್ಟು ಸೊಗಸು ಅಂದ್ರೆ! ಆಗ ಇದ್ದ ಮುಗ್ಧತೆ, ಒಗ್ಗಟ್ಟಿನ ಸಂಸಾರ ಇವೆಲ್ಲಾ ಈಗ ಹುಡುಕಿದರೂ ಸಿಗೊಲ್ಲ. ಆಗೆಲ್ಲ ಜನ ಬರೀ ಸುಖಕ್ಕೆ ಮಾತ್ರ ಅಲ್ಲ, ಕಷ್ಟಕ್ಕೂ ಆಗಿಬರುತ್ತಿದ್ದರು.ನಾನು ಚಿಕ್ಕವಳಿದ್ದಾಗ ಅಮ್ಮ ನನಗೆ ಕಾಗದ ಬರಿಯೋದು ಕಲಿಸಿದರು. ಎಡಕ್ಕೆ ‘ಕ್ಷೇಮ’ ಮಧ್ಯೆ ‘ಓಂ’ ಬಲಕ್ಕೆ ದಿನಾಂಕ ಹಾಗೂ ಊರಿನ ಹೆಸರು. ಎಷ್ಟು ಚೆಂದ ಅಲ್ವಾ? ಪತ್ರ ನೋಡುತ್ತಲೇ ಓದುವವರಿಗೆ ಒಂದು ರೀತಿಯ ನೆಮ್ಮದಿಯ ಭಾವ ಮೂಡುತ್ತದೆ.ಆದರೆ ನಾನು ಜಾಣೆ! ಒಮ್ಮೆ ಯಾವುದೋ ಊರಿಂದ ಕಾಗದ ಬರೆದಾಗ ಇವೆಲ್ಲವನ್ನೂ ಮರೆತು ಸುಮ್ಮನೆ ಉದ್ದಕ್ಕೆ ಬರೆದುಕೊಂಡು ಹೋಗಿ ಅಮ್ಮನ ಕೈಲಿ ಬೈಸಿಕೊಂಡಿದ್ದೆ. ಅಮ್ಮ ನನಗೆ ಇಂಗ್ಲೀಷು ಓದಲು, ಬರೆಯಲು ಕಲಿಸಿಕೊಟ್ಟರು.

ನನ್ನ ಅಮ್ಮ ಓದಿದ್ದು 2-3ನೇ ತರಗತಿಯಷ್ಟೆ. ಅವರು ನನಗೆ ಇಂಗ್ಲೀಷು ಓದಲು ಕಲಿಸಿದ್ದು ಹೀಗೆ. ‘ಜಯಾ ನಿನ್ನ ಹೆಸರನ್ನ ಇಂಗ್ಲೀಷಿನಲ್ಲಿ ಬರೆಯೋದು ಹೇಗೆ, ಮೊದಲು ತಿಳಕೋ!’ ಎಂದರು. ಇಂಗ್ಲೀಷಿನಲ್ಲಿ ಜ–ಯ–ಶ್ರೀ ಎಂದು ಪದಪದವನ್ನೂ ಬಿಡಿಸಿ ಹೇಳಿ ಇಂಗ್ಲೀಷಿನ ಮೊದಲ ಪಾಠ ಮಾಡಿದವರು ಅಮ್ಮ, ನನ್ನ ಮಟ್ಟಿಗಂತೂ ಮನೆ ಮೊದಲ ಪಾಠಶಾಲೆಗೂ ಮೀರಿದ್ದು. ಗುಬ್ಬಿ ಕಂಪನಿ ಒಂದು ವಿಶ್ವವಿದ್ಯಾಲಯವಾಗಿತ್ತು. ಮತ್ತೆ ನನ್ನ ಜನನಿ, ನನ್ನ ಅಮ್ಮ, ಎಲ್ಲರ ಮಾ–ಜಿ, ಎಷ್ಟೋ ವಿಚಾರಗಳಿಗೆ ನಾನೊಪ್ಪಿದ ಮೊದಲ ಮತ್ತು ಕೊನೆಯ ಗುರುವೂ ಹೌದು.ಒಮ್ಮೆ ನನ್ನ ದೊಡ್ಡಮ್ಮನಿಗೆ ಅಂದರೆ ತಾಯಿಯ ಅಕ್ಕನಿಗೆ, ವೀರಣ್ಣನವರ ಜೇಷ್ಠ ಪುತ್ರಿ ಜಿ.ವಿ. ಸ್ವರ್ಣಮ್ಮ ಇವರಿಗೆ ಸಿಡುಬು ಆಗಿ ಬದುಕುವುದೇ ಕಷ್ಟವಾಗಿತ್ತಂತೆ. ಅವರನ್ನು ನೋಡಲು ಬಂದ ಅಮ್ಮನಿಗೆ ಆಗ ಕಂಪನಿಯಲ್ಲಿ ‘ಅಕ್ಕಮಹಾದೇವಿ’ ನಾಟಕದ ಶೋ ಮಾಡಲು ನಿರ್ಧರಿಸಿದ್ದಾರೆ ಎಂದು ಗೊತ್ತಾಯಿತು.ಅಕ್ಕಮಹಾದೇವಿ ಪಾತ್ರವನ್ನು ಸ್ವರ್ಣಮ್ಮ ಮಾಡುತ್ತಿದ್ದರು. ಆದರೆ ಅವರಿಗೆ ಈಗ ಸಿಡುಬು. ಎಂದೂ ಯಾವ ಕಾರಣಕ್ಕೂ ಘೋಷಣೆ ಮಾಡಿದ ನಾಟಕ ರದ್ದಾಗಿರಲಿಲ್ಲ. ಅದಕ್ಕಾಗಿ ನನ್ನ ಅಮ್ಮ ಒಂದು ಶೋ ಮಾಡಲು ಸಿದ್ಧರಾದರಂತೆ. ವಿಷಯ ತಿಳಿದ ರಾಜಣ್ಣ, ಅಂದರೆ ನನ್ನ ಜನ್ಮಕ್ಕೆ ಕಾರಣರಾದ ನನ್ನ ತಂದೆ ರಾಜಣ್ಣ, ಕೂಡಲೇ ಕಂಪನಿಯಲ್ಲಿ ಪ್ರತ್ಯಕ್ಷವಾದರು.“ಈಗ ಸ್ಟೇಜ್ ಹತ್ತಿದರೆ ಸುಟ್ಟುಬಿಡ್ತೀನಿ” ಅಂತ ಅಮ್ಮನಿಗೆ ಹೇಳಿದರು.ಅಮ್ಮ: ದಯಮಾಡಿ ಅರ್ಥ ಮಾಡಿಕೊಳ್ಳಿ. ಕಂಪನಿ ಕಷ್ಟದಲ್ಲಿದೆ. ಈ ಶೋ ಮಾಡಿದರೆ ಅವರಿಗೆ ಸಹಾಯ ಆಗುತ್ತೆ. ಇದೊಂದೇ ಶೋ. ಮತ್ತೆ ಇನ್ಯಾವತ್ತೂ ಬಣ್ಣ ಹಚ್ಚಲ್ಲ. ಈವತ್ತು ಮಾತ್ರ ಬೇಡ ಅನ್ನಬೇಡಿ.ರಾಜಣ್ಣ: ಬೇಡ ಅಂದ್ರೆ ಬೇಡ. ಇದನ್ನು ಕೇಳಿ ಅಮ್ಮನಿಗೂ ರೇಗಿತು.

 

ಅಮ್ಮ: ಏನಾಗುತ್ತೋ ಆಗಲಿ, ನನ್ನ ಪ್ರಾಣ ಸ್ಟೇಜ್ ಮೇಲೆ ಹೋದರೂ ಪರವಾಗಿಲ್ಲ. ಎಂದು ಧೈರ್ಯವಾಗಿ ನಿಂತರು. ಅಲ್ಲಿಗೆ ಆ ಮನುಷ್ಯನ ಜೊತೆಗೆ ಅವರ ವೈವಾಹಿಕ ಜೀವನ ಮುಕ್ತಾಯವಾಯಿತು.

ಅಮ್ಮನಿಗೆ ಕಂಪನಿಯೇ ಕಾಯಂ ಆಯಿತು. ಅಭಿನಯ, ನಾಟಕದ ರೀಡಿಂಗು, ತಯಾರಿ, ಅಭ್ಯಾಸಗಳ ನಡುವೆ ನಾನು – ಚಿಕ್ಕಮಗು. ನೀನು ಮಗುವಾಗಿದ್ದಾಗ ಒಂದು ದಿನಕ್ಕೂ ತೊಂದರೆ ಆಗಲಿಲ್ಲ ಎಂದು ಆಗಾಗ ನೆನಪಿಸಿಕೊಳ್ಳುತ್ತಿದ್ದರು ಅಮ್ಮ.ನಾನು ಅಷ್ಟುಹೊತ್ತಿಗೆ ಕೈಗೂಸು. ಸುಮ್ಮನೆ ಚಾಪೆಯ ಮೇಲೆ ಉರುಳಿಬಿಟ್ಟು ನಾಲ್ಕು ನುಣುಪಾದ ಕಲ್ಲನ್ನು ನನ್ನ ಮುಂದೆ ಹಾಕಿಬಿಟ್ಟರೆ ಆಟವಾಡಿ ಸುಮ್ಮನೆ ಮಲಗುತ್ತಿದ್ದೆನಂತೆ. ನಾನು ಹುಟ್ಟಿದಾಗ ಅಮ್ಮನ ಹತ್ತಿರ ಹೆಚ್ಚು ಹಣ ಇರಲಿಲ್ಲ. ಬಹುಶಃ ಅದಕ್ಕೇ ಇರಬೇಕು, ನನಗೆ ಆಟದ ಸಾಮಾನುಗಳೂ ಇರಲಿಲ್ಲ.ಚಿಕ್ಕ ಮಗುವಿದ್ದಾಗಿನಿಂದಲೂ ನಾನು ಬಹಳ ಅಭದ್ರತೆಯನ್ನು ಅನುಭವಿಸಿ ಬೆಳೆದವಳು. ಇದು ನನ್ನದು, ಅಥವಾ ಇದು ನನ್ನದಲ್ಲ ಎಂದು ಸ್ಪಷ್ಟವಾಗಿ ಹೇಳಲಾಗದ ಅನುಭವ ನನ್ನದು. ಆದರೆ ಅದೇ ಸಮಯಕ್ಕೆ ಬಹಳಷ್ಟು ಜನರ ನಡುವೆ ಬದುಕಿ ಸಾಕಷ್ಟು ಸಂತೋಷವನ್ನೂ ಕಂಡೆ.ನನಗೆ ಐದು ಜನ ಸೋದರ ಮಾವಂದಿರು. ಪುಟ್ಟ ಹುಡುಗಿಯಾದ ನನ್ನನ್ನು ಎಲ್ಲರೂ ಪಾಂಚಾಲಿ ಅಂತ ರೇಗಿಸುತ್ತಿದ್ದರು. ಒಂದು ಕಡೆ ಹಾಗೆ ತಮಾಷೆ ಮಾಡಿದರೆ, ಇನ್ನೊಂದು ಕಡೆ ಹೀಗೆ: “ನೀನು ನಮ್ಮನೇಲಿ ಹುಟ್ಟಿದ್ದಲ್ಲ. ನಿಮ್ಮಮ್ಮ ನಿಮ್ಮಮ್ಮನೇ ಆಲ್ಲ. ನಿನ್ನನ್ನ ತೌಡು ಕೊಟ್ಟು ತಗೊಂಡಿದ್ದು!” ಅಂತ ಮಾಮಂದಿರು ನನಗೆ ಹೇಳುತ್ತಿದ್ದರು.ಅದ್ಯಾಕೋ ಗೊತ್ತಿಲ್ಲ, ನಾನು ಈ ಕಥೆಯನ್ನ ಬಲವಾಗಿ ನಂಬಿಬಿಟ್ಟಿದ್ದೆ. ದೊಡ್ಡವಳಾದ ಮೇಲೂ ಈ ಕಥೆ ನಿಜ ಇರಬಹುದು ಅಂತಲೇ ಅನ್ನಿಸುತ್ತಿತ್ತು. ಅಮ್ಮನೊಂದಿಗೆ ಜಗಳವಾದಾಗಲೆಲ್ಲ ಅವರಿಗೆ ಉತ್ತರವಾಗಿ ಅಂದೂಬಿಡುತ್ತಿದ್ದೆ: “ಇರಲಿ ಬಿಡು. ಎಷ್ಟೆಂದರೂ ನೀನು ನನ್ನ ತೌಡು ಕೊಟ್ಟು ತಗೊಂಡಿದ್ದಲ್ವಾ?”.ಅಮ್ಮ ಉತ್ತರ ಕೊಡಲಾಗದೆ ಸುಮ್ಮನಾಗಿಬಿಡುತ್ತಿದ್ದರು. ಇಂಥದೊಂದು ನಂಬಿಕೆಗೆ ತರ್ಕದಲ್ಲಿ ಉತ್ತರ ಕೊಡಲು ಸಾಧ್ಯವೇ?ಅಮ್ಮನ್ನ ನಾನು ಕೇಳುತ್ತಿದ್ದೆ. “ಅಮ್ಮ, ನಾನು ಹುಟ್ಟಿದ್ದು ಯಾವಾಗ? ತಾರೀಖು ನೆನಪಿದೆಯಾ?”“ತಾರೀಖೆಲ್ಲಾ ನೆನಪಿಲ್ಲಮ್ಮ. ಆದರೆ ನಾನು ಅನುಭವಿಸಿದ ಪಾಡು ಮಾತ್ರ ಮರೆಯೋಕೇ ಆಗಲ್ಲ. ನಿನ್ನ ಹೆರಿಗೆಗೆ ಅಂತ ನಾನು ಮೂರು ಬಾರಿ ಆಸ್ಪತ್ರೆಗೆ ಹೋದೆ. ಏನ್ ನೋವು ಬರೋದು! ಆದರೆ, ಆಸ್ಪತ್ರೆವರೆಗೆ ಹೋದರೆ ನೋವು ನಿಂತೇಹೋಗ್ತಿತ್ತು”.ಡಾಕ್ಟರು ಅಮ್ಮನಿಗೆ “ನೋವು ಶುರುವಾದಾಗ ಬನ್ನಿ” ಅಂತ ಕಳಿಸ್ತಿದ್ರಂತೆ. ಅಮ್ಮ ನೋವು ಬಂದಾಗಲೆಲ್ಲ ಆಸ್ಪತ್ರೆಗೆ ಹೋಗೋದು. ಅಲ್ಲಿಗೆ ಹೋದ ತಕ್ಷಣ ನೋವು ನಿಂತ್ಬಿಡೋದು. ಹೀಗೆ ಮೂರು ಸಾರಿ ಡಾಕ್ಟರು ವಾಪಾಸು ಕಳಿಸಿದ್ರಂತೆ.“ಕೊನೆಗೆ ಎಷ್ಟು ನಾಚಿಕೆ ಆಯಿತು ಅಂದರೆ, ನಾನು ಮನೆಗೆ ಹೋಗಲ್ಲ. ಹೆರಿಗೆ ಆಗೋವರೆಗೂ ಇಲ್ಲೇ ಇರ್ತೀನಿ ಅಂತ ಅಲ್ಲೇ ಹಟ ಹಿಡಿದು ಕೂತುಬಿಟ್ಟೆ. ತಾಯೀ ನೀನು ಗಜಗರ್ಭ ಕಣೇ! ಹತ್ತು ತಿಂಗಳು ಹೊತ್ತಿದ್ದೀನಿ ನಿನ್ನಾ!” ಅಂದರೇ ವಿನಃ ತಾರೀಖು ಹೇಳಲಿಲ್ಲ.ಹುಟ್ಟಿದಾಗ ನಾನು ಒಂಬತ್ತು ಪೌಂಡು ತೂಕವಿದ್ದೆನಂತೆ! ನನ್ನ ಹುಟ್ಟಿದ ದಿನ ಗೊತ್ತಾಗಿದ್ದು ಬಹಳ ವರ್ಷಗಳ ನಂತರ. ನಾನು ತಾರೀಖು ಕೇಳಿದಾಗಲೆಲ್ಲ ಒಬ್ಬೊಬ್ಬರು ಒಂದೊಂದು ರೀತಿ ಉತ್ತರ ಕೊಡುತ್ತಿದ್ದರು.ಶಿವಾನಂದ ಮಾಮಯ್ಯ ಕೊಡುತ್ತಿದ್ದ ಉತ್ತರವಂತೂ ದೇವರಿಗೇ ಪ್ರೀತಿ. “ನೀನು ಹುಟ್ಟಿದ ತಾರೀಖು ನೆನಪಿಲ್ಲ. ನೀನು ಹುಟ್ಟಿದ್ದು ಶುಕ್ರವಾರ ಅನ್ನೋದು ಗೊತ್ತು. ಆವತ್ತೇ ‘ಮೊದಟ ರಾತ್ರಿ’ ಅಂತ ಒಂದು ತೆಲುಗು ಸಿನಿಮಾ ರಿಲೀಸ್ ಆಗಿತ್ತು. ಇಷ್ಟು ಮಾತ್ರ ಗೊತ್ತು” ಅಂತ ಕೀಟಲೆ ಮಾಡುತ್ತಾ ಹೇಳುತ್ತಿದ್ದರು.ಒಗಟಾಗಿದ್ದ ನನ್ನ ಜನ್ಮದಿನಾಂಕ ಕಡೆಗೂ ಗೊತ್ತಾಯಿತು. ಜೂನ್ 9, 1950. ಮಾಮಯ್ಯ ಹೇಳಿದಂತೆ ನಾನು ಹುಟ್ಟಿದ್ದು ಶುಕ್ರವಾರದ ದಿನ.ತಾತ ಎಂಬ ವಿಶ್ವವಿದ್ಯಾಲಯ

ನನಗೆ ಆಗ ಸುಮಾರು 10 ವರ್ಷ ಇರಬೇಕು. ಆಗ ನಾವು ಗಾಂಧೀನಗರದ ಮನೆಯಲ್ಲಿದ್ದೆವು. ನನ್ನ ತಾತ, ಗುಬ್ಬಿ ವೀರಣ್ಣನವರು, ರೂಮಿನಲ್ಲಿ ಹಾಗೇ ಮಲಗಿಕೊಂಡಿದ್ದರು. ಅವರಿದ್ದದ್ದು ನಿದ್ರೆ ಮಾಡುವ ಸ್ಥಿತಿಯಲ್ಲಲ್ಲ, ಕಣ್ಣು ಮುಚ್ಚಿ ಆಲೋಚನೆ ಮಾಡುವ ಧ್ಯಾನಸ್ಥ ಸ್ಥಿತಿ.ನಾನು ಅಲ್ಲೇ ನೆಲದ ಮೇಲೆ ‘ಪ್ರಜಾವಾಣಿ’ ಪತ್ರಿಕೆಯನ್ನು ಪೂರ್ತಿ ನೆಲದ ಮೇಲೆ ಹಾಸಿಕೊಂಡು, ಅದರ ಮೇಲೆ ಎರಡೂ ಮೊಣಕೈಗಳನ್ನು ಊರಿಕೊಂಡು ಮನಸ್ಸಿನಲ್ಲೇ ಓದುತ್ತಿದ್ದೆ. ತಾತ ಮಲಗಿದ್ದಲ್ಲಿಂದಲೇ ಕೇಳಿದರು.

“ಏನು ಓದುತ್ತಿದ್ದೀಯೆ?”

“ನ್ಯೂಸ್ ಪೇಪರ್ ಓದ್ತಾ ಇದೀನಿ ತಾತ”.“ಎಲ್ಲಿ ಜೋರಾಗಿ ಓದು ನೋಡೋಣ?”

ಸರಿ ಮತ್ತೆ! ಬಹಳ ಹುಮ್ಮಸ್ಸಿನಿಂದ ತಲೆಬರೆಹದಿಂದಲೇ ಶುರು ಮಾಡಿದೆ.

“ಪ್ರಸನ್ನನ ಆತ್ಮಹತ್ಯೆ”“ಆಂ? ಏನಂದೆ”

“ಹೂಂ ತಾತ!”“ಎಲ್ಲಿ, ಇನ್ನೊಮ್ಮೆ ಸರಿಯಾಗಿ ಓದು!”

ಒಂದು ಕ್ಷಣ ತಡೆದು ಮತ್ತೆ ಓದಿದೆ 

“ಹೌದು ತಾತ! ಇಲ್ಲಿ ‘ಪ್ರಸನ್ನನ ಆತ್ಮಹತ್ಯೆ’ ಅಂತಾನೇ ಬರೆದಿದೆ” ನಾನೂ ಹಳೆಯದನ್ನೇ ಪುನರಾವರ್ತಿಸಿದೆ.

“ನೋಡಮ್ಮ. ಸರಿಯಾಗಿ ಕಣ್ಣು ಬಿಟ್ಟು, ಅಕ್ಷರ ಅಕ್ಷರವನ್ನೂ ಗಮನಿಸಿ ಓದು...”“ಹ್ಹಿ ಹ್ಹಿ... ತಾತ”

“ಹೂಂ”

“ಅದೂ... ಪ್ರಸನ್ನನ ಆತ್ಮಕತೆ ಅಂತ ಬರೆದಿದೆ”ತಾತ ನನ್ನ ಗುರು. ನನ್ನ ಗುರುತು. ನನ್ನ ಭಾಷೆ. ನನ್ನ ಓದು ತಿದ್ದುತ್ತಿದ್ದರು. ನನ್ನ ಅಭಿನಯವನ್ನು ಮೆಚ್ಚಿ ಪ್ರೋತ್ಸಾಹಿಸುತ್ತಿದ್ದರು. ತಾತ ತೀರಿ ಹೋಗಿ ನಲವತ್ತೆರಡು ವರ್ಷಗಳು ಮೀರಿವೆ. ಈವತ್ತಿಗೂ ಅವರ ನೆನಪು ನನ್ನನ್ನು ಬಿಟ್ಟು ಹೋಗಿಲ್ಲ.ತಾತನ ಬಗ್ಗೆ ನೆನಪು ಮಾಡಿಕೊಂಡರೆ ಅವರ ನಗುಮುಖವೇ ಕಣ್ಣ ಮುಂದೆ ಬರೋದು. ಅವರು ಹಾಸ್ಯಪ್ರಜ್ಞೆಯುಳ್ಳ ವ್ಯಕ್ತಿ. ಮಕ್ಕಳೊಂದಿಗೆ ಮಕ್ಕಳ ಹಾಗೆ, ದೊಡ್ಡವರೊಂದಿಗೆ ದೊಡ್ಡವರ ಹಾಗೆ ಇರುತ್ತಿದ್ದರು. ಅವರೊಳಗೊಬ್ಬ ನಟ, ನಿರ್ದೇಶಕ, ವ್ಯವಸ್ಥಾಪಕ, ಕಲಾಭಿಮಾನಿ, ಕಲಾರಾಧಕ, ಸೂಕ್ಷ್ಮ ದೃಷ್ಟಿಯ ಮಾಲೀಕ – ಎಲ್ಲರೂ ಇದ್ದರು.ಇವೆಲ್ಲವನ್ನೂ ಮೀರಿ ಅವರು ಒಬ್ಬ ಮೇರು ಪ್ರತಿಭೆಯ, ಬೆನ್ನು ಬಗ್ಗಿಸಿ ದುಡಿಯುವ ಕಲಾವಿದ, ತಂದೆ, ಸ್ನೇಹಿತ, ಗಂಡ, ತಾತ – ಎಷ್ಟೆಲ್ಲಾ ಪಾತ್ರಗಳು! ಎಲ್ಲವನ್ನೂ ತಾತ ಚೆನ್ನಾಗಿ ನಿಭಾಯಿಸಿದರೇ ಅಂತ ಕೇಳಿದರೆ...ನನ್ನ ಮುಖದ ಮೇಲೆ ಸುಮಾರು ಮೊಡವೆ ಗುರುತು ಇವೆ. ಅದನ್ನ ಸಿಡುಬು ಅಂತ ಕೆಲವರು ಅಂದುಕೊಂಡಿದ್ದಾರೆ. ಆದರೆ ಅದು ಸಿಡುಬಿನ ಕಲೆ ಅಲ್ಲ. ನನಗೆ ಚಿಕ್ಕವಳಿದ್ದಾಗ ಮುಖದ ಮೇಲೆ ಮೊಡವೆ ಏಳುತ್ತಿದ್ದವು. ತಾತ “ಬಾರೇ ಇಲ್ಲಿ!” ಅಂತ ಕರೆದು ಅದರಲ್ಲಿ ಒಂದನ್ನಾದರೂ ಪಟ್ ಅಂತ ಒಡೆದುಬಿಡುತ್ತಿದರು. ‘‘ಪ್ರಾಣ ಹೋಗುವಷ್ಟು ನೋವಾಗುತ್ತೆ ತಾತ ಹಾಗೆ ಮಾಡಬೇಡಿ’’ ಅಂತ ಹೇಳಿದರೂ ಕೇಳುತ್ತಿರಲಿಲ್ಲ. ಅವರಿಗೆ ಹಾಗೆ ಮಾಡುವುದು ತಮಾಷೆ ಎನ್ನಿಸುತ್ತಿತ್ತು.ನಾನು ತಾತನಿಂದ ಕಲಿತ ಹಲವು ವಿಷಯಗಳನ್ನು ಇಂದಿಗೂ ನಮ್ಮ ನಾಟಕಗಳಲ್ಲಿ ಅಳವಡಿಸುತ್ತಲೇ ಇದ್ದೇನೆ. ನನಗೆ ಪಾತ್ರ ಅಥವಾ ಪಾತ್ರಧಾರಿಗಳಲ್ಲ, ಆ ಪಾತ್ರದಿಂದ ನಾಟಕಕ್ಕೆ ಸಿಗುವ ಒಟ್ಟೂ ಸ್ವರೂಪ ಮುಖ್ಯ.ಚಿಕ್ಕದಿರಲಿ ಅಥವಾ ದೊಡ್ಡದಿರಲಿ – ಯಾವ ಕರ್ತೃವೂ ಅವಶ್ಯವಿಲ್ಲದ ಪಾತ್ರವನ್ನು ಸೃಷ್ಟಿ ಮಾಡುವುದಿಲ್ಲ ಅಂತ ನನ್ನ ನಂಬಿಕೆ. ಹಾಗಿದ್ದಾಗ ಪಾತ್ರಕ್ಕೆ, ನಾಟಕದ ಉದ್ದೇಶಕ್ಕೆ, ಅದರ ಸಂಪೂರ್ಣತೆಗೆ ಧಕ್ಕೆ ಬಾರದಂತೆ ಆ ಪಠ್ಯವನ್ನು ನಾವು ರಂಗದ ಮೇಲೆ ತರಬೇಕು. ಇದು ನಮ್ಮ ಆದ್ಯ ಕರ್ತವ್ಯ.ತಾತನ ಬಗ್ಗೆ ಒಂದು ಸಂದರ್ಭ ಜ್ಞಾಪಕಕ್ಕೆ ಬರ್ತಾ ಇದೆ. ಕಂಪನಿಯಲ್ಲಿ ತಮ್ಮ ಕೆಲಸ ಮುಗಿಯಿತು, ಇನ್ನು ಹೆಚ್ಚಿನ ಜವಾಬ್ದಾರಿ ತಮ್ಮಿಂದಾಗದು ಅಂತ ಅನಿಸಿದ ಮೇಲೆ ತಾತ ಕಂಪನಿಯನ್ನು ಚನ್ಬಸು ಮಾಮಯ್ಯನಿಗೆ ವಹಿಸಿಕೊಟ್ಟರು. ಆದರೆ ಆಗಾಗ ಕಂಪನಿಯ ರಿಹರ್ಸಲ್ಲು, ಪ್ರದರ್ಶನಗಳಿಗೆ ಹೋಗುತ್ತಿದ್ದರು. ಒಮ್ಮೆ ‘ಲವ ಕುಶ’ ನಾಟಕ ನಡೀತಿತ್ತು. ನಾವೆಲ್ಲ ತಾತನ ಜೊತೆ ಸುಮ್ಮನೆ ನಾಟಕ ನೋಡೋಕೆ ಅಂತ ಹೊರಟೆವು.ತಾತ ನಾಟಕ ನೋಡುತ್ತಿದ್ದುದು ಒಂದು ಅಪೂರ್ವ ಭಂಗಿ. ತಮ್ಮ ವಾಕಿಂಗ್ ಸ್ಟಿಕ್ ಅನ್ನು ಎರಡೂ ಕೈಯಲ್ಲಿ ಹಿಡಿದು, ತಮ್ಮ ಮುಂದೆ ಅದನ್ನು ನಿಲ್ಲಿಸಿಕೊಂಡು, ಅದರ ಮೇಲೆ ಗದ್ದ ಇಟ್ಟುಕೊಂಡು ನಡೆಯುತ್ತಿದ್ದುದನ್ನು ತದೇಕಚಿತ್ತರಾಗಿ ನಾಟಕವನ್ನು ಗಮನಿಸುತ್ತಿದ್ದರು. ಇದು ಅವರ ಯಾವತ್ತಿನ ಸ್ಟೈಲು.ಆವತ್ತಿನ ನಾಟಕ ಮುಗಿಯುವವರೆಗೂ ಸುಮ್ಮನಿದ್ದರು. ಸಂಪೂರ್ಣ ನಾಟಕ ಅಭ್ಯಾಸ ಮುಗಿದು ಎಲ್ಲರೂ ಎಗ್ಸಿಟ್ ಆದ ಮೇಲೆ ತಾತ ಚನ್ಬಸು ಮಾಮಯ್ಯನ್ನ ಕೇಳಿದರು.

‘‘ಚನ್ಬಸಣ್ಣ ದಶರಥನಿಗೆ ಎಷ್ಟು ಜನ ಮಕ್ಕಳಪ್ಪಾ?’’ಚನ್ಬಸು ಮಾಮಯ್ಯ ಪಾಪ ಸ್ವಲ್ಪ ದಿಗ್ಭ್ರಾಂತರಾಗಿಯೇ ಹೇಳಿದರು.‘‘ನಾಲ್ಕು ಜನ ಅಪ್ಪಾವರೇ’’   ಚನ್ಬಸು ಮಾಮಯ್ಯ ಹೇಳಿದರು. ಅವರು ಎಂದೂ ತಾತನನ್ನು ‘ಅಪ್ಪಾ’ ಅಂತ ಕರೆಯುತ್ತಿದ್ದಿಲ್ಲ. ‘ಅಪ್ಪಾವರೇ’, ‘ಯಜಮಾನರೇ’ ಅಂತಲೇ ಕರೆಯುತ್ತಿದ್ದರು.‘‘ಯಾರ್‍್ಯಾರು?’’

‘‘ರಾಮ, ಲಕ್ಷ್ಮಣ, ಭರತ, ಶತ್ರುಘ್ನ’’

‘‘ನಿಜ್ವಾಗಿ?’’‘‘ಯಾಕೆ ಅಪ್ಪೋರೆ ಹೀಗ್ ಕೇಳ್ತೀರಿ? ನಿಜವಾಗಿ ನಾಲ್ಕೇ ಜನ ಮಕ್ಕಳಲ್ವೇ’’‘‘ಮತ್ಯಾಕಪ್ಪಾ ರಾಮ–ಲಕ್ಷ್ಮಣನಿಗೆ ಮಾತ್ರ ಹೊಸ ಬಟ್ಟೆ, ಭರತ–ಶತ್ರುಘ್ನನಿಗೆ ಹಳೇ ಬಟ್ಟೆ ಹಾಕ್ಸಿದೀರಾ?’’ ಅಂತ ಕೇಳಿಬಿಟ್ಟರು. ಚನ್ಬಸು ಮಾಮಯ್ಯನಿಗೆ ಇದ್ದಕ್ಕಿದ್ದಂತೆ ತಾನೇನು ಮಾಡುತ್ತಿದ್ದೇನೆ ಎನ್ನುವುದು ಅರ್ಥವಾಯಿತು. ತಾತನ ಕಂಪನಿಯನ್ನು ಮಗ ವಹಿಸಿಕೊಂಡರೂ ತಾತನಿಂದ ಜ್ಞಾನವನ್ನು ತೆಗೆದುಕೊಳ್ಳುವುದು ಇನ್ನೂ ಬಹಳ ಇತ್ತು. ತಾತ ಸ್ವಯಂ ನಿರ್ಮಾತೃ. ಅವರಿಗಿಂತ ಮುಂಚೆ ನಾಟಕ ಕಂಪನಿಯನ್ನು ನಡೆಸಿದ ಅನುಭವಿಗಳು ಇದ್ದಿರಬಹುದು.ಆದರೆ, ತಾತ ತಮ್ಮ ದಾರಿಯನ್ನು ತಾವೇ ಹಾಕಿಕೊಂಡು, ತಮ್ಮ ಮೌಲ್ಯಗಳಿಗೆ ಬದ್ಧರಾಗಿ ಬದುಕಿದವರು. ತಪ್ಪೋ, ಸರಿಯೋ ಎನ್ನುವುದು ಬೇರೆ ಮಾತು. ಅವರ ಕೆಲವು ಜಿಜ್ಞಾಸೆಗಳಿಗೆ ಉತ್ತರ ಸಿಕ್ಕಿಬಿಟ್ಟರೆ ತಾತ ತಾವು ನಂಬಿದ್ದನ್ನು ಬಲವಾಗಿ ಪ್ರತಿಪಾದಿಸಿದವರು. ತಮ್ಮ ಪ್ರತಿಯೊಂದು ಕಾರ್ಯಕ್ಕೂ ಒಂದು ಕಾರಣ ಹಾಗೂ ಸಂವೇದನೆ ಇದೆ ಎಂದೇ ನಂಬಿದವರು.ಎರಡನೇ ಪೀಳಿಗೆಯಾದ ಚನ್ಬಸು ಮಾಮಯ್ಯನಾಗಲೀ ಇನ್ನುಳಿದವರಾಗಲೀ ಸ್ವಲ್ಪ ವಿಸ್ಮೃತಿಗೆ ಒಳಗಾಗುವುದು ಸಹಜವೇ ಆಗಿತ್ತು. ತಾತ ಕಲಿತದ್ದು ಸ್ವಯಂ ಪಾಠ. ನಾವು ಕಲಿತದ್ದು ತಾತನ್ನ ನೋಡಿ. ಮುಂದಿನ ಪೀಳಿಗೆಗಳಿಗೆ ಸಂಪೂರ್ಣ ಗ್ರಹಿಕೆ ಸಾಧ್ಯವಿರಲಿಲ್ಲ.‘‘ತಪ್ಪಾಯ್ತು ಅಪ್ಪಾವರೇ...’’ ಎಂದ ಚನ್ಬಸು ಮಾಮಯ್ಯ ಆವತ್ತೇ ಭರತ–ಶತ್ರುಘ್ನರಿಗೆ ಹೊಸ ಕಾಸ್ಟ್ಯೂಮಿನ ವ್ಯವಸ್ಥೆ ಮಾಡಿಸಿದರು. ನಾಟಕಕ್ಕೆ ಸಂಬಂಧಪಟ್ಟಂತೆ ತಾತನ ಕೆಲವು ಧ್ಯೇಯಗಳು ನನಗೆ ದೊಡ್ಡ ಪಾಠವಿದ್ದಂತೆ. ಅವರ ಮಾತುಗಳು ಬಹಳ ಸರಳವಾಗಿರುತ್ತಿದ್ದವು. ಆದರೆ, ಒಳಾರ್ಥ ಬಹಳ ಸಂಕೀರ್ಣವಾದ ಸಂದೇಶವೊಂದಿರುತ್ತಿತ್ತು.‘‘ಅಕ್ಕಿ ಹಾಕಿ ಹಕ್ಕಿ ಹಿಡೀಬೇಕು ಕಣಪ್ಪಾ. ನಾನು ಯಾವತ್ತೂ ಹಿಂಗೆ ಕಂಪನಿ ನಡೆಸಲಿಲ್ಲ. ಸಾಲವೋ ಸೋಲವೋ ನಾನು ಜನಕ್ಕೆ ಮೋಸ ಮಾಡುವ ಕೆಲಸ ಎಂದೂ ಮಾಡಲಿಲ್ಲ. ಅವರು ಬಂದರೆ ಕಣ್ಮನ ತಣಿಯುವ ಹಾಗೆ ನಾಟಕ ಇರಬೇಕು...” ಎಂದು ಹೇಳಿದರು. ಎಂದೂ ಪಾತ್ರಧಾರಿಗೆ ಮಾಸಿದ ಬಟ್ಟೆ ಹಾಕಿಸುತ್ತಿರಲಿಲ್ಲ ತಾತ.ಅಂದರೆ ಪ್ರೊಡಕ್ಷನ್ ಅನ್ನು ಸಾಹಿತ್ಯ, ಸಂಗೀತ, ಉತ್ತಮ ಅಭಿನಯ ಮುಂತಾದ ಮುಖ್ಯ ಅಂಶಗಳಿಂದಲೂ, ಮತ್ತು ಕಾಸ್ಟ್ಯೂಮು, ಕೂರಲು ಪ್ರಶಸ್ತ ಜಾಗ, ಮುಂತಾದ ಪೂರಕ ಅಂಶಗಳಿಂದಲೂ ಅದ್ಭುತವಾಗಿ ಕಟ್ಟಿ ಒಳ್ಳೆಯ ವೈಭವದಿಂದ ಸಿಂಗರಿಸಿದರೆ ನೋಡಲು ಜನ ಬಂದೇ ಬರುತ್ತಾರೆ ಎನ್ನುವುದು ಅವರ ನಂಬಿಕೆಯಾಗಿತ್ತು. ಅವರು ಜೀವನ ಪೂರ್ತಿ ನಡೆದದ್ದೂ ಹಾಗೆಯೇ.ಆದರೆ ಈ ಘಟನೆ ಚನ್ಬಸು ಮಾಮಯ್ಯನಿಗೆ ಅಷ್ಟೇ ಅಲ್ಲ, ತಾತನಿಗೂ ಒಂದು ರೀತಿಯ ಬದುಕು ಬದಲಾಯಿಸುವ ಸನ್ನಿವೇಶವಾಯಿತು. ಕಾಸ್ಟ್ಯೂಮಿನ ಬಗ್ಗೆ ಅವರ ಅಭಿಪ್ರಾಯ ಮೆಚ್ಚತಕ್ಕದ್ದೇ. ಆದರೆ, ತಾತನಿಗೆ ತಾನು ಮಗನಿಗೆ ಕಂಪನಿ ಬಿಟ್ಟುಕೊಟ್ಟ ಮೇಲೆ ಹೀಗೆ ಮೇಲ್ವಿಚಾರಣೆ ಮಾಡುವ ಥರದಲ್ಲಿ ಹೋಗಬಾರದು ಎನ್ನುವ ಭಾವನೆ ಬಂತು. ನನ್ನ ಸಮಯ ಆಯಿತಲ್ಲ. ಇನ್ನು ಅವರಿಗೆ ಹೇಗೆ ಅನುಕೂಲವೋ ಹಾಗೆ ನಡೆಸುತ್ತಾರೆ. ನಾನು ಪದೇ ಪದೇ ಹೋದರೆ ಎಲ್ಲರಿಗೂ ಮುಜುಗರವಾಗಬಹುದು, ಅಲ್ಲದೆ ಮಗನಿಗೂ ಇದು ಅಸಹನೆ ಉಂಟುಮಾಡಬಹುದು ಎನ್ನಿಸಿತು ಅವರಿಗೆ.ಆ ದಿನ ನಡೆದ ಘಟನೆಯೇ ಕೊನೆ. ಮತ್ತೆ ತಾತ ಕಂಪನಿಗೆ ಕಾಲಿಡಲಿಲ್ಲ ಅಥವಾ ಅದರ ವ್ಯವಹಾರಗಳಲ್ಲಿ ತಲೆ ಹಾಕಲಿಕ್ಕೆ ಪ್ರಯತ್ನ ಮಾಡಲಿಲ್ಲ. ಕಂಪನಿಗೆ ನೀವು ಬರಬೇಕು ಎಂದು ಒತ್ತಾಯ ಮಾಡುವ ಧೈರ್ಯ ಯಾರಲ್ಲೂ ಇರಲಿಲ್ಲ. ತಾತ ಒಮ್ಮೆ ನಿರ್ಧರಿಸಿದರೆ ಮುಗೀತು. ಅದು ಬದಲಾಗುವ ಪ್ರಶ್ನೆಯೇ ಇಲ್ಲ.ಕಂಪನಿಗೆ ಬರುವುದನ್ನು ನಿಲ್ಲಿಸಿದ ತಾತ ತಮ್ಮ ಮುಂದಿನ ಜೀವನದಲ್ಲಿ ಮಗ್ನರಾಗಿ ಬಿಟ್ಟರು. ಅವರಿಗೆ ನಿಜವಾಗಲೂ ವಯಸ್ಸಾಗಲು ಪ್ರಾರಂಭವಾಗಿದ್ದು ಆವಾಗ ಅಂತ ಕಾಣುತ್ತದೆ. ಕೆಲಸದ ವಿಷಯದಲ್ಲಿ ತಾತ ಎಷ್ಟು ಕಠಿಣ ಹೃದಯಿಯೋ, ಜನರೊಂದಿಗಿನ ಒಡನಾಟದಲ್ಲಿ ಅಷ್ಟೇ ಪ್ರೀತಿ ತುಂಬಿದ ಮನುಷ್ಯ. ಬಹಳ ಅಂತಃಕರಣಿ.ಕಂಪನಿ ಮುಚ್ಚುವ ಕಾಲ

ಕಂಪನಿ ಮುಚ್ಚುವ ಕಾಲಕ್ಕೆ ಏನಾಯಿತು ಎನ್ನುವುದು ನನಗೆ ಕೇಳಿ ತಿಳಿದು ಅಷ್ಟೇ ಗೊತ್ತು. ಏಕೆಂದರೆ ನಾನು 1965ನೇ ಇಸವಿಯ ಹೊತ್ತಿಗೆ ಓದುವ ಕಾರಣಕ್ಕೆ ಕಂಪನಿ ಬಿಟ್ಟಿದ್ದೆ. ನಂತರ ಎಪ್ಪತ್ತರ ದಶಕದಲ್ಲಿ ‘ರಾಷ್ಟ್ರೀಯ ನಾಟಕ ಶಾಲೆ’ಗೆ ಓದಲು ಬಂದಿದ್ದೆ. ಕಂಪನಿ ಒಂದೇ ಬಾರಿಗೆ ಮುಚ್ಚಲಿಲ್ಲ. ಅಭೂತಪೂರ್ವ ಯಶಸ್ಸು ಗಳಿಸಿದ ‘ಲವ–ಕುಶ’ ನಾಟಕ ಪ್ರದರ್ಶನದ ನಂತರ ತಾತ ಕಂಪನಿಯನ್ನು ಚನ್ನಬಸು ಮಾಮಯ್ಯನಿಗೆ ವಹಿಸಿ ಕೊಟ್ಟರು. ಚನ್ಬಸವ ಮಾಮಯ್ಯನ ಕೈಗೆ ಕಂಪನಿಯ ವಹಿವಾಟು ಬರುವಷ್ಟು ಹೊತ್ತಿಗಾಗಲೇ ಕಂಪನಿಗೆ ನೂರು ವರ್ಷ ತುಂಬಿತ್ತು. ಇಷ್ಟು ಹೊತ್ತಿಗೆ ನಾನು ‘ಎನ್ಎಸ್‌ಡಿ’ಗೆ ಹೋಗಿ ಸೇರಿಕೊಂಡಿದ್ದೆ.ಗಮನಿಸಬೇಕಾದ ಅಂಶ ಅಂದರೆ, ನಮ್ಮ ಮಾನಸದಲ್ಲಿ ಅಂದರೆ ಕಂಪನಿಯಿಂದ ಜೀವ ತಳೆದ ಕಲಾವಿದರಿಗೆ ತುಮಕೂರು ಮೊದಲು ಬರುವುದಿಲ್ಲ. ನಮ್ಮ ಮನಸ್ಸಿಗೆ ಮೊದಲು ಬರುವುದೇ ಗುಬ್ಬಿ. ನಂತರ ತುಮಕೂರು, ನಮ್ಮ ಮಟ್ಟಿಗೆ ಆ ಊರು ಗುಬ್ಬಿ–ಪಕ್ಕದ್ ತುಮಕೂರು. ತುಮಕೂರು ದೊಡ್ಡ ಊರೇ ಆದರೂ, ನಾವು ಅದನ್ನು ಗುಬ್ಬಿಯ ಪಕ್ಕದಲ್ಲಿಟ್ಟೇ ನೋಡುವುದು.ಇದು ಒಂದು ಥರಾ ಸಂಪೂರ್ಣ ವೃತ್ತವಾದಂತಾಯಿತು. ಗುಬ್ಬಿಯಲ್ಲಿ ಹುಟ್ಟಿ, ಗುಬ್ಬಿಯ ಹೆಸರು ಹೊತ್ತು ನೂರು ವರ್ಷಗಳ ಕಾಲ ವೈಭವೋಪೇತ ರಂಗಭೂಮಿಯನ್ನು ಕಟ್ಟಿದ ಗುಬ್ಬಿ ಕಂಪನಿ, ಹಸ್ತಾಂತರವಾದದ್ದು ಗುಬ್ಬಿಯ ಪಕ್ಕದ ಊರಾದ ತುಮಕೂರಿನಲ್ಲೇ.ಚನ್ಬಸು ಮಾಮಯ್ಯ ಕಂಪನಿ ನಡೆಸಲು ತಮ್ಮ ಶಕ್ತಿ–ಬುದ್ಧಿ ಎಲ್ಲವನ್ನೂ ವ್ಯಯಿಸಲಾರಂಭಿಸಿದರು. ಆದರೆ, ಸಮಯ ಬಹಳ ದಿನ ಸಾಥ್ ನೀಡಲಿಲ್ಲ. ಅಮ್ಮನಿಗೂ ವಿದ್ಯುತ್ ಆಘಾತದಲ್ಲಿ ಕಾಲು ಮುರಿದು ಶಕ್ತಿ ಕಳೆದುಕೊಂಡಿತ್ತು. ಅಮ್ಮ ಅಭಿನಯಿಸುವ ಹಾಗೆ ಇರಲಿಲ್ಲ, ಬೆಂಗಳೂರಿಗೆ ಬಂದು ನೆಲೆಸಿದ್ದರು. ಮುಂಚಿನ ಹಾಗೆ ಕಲಾವಿದರೂ ಸಿಗುತ್ತಿರಲಿಲ್ಲ. ಸಾಕಷ್ಟು ನಾಟಕ ಕಂಪನಿಗಳು ಹುಟ್ಟಿಕೊಂಡುಬಿಟ್ಟಿದ್ದವು. ಮುಂದಿನ ಪೀಳಿಗೆಯಾದ ನಾವೆಲ್ಲರೂ ನಮ್ಮನಮ್ಮ ಅದೃಷ್ಟವನ್ನು ಅರಸಿ ಬೇರೆ ಬೇರೆ ಕವಲೊಡೆದು ಹೊಸ ದಾರಿ ಹುಡುಕುತ್ತಿದ್ದೆವು. ಸಾಕಷ್ಟು ಕಷ್ಟ ಆಗಿರಲೇಬೇಕು ಮಾಮಯ್ಯನಿಗೆ.ಅಮ್ಮನ ಕಾಲನ್ನು ವಿದ್ಯುತ್ತು ನಿಷ್ಕ್ರಿಯಗೊಳಿಸಿದಾಗ ನನಗೆ ಹನ್ನೆರಡು–ಹದಿನೈದು ವರ್ಷವಿರಬೇಕೇನೋ. ನನಗಿಂತ ಎಂಟು ವರ್ಷ ಚಿಕ್ಕವಳಾದ ಪಪ್ಪಿ ಆಗಲೇ ತನ್ನ ಕೆಲಸಗಳನ್ನು ತಾನೇ ಮಾಡಿಕೊಳ್ಳುವಷ್ಟು ದೊಡ್ಡವಳಿದ್ದಳು. ಇದೆಲ್ಲ ಯಾವ ಇಸವಿಯಲ್ಲಿ ನಡೆಯಿತು ಅಂದರೆ ನನಗೆ ಸ್ಪಷ್ಟವಾಗಿ ನೆನಪಿಲ್ಲ. ಪಪ್ಪಿ ಹಾಗೆ ತಾರೀಖುಗಳನ್ನೂ ವರ್ಷದ ದಿನಗಳನ್ನೂ ಬಹಳ ಚೆನ್ನಾಗಿ ನೆನಪಿಟ್ಟುಕೊಳ್ಳುತ್ತಾಳೆ. ಪಪ್ಪಿ ಆಗ ಅಮ್ಮನ ಜೊತೆಯೇ ಇದ್ದಳು.ಅಮ್ಮನ ಕಾಲಿಗೆ ವಿದ್ಯುತ್ ಅಪಘಾತವಾದಾಗ ನಾನು ಗಾಂಧಿನಗರದಲ್ಲಿ ಓದುತ್ತಿದ್ದೆ. ‘ಲವ–ಕುಶ’ ನಾಟಕದ ಸಮಯದಲ್ಲಿ ಅಮ್ಮ ಸೀತೆಯ ಪಾತ್ರ ವಹಿಸಿದಾಗಲೇ ಆದ ಘಟನೆ ಅದು, ಬೆಂಗಳೂರಿನಲ್ಲಿ. ನಾಟಕದ ನಡುವೆ ಕಾಸ್ಟ್ಯೂಮು ಬದಲಾಯಿಸಲಿಕ್ಕೆ ಅಂತ ಅಮ್ಮ ಒಳಗೆ ಬಂದರು. ಸೀನ್ ಎಕ್ಸಿಟ್ ಆಗಲಿಕ್ಕೂ ಬ್ಲಾಕ್ ಔಟ್ ಆಗಲಿಕ್ಕೂ ಸರಿಹೋಯಿತು. ಕಡು ಕತ್ತಲಲ್ಲಿ ನೆಲದಲ್ಲೆಲ್ಲೋ ವಿದ್ಯುತ್ ವೈರು ನೆಲದಲ್ಲಿ ಹರಿದದ್ದು ಕಾಣಲು ಹೇಗೆ ಸಾಧ್ಯ? ವೈರೂ ಸ್ವಲ್ಪ ಓಪನ್ ಇತ್ತು. ಕತ್ತಲು. ಅಮ್ಮ ಆತುರದಲ್ಲಿ ಇದ್ದರು. ಅದೃಷ್ಟ ಕಡಿಮೆ ಬಿತ್ತು, ಹಣೆಬರಹ!ಅಮ್ಮ ಲೈವ್ ವೈರ್ ಮೇಲೆ ಕಾಲಿಟ್ಟು ಹಾ!... ಎಂದು ಚೀರುತ್ತಲೇ ಇದ್ದರು. ಮೊದಲಿಗೆ ಅಮ್ಮ ಯಾಕೆ ಕಿರುಚಿಕೊಂಡರು ಅಂತ ಯಾರಿಗೂ ಗೊತ್ತಾಗಲಿಲ್ಲ. ಅದೇನು ಮನಸ್ಸಿಗೆ ಬಂತೋ, ಚನ್ಬಸವ ಮಾಮಯ್ಯ ಮೊದಲಿಗೆ ಕರೆಂಟು ಕನೆಕ್ಷನ್ ಆಫ್ ಮಾಡಿದರು. ಆದರೂ ಅಮ್ಮ ‘ಅಯ್ಯೋ ಅಯ್ಯೋ’ ಎಂದು ಚೀರುತ್ತಲೇ ಇದ್ದರು. ಆಮೇಲೆ ಯಾರೋ ಹೋಗಿ ಕಂಬದಲ್ಲಿ ಕರೆಂಟು ಕನೆಕ್ಷನ್ ತೆಗೆದರು. ಅಮ್ಮ ಆಗ ಕುಸಿದರು. ನೋಡಿದರೆ ವೈರು ಅವರ ಮೈಗೆಲ್ಲಾ ಸುತ್ತಿಕೊಂಡು ಬಿಟ್ಟಿತ್ತು.ಮಳೆ ಬಂದು ನೆಲ ಒದ್ದೆ ಆಗಿತ್ತು. ವೈರ್ ಮೇಲಿನ ಇನ್ಸುಲೇಷನ್ ಹೋಗಿತ್ತು. ಅಮ್ಮ ಅದರ ಮೇಲೆ ಕಾಲಿಟ್ಟುಬಿಟ್ಟಿದ್ದರು. ಮೈಮೇಲೆ ಲೋಹದ ಒಡವೆಗಳಿದ್ದವು. ಜರೀ ಸೀರೆ ಉಟ್ಟಿದ್ದರು. ಒಟ್ಟಿನಲ್ಲಿ ಕೆಟ್ಟದ್ದು ಘಟಿಸಲು ಏನೇನು ಬೇಕೋ ಅಷ್ಟೆಲ್ಲವೂ ಒಟ್ಟುಗೂಡಿತ್ತು. ಕರೆಂಟು ಅಮ್ಮನ್ನ ಎಳೆದು ಹಾಕಿತ್ತು. ಬಲಗಾಲಿನ ಮೀನಖಂಡದಿಂದ ಮೂಳೆ ಮುರಿದು ಹೊರಗೆ ಬಂದಿತ್ತು.ಎಡ ತೊಡೆಯ ಮೂಳೆ ಮುರಿದಿತ್ತು, ಚರ್ಮಸಹಿತವಾಗಿ ಎಲ್ಲವೂ ಬೆಂದುಹೋಗಿತ್ತು. ಅಮ್ಮ ಬಿದ್ದ ತಕ್ಷಣ ಆ ರಭಸಕ್ಕೆ ವೈರು ಸುತ್ತಿಕೊಂಡ ತೊಡೆ ಮುರೀತು. ಬಿದ್ದ ತೂಕಕ್ಕೆ ಕಾಲು ಮುರೀತು. ಆಗ ಅವರಿಗೆ ಮೂವತ್ತು ಮೂವತ್ತೈದು ವರ್ಷ ವಯಸ್ಸಿರಬೇಕು. ವೈರೆಲ್ಲ ತೆಗೆಯುವ ಹೊತ್ತಿಗೆ ಅರ್ಧ ಗಂಟೆ ಮೀರಿರಬೇಕು.ವೇದಿಕೆಯ ಹಿಂದೆ ಅಮ್ಮನ ಜೀವನದ ಗತಿಯೇ ಬದಲಾಗಿ ಹೋಗಿದ್ದರೆ ಅತ್ತ ಹೊರಗೆ ಕೂತ ಪ್ರೇಕ್ಷಕ ವರ್ಗಕ್ಕೆ ಏನೂ ಗೊತ್ತಿರಲಿಲ್ಲ. ಆದರೆ ಯಾರಿಗೋ ಏನೋ ಆಗಿದೆ ಎಂದು ಗುಜುಗುಜು ಶುರುವಾಯಿತು. ಪಾಪ, ಅವರಿಗಾದರೂ ಹೇಗೆ ತಿಳಿದೀತು? ಅಲ್ಲದೆ ಕಂಪನಿಯಲ್ಲಿ ನಾಟಕವನ್ನು ಮಧ್ಯಕ್ಕೆ ನಿಲ್ಲಿಸಿದ ಪ್ರತೀತಿಯೇ ಇಲ್ಲ. ಆಗ ಯಾರೂ ನಮ್ಮನ್ನೆಲ್ಲ ನಮ್ಮ ಹೆಸರುಹಿಡಿದು ಕೂಗುತ್ತಿರಲಿಲ್ಲ. ನಮ್ಮ ಪಾತ್ರಗಳ ಹೆಸರೇ ನಮ್ಮ ಹೆಸರೂ ಆಗಿರುತ್ತಿತ್ತು. ‘ಸೀತೆಗೆ ಏಟ್ ಬಿದ್ದೈತಂತೆ’ ಅಂತ ಮಾತು ಶುರುವಾಯಿತು.ಮುಂದಿನ ಪ್ರಶ್ನೆ, ‘ಹಂಗಾದ್ರೆ ನಾಟಕ ಮುಂದುವರೆಯಲ್ವಾ?’ ಅದು ಸಹಜವಾದ ಪ್ರಶ್ನೆಯೇ. ಈಗ ಯೋಚಿಸಿದರೆ ಜನ ಹೀಗೆ ಯೋಚನೆ ಮಾಡುತ್ತಿದ್ದರಾ ಎನ್ನುವುದು ಅಮಾನವೀಯ ಎನ್ನಿಸಬಹುದೇನೋ. ಆದರೆ, ಅದು ಬಹಳ ಸರಳವಾದ ಜನರಿದ್ದ ಕಾಲ. ಮುಂದೆ ನಾಟಕ ನಡೆಯಲ್ವಾ ಎಂದು ಕೇಳಿದರೆ ತಪ್ಪೇನೂ ಇಲ್ಲ. ಯಾಕೆಂದರೆ ಎಲ್ಲರೂ ಶ್ರಮಿಕರು, ರೈತರು, ಮಕ್ಕಳು ಮರಿಗಳೊಂದಿಗೆ ಬಂದವರು.ಮಾನವೀಯತೆ ಬೇರೆ, ಮೈಗೆ ಆಗಿರುವ ಸುಸ್ತು ಬೇರೆ. ನಾಟಕ ನಡೆಯಲ್ಲ ಅಂದರೆ ಮನೆಗೆ ಹೋಗುವವರು ಅವರು. ಆದರೆ ನಿಮ್ಮ ಸಹಾಯ ಬೇಕು ಅಂತ ಕೇಳಿದರೆ ಪ್ರಾಣ ಕೊಡಲೂ ಹಿಂಜರಿಯುವವರಲ್ಲ ಆ ಜನ. ಡಿಪ್ಲೋಮಸಿ ಅಥವಾ ಅನಿಶ್ಚಿತ ಭಾವ ಹಳ್ಳಿಯ ಜನಕ್ಕೆ ಗೊತ್ತಿಲ್ಲ. ಎರಡು ಉತ್ತರಗಳ ನಡುವೆ ಅವರು ತೂಗುವುದೇ ಇಲ್ಲ.ಗುಬ್ಬಿ ಕಂಪನಿಯ ಬಗ್ಗೆ ಈಗಲೂ ಇರುವ ಗೌರವಕ್ಕೆ ನಿಮಗೆ ಈ ಒಂದು ಘಟನೆ ಸಾಕ್ಷಿ ಸಾಕು ಅಂದುಕೊಳ್ಳುತ್ತೇನೆ. ಅಮ್ಮನಿಗೆ ಗಂಭೀರವಾದ ಏಟಾಗಿದೆ ಎನ್ನುವುದು ನೋಡಿದ ಎಲ್ಲರಿಗೂ ತಿಳಿಯುತ್ತಿತ್ತು. ಆದರೆ ಹೊರಗೆ ಪ್ರೇಕ್ಷಾಂಗಣದಲ್ಲಿ ಇರುವವರು ನಮಗೆ ದೇವರ ಸಮಾನ. ಅವರ ಸಮಯವನ್ನು ನಾವು ಪೋಲು ಮಾಡುವಂತಿಲ್ಲ. ಅಲ್ಲದೆ, ನಾಟಕ ನಿಲ್ಲಿಸಿದರೆ ಅದು ರಂಗಭೂಮಿಗೆ ಮಾಡಿದ ಅವಮಾನ. ತಾತನಿಂದ ಮೊದಲುಗೊಂಡು ಎಲ್ಲರೂ ಇದನ್ನು ಪರಿಪಾಲಿಸುತ್ತಿದ್ದೆವು.ಹಾಗಾಗಿ ಚನ್ಬಸವ ಮಾಮಯ್ಯ ಹೊರಗೆ ಹೋಗಿ ಅನೌನ್ಸ್ ಮಾಡಿದರು. ‘‘ಒಳಗೆ ಸೀತೆಗೆ ಏಟಾಗಿದೆ ಎನ್ನುವುದು ನಿಜ, ಆದರೆ ನಾಟಕ ನಿಲ್ಲಿಸುವುದಿಲ್ಲ. ಇನ್ನೊಬ್ಬರು ಸೀತೆಯ ಪಾತ್ರಕ್ಕೆ ತಯಾರಾಗುತ್ತಿದ್ದಾರೆ. ಇನ್ನು ಸ್ವಲ್ಪ ಹೊತ್ತಿನಲ್ಲೇ ನಾಟಕ ಮುಂದುವರೆಯುತ್ತದೆ’’ ಎಂದು ಹೇಳಿದರು. ಜನ ಮತ್ತೆ ನಾಟಕ ನೋಡಲು ತಯಾರಾಗಿ ಕೂತರು.ದ್ವಿತೀಯಾರ್ಧದಲ್ಲಿ ಪ್ರಭಾ ಭಾಬಿ (ಚನ್ಬಸು ಮಾಮಯ್ಯನ ಎರಡನೇ ಪತ್ನಿ) ಸೀತೆಯ ಪಾತ್ರಕ್ಕೆ ತಯಾರಾದರು. ಯಾಕೆಂದರೆ, ಏನೇ ಆಗಲಿ, ರಂಗಭೂಮಿ ಚಲನಶೀಲ ಶಕ್ತಿ. ದ ಶೋ ಮಸ್ಟ್ ಗೋ ಆನ್! ಜನ ಮೊದಲಿನಂತೆ ಕೂತು ನಾಟಕ ನೋಡಿದರು. ಚಪ್ಪಳೆ ತಟ್ಟಿ ನಲಿದರು. ರಾಮನನ್ನು ಕಂಡರು, ಸೀತೆಯೊಂದಿಗೆ ಕಣ್ಣೀರು ಸುರಿಸಿದರು.ಇತ್ತ ಅಮ್ಮನ ನೋವು ಹೇಗೆ ವಿವರಿಸಲಿ ನಿಮಗೆ? ನೆಲಕ್ಕೆ ಬಿದ್ದ ಅಮ್ಮನಿಗೆ ಮೈಯಲ್ಲಿ ತ್ರಾಣ ಇರಲಿಲ್ಲ. ಅವರು ಸ್ವಲ್ಪವೂ ಅಲ್ಲಾಡುವಂತಿರಲಿಲ್ಲ. ಅವರನ್ನು ನೆಲದಿಂದ ಎತ್ತಲು ಸಾಧ್ಯವಾಗದೆ ಆಂಬುಲೆನ್ಸ್‌ಗೆ ಹೇಳಿ ಸ್ಟ್ರೆಚರ್ ತರಿಸಿದರು.ಅಸಾಧ್ಯ ನೋವು–ಉರಿಯಲ್ಲೂ ಅಮ್ಮನಿಗೆ ತನ್ನ ಕಾಲು ಮುರಿದುಹೋಗಿದೆ ಎಂದು ಖಾತ್ರಿಯಾಗಿತ್ತು. ಎಬ್ಬಿಸಲು ಬಂದವರಿಗೆ ಬಹಳ ಸ್ಪಷ್ಟವಾಗಿಯೇ ಹೇಳುತ್ತಿದ್ದರು. “ದುರ್ಯೋಧನನ ತೊಡೆ ಮುರಿದ ಹಾಗೆ ನನ್ನ ತೊಡೆ ಮುರಿದಿದೆ. ನನ್ನನ್ನು ಎಬ್ಬಿಸಲು ಪ್ರಯತ್ನ ಪಡಬೇಡಿ. ನನ್ನನ್ನು ಹಾಗೇ ಸ್ಟ್ರೆಚರ್ ಮೇಲೆ ಎಳೆದುಕೊಳ್ಳಿ. ನಾನು ಚಲಿಸುವುದು ಸಾಧ್ಯವೇ ಇಲ್ಲ” ಎನ್ನುತ್ತಿದ್ದರು. ಅಮ್ಮನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಯಿತು.ಅಲ್ಲಿಂದ ಅಮ್ಮ ಒಂಬತ್ತು ತಿಂಗಳು ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಅಮ್ಮನಿಗೆ ಕಾಲಿನಲ್ಲಿ ಸ್ಪರ್ಶ ಜ್ಞಾನವೇ ಹೊರಟು ಹೋಗಿತ್ತು. ನನ್ನ ತಂದೆ ಬಸವರಾಜ ಅಪ್ಪಾಜಿ (ನನಗೆ ಎರಡನೇ ತಂದೆ. ನನ್ನ ತಂಗಿ ಪದ್ಮಶ್ರೀಯ ತಂದೆ), ಶಿವಾನಂದ ಮಾಮಯ್ಯ, ನರ್ಸುಗಳು ಎಲ್ಲರೂ ಸೇರಿಕೊಂಡು ಅಮ್ಮನನ್ನು ನಡೆಸಲು ಆಗಾಗ ಪ್ರಯತ್ನ ಪಡುತ್ತಿದ್ದರು. ಅಮ್ಮನಿಗೆ ಕಾಲು ನೆಲ ಮುಟ್ಟಿದ್ದರ ಅರಿವೇ ಆಗುತ್ತಿರಲಿಲ್ಲ. ಅಲ್ಲದೆ ಬ್ಯಾಲೆನ್ಸೂ ಸಿಗುತ್ತಿರಲಿಲ್ಲ. ಹೆದರಿಕೆ ಆಗುತ್ತೆ ಎನ್ನುತ್ತಲೇ ಹೇಗೋ ಕಾಲಾಂತರದಲ್ಲಿ ಸುಧಾರಿಸಿಕೊಂಡುಬಿಟ್ಟರು!ನನ್ನ ತಂದೆಯಂದಿರು 

ಅಮ್ಮ ಆಸ್ಪತ್ರೆಯಲ್ಲಿ ಇರುವಾಗ ನನಗೆ ಮನೆಯಲ್ಲಿ ವಿಚಿತ್ರ ಅನುಭವಗಳಾದವು. ಆಗ ಆದದ್ದನ್ನು ನನ್ನ ಮನಸ್ಸು ಅರ್ಥೈಸಿಕೊಂಡಿದ್ದು ಬಹಳ ವರ್ಷಗಳ ನಂತರ. ಅಮ್ಮ ಮೊದಲ ಮದುವೆಯಲ್ಲಿ ಬಹಳ ನೋವುಂಡಿದ್ದರು. ನನ್ನ ಜನ್ಮಕ್ಕೆ ಕಾರಣರಾದ ತಂದೆ ಗುಬ್ಬಿ ರಾಜಣ್ಣ ಅಮ್ಮನಿಗೆ ವರಸೆಯಲ್ಲಿ ದೊಡ್ಡಪ್ಪನಾಗಬೇಕು.ಅಮ್ಮನ ಮದುವೆಯ ಮಾತುಗಳು ನಡೆಯುತ್ತಿದ್ದ ಸಮಯದಲ್ಲಿ ತಾತ ಈ ವಿಷಯ ಪ್ರಸ್ತಾಪ ಮಾಡಿದವರಿಗೆ, “ಬೇಡಪ್ಪ, ರಾಜಣ್ಣ ಅವಳಿಗೆ ವರಸೆಯಲ್ಲಿ ದೊಡ್ಡಪ್ಪನಾಗಬೇಕು” ಅಂತ ಹೇಳಿದರೂ, ಸಂಬಂಧಿಕರು ಅದನ್ನೆಲ್ಲಾ ಗೌಣ ಮಾಡಿದರು.“ನಾಟಕದೋರಿಗೆ ಯಾವ ಸಂಬಂಧ, ಯಾವ ದೊಡ್ಡಪ್ಪ ಚಿಕ್ಕಪ್ಪಂದಿರು? ಸುಮ್ಮನೆ ಮದುವೆ ಮಾಡು” ಅಂತ ತಾತನಿಗೆ ಒತ್ತಾಯ ಮಾಡಿದರು. ತಾತ ಕೂಡ ಈ ವಿಷಯದಲ್ಲಿ ಹೆಚ್ಚು ಮಾತನಾಡುವ ಹಾಗೆ ಇರಲಿಲ್ಲ. ಆದರೆ ಅಮ್ಮನಿಗೆ ಮಾತ್ರ ತನ್ನ ತಂದೆ ಅನ್ಯಾಯ ಮಾಡಿದರು ಅಂತ ಬಹಳ ನೋವಿತ್ತು. ಆದರೇನು, ಮದುವೆ ಆಗಿಹೋಯಿತು. ಮುರಿದೂ ಹೋಯಿತು.ಮುಂದೆ ಅಮ್ಮ ಬಸವರಾಜ ಅಪ್ಪಾಜಿಯನ್ನು ಮದುವೆಯಾದರು. ನನ್ನ ಏಕೈಕ ತಂಗಿ ಪದ್ಮಶ್ರೀ, ಪ್ರೀತಿಯ ‘ಪಪ್ಪಿ’ ಹುಟ್ಟಿದ್ದು ಆಗಲೇ. ನನಗೂ ಅವಳಿಗೂ ಸುಮಾರು ಎಂಟು ವರ್ಷಗಳ ಅಂತರ ಇದೆ. ಅಮ್ಮ ಆಸ್ಪತ್ರೆಯಲ್ಲಿ ಇದ್ದಾಗ ನಾನು ಮನೆಯಲ್ಲಿ ಇರುತ್ತಿದ್ದೆ. ಶಿವಾನಂದ ಮಾಮಯ್ಯನ ಕುಟುಂಬ, ನಮ್ಮ ಕುಟುಂಬ ಎಲ್ಲಾ ಒಟ್ಟಿಗೇ ಇರುತ್ತಿತ್ತು.ಅಮ್ಮ ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿ ಇದ್ದರು ಅಂದೆನಲ್ಲ, ಆಗ ರಾತ್ರಿ ನನ್ನ ಮೇಲೆ ಯಾರೋ ಎರಗಿಬಂದಂತೆ ಭಾಸವಾಗುತ್ತಿತ್ತು. ಮೊದಮೊದಲು ಎಲ್ಲ ಮಸುಕು ಮಸುಕು ಎನ್ನಿಸುತ್ತಿತ್ತು. ಮೊದಮೊದಲು ನನ್ನದೇ ಭ್ರಮೆಯೇನೋ ಎಂದುಕೊಳ್ಳುತ್ತಿದ್ದೆ. ಆದರೆ ಎರಡು ಮೂರು ದಿನದಲ್ಲಿ ಇದು ಯಾರೆಂದು ಸ್ಪಷ್ಟವಾಯಿತು.ನನ್ನ ಮಲತಂದೆ ಅಂದರೆ ಬಸವರಾಜ ಅಪ್ಪಾಜಿ ಈ ಕೆಲಸ ಮಾಡುತ್ತಿದ್ದರು. ಎಲ್ಲರೂ ಅಮ್ಮನ ಆರೈಕೆಯಲ್ಲಿ ಇರುವಾಗ ನನ್ನ ಕಷ್ಟ ಯಾರ ಹತ್ತಿರವೂ ಹೇಳಿಕೊಳ್ಳುವಂತಿರಲಿಲ್ಲ. ಹೇಳಿದರೂ ಯಾರು ನಂಬಿಯಾರು? ಆ ಮನುಷ್ಯನಿಗೆ ನಾನು ಸುಲಭಕ್ಕೆ ಸಿಕ್ಕಿದ್ದ ಹೆಣ್ಣುದೇಹವೆಂದು ಕಾಣಿಸಿರಲಿಕ್ಕೂ ಸಾಕು. ಎಷ್ಟೆಂದರೂ ನಾನು ಆತ ಕಾರಣೀಭೂತನಾಗಿ ಜನಿಸಿದ ಮಗಳಲ್ಲವಲ್ಲ? ಮೃಗಗಳು ಹೀಗೂ ಇದ್ದಾವೆಯೇ? ಎನ್ನಿಸುತ್ತಿತ್ತು ನನಗೆ.ನಾನು ಒಂದು ಪಕ್ಷ ಹೇಳಿದರೂ ಬಸವರಾಜ ಅಪ್ಪಾಜಿಯ ಮೇಲೆ ಅಮ್ಮನಿಗೆ ಯಾವ ಅಪನಂಬಿಕೆಯೂ ಬರಲು ಸಾಧ್ಯವಿರಲಿಲ್ಲ. ಇಂಥದ್ದು ಬಹಳ ಜನಕ್ಕೆ ಅನುಭವ ಆಗಿರಬಹುದು, ಹಿಂದಿನಿಂದಲೂ ನಡೆದ ಸಾಮಾನ್ಯ ವಿಷಯವೇ ಇರಬಹುದು. ಆದರೆ ಐವತ್ತು ವರ್ಷಗಳ ಹಿಂದೆ ಈ ಥರದ ವಿಷಯಗಳನ್ನು ಯಾರೂ ಮಾತನಾಡುತ್ತಿರಲಿಲ್ಲ.ಹೇಳಲು ಪ್ರಾರಂಭಿಸುವುದಾದರೂ ಹೇಗೆ? ನನ್ನ ಮಾತನ್ನು ಯಾರೂ ಕೇಳಲ್ಲ ಎನ್ನುವ ಭಾವನೆ ನನಗೆ ಬಲವಾಗಿತ್ತು. ಏಕೆಂದರೆ ಕುಟುಂಬ ಎಂದರೆ ಅಮ್ಮ, ಅಪ್ಪಾಜಿ ಮತ್ತು ನನ್ನ ತಂಗಿ ಪಪ್ಪಿ. ಅವರಿಗೆ ಒಂದು ಸಮಾನಾಂತರ ರೇಖೆಯಿತ್ತು. ಗಂಡ, ಹೆಂಡತಿ ಮತ್ತು ಮಗಳು. ನಾನು ಬಸವರಾಜ ಅಪ್ಪಾಜಿಗೆ ಹುಟ್ಟಿದ ಮಗಳಲ್ಲ. ಹಾಗಾಗಿ ನಾನೊಬ್ಬಳೇ ಹೊರತು ಎನ್ನುವ ಪರಿಸ್ಥಿತಿ ಕಣ್ಣಿಗೆ ಕಾಣುವ ಹಾಗೆ ರಾಚುತ್ತಿತ್ತು. ನನ್ನ ಜನ್ಮಕ್ಕೆ ಕಾರಣರಾದ ಗುಬ್ಬಿ ರಾಜಣ್ಣ ಎನ್ನುವ ವ್ಯಕ್ತಿ ನನ್ನ ಬಗ್ಗೆ ಎಂದೂ ಕಾಳಜಿ ಮಾಡಲಿಲ್ಲ. ಮಗಳ ಸಂಬಂಧದ ಜವಾಬ್ದಾರಿ ಅವರಿಗೆ ಬೇಕಿರಲಿಲ್ಲ.ಇದ್ದ ಮನೆಯಲ್ಲದೆ ನನಗೆ ಬೇರೆ ಆಸರೆ ಇಲ್ಲ. ಏನು ಮಾಡುವುದೆಂದು ತೋಚದೆ, ಆ ಮನುಷ್ಯ ಇದ್ದ ಕಡೆ ನಾನು ನಿಲ್ಲದ ಹಾಗೆ ಅತ್ತಿತ್ತ ಹೋಗುತ್ತಿದ್ದೆ. ಈ ದೌರ್ಜನ್ಯವನ್ನು ಮೀರಲಾಗದಂಥ ಅಸಹಾಯಕತೆ ಬಲವಾಗಿತ್ತು. ಬಹಳ ದುಃಖವಾಗುತ್ತಿತ್ತು. ಆ ದುಃಖವನ್ನು ವಿವರಿಸಲು ನಾನು ಇಂದಿಗೂ ಶಕ್ತಳಾಗಿಲ್ಲ.ನನ್ನ ಜನ್ಮಕ್ಕೆ ಕಾರಣರಾದ ತಂದೆ ರಾಜಣ್ಣ, ಗುಬ್ಬಿ ರಾಜಣ್ಣ, ಮತ್ತೆ ನನ್ನನ್ನು ನೋಡಲು ಬಂದಿದ್ದು ನಾನು ಹದಿನೈದು ವರ್ಷದವಳಾದಾಗ. ಮೆಜೆಸ್ಟಿಕ್‌ನಲ್ಲಿ ಇರುವ ಗುಬ್ಬಿ ಕಲಾಮಂದಿರಕ್ಕೆ ‘ಲವಕುಶ’ ನಾಟಕದ ಕ್ಯಾಂಪ್ ನಡೆಯುತ್ತಿದ್ದಾಗ ಬಂದು ನನ್ನ ದೊಡ್ಡಮ್ಮನ ಕೈಲಿ ಹೇಳಿ ಕಳಿಸಿದರು. ನಾನು ಆ ಮನುಷ್ಯನ ಬಗ್ಗೆ ದ್ವೇಷ ಬೆಳೆಸಿಕೊಂಡಿದ್ದೆ.

ಅವರು ನನ್ನನ್ನು ಮಾತಾಡಿಸಲು ಬಂದಿದ್ದು ನನ್ನ ಕೋಪವನ್ನು ಇನ್ನೂ ಹೆಚ್ಚು ಮಾಡಿತ್ತು. ಸುಮ್ಮನೆ ಅವರಿದ್ದಲ್ಲಿ ಹೋಗಿ ನಿಂತು “ನಮಸ್ಕಾರ” ಅಂತಷ್ಟೇ ಹೇಳಿ ಅಲ್ಲಿಂದ ಬಂದುಬಿಟ್ಟೆ. ಇದೆಲ್ಲಾ ನನ್ನ ಅನಾಥಭಾವವನ್ನು ಹೆಚ್ಚು ಮಾಡುತ್ತಿತ್ತು. ಅಮ್ಮನ ಆಸ್ಪತ್ರೆವಾಸ ಕೊನೆಯಾಗುವಾಗ ನನಗೆ ನಿರಾಳವಾಯಿತು. ಅಮ್ಮ ನನ್ನ ಕೈ ಹಿಡಿದುಕೊಂಡು ನಡೆಯುತ್ತಿದ್ದರು. ಅಮ್ಮ ಮನೆಗೆ ಬಂದ ಒಂದು ವರ್ಷದಲ್ಲಿ ಸ್ವಲ್ಪ ಸುಧಾರಿಸಿಕೊಳ್ಳುತ್ತಿದ್ದಾರೆ ಎನ್ನುವಾಗಲೇ ಬಸವರಾಜ ಅಪ್ಪಾಜಿ ಗುಬ್ಬಿ ಟೋಲ್ ಗೇಟ್ ಹತ್ತಿರ ಸ್ಕೂಟರ್ ಆಕ್ಸಿಡೆಂಟಿನಲ್ಲಿ ತೀರಿಹೋದರು. ಅಮ್ಮನ ಜೀವನಾಧಾರ ಕುಸಿಯಿತು. ದೈಹಿಕ ನೋವಿನ ಜೊತೆ ಈ ದೊಡ್ಡ ದುಃಖವೂ ಸೇರಿ ಅಮ್ಮನಲ್ಲಿ ಮತ್ತೆ ಜೀವನೋತ್ಸಾಹ ಮರುಕಳಿಸುತ್ತದಾ ಎನ್ನುವ ಅನುಮಾನ ಇತ್ತು. ನಂತರ ಸ್ವಲ್ಪ ದಿನ ಕೋಲು ಹಿಡಿದುಕೊಂಡು ನಡೆಯುತ್ತಿದ್ದರು.ವಯಸ್ಸಾಗುತ್ತ ಶಾಕ್‌ನಿಂದಾಗಿ ಶಕ್ತಿಹೀನವಾಗಿದ್ದ ಕಾಲು ಭಾರವನ್ನು ತಡೆದುಕೊಳ್ಳುತ್ತಿರಲಿಲ್ಲ. ಮುರಿದು ಕೂಡಿದ ತೊಡೆ ಅಲ್ಲವೇ? ಮೂಳೆ ಸೊಟ್ಟಕ್ಕೆ ಕೂಡಿಕೊಂಡಿದ್ದವು. ಅವು ಅಮ್ಮನ ತೂಕವನ್ನು ತಡೆಯುವಂತಿರಲಿಲ್ಲ. ಒಂದು ಕಾಲು ಸೀದಾ ಹಾಕಿದರೆ, ಇನ್ನೊಂದು ಕಾಲು ಸೊಟ್ಟಕ್ಕೆ ಬರುತ್ತಿತ್ತು. ತನ್ನ ಕಾಲನ್ನು ತಾನೇ ಮುಗ್ಗರಿಸುವ ಹಾಗೆ ಅಮ್ಮನಿಗೆ ಆಗುತ್ತಿತ್ತು.ಕಾಲಾಂತರದಲ್ಲಿ ನಾನು ವಾಕಿಂಗ್ ಸ್ಟಿಕ್ ತಂದುಕೊಟ್ಟೆ. ಮುಂದೆ ವಯಸ್ಸಿನ ಕಾರಣಕ್ಕೆ ವೀಲ್ ಚೇರ್ ಆಧರಿಸಬೇಕಾಗಿ ಬಂತು. ಆದರೆ ಯಾವಾಗಲೂ, ಅಮ್ಮನಿಗೆ ‘ತಾನು ಬದುಕಬೇಕು, ದುಃಖಗಳನ್ನು ಮೀರಬೇಕು’ ಎನ್ನುವ ಛಲ ಇತ್ತು. ನಾಟಕಗಳಲ್ಲಿ ಪಾರ್ಟ್ ಮಾಡಿದರು. ‘ಕುರುಡು ಕಾಂಚಾಣ’ ನಾಟಕದಲ್ಲಿ ಅಮ್ಮ ಅಭಿನಯಿಸಿದ್ದರು, ಸಿನಿಮಾಗಳಲ್ಲಿ ಆಕ್ಟ್ ಮಾಡಿದರು, ಮನೆಯಲ್ಲಿ ಅಡುಗೆ ಅಮ್ಮನದೇ ಇರುತ್ತಿತ್ತು.ವಾಕಿಂಗ್ ಸ್ಟಿಕ್ ಕಾಲ ಕಳೆದಂತೆ ಅಮ್ಮನ ಉಪಯೋಗಕ್ಕೆ ಬಾರದೆ ಹೋಯಿತು. ನಾನು ವೀಲ್ ಚೇರ್ ತಂದುಕೊಟ್ಟೆ. ಒಬ್ಬ ವ್ಯಕ್ತಿಗೆ ವೀಲ್ ಚೇರ್ ಮೇಲೇ ತನ್ನ ಜೀವನ ನಡೆಯುತ್ತದೆ ಎನ್ನುವಾಗ ಏನೇನು ತಳಮಳಗಳಾಗುತ್ತವೋ ನನಗೆ ಅರಿಯದು. ಏಕೆಂದರೆ ಒಂದು ದೈಹಿಕ ಕೊರತೆ ಸಂಪೂರ್ಣವಾಗಿ ಆವರಿಸಿ ಆತ್ಮಕ್ಕೂ ಕತ್ತಲೆ ಕವಿದು ಬಿಡಬಹುದು. ಅಮ್ಮನ ಹತ್ತಿರ ವೀಲ್ ಚೇರ್ ತರುವ ಮುನ್ನ ಹಿಂಜರಿದುಕೊಂಡೇ ವಿಷಯ ಪ್ರಸ್ತಾಪಿಸಿದೆ.“ಅಮ್ಮ, ವೀಲ್ ಚೇರ್ ತಂದು ಕೊಡ್ಲಾ?’’“ನಿಂಗೆ ಕಷ್ಟ ಆಗುತ್ತೇನೋ? ದುಡ್ಡು ಎಲ್ಲಿಂದ ಹೊಂದಿಸ್ತೀಯಾ?’’ನನ್ನ ಕಣ್ಣು ತುಂಬಿಬಂದವು. ಅಮ್ಮ ಪಾಪ, ತನ್ನ ಕಷ್ಟಕ್ಕಿಂತಲೂ ನನ್ನ ಹತ್ತಿರ ದುಡ್ಡು ಇದೆಯೋ ಇಲ್ಲವೋ ಎನ್ನುವುದರ ಬಗ್ಗೆಯೇ ಹೆಚ್ಚು ಯೋಚಿಸುತ್ತಿದ್ದರು.“ಇಲ್ಲಮ್ಮ. ನನಗೇನೂ ಕಷ್ಟ ಆಗಲ್ಲ. ನೀನೇನೂ ಯೋಚಿಸಬೇಡ. ನಾನೆಲ್ಲಾ ತರ್ತೀನಿ’’ ಎಂದು ಹೇಳಿದ ಸ್ವಲ್ಪ ದಿನದಲ್ಲೇ ಅಮ್ಮನ ವೀಲ್ ಚೇರಿಗೆ ಹಣ ಹೊಂದಿಸಿಕೊಂಡು ಮನೆಗೆ ತಂದೆ.ಅಮ್ಮನಿಗೆ ಆಹಾ! ಆರಾಮವಾಗಿ ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹೋಗಬಹುದಲ್ಲ ಎಂದು ಖುಷಿಯಾಯಿತು. ನಾನು ಆಗಲೇ ಹೇಳಿದೆನಲ್ಲ, ನನ್ನ ಅಮ್ಮ ಜೀವನ್ಮುಖಿ ಅಂತ! ವೀಲ್ ಚೇರ್ ಮೇಲೆ ಕೂರಲು ಅವರು ಹಿಂಜರಿಯಲೇ ಇಲ್ಲ! ಆಗ ನಾವು ಗಾಂಧಿನಗರದ ಮನೆಯಲ್ಲಿ ಇದ್ದೆವು. ಆಮೇಲೆ ಶೇಷಾದ್ರಿಪುರ, ಆರ್.ಟಿ. ನಗರ ಇಲ್ಲೆಲ್ಲ ಬಾಡಿಗೆಗೆ ಇದ್ದೆವು. ಅಮ್ಮನಿಗೋಸ್ಕರ ನಾನು ಮನೆ ಬಾಡಿಗೆಗೆ ನೋಡುವಾಗಲೆಲ್ಲ ಹೊಸ್ತಿಲು ಇಲ್ಲದ ಮನೆಗಳನ್ನೇ ನೋಡುತ್ತಿದ್ದೆ. ಅಮ್ಮನ ಗಾಲಿ ಕುರ್ಚಿ ಹೊಸ್ತಿಲು ದಾಟುತ್ತಿರಲಿಲ್ಲ ಎನ್ನುವ ಕಾರಣಕ್ಕೆ.ನಂತರ ರಾಜರಾಜೇಶ್ವರಿ ನಗರದ ಮನೆ ಕಟ್ಟಿದಾಗಲೂ ನಾವು ಯಾವ ರೂಮಿಗೂ ಹೊಸ್ತಿಲು ಇಡಲೇ ಇಲ್ಲ. ಲೀಲಾಜಾಲವಾಗಿ ರೂಮಿಂದ ಹಾಲಿಗೆ, ಅಡುಗೆ ಮನೆಗೆ ಎಲ್ಲ ಕಡೆಗೂ ಅಮ್ಮ ಸಂಚರಿಸುತ್ತಿದ್ದರು. ಅಡುಗೆ ಮನೆಯಿಂದ ಹಾಲಿಗೆ ಎರಡು ಮೆಟ್ಟಿಲು ಇವೆ. ಅವನ್ನು ಇಡುವಾಗಲೂ ಅಮ್ಮನನ್ನು ಕೇಳಿಯೇ ಇಟ್ಟಿದ್ದು. ‘ಇಷ್ಟು ಹತ್ತುತೀನಿ ನಾನು. ಪರವಾಗಿಲ್ಲ” ಎಂದ ಮೇಲೇ ನಾವು ಮೆಟ್ಟಿಲು ಓಕೆ ಮಾಡಿದ್ದು.ಜೀವನ ಪೂರ್ತಿ ವ್ಹೀಲ್ ಚೇರಿನಲ್ಲೇ ಕಳೆದರೂ ಅಮ್ಮನ ಸ್ಪಿರಿಟ್ ಎಂದೂ ಕಳೆಗುಂದಲಿಲ್ಲ. ಕುಳಿತಲ್ಲೇ ಹಾಡುತ್ತಿದ್ದರು, ಎಲ್ಲದರ ಬಗ್ಗೆಯೂ ಆಸಕ್ತಿ ಇತ್ತು. ಕಂಪನಿಯ ನಾನಾ ವಿಚಾರಗಳ ಬಗ್ಗೆ ಮಾತನಾಡುತ್ತಿದ್ದರು. ಅವರ ನೆನಪಿನ ಶಕ್ತಿ ಅಗಾಧವಾಗಿತ್ತು.

(ಮುಂದುವರೆಯುವುದು)***

ಜೀವದನಿಯನ್ನು ಪದಗಳಲ್ಲಿ ಸೆರೆಹಿಡಿವ ಸವಾಲಿನ ಕುರಿತು

ಲೇಖಕಿಯ ಟಿಪ್ಪಣಿ


ಪತ್ರಿಕೋದ್ಯಮದ ಹಿನ್ನೆಲೆಯುಳ್ಳ ನನಗೆ ಅದಕ್ಕಿಂತಲೂ ಹೆಚ್ಚಿನ ಹಾಗೂ ದಟ್ಟವಾದ ಸಂಬಂಧ ಇರುವುದು ರಂಗಭೂಮಿಯ ಜೊತೆ. ದಾವಣಗೆರೆಯಂಥ ಪುಟ್ಟ ಊರಿನಲ್ಲಿ ರಂಗಭೂಮಿಯ ಮೂಲಕ ಸಿಕ್ಕ ಸಾಂಸ್ಕೃತಿಕ ನಂಟನ್ನು ಮಾತುಗಳಲ್ಲಿ ವರ್ಣಿಸುವುದು, ಕ್ಲಿಷ್ಟ ಕಸೂತಿ ಮಾಡುವ ಕಲೆಯನ್ನು ಮಾತಿನ ಮೂಲಕ ಹೇಳಿಕೊಟ್ಟಷ್ಟೇ ಅಸಾಧ್ಯವಾದ ಕೆಲಸ. ಎಲ್ಲ ಕಲೆಗಳಂತೆ, ರಂಗಭೂಮಿಯ ರುಚಿ ಕೂಡ ಪದವರ್ಣಿಕೆಗಳನ್ನು ಮೀರಿದ್ದು.

ಜಯಶ್ರೀ ಅವರ ಆತ್ಮಕತೆ ಬರೆಯುವ ಕೆಲಸ ಶುರುವಾಗಿದ್ದು ಹದಿನೈದು ವರ್ಷಗಳ ಹಿಂದೆ. ನಾನು ಆಗ ತಾನೇ ಅವರ ‘ಸ್ಪಂದನ’ ತಂಡಕ್ಕೆ ಹೋಗಿ ಸೇರಿದ್ದೆ. ಹಿಂದೂಸ್ತಾನಿ ಗಾಯಕಿ, ಸೂಫಿ ಪ್ರೇಮಿ, ಸ್ನೇಹಿತೆ ಸುಮತಿ ಆ ಸಮಯದಲ್ಲಿ ಪುಸ್ತಕದ ವಿಚಾರ ಪ್ರಸ್ತಾಪ ಮಾಡಿದಳು. ಅವಳೊಂದಿಗೆ ನಾನು ಕೈ ಜೋಡಿಸಿದೆ. ಆದರೆ ನಂತರದಲ್ಲಿ ತನ್ನ ಕೆಲಸಗಳಲ್ಲಿ ಹಾಗೂ ಸಂಗೀತದಲ್ಲಿ ಮುಳುಗಿದ ಅವಳು ಇಡೀ ಪುಸ್ತಕದ ಜವಾಬ್ದಾರಿಯನ್ನು ನನಗೇ ಬಿಟ್ಟಳು. ನಾನೂ ಜೀವನದ ಸ್ಥಿತ್ಯಂತರಗಳಲ್ಲಿ ಮುಳುಗಿದ್ದ ಕಾಲವದು.ಅಲ್ಲದೆ ಜಯಶ್ರೀ ಅವರಂತಹ ವ್ಯಕ್ತಿತ್ವವನ್ನು ಒಳಹೊಕ್ಕು ನೋಡುವ ಪಕ್ವತೆಯೂ ಇರಲಿಲ್ಲ. ಅದು ಈಗಲೂ ಸಾಧ್ಯವಾಗಿದೆ ಎನ್ನುವ ಸಂಪೂರ್ಣ ವಿಶ್ವಾಸ ನನಗಿಲ್ಲ. ಏಕೆಂದರೆ ಅವರ ಜೀವನ ಮತ್ತು ರಂಗಭೂಮಿ ಎರಡನ್ನೂ ಬೇರ್ಪಡಿಸಿ ನೋಡುವುದು ಅಸಾಧ್ಯವಾದ ಕೆಲಸ. ಹಾಗಾಗಿ ‘ವೃಕ್ಷ ಮೊದಲೋ, ಬೀಜ ಮೊದಲೋ’ ಎನ್ನುವ ಸಂದಿಗ್ಧವನ್ನು ಅವರ ರಂಗಪಯಣದ ಪುಸ್ತಕವನ್ನು ಮತ್ತೆ ಕೈಗೆತ್ತಿಕೊಂಡ ಸಮಯದ ಉದ್ದಕ್ಕೂ ಅನುಭವಿಸಿದ್ದೇನೆ.‘ಕಣ್ಣಾಮುಚ್ಚೇ ಕಾಡೇಗೂಡೇ...’ ಕೆಲಸ ಮತ್ತೆ ಶುರುವಾದದ್ದು ಐದು ವರ್ಷಗಳ ಹಿಂದೆ. ಅವರ ಮಾತುಗಳನ್ನು ಕೇಳಿದವರಿಗೆ, ಅವರ ಗಾಯನವನ್ನು ಅನುಭವಿಸಿದವರಿಗೆ ಅದರ ಸವಿ ಗೊತ್ತು. ಆದರೆ ನನ್ನ ಮುಂದೆ ಇದ್ದದ್ದು ಅವೆಲ್ಲವನ್ನೂ ಪದಗಳಲ್ಲಿ ಹಿಡಿದಿಡುವ ಒಂದು ಬೃಹತ್ ಸವಾಲು. ಉಪಯೋಗಿಸುವ ‘ಭಾಷೆ’ ತಾಂತ್ರಿಕ ಆಗಬಾರದು, ಅತಿ ಭಾವುಕವೂ ಆಗಬಾರದು, ತೀರಾ ಉತ್ಪ್ರೇಕ್ಷೆ ಅನ್ನಿಸಬಾರದು, ಅಲ್ಲದೆ ಅವರ ಭಾವಾಭಿವ್ಯಕ್ತಿಯನ್ನು ಹಿಡಿದಿಡಬೇಕು– ಹೀಗೆ ಬೇಕು ಬೇಡಗಳ ಪಟ್ಟಿ ಬೆಳೆಯುತ್ತಾ ಬೆಳೆಯುತ್ತಾ ನನ್ನೊಳಗಿನ ಬರಹಗಾರ್ತಿಯನ್ನು ಬಹಳ ಕಾಲ ದಿಗ್ಬಂಧನ ಹಾಕಿಟ್ಟಿತ್ತು.ಜಯಶ್ರೀ ಅವರೊಟ್ಟಿಗಿನ ಸಂಬಂಧದ ಸವಿ ಉಂಡವರಿಗಷ್ಟೇ ಗೊತ್ತು. “ಬರೀಬೇಕಾ? ಬರೀಲೇಬೇಕಾ?” ಅಂತ ಕೇಳುತ್ತಾ, ಆಗಾಗ ನನ್ನನ್ನು ಅವರ ನೆನಪಿನ ಅಂಗಳಕ್ಕೆ ಬಿಟ್ಟುಕೊಳ್ಳುತ್ತಾ ಸಾಗಿದ ಈ ಪುಸ್ತಕದ ಕಥೆ ಬರೆದಷ್ಟೂ ಮುಗಿಯದಂಥದ್ದು.ಒಂಥರಾ ಮುಗಿಲಿನೆತ್ತರಕ್ಕೆ ಬೆಳೆದ ಆಲದ ಮರದ ಕೆಳಗೆ ಕೂತು ಒಬ್ಬಳೇ ಎಲೆಗಳನ್ನೂ ಬಿಳಲುಗಳನ್ನೂ ಲೆಕ್ಕ ಹಾಕುವ ಕೆಲಸಕ್ಕೆ ಕೈ ಹಾಕಿದ್ದೇನೆ ಅಂತ ಬಹಳ ಸಾರಿ ಅನ್ನಿಸಿದರೂ, ಈ ವ್ಯಕ್ತಿತ್ವವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ, ಆ ಮೂಲಕ ರಂಗಭೂಮಿಯ ಮುಖ್ಯ ಆಯಾಮವೊಂದನ್ನು ದಾಖಲು ಮಾಡುವ ಜವಾಬ್ದಾರಿ ಸ್ವಯಂ ಹೊತ್ತ ನನಗೆ ಅವರಿಂದ ಸಿಕ್ಕ ಪ್ರೋತ್ಸಾಹ ಅನನ್ಯ.ಜಯಶ್ರೀ ಅವರ ಛಾಪಿನ ರಂಗಭೂಮಿ, ಗುಬ್ಬಿ ವೀರಣ್ಣನವರ ಮೊಮ್ಮಗಳು ಎನ್ನುವ ಆ ಹೆಸರನ್ನು ಒಪ್ಪುತ್ತಲೇ ತನ್ನದೇ ಆದ ಅಸ್ಮಿತೆಯ ಹುಡುಕಾಟ ಎಲ್ಲವೂ ಅವರನ್ನು ಭಾರತದ ರಂಗಭೂಮಿಯಲ್ಲಿ ಅತ್ಯಂತ ಎತ್ತರದ ನಿರ್ದೇಶಕಿಯರ ಸಾಲಿನಲ್ಲಿ ನಿಲ್ಲಿಸಿದೆ. ಅವರೊಳಗಿನ ಹಾಡುಗಾರ್ತಿಗೆ ಬಹಳಷ್ಟು ಕಕ್ಕುಲತೆ ದಕ್ಕಿದೆ. ಅದೆಲ್ಲವನ್ನೂ ಅವರ ಮಾತುಗಳಲ್ಲೇ ಹಿಡಿದಿಡುವಾಗ ನನಗೆ ಎದುರಾದ ಸವಾಲು ಭಾಷೆಯದ್ದು.ಅವರ ಮಾತುಗಳನ್ನು ದಾಟಿಸಿಬಿಡಬಹುದು, ಆದರೆ ‘ಭಾಷೆ’ಯನ್ನು – ಅಂದರೆ ಸಂಪೂರ್ಣವಾಗಿ ಅರಳಬಲ್ಲ ಭಾವಾಭಿವ್ಯಕ್ತಿಯನ್ನು ಅಕ್ಷರಗಳಿಂದ ಸಾಧ್ಯವಾಗಿಸುವುದು ಆಗುವ ಮಾತೇನು? ಅದಕ್ಕೆ ನನ್ನ ಹತ್ತಿರ ಬೇಕಾದ ಹತಾರಗಳು ಇವೆಯೇನು ಎನ್ನುವ ಪ್ರಶ್ನೆ ಇನ್ನೂ ಹಾಗೇ ಇದೆ.‘ಕಣ್ಣಾಮುಚ್ಚೇ...’ ಬರೆಯುತ್ತಾ ಕಾಲದ ಸವಾರಿ ಮಾಡಿದ್ದೇನೆ, ಆ ಅನುಭವ ಓದಿದವರಿಗೆ ಕಿಂಚಿತ್ತಾದರೂ ಆದರೆ ನನ್ನ ಪ್ರಯತ್ನ ಸಾರ್ಥಕ. ಸಾರ್ವಜನಿಕ ವಲಯದಲ್ಲಿ ಕಲೆಯ ಮೂಲಕ ಎತ್ತರದ ಗೌರವ ಸಂಪಾದಿಸಿದ ವ್ಯಕ್ತಿಯ ಜೀವನವನ್ನು ದಾಖಲಿಸುವುದು ಬಹು ದೊಡ್ಡ ಜವಾಬ್ದಾರಿ, ಅದಕ್ಕೆ ನ್ಯಾಯ ಒದಗಿಸಿದ್ದರೆ ಅದಕ್ಕೆ ಜಯಶ್ರೀ ಅವರ ಪ್ರೀತಿ–ವಿಶ್ವಾಸಗಳೇ ಕಾರಣ.ಈಗಲೂ ಅವರು ಕೇಳೋದು “ಬರೀಲೇಬೇಕಾ? ಏನ್ ಉಪಯೋಗ ಅದರಿಂದ?”. ಅದಕ್ಕೆ ಓದುಗರು ಉತ್ತರ ನೀಡಿಯಾರೆಂದು ಭಾವಿಸಿ ನಾನು ರಂಗದಿಂದ ನಿರ್ಗಮಿಸುತ್ತಿದ್ಡೇನೆ. ಇನ್ನೇನಿದ್ದರೂ, ಅವರು ಹೇಳಬೇಕು, ನೀವು ಕೇಳಬೇಕು!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry