ಕಣ್ಣಿಗೆ ಹಬ್ಬಅರಮನೆ ಕಾಷ್ಠ ಕಂಬ

7

ಕಣ್ಣಿಗೆ ಹಬ್ಬಅರಮನೆ ಕಾಷ್ಠ ಕಂಬ

Published:
Updated:
ಕಣ್ಣಿಗೆ ಹಬ್ಬಅರಮನೆ ಕಾಷ್ಠ ಕಂಬ

ಉದೇವಾರ. ಇದು ಕಾಫಿ ತೋಟಗಳಿಂದಾವೃತವಾದ ಪುಟ್ಟ ಊರು.  ಚಿಕ್ಕಮಗಳೂರು ಜಿಲ್ಲೆಯ ಸಕಲೇಶಪುರದಿಂದ 15 ಕಿ. ಮಿ.  ದೂರದಲ್ಲಿದೆ.

ಈ ಊರಿನ ಪೂರ್ವ ದಿಕ್ಕಿನ ಎತ್ತರದ ನೆಲಗಟ್ಟಿನಲ್ಲಿರುವ ಈ ಮಹಾಮನೆಯು ದೊಡ್ಡಮನೆ,  ಉದೇವಾರದ ಅರಮನೆಯೆಂದು ಹೆಸರುವಾಸಿ.

  ಕಳೆದ ಕೆಲ ಶತಮಾನಗಳಿಂದಲೂ ಕಾಡು ಬೆಳದಿಂಗಳಿನಂತೆ ಕಾಷ್ಠ ಸಿರಿವೈಭವವನ್ನು ಸಾರುತ್ತಿರುವ ಸೌಧದ ಮಹತ್ವ ಊರಿನವರಿಗಾಗಲಿ,  ಮನೆಯವರಿಗಾಗಲಿ ಅರಿವಿಲ್ಲ.

ಈ ಮಹಾಮನೆಯು ಮೈಸೂರಿನ ಅರಮನೆ ಹೋಲುತ್ತದೆ. ಮೈಸೂರು ಅರಮನೆಯನ್ನು ಈ  ಮಹಲನ್ನು ನೋಡಿಯೇ ನಿರ್ಮಿಸಲಾಯಿತು. ಹಿಂದೊಮ್ಮೆ ಮೈಸೂರು ಅರಸರು ಈ ಮನೆಗೆ ಭೇಟಿ ನೀಡಿದಾಗ ಆಕರ್ಷಿತರಾಗಿ ತಮ್ಮ ವಶಕ್ಕೆ ನೀಡುವಂತೆ ಕೇಳಿದ್ದರು. ಆದರೆ ಮನೆಯ ಯಜಮಾನರು ಕೊಡಲೊಪ್ಪಲ್ಲಿಲ್ಲ ಎನ್ನುವುದು ಸ್ಥಳೀಯರ ಮಾತು. ಆದರೆ ಈ ಬಗ್ಗೆಯಾಗಲಿ ನಿರ್ಮಾಣದ ಬಗ್ಗೆಯಾಗಲಿ ಯಾವುದೇ ದಾಖಲೆಗಳಿಲ್ಲ.  

ಅವನತಿಯ ಹಾದಿ

ಅದೇನೇ ಇದ್ದರೂ ಈ ಮಹಲು ಈಗ ಅವನತಿಯ ಹಾದಿ ಹಿಡಿದಿದೆ. ದಾರು ಶಿಲ್ಪಗಳಿಂದ ಕಂಗೊಳಿಸುವ ಊರ ದೇವತೆಯಾದ ದೇವಿರಮ್ಮನ,  ದೇಗುಲ  ಅರಮನೆಯ ಸನಿಹದಲ್ಲಿಯೇ ಇದೆ. 1710ರಲ್ಲಿ ಅರಮನೆಯೊಂದಿಗೆ ದೇಗುಲವು ನಿರ್ಮಿತವಾಗಿದೆ ಎನ್ನುವ ಗ್ರಾಮಸ್ತರಿಗೆ ದೊಡ್ಡಮನೆಯ ಬಗ್ಗೆ ಅಪಾರ ಗೌರವವಿದೆ.

ಶೇ. 60ರಷ್ಟು ಮರದಲ್ಲೇ ಕಟ್ಟಲಾಗಿದೆ. ಎರಡು ವಿಶಾಲ ಜಗುಲಿಗಳಿವೆ. ಮೊದಲ ಹಂತದಲ್ಲಿ ಆಕರ್ಷಕ ಕುಸುರಿ ಕೆಲಸದ 10 ಜೋಡಿ ಕಮಾನು ಕಂಬಗಳಿವೆ .  ಇವುಗಳ ಮೇಲೆ ಸುಂದರ ವಿನ್ಯಾಸದ ಅಡ್ಡ ಪಟ್ಟಿಗಳಿವೆ. ಅದರ ಮುಂದಿನ ಪಡಸಾಲೆಯು 3 ಅಂಗಣ ಹೊಂದಿದೆ.

ಇಲ್ಲಿನ ಕಂಬಗಳ, ಕಟಾಂಜನಗಳ ಚೆಲುವಂತು ಅಪರೂಪ, ಅನನ್ಯ.  ಈ ಕಂಬಗಳ ಆಧಾರದ ಮೇಲೆ ಶಿಥಿಲಗೊಂಡ ಅಟ್ಟವಿದೆ.  ಮೊದಲ ಅಂಗಣ ಪ್ರಾಯಶಃ ಸಾರ್ವಜನಿಕ ಸಭೆಗೆ,  ಎರಡನೆಯದ್ದು, ಸಮಾಲೋಚನ ಸಭಾಂಗಣವಿದ್ದಿತೆಂದು ಇಲ್ಲಿಯ ಸಿಬ್ಬಂದಿ ಅಭಿಪ್ರಾಯ.

ಇಷ್ಟೆಲ್ಲ ಕಾಷ್ಠ ವೈಭವಕ್ಕೆ ಕಳಶವಿಟ್ಟಂತಹ ಕೇಂದ್ರ ಬಿಂದು ಮನೆಯ ಮಧ್ಯ ಭಾಗದಲ್ಲಿರುವ ಹೆಬ್ಬಾಗಿಲು. ಮನೆತನದ ದೇವತೆ, ಮತ್ತು ಲಾಂಛನವಾದ ದೇವಿರಮ್ಮ ಹಾಗು ಸಪ್ತಸೋದರಿಯರ ಕೆತ್ತನೆಯಿದೆ.  ಮನೆಯಲ್ಲಿ ವಾಸವಿರುವ 3 ಕುಟುಂಬಗಳಿಂದ ನಿತ್ಯವು ಇದಕ್ಕೆ ಪೂಜೆ ಸಲ್ಲುತ್ತದೆ.

ಸುಮಾರು 6ಇಂಚಿನಷ್ಟು ದಪ್ಪವಿರುವ ಇದನ್ನು ಹಾಕಿ ತೆಗೆಯುವ ಸದ್ದು ಇಡೀ ಊರಿಗೆ ಕೇಳುತ್ತಿತ್ತಂತೆ. ಹೆಬ್ಬಾಗಿಲ ಇಕ್ಕೆಲಗಳಲ್ಲಿ ಬೃಹದಾಕಾರದ  ಕಪಾಟುಗಳಿವೆ.  ಕೆಳ ಹಜಾರದ ಎಡ, ಬಲ ಬಾಗದಲ್ಲಿ ಧಾನ್ಯ ಸಂಗ್ರಹಿಸುವ ಕಣಜಗಳಿವೆ. ಈ ಬಾಗಿಲ ದ್ವಾರದ ಮೇಲಿನ ಚೌಕಟ್ಟಿನಲ್ಲಿ ರೈತರ ದೈವ `ಉಳುವ ಬಸವಣ್ಣ'ನ ಕೆತ್ತನೆಯಿದೆ.

ಶಯನಗೃಹದ ತೊಲೆಯಲ್ಲಿ ರಹಸ್ಯ ದಾಖಲೆಗಳು, ನಗ, ನಾಣ್ಯಗಳನ್ನು ಅಡಗಿಸಿಡಲು ಬಳಸುತ್ತಿದ್ದ ಪೆಟ್ಟಿಗೆಯಿದೆ. ಅಟ್ಟದ ಮೇಲೆ ಹರಳೆಣ್ಣೆ ದೀಪವಿಡುವ ಚೆಂದದ ನಾಗಂದಿಗೆಗಳಿವೆ. ಅಲ್ಲಿಂದಲೆ ಇಡೀ ಊರಿನ ವಿಹಂಗಮ ನೋಟ ಬೀರುವ ಕಿಂಡಿ ಕಿಟಕಿಗಳಿವೆ. 25ಕ್ಕೂ ಹೆಚ್ಚು ಕೋಣೆಗಳಿವೆ. 

ಸುಮಾರು 20-25 ಅಡಿ ಎತ್ತರದ 45ಕ್ಕೂ ಹೆಚ್ಚು ಕಾಷ್ಠ ಕಂಬಗಳಿರುವ ಈ ಸುಂದರ ಸೌಧ ಎಂಥವರನ್ನು ಪರವಶಗೊಳಿಸುತ್ತದೆ.

ಎಲ್ಲವೂ ದುರ್ಬಲ

ಆದರೆ ದುರ್ಬಲ ಗೋಡೆಗಳು,  ಸುಂದರ ಅಲಂಕಾರಿಕ ಕಲ್ಲುಗುಂಡುಗಳು, ಮಳೆಗೆ ಕುಂಬಾದ ಕಂಬಗಳು, ಕುರುಹು ಕಳೆದುಕೊಂಡಿರುವ ಕುದುರೆ ಎತ್ತಿನ  ಲಾಯಗಳು ಬಿಕೋ ಎನುತ್ತಿವೆ.  ಹಲವಾರು ಚಲನಚಿತ್ರಗಳು ಇಲ್ಲಿ ನಿರ್ಮಾಣವಾಗಿವೆ. ಹಿಂದೊಮ್ಮೆ 30ಲಕ್ಷಕ್ಕೆ ನಿರ್ಮಾಪಕರೊಬ್ಬರು ಕೇಳಿದ್ದರೂ ಕೊಡಲು ಮನಸಾಗಲಿಲ್ಲ, ರಿಪೇರಿಯೂ ನಮ್ಮಿಂದ ಸಾಧ್ಯವಾಗುತ್ತಿಲ್ಲ' ಎನ್ನುತ್ತಾರೆ ಅರಮನೆ ಸಿಬ್ಬಂದಿ ನವೀನ್.

ಇಂತಹ ಭವ್ಯಭವನಗಳಲ್ಲಿನ ವಾಸ್ತು, ಕಲಾ ವೈಭವವನ್ನು ಅವಲೋಕಿಸಿದಾಗ,  ಹಿಂದಿನ ತಲೆಮಾರಿನವರ ಅಭಿರುಚಿ ಪ್ರಬುದ್ಧ ಶೈಲಿ,  ನೈಪುಣ್ಯತೆಗಳು ಆಧುನಿಕ ವಾಸ್ತು ವೈಭವಕ್ಕೆ ಸವಾಲೆಸೆಯುತ್ತವೆ.  ಮಲೆನಾಡಿನ ವಿವಿಧ ಪ್ರಾಂತ್ಯಗಳಲ್ಲಿ ಕೆಲವು ಅರಮನೆಗಳಿವೆ. 

ಸಂಸ್ಕೃತಿ ಪ್ರಿಯ ಹಳತನ್ನು ಆರಾಧಿಸುವ ಮನಸ್ಸುಗಳಿರುವಲ್ಲಿ ಇಂತಹ ಮನೆಗಳು ಜೋಪನವಾಗಿದ್ದರೆ,  ಇನ್ನೂ ಕೆಲವೆಡೆ ಒಟ್ಟು ಕುಟುಂಬದ ಪಾಲಾದಾಗ,  ತುಂಬಿದ ಮನೆಯಷ್ಟು ಆಳ ವಿಶಾಲವಿಲ್ಲದ ಮನಸ್ಸುಗಳು ಹೋಳಾಗಿ ನಿಗಾ ವಹಿಸುವವರಿಲ್ಲದೆ ಕಾಲಗರ್ಭದಲ್ಲಿ ಲೀನವಾಗಲು ದಿನ ಎಣಿಸುತ್ತಿವೆ. 

ಒಮ್ಮತಕ್ಕೆ ಬಾರದ ಕುಟುಂಬದ ಸದಸ್ಯರ ಬೇಕು ಬೇಡಗಳ ನಡುವೆ ನಲುಗುತ್ತಿರುವ ಈ ಅರಮನೆಯನ್ನು ಸಂರಕ್ಷಿಸಲು ಪ್ರಾಚ್ಯವಸ್ತು ಇಲಾಖೆ ಮುಂದೆ ಬರಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry